CONNECT WITH US  

ಕಣ್‌ ತೆರೆದು ನೋಡಿ

ಜಗತ್ತಿನ ಅತ್ಯಂತ ಕಠಿಣವಾದ ವಸ್ತು

ಭೂಮಿ ಮೇಲಿರುವ ಕಠಿಣ ವಸ್ತು ಎಂಬ ಖ್ಯಾತಿಗೆ ಪಾತ್ರವಾಗಿರುವ ವಸ್ತು ಯಾವುದು ಅಂತ ಗೊತ್ತಾ? ವಜ್ರ ಎಂಬ ಉತ್ತರ ನಿಮ್ಮದಾಗಿದ್ದರೆ 2009ನೇ ಇಸವಿಯವರೆಗೆ ಆ ಉತ್ತರ ಸರಿಯಾಗಿತ್ತು. ಏಕೆಂದರೆ 2009ರಲ್ಲಿ ವಝೈìಟ್‌ ಬೋರಾನ್‌ ನೈಟ್ರೈಡ್‌ ವಜ್ರಕ್ಕಿಂತಲೂ ಕಠಿಣ ಎಂಬುದನ್ನು ವಿಜ್ಞಾನಿಗಳು ಕಂಡುಹಿಡಿದಿದ್ದರು. ಇರಲಿ ಜೀವಜಗತ್ತಿನಲ್ಲಿ ಅತ್ಯಂತ ಕಠಿಣವಾದುದು ಯಾವುದು ಎಂಬ ಬಗ್ಗೆ ಸ್ಪರ್ಧೆ ನಡೆದ ಪಕ್ಷದಲ್ಲಿ ಗೆಲ್ಲುವುದು ಬಸವನ ಹುಳು. ನಿಲ್ಲಿ! ಇದು ಭೂಮಿ ಮೇಲೆ ಹುಲ್ಲು ಹಾಸಿನ ಮೇಲೆಲ್ಲಾ ಓಡಾಡುತ್ತಾ ಮನುಷ್ಯರ ಕಾಲಿಗೆ ಸಿಕ್ಕಿ ಕ್ಷಣಮಾತ್ರದಲ್ಲಿ ಅಪ್ಪಚ್ಚಿಯಾಗುವ ಬಸವನ ಹುಳುವಲ್ಲ. ಸಮುದ್ರದಲ್ಲಿ ವಾಸಿಸುವ ಜಲಚರ ಬಸವನಹುಳು. ಅದರ ಹಲ್ಲು ಎಷ್ಟು ಬಲಶಾಲಿ ಎಂಬುದನ್ನು ತಿಳಿದರೆ ಯಾರೇ ಆದರೂ ಮೂಗಿನ ಮೇಲೆ ಬೆರಳಿಡುವರು. ಕಾರ್ಬನ್‌, ವಜ್ರವಾಗಿ ಮಾರ್ಪಾಡಾಗಲು 2,000 ಡಿಗ್ರೀ ತಾಪಮಾನ ಮತ್ತು ಭೂಮಿಯ ವಾತಾವರಣದ 15,000 ಪಾಲು ಹೆಚ್ಚಿನ ಒತ್ತಡ ಮತ್ತು ಲಕ್ಷಾಂತರ ವರ್ಷಗಳು ಬೇಕಾಗುತ್ತದೆ. ಇಂಥ ಪರಿಸ್ಥಿತಿಯಲ್ಲಿ ಭೂಮಿ ಮೇಲಿಯ ಯಾವುದೇ ವಸ್ತು ನ್ಯಾನೋ ಸೆಕೆಂಡ್‌ನ‌ಲ್ಲಿ ಹುಡಿಯಾಗುವುದು ಖಂಡಿತ. ಆದರೆ ಆ ಅತ್ಯಧಿಕ ಉಷ್ಣತೆ ಮತ್ತು ಅಗಾಧ ಒತ್ತಡವನ್ನು ಸಮುದ್ರ ಬಸವನಹುಳುವಿನ ಹಲ್ಲು ತಡೆದುಕೊಳ್ಳಬಲ್ಲುದು. ವಜ್ರಕ್ಕೆ ಸಮನಾದ ಕಾಠಿಣ್ಯತೆಯನ್ನು ಅದು ಹೊಂದಿದೆಯೆಂಬುದು ಇದರಿಂದ ತಿಳಿಯುತ್ತದೆ. ಚಕ್ಕುಲಿ ತಿನ್ನಲೂ ಒದ್ದಾಡುವ ಮಂದಿ ಸಮುದ್ರ ಬಸವನಹುಳುವಿನ ಹಲ್ಲು ತಮಗಿರಬಾರದಿತ್ತೇ ಎಂದು ಹಳಹಳಿಸಿದರೆ ಅದಕ್ಕೆ ನಾವು ಜವಾಬ್ದಾರರಲ್ಲ. ಆಶಾಭಾವದ ಸುದ್ದಿಯೆಂದರೆ ವಿಜ್ಞಾನಿಗಳು ಈಗಾಗಲೇ ಆ ಹಲ್ಲಿನ ಹಿಂದೆ ಬಿದ್ದಿದ್ದಾರೆ. ಹಗಲು ರಾತ್ರಿ ಅದರ ಅಧ್ಯಯನದಲ್ಲಿ ತೊಡಗಿದ್ದಾರೆ. ಬರುವ ದಿನಗಳಲ್ಲಿ ವಝೈìಟ್‌ ಬೋರಾನ್‌ಅನ್ನೂ ಮೀರಿಸುವ ಕಠಿಣ ವಸ್ತುವನ್ನು ಕಂಡುಹಿಡಿದರೆ ಆಶ್ಚರ್ಯವಿಲ್ಲ. ಮುಂದೊಮ್ಮೆ ಊಟದಲ್ಲಿ ಕಲ್ಲು ಸಿಕ್ಕಾಗ ದಿನಸಿ ಅಂಗಡಿಯವನನ್ನು ಶಪಿಸುತ್ತಾ, ಹಲ್ಲು ನೋವೆಂದು ದಂತವೈದ್ಯರ ಬಳಿಗೆ ಓಡುವ ತಾಪತ್ರಯವೇ ಇರುವುದಿಲ್ಲ. ಕಲ್ಲನ್ನು ಪುಡಿ ಪುಡಿ ಮಾಡಿಹಾಕುವ ಕೃತಕ ಹಲ್ಲು ಸೆಟ್ಟುಗಳು ಭವಿಷ್ಯದಲ್ಲಿ ಬರಬಹುದು. ಅಲ್ವಾ?

ನಾಯಿಗಳಿಗೂ ಐ.ಡಿ. ಪ್ರೂಫ್!
ನಾವು ಮನುಷ್ಯರು ಇಂದಿನ ಕಾಲಘಟ್ಟದಲ್ಲಿ ಬದುಕಬೇಕೆಂದರೆ ದಾಖಲೆಗಳು, ಥರಹೇವಾರಿ ಐ.ಡಿ ಪ್ರೂಫ್ಗಳು ಅತ್ಯಗತ್ಯವಾಗಿ ಇರಲೇಬೇಕು. ಮನುಷ್ಯನೊಬ್ಬ ತಾನು ಬದುಕಿದ್ದೇನೆ ಎನ್ನುವುದಕ್ಕೆ ದಾಖಲಾತಿ, ಸರ್ಟಿಫಿಕೆಟ್‌ಗಳ ಸಾಕ್ಷ್ಯ ಒದಗಿಸಬೇಕಾದ ವ್ಯವಸ್ಥೆಯಿದು. ಇರಲಿ, ವಿಷಯಕ್ಕೆ ಬರೋಣ. ಯಾವುದೇ ಮುಖ್ಯ ದಾಖಲೆಗಳಲ್ಲಿ ವ್ಯಕ್ತಿಯ ಅಧಿಕೃತತೆಯನ್ನು ಆತನ ಬೆರಳಿನ ಗುರುತಿನ ಮೂಲಕ ಖಚಿತಪಡಿಸಿಕೊಳ್ಳಲಾಗುತ್ತದೆ. ಜಗತ್ತಿನಲ್ಲಿ ಒಂದೇ ರೀತಿಯ ಫಿಂಗರ್‌ ಪ್ರಿಂಟ್‌ ಇರುವ ಇಬ್ಬರು ವ್ಯಕ್ತಿಗಳು ಇರುವುದಿಲ್ಲವಾದ್ದರಿಂದ ಅದು ಸಮಂಜಸ ಕೂಡಾ. ಮನುಷ್ಯರಿಗೇನೋ ಸುಲಭವಾಯ್ತು ಒಂದು ವೇಳೆ ನಾಯಿಗಳಿಗೇನಾದರೂ ಐಡಿ. ದಾಖಲಾತಿಗಳು ಕಡ್ಡಾಯ ಮಾಡಿಬಿಟ್ಟರೆ? "ಅಯ್ಯೋ, ಬಿಡು¤ ಅನ್ನಿ... ನಾಯಿಗಳಾದರೂ, ನೆಮ್ಮದಿಯಿಂದಿರಲಿ' ಅನ್ನುತ್ತೀರಾ. ನಿಮಗೊಂದು ಅಚ್ಚರಿಯ ವಿಷಯ ಗೊತ್ತಾ ಮನುಷ್ಯರ ಬೆರಳ ಗುರುತು ಹೇಗೆ ವಿಭಿನ್ನವೋ ಹಾಗೇ ನಾಯಿಗಳ ಮೂಗಿನ ಮೇಲಿರುವ ಪ್ರಿಂಟ್‌ಗಳೂ ವಿಭಿನ್ನವಾಗಿರುತ್ತವಂತೆ. ಹೀಗಾಗಿ ಮುಂದೆಂದಾದರೂ ಕಾಲ ಇನ್ನೂ ಕೆಟ್ಟು ಹೋಗಿ ನಾಯಿಗಳಿಗೂ ದಾಖಲಾತಿಗಳನ್ನು ಕಡ್ಡಾಯ ಮಾಡಿಬಿಟ್ಟರೆ, ಅವುಗಳ ನೋಸ್‌ ಪ್ರಿಂಟನ್ನೇ ಹೆಬ್ಬೆಟ್ಟಿನಂತೆ ಕಾಗದದ ಮೇಲೆ ಒತ್ತಿಸಿಕೊಳ್ಳಬಹುದು! ಅವುಗಳಿಗೂ ನಕಲಿ ಐ.ಡಿಗಳ ಹಾವಳಿ ತಗುಲದಿದ್ದರೆ ನಮ್ಮ ಪುಣ್ಯ. ಏನಂತೀರಾ!

ಹರ್ಷ


Trending videos

Back to Top