CONNECT WITH US  

ಜಿಲ್ಲೆಯನ್ನು ಹಸಿರುಮಯವಾಗಿಸಲು ಸಂಘಗಳು ಬದ್ಧತೆ ಅವಶ್ಯ

ಕೋಲಾರ: ಜಿಲ್ಲೆಯನ್ನು ಹಸಿರುಮಯವಾಗಿಸುವ ಸಾಮಾಜಿಕ ಕಾಳಜಿ, ಬದ್ಧತೆ ಪ್ರತಿಯೊಂದು ಸ್ವಯಂಸೇವಾ ಸಂಸ್ಥೆಗೂ ಬರಬೇಕು, ಕಾಟಾಚಾರಕ್ಕೆ ಗಿಡ ನೆಡುವ ಪ್ರಯತ್ನ ಬೇಡ, ಸ್ವಯಂಪ್ರೇರಿತರಾಗಿ ಪರಿಸರ ಸ್ನೇಹಿ ಕಾರ್ಯದಲ್ಲಿ ಪಾಲ್ಗೊಳ್ಳಬೇಕು ಎಂದು ಜಿಪಂ ಸಿಇಒ ಲತಾಕುಮಾರಿ ಸಲಹೆ ನೀಡಿದರು.

ಸೋಮವಾರ ನಗರದ ರೈಲ್ವೆ ನಿಲ್ದಾಣದಲ್ಲಿ ಹೋಂಡಾ ಕಂಪನಿಯಿಂದ ಸಾಮಾಜಿಕ ಸೇವಾ ಕಾರ್ಯದಡಿ, ಸ್ಕೌಟ್ಸ್‌ ಮತ್ತು ಗೈಡ್ಸ್‌ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಗಿಡ ನೆಡುವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.

ಕೋಲಾರ ಹಸಿರು ಜಿಲ್ಲೆಯಾಗಿಲು ಪಣತೊಡ ಬೇಕಿದ್ದು, ಹೋಂಡಾ ಕಂಪನಿ ಸೇರಿದಂತೆ ಅನೇಕರು ಮುಂದಾಗಿದ್ದಾರೆ. ಕಾರ್ಖಾನೆಗಳವರು ಮೊದಲು ಅವರ ಜಾಗವನ್ನು ಹಸಿರುಮಯ ಮಾಡಿಕೊಳ್ಳಬೇಕು. ಕೋಲಾರದ ರೈಲ್ವೆ ನಿಲ್ದಾಣದಲ್ಲಿದ್ದ ಖಾಲಿ ಜಾಗವನ್ನು ಗುರುತಿಸಿ ಸಾಮಾಜಿಕ ಕಾರ್ಯದಡಿಯಲ್ಲಿ ಹೋಂಡಾ ಕಂಪನಿಯ ವತಿಯಿಂದ ಸುಮಾರು 1400 ಗಿಡಗಳನ್ನು ನೆಡಲು ತೀರ್ಮಾನಿಸಲಾಗಿದೆ. ಅದರ ನಿರ್ವಹಣೆಯನ್ನು ಕಂಪನಿಯವರೇ ಮಾಡಲಿದ್ದಾರೆ ಎಂದರು.

ಈಗಾಗಲೇ ವನಮಹೋತ್ಸವ ಹಾಗೂ ಪರಿಸರ ದಿನವನ್ನು ಆಚರಿಸಲಾಗಿದ್ದು, ಅದರ ಪ್ರಯುಕ್ತ ಹೆಚ್ಚು ಹೆಚ್ಚು ಗಿಡಗಳನ್ನು ನೆಡುವುದಕ್ಕೆ ಮುಂದಾಗಬೇಕು. ಇನ್ನೂ ಹೆಚ್ಚು ಹೆಚ್ಚು ಕಂಪನಿಗಳು ಈ ರೀತಿ ಸ್ವಯಂಪ್ರೇರಿತರಾಗಿ ಪರಿಸರ ಕಾಳಜಿಗೆ ತೊಡಗಬೇಕು ಎಂದು ಹೇಳಿದರು.

ಕಠಿಣ ಕ್ರಮ: ಮುಳಬಾಗಲು ತಾಲೂಕು ದೇವರಾಯಸಮುದ್ರ ಗ್ರಾಪಂನ ಯಳಗೊಂಡನಹಳ್ಳಿ ವ್ಯಾಪ್ತಿಯ ಹಳ್ಳಿಗಳಲ್ಲಿ ಕೋಳಿಫಾರಂಗಳಿಂದಾಗಿ ನೊಣಗಳ ಕಾಟ ಹೆಚ್ಚಿರುವ ಬಗ್ಗೆ ದೂರುಗಳು ಬಂದ ಹಿನ್ನೆಲೆಯಲ್ಲಿ ತಾವು ಸೇರಿದಂತೆ ತಾಪಂ ಇಒ, ತಾಲೂಕು ಆರೋಗ್ಯಾಧಿಕಾರಿ, ಪರಿಸರ ಅಧಿಕಾರಿಗಳು ಒಟ್ಟಾಗಿ ಭೇಟಿ ನೀಡಿ ಪರಿಶೀಲನೆ ಮಾಡಿದ್ದೇವೆ ಎಂದು ಸಿಇಒ ತಿಳಿಸಿದರು.

ಅಲ್ಲಿನ ಅಧಿಕಾರಿಗಳಿಗೆ ಸೂಚಿಸಿದ್ದು, ನಿರ್ಲಕ್ಷ್ಯವಹಿಸದೆ ನೋಡಿಕೊಳ್ಳುವಂತೆ ಸೂಚಿಸಿರುವುದಾಗಿ ತಿಳಿಸಿದ ಅವರು, ಮುಂದೆ ಇಂತಹ ತೊಂದರೆ ಕಂಡುಬಂದರೆ ಕಠಿಣ ಕ್ರಮಕೈಗೊಳ್ಳುವುದಾಗಿ ಎಚ್ಚರಿಕೆ ನೀಡಿದರು.

ನಿವೃತ್ತ ಐಎಎಸ್‌ ಅಧಿಕಾರಿ ಅಮರನಾರಾಯಣ, ಸ್ಕೌಟ್ಸ್‌ ಮತ್ತು ಗೈಡ್ಸ್‌ ಜಿಲ್ಲಾ ಆಯುಕ್ತ ಕೆ.ವಿ.ಶಂಕರಪ್ಪ, ರೈಲ್ವೆ ಸ್ಟೇಷನ್‌ ಮಾಸ್ಟರ್‌ ಶರ್ಮಾ, ಹೋಂಡಾ ಸಾಮಾಜಿಕ ಕಾರ್ಯದ ನಿರ್ದೇಶಕ ನಿತಿನ್‌, ಪರಿಸರ ಪ್ರೇಮಿ ತ್ಯಾಗರಾಜ್‌, ಕೋಲಾರ ತಾಲೂಕು ಮೇಲ್ವಿಚಾರಕ ಚೇತನ್‌, ಭಾಗೀರಥಿ ಅಸೋಸಿಯೇಷನ್‌ ಅಧ್ಯಕ್ಷ ನೀಲ್‌ಜೊಸೆಫ್‌, ಬೆಸ್ಕಾಂ ನಿವೃತ್ತ ಅಕಾರಿ ಮುನಿನಾರಾಯಣ, ಸ್ಕೌಟ್ಸ್‌ ಮತ್ತು ಗೈಡ್ಸ್‌ ಸಂಘಟನಾ ಆಯುಕ್ತ ಬಾಬು, ಸ್ವಯಂಸೇವಕರಾದ ಅಶ್ವಿ‌ನಿ, ಪೂರ್ಣಿಮ, ಆರತಿ ಮತ್ತಿತರರು ಹಾಜರಿದ್ದರು.

Trending videos

Back to Top