CONNECT WITH US  

ಡಿಸಿಸಿ ಬ್ಯಾಂಕ್‌ ಅಧ್ಯಕ್ಷರಿಂದ ಸಾಲ ವಸೂಲಾತಿ ಆರಂಭ

ಕೋಲಾರ: ಕೋಲಾರ-ಚಿಕ್ಕಬಳ್ಳಾಪುರ ಜಿಲ್ಲೆಗಳ ಜಿಲ್ಲಾ ಸಹಕಾರ ಬ್ಯಾಂಕ್‌ ನನ್ನ ಕುಟುಂಬ ಇದ್ದ ಆಗೆ. ಇದನ್ನು ಪೋಷಿಸಿ ಕಾಪಾಡಿಕೊಂಡು ಬರುವುದೇ ನಮ್ಮ ಧ್ಯೇ ಎಂದು ಡಿಸಿಸಿ ಬ್ಯಾಂಕ್‌ ಅಧ್ಯಕ್ಷ ಬ್ಯಾಲಹಳ್ಳಿ ಗೋವಿಂದಗೌಡ ತಿಳಿಸಿದರು.  

ತಾಲೂಕಿನ ಟೇಕಲ್‌ ರೇಷ್ಮೆ ಬೆಳೆಗಾರರ ಹಾಗೂ ರೈತ ಸೇವಾ ಸಹಕಾರ ಸಂಘದ ಮುಖಾಂತರ ಸ್ತ್ರೀಶಕ್ತಿ ಸ್ವಸಹಾಯ ಸಂಘಗಳಿಗೆ ನೀಡಿದ್ದ ಸಾಲ ವಸೂಲಿ ಮತ್ತು ಪ್ರಗತಿ ಬಗ್ಗೆ ಮಾಹಿತಿ ಪಡೆದು, ಬಾಕಿ ಉಳಿಸಿಕೊಂಡಿರುವ ಸ್ವಸಹಾಯ ಸಂಘಗಳ ಪ್ರತಿನಿಧಿಗಳಿಂದ ತಮ್ಮ ಸಂಘದ ಕಂತಿನ ಹಣವನ್ನು ಪಡೆದು ಮಾತನಾಡುತ್ತಿದ್ದರು.  

ಬಾಕಿ ಕಂತು ತಕ್ಷಣ ಮರುಪಾವತಿ ಮಾಡಿ: ಜಿಲ್ಲಾ ಸಹಕಾರ ಬ್ಯಾಂಕು ಎರಡೂ ಜಿಲ್ಲೆಗಳ ಜನರಿಗೆ ಜೀವನಾಡಿಯಾಗಿದೆ. ಜನರು ಮತ್ತು ಬ್ಯಾಂಕು ನಡುವೆ ಉತ್ತಮ ಬಾಂಧವ್ಯ ಇದ್ದು, ಮಹಿಳೆಯರ ಪ್ರತಿ ಕುಟುಂಬಗಳು ಪ್ರಗತಿ ಹೊಂದಿ, ಆರ್ಥಿಕವಾಗಿ ಮುಂದೆ ಬರಬೇಕೆಂಬ ಉದ್ದೇಶದಿಂದ ಸಹಕಾರ ಬ್ಯಾಂಕ್‌ ಸಾಲ ಕೊಟ್ಟಿದೆ.

ಇದನ್ನು ಸಮಯಕ್ಕೆ ಸರಿಯಾಗಿ ಮರುಪಾವತಿ ಮಾಡಿದರೆ ಮತ್ತಷ್ಟು ಕುಟುಂಬಗಳಿಗೆ ಅನುಕೂಲವಾಗುತ್ತದೆ. ಊಹಾಪೋಹದ ಮಾತುಗಳನ್ನು ನಂಬಿ ಸಮಯಕ್ಕೆ ಸರಿಯಾಗಿ ಕಂತಿನ ಹಣ ಪಾವತಿಸದಿದ್ದರೆ ಬಡ್ಡಿ ಹೆಚ್ಚಾಗಿ, ಸಾಲದ ಹೊರೆ ಅಧಿಕವಾಗುತ್ತದೆ.

ಮುಂದಿನ ದಿನಗಳಲ್ಲಿ ನಿಮಗೆ ಅವಶ್ಯಕತೆ ಇದ್ದಾಗ ಹಣದ ಸಹಾಯ ಯಾರೂ ಮಾಡುವುದಿಲ್ಲ. ಇದನ್ನು ಅರಿತು ಬಾಕಿ ಕಂತುಗಳನ್ನು ತಕ್ಷಣ ಮರುಪಾವತಿ ಮಾಡಬೇಕೆಂದು ಸ್ವಸಹಾಯ ಸಂಘಗಳ ಪ್ರತಿನಿಧಿಗಳಿಗೆ ತಿಳಿಸಿದರು.  

ಸಾಲ ಮನ್ನಾ ಆಗಲ್ಲ: ಈ ಹಿಂದೆ ನಡೆದ ವಿಧಾನಸಭಾ ಚುನಾವಣೆಯಲ್ಲಿ ಕೆಲವು ರಾಜಕೀಯ ಪಕ್ಷಗಳು ಅಧಿಕಾರಕ್ಕೆ ಬಂದರೆ, ವಿವಿಧ ರೀತಿಯ ಸಾಲ ಮನ್ನಾ ಮಾಡಲಾಗುತ್ತದೆ ಎಂದು ಪ್ರಣಾಳಿಕೆಗಳಲ್ಲಿ ಘೋಷಿಸಿದ್ದರಿಂದ ಕೆಲವರು ಕಂತು ಕಟ್ಟಲು ವಿಳಂಬ ಮಾಡಿದ್ದರು.

ಆದರೆ, ಗುರುವಾರ ಸಮ್ಮಿಶ್ರ ಸರ್ಕಾರದ ಚೊಚ್ಚಲ ಬಜೆಟ್‌ ಮಂಡಿಸಿದ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಕೃಷಿಗೆ ಸಂಬಂಧಿಸಿದ ಸುಸ್ತಿ ಸಾಲವನ್ನು 2 ಲಕ್ಷ ರೂ.ವರೆಗೆ ಮನ್ನಾ ಮಾಡಿರುವುದರಿಂದ ನಮ್ಮ ಬ್ಯಾಂಕಿನಲ್ಲಿ ಇಂತಹ ಯಾವುದೇ ಸಾಲ ಪಡೆದಿರುವ ಬಗ್ಗೆ ಮಾಹಿತಿ ಇದ್ದಂತಿಲ್ಲ.

ಆದ್ದರಿಂದ, ಸ್ತ್ರೀಶಕ್ತಿ ಸ್ವಸಹಾಯ ಸಂಘದವರು ಪಡೆದಿರುವ ಸಾಲ ಯಾವುದೇ ಕಾರಣಕ್ಕೂ ಮನ್ನಾ ಆಗುವುದಿಲ್ಲ ಎಂದರು.  ಸಾಲ ಮನ್ನಾ ಆಗದ ಹಿನ್ನೆಲೆಯಲ್ಲಿ ಸಂಘದ ಪ್ರತಿನಿಧಿಗಳು ತಡ ಮಾಡದೇ ತಕ್ಷಣ ಸಾಲ ಮರುಪಾವತಿ ಮಾಡಬೇಕು.

ನಾನು ಬೆಳಗ್ಗೆ 5 ಗಂಟೆಗೆ ಸಾಲ ಪಡೆದವರ ಮನೆ ಬಾಗಿಲಿಗೆ ಬರುತ್ತೇನೆ. ಇದಕ್ಕೆ ಅವಕಾಶ ಮಾಡಿಕೊಡಬೇಡಿ ಎಂದರು. ಅಲ್ಲದೇ, ಜಿಲ್ಲಾಧ್ಯಕ್ಷರು ಸಂಘದ ವ್ಯಾಪ್ತಿಗೆ ಬರುವ ಹಲವಾರು ಗ್ರಾಮಗಳಿಗೆ ಭೇಟಿ ನೀಡಿ ಸಾಲ ಮರುಪಾವತಿ ಮಾಡುವಂತೆ ಮನವಿ ಮಾಡಿದರು.  

ಈ ವೇಳೆ ಮಾಲೂರು ಡಿಸಿಸಿ ಬ್ಯಾಂಕ್‌ ನಿರ್ದೇಶಕ ಶಂಕರ್‌ನಾರಾಯಣಗೌಡ, ಟೇಕಲ್‌ ಎಸ್‌ಎಫ್ಎಸ್‌ಸಿ ಅಧ್ಯಕ್ಷ ಡಿ.ಆರ್‌.ರವೀಂದ್ರ, ಉಪಾಧ್ಯಕ್ಷ ನಂಜುಂಡಪ್ಪ, ಕಾರ್ಯನಿರ್ವಹಣಾಧಿಕಾರಿ ಪಿ.ಕೃಷ್ಣಪ್ಪ, ನಿರ್ದೇಶಕರಾದ ಎಸ್‌.ಪಿ.ಮುರಳಿ, ಎಂ.ಆರ್‌.ಶ್ರೀನಿವಾಸ್‌, ಅರುಣ ಶ್ರೀನಿವಾಸ್‌, ರೈತ ಮುಖಂಡರಾದ ಸೋಮಶೇಖರ್‌, ನಾರಾಯಣಗೌಡ, ಎನ್‌.ಕೆ.ಮಂಜುನಾಥ್‌, ವೈ.ಎಂ.ಸುರೇಶ್‌ ಮುಂತಾದವರು ಉಪಸ್ಥಿತರಿದ್ದರು. 

Trending videos

Back to Top