CONNECT WITH US  

ಡಿಜಿಟಲ್‌ ನರ್ವ್‌ ಕೇಂದ್ರಕ್ಕೆ ಆರೋಗ್ಯ ಸಚಿವರ ಭೇಟಿ

ಕೋಲಾರ: ನಾಗರಿಕರಿಗೆ ಸುಲಭವಾಗಿ ಆರೋಗ್ಯ ಸೇವೆ ದೊರಕಿಸುವ ನಿಟ್ಟಿನಲ್ಲಿ ದೇಶಾದ್ಯಂತ ಹೆಲ್ತ್‌ ವೆಲೆಸ್‌ ಕೇಂದ್ರ ಪ್ರಾರಂಭಿಸಲು ಉದ್ದೇಶಿಸಿರುವ ಹಿನ್ನೆಲೆಯಲ್ಲಿ ನಗರದ ಡಿಜಿಟಲ್‌ ನರ್ವ್‌ ಕೇಂದ್ರಕ್ಕೆ ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಜೆ.ಪಿ.ನಡ್ಡಾ ಭೇಟಿ ನೀಡಿ ಪರಿಶೀಲಿಸಿದರು.

ನಗರ ಹೊರವಲಯದಲ್ಲಿರುವ ಸ್ಯಾನಿಟೋರಿಯಂನಲ್ಲಿ(ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಕಚೇರಿ ಆವರಣ)ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್‌ ಮತ್ತು ಟಾಟಾ ಟ್ರಸ್ಟ್‌ ಸಹಭಾಗಿತ್ವದಲ್ಲಿ ಪ್ರಾರಂಭಿಸಿರುವ ಡಿಜಿಟಲ್‌ ನರ್ವ್‌ ಕೇಂದ್ರಕ್ಕೆ ಆರೋಗ್ಯ ಇಲಾಖೆ ಅಧಿಕಾರಿಗಳೊಂದಿಗೆ ಭೇಟಿ ನೀಡಿದ ಸಚಿವರು, ಸಮಗ್ರ ಮಾಹಿತಿ ಪಡೆದರು.

ದೇಶಕ್ಕೆ ಮಾದರಿ ನರ್ವ್‌ ಕೇಂದ್ರ: ಸುಮಾರು ಒಂದು ಗಂಟೆಗೂ ಹೆಚ್ಚು ಕಾಲ ನರ್ವ್‌ ಕೇಂದ್ರದಲ್ಲಿದ್ದ ಕೇಂದ್ರ ಸಚಿವರಿಗೆ ಆರೋಗ್ಯ ಇಲಾಖೆ ಅಧಿಕಾರಿಗಳು, ಟಾಟಾ ಟ್ರಸ್ಟ್‌ನವರು ವಿವರಿಸಿದರು. ಜಿಲ್ಲೆಯ 3 ಲಕ್ಷ ಕುಟುಂಬಗಳನ್ನು ನೋಂದಣಿ ಮಾಡಿಸಿ, ಆರೋಗ್ಯ ಸೇವೆ ಒದಗಿಸುವ ಉದ್ದೇಶದೊಂದಿಗೆ ಇದನ್ನು ಸ್ಥಾಪನೆ ಮಾಡಲಾಗಿದೆ ಎಂದು ಮಾಹಿತಿ ನೀಡಿದರು. 

ಡಿಜಿಟಲ್‌ ನರ್ವ್‌ ಸೆಂಟರ್‌ ಮೂಲಕ ಅವಶ್ಯಕ ಮಾಹಿತಿ ಪಡೆದು ಸಾರ್ವಜನಿಕರು ಚಿಕಿತ್ಸೆ ಪಡೆಯಬಹುದು. ಇದು ರಾಜ್ಯ ಮಾತ್ರವಲ್ಲ ಇಡೀ ದೇಶಕ್ಕೆ ಮಾದರಿಯಾಗಿದೆ. ಆಶಾ ಕಾರ್ಯಕರ್ತೆಯರು ಹಾಗೂ ಇತರೆ ಸಿಬ್ಬಂದಿ ಮನೆಗೆ ಭೇಟಿ ನೀಡುತ್ತಾರೆ. 

ರೋಗಿಯ ಆಧಾರ್‌ ಕಾರ್ಡ್‌, ಮೊಬೆ„ಲ್‌ ನಂಬರ್‌ ಪಡೆದು ಡಿಜಿಟಲ್‌ ನರ್ವ್‌ ಸೆಂಟರ್‌ಗೆ ಲಿಂಕ್‌ ಮಾಡುತ್ತಾರೆ. ಇದರಿಂದ ಅವರು ಪರಿಚಯಸ್ಥ ರೋಗಿಗಳಾಗಲಿದ್ದು, ಅವರಿಗೆ ಅವಶ್ಯಕ ತಜ್ಞರನ್ನು ಹಾಗೂ ಅವರು ಆ ತಜ್ಞರನ್ನು ಸಂಪರ್ಕಿಸುವ ದಿನವನ್ನು ನಿಗದಿಪಡಿಸಿಕೊಳ್ಳಲು ಇದು ಸಹಕಾರಿಯಾಗಲಿದೆ. ಜತೆಗೆ ಅವರ ಮೊಬೆ„ಲ್‌ಗೆ ತಜ್ಞರ ಲಭ್ಯತೆ ಮತ್ತಿತರ ಮಾಹಿತಿ ರವಾನೆ ಮಾಡಲಾಗುತ್ತದೆ. ಅಲ್ಲದೇ, ಸೂಕ್ತ ಚಿಕಿತ್ಸೆಯನ್ನೂ ಒದಗಿಸಲು ನೆರವಾಗುವುದು ಇದರ ಪ್ರಮುಖ ಉದ್ದೇಶವಾಗಿದೆ ಎಂದು ಸಚಿವರಿಗೆ ಅಧಿಕಾರಿಗಳು ತಿಳಿಸಿದರು.

4.5ಲಕ್ಷ ನೋಂದಣಿ: ನರ್ವ್‌ ಕೇಂದ್ರ ಪ್ರಸಕ್ತ ಸಾಲಿನ ಫೆಬ್ರವರಿಯಿಂದ ಕಾರ್ಯಾರಂಭ ಮಾಡಿದೆ. ಈವರೆಗೆ ಸುಮಾರು 4.5ಲಕ್ಷ ಮಂದಿ ನೋಂದಣಿ ಮಾಡಿಕೊಂಡಿದ್ದಾರೆಂದು ಮಾಹಿತಿ ಒದಗಿಸಲಾಯಿತು. ನೋಂದಣಿಯಾದವರು ಆರೋಗ್ಯದಲ್ಲಿ ಏರುಪೇರಾದಾಗ ನರ್ವ್‌ ಕೇಂದ್ರದ ಮೂಲಕ ಚಿಕಿತ್ಸೆ ಪಡೆದ, ಪಡೆಯುವ ವಿಧಾನ ಕುರಿತು ತಿಳಿಸಲಾಯಿತು. ಅಲ್ಲದೇ, ಆರೋಗ್ಯ ಕಾರ್ಯಕರ್ತೆಯರು ವಹಿಸುವ ಪಾತ್ರದ ಬಗ್ಗೆ ಅವರಿಂದಲೇ ಮಾಹಿತಿ ಪಡೆದರು.

ವೈದ್ಯರು, ತಜ್ಞರು, ಪ್ರಯೋಗಾಲಯ ಪರೀಕ್ಷೆಗಳ ಲಭ್ಯತೆ, ಡಿಜಿಟಲ್‌ ಸಾಧನದ ಮೂಲಕ ವೈದ್ಯರು, ತಜ್ಞರ ಭೇಟಿಗೆ ಶೀಘ್ರವಾಗಿ ಸಮಯ ಕಾಯ್ದಿರಿಸುವಿಕೆ, ಅರ್ಹ ವೃತ್ತಿಪರರು, ಪಾಲನಾ ಸಂಯೋಜಕರು ಸಹಾಯ ಮತ್ತಿತರ ಪ್ರಯೋಜನ ದೊರಕಲಿದೆ. ಆರೋಗ್ಯ ಉಪಕೇಂದ್ರ, ಪ್ರಾಥಮಿಕ ಆರೋಗ್ಯ ಕೇಂದ್ರ, ಸಮುದಾಯ ಆರೋಗ್ಯ ಕೇಂದ್ರ, ತಾಲೂಕು ಆಸ್ಪತ್ರೆ, ಜಿಲ್ಲಾಸ್ಪತ್ರೆ ಮತ್ತಿತರೆಡೆ ನೋಂದಣಿಗೆ ಅವಕಾಶ ಕಲ್ಪಿಸಲಾಗಿದೆ. ಕೆಲ ಆರೋಗ್ಯ ಕೇಂದ್ರಗಳಿಂದಲೇ ಆರೋಗ್ಯ ಸೇವೆ ಪಡೆಯಬಹುದಾಗಿದೆ. ಈಗಾಗಲೆ ಸೇವೆ ಪಡೆಯುತ್ತಿದ್ದಾರೆ. ಸದ್ಯಕ್ಕೆ ಜಿಲ್ಲೆಯ ಸುಮಾರು 16 ಆರೋಗ್ಯ ಕೇಂದ್ರಗಳ ಮೂಲಕ ಸೇವೆ ಒದಗಿಸಲಾಗುತ್ತಿದೆ ಎಂದು ಮಾಹಿತಿ ನೀಡಲಾಯಿತು.

ಪ್ರಭಾರ ಜಿಲ್ಲಾಧಿಕಾರಿ ಶುಭಾ ಕಲ್ಯಾಣ್‌ ಸಚಿವ ನಡ್ಡಾ ಅವರನ್ನು ಬರಮಾಡಿಕೊಂಡರು. ಆರೋಗ್ಯ ಇಲಾಖೆ ಜಂಟಿ
ಕಾರ್ಯದರ್ಶಿ ಅಗರ್‌ವಾಲ್‌, ನಿಮ್ಹಾನ್ಸ್‌ ನಿರ್ದೇಶಕ ಗಂಗಾಧರ್‌, ರತನ್‌ ಕೇಳ್ಕರ್‌, ಜಿಲ್ಲಾ ಆರೋಗ್ಯ ಮತ್ತುಕುಟುಂಬ ಕಲ್ಯಾಣಾಧಿಕಾರಿ ಡಾ.ವಿಜಯಕುಮಾರ್‌ ಮತ್ತಿತರರು ಹಾಜರಿದ್ದರು.  

ಸೌಲಭ್ಯಗಳ ಲಭ್ಯತೆ ಡಿಜಿಟಲ್‌ ನರ್ವ್‌ ಕೇಂದ್ರದಿಂದ ವೈದ್ಯರು, ತಜ್ಞರು, ಪ್ರಯೋಗಾಲಯ ಪರೀಕ್ಷೆಗಳ ಲಭ್ಯತೆ,
ಡಿಜಿಟಲ್‌ ಸಾಧನದ ಮೂಲಕ ವೈದ್ಯರು, ತಜ್ಞರ ಭೇಟಿಗೆ ಶೀಘ್ರವಾಗಿ ಸಮಯ ಕಾಯ್ದಿರಿಸುವಿಕೆ, ಅರ್ಹ ವೃತ್ತಿಪರರು, ಪಾಲನಾ ಸಂಯೋಜಕರ ಸಹಾಯ ಮತ್ತಿತರ ಪ್ರಯೋಜನಗಳ ಲಭ್ಯತೆ ಸಾಧ್ಯ.

ಕೇಂದ್ರ ಸರಕಾರದ ವತಿಯಿಂದ ದೇಶಾದ್ಯಂತ ಹೆಲ್ತ್‌ ವೆಲ್‌ನೆಸ್‌ ಕೇಂದ್ರ ಪ್ರಾರಂಭಿಸಲು ಉದ್ದೇಶಿಸಲಾಗಿದೆ. ಆದರೆ,
ಕೋಲಾರ ಜಿಲ್ಲೆಯಲ್ಲಿ ಈಗಾಗಲೇ ಅದೇ ಮಾದರಿಯ ಕೇಂದ್ರ ಆರಂಭಿಸಿರುವ ಹಿನ್ನೆಲೆಯಲ್ಲಿ ಮಾಹಿತಿ ಪಡೆಯಲು ಹಾಗೂ ಕಾರ್ಯನಿರ್ವಹಿಸುವ ವಿಧಾನದ ಪರಿಶೀಲನೆಗೆ ಭೇಟಿ ನೀಡಿದ್ದೇನೆ.
 ಜೆ.ಪಿ.ನಡ್ಡಾ, ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವರು

Trending videos

Back to Top