CONNECT WITH US  

ಕುಮಾರಣ್ಣನ ಲೆಕ್ಕದಲ್ಲಿ ಬರಪೀಡಿತ ಜಿಲ್ಲೆ ಕಡೆಗಣನೆ

ಪ್ರಸಕ್ತ ಸಾಲಿನ ಫೆಬ್ರವರಿಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮಂಡಿಸಿದ್ದ ಬಜೆಟ್‌ನಲ್ಲಿಯೇ ಬರಪೀಡಿತ ಕೋಲಾರ ಜಿಲ್ಲೆಯನ್ನು ಕಡೆಗಣಿಸಲಾಗಿತ್ತು. ಆಗ ಅಹಿಂದ ಜಿಲ್ಲೆಯನ್ನು ಅಹಿಂದ ಮುಖ್ಯಮಂತ್ರಿಯೇ ಕಡೆಗಣಿಸಿದ್ದಾರೆಂಬ ಟೀಕೆಗಳೂ ಕೇಳಿ ಬಂದಿದ್ದವು. ಆದರೆ, ಈಗಿನ ಸಮ್ಮಿಶ್ರ ಸರಕಾರದ ಬಜೆಟ್‌ನಲ್ಲಿ ಒಂದು ಕ್ಷೇತ್ರ ಹೊರತುಪಡಿಸಿ ಯಾವುದೇ ಕ್ಷೇತ್ರದಲ್ಲೂ ಜೆಡಿಎಸ್‌ ಅನ್ನು ಗೆಲ್ಲಿಸದ ಕೋಲಾರ ಜಿಲ್ಲೆಯನ್ನು ಮುಖ್ಯಮಂತ್ರಿ ಕುಮಾರಸ್ವಾಮಿ ಸಂಪೂರ್ಣ ಕಡೆಗಣಿಸುವ ಮೂಲಕ ನಿರ್ಲಕ್ಷ್ಯ ರಾಜಕಾರಣ ಮಾಡಿದ್ದಾರೆಂಬ ಟೀಕೆಗಳು ಕೇಳಿ ಬರುವಂತಾಗಿದೆ.

ಕೋಲಾರ: ಸಮ್ಮಿಶ್ರ ಸರಕಾರದಲ್ಲಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಮಂಡಿಸಿದ ಬಜೆಟ್‌ ಕೋಲಾರ ಜಿಲ್ಲೆಯನ್ನು ಸಂಪೂರ್ಣ ಕಡೆಗಣಿಸಿದೆ. ಒಟ್ಟು 97 ಪುಟಗಳ ಬಜೆಟ್‌ ಪ್ರತಿಯಲ್ಲಿ ಕೋಲಾರ ಶಬ್ಧವನ್ನು ಕೇವಲ ಒಂದು ಬಾರಿ ಮಾತ್ರ ಬಳಕೆ ಮಾಡಿದ್ದು, ಉಳಿದಂತೆ ಯಾವುದೇ ಇಲಾಖೆಯ ಯೋಜನೆಗಳಲ್ಲಿ ಕೋಲಾರ ಜಿಲ್ಲೆಗೆ ವಿಶೇಷ ಯೋಜನೆ ಮಂಜೂರು ಮಾಡಿಲ್ಲ.

ಇಸ್ರೇಲ್‌ ಮಾದರಿ ನೀರಾವರಿ ಸೌಲಭ್ಯ: ಕೋಲಾರ ಜಿಲ್ಲೆ ಸೇರಿದಂತೆ ಚಿತ್ರದುರ್ಗ, ಕೊಪ್ಪಳ ಹಾಗೂ ಗದಗ ಜಿಲ್ಲೆಯಲ್ಲಿ ಇಸ್ರೇಲ್‌ ಮಾದರಿಯ ನೀರಾವರಿ ಸೌಲಭ್ಯವನ್ನು 150 ಕೋಟಿ ರೂ. ವೆಚ್ಚದಲ್ಲಿ 5 ಸಾವಿರ ಹೆಕ್ಟೇರ್‌ ಜಮೀನಿನಲ್ಲಿ ಅನುಷ್ಠಾನಗೊಳಿಸುವುದಾಗಿ ಸರಕಾರ ಬಜೆಟ್‌ನಲ್ಲಿ ಪ್ರಕಟಿಸಿದೆ. ಈ ಯೋಜನೆಯನ್ನು ಹೊರತುಪಡಿಸಿದಂತೆ ಇನ್ನಾವುದೇ ಯೋಜನೆಯಲ್ಲೂ ಕೋಲಾರ ಜಿಲ್ಲೆಯ ಪ್ರಸ್ತಾಪವಾಗದಿರುವುದು ಜಿಲ್ಲೆಯ ರೈತಾಪಿ ವರ್ಗ ಹಾಗೂ ಸಾರ್ವಜನಿಕರನ್ನು ಸಂಪೂರ್ಣ ನಿರಾಸೆಗೊಳಪಡಿಸಿದೆ.

ಟೊಮೆಟೋ, ಮಾವು ಸಂಸ್ಕರಣೆಗೆ ಒತ್ತು: ಬೇಗ ಕೊಳೆಯುವ ಟೊಮೆಟೋ ಹಾಗೂ ಮಾವಿನ ಹಣ್ಣಿನಂತಹ ತೋಟಗಾರಿಕೆ ಬೆಳೆಗಳು ಹಾಗೂ ಅವುಗಳ ಉಪ ಉತ್ಪನ್ನಗಳ ಸಂಸ್ಕರಣೆ ಮತ್ತು ದಾಸ್ತಾನು ಮಾಡುವ ಬಗ್ಗೆ ಹೆಚ್ಚಿನ ಆದ್ಯತೆ ನೀಡಲಾಗುವುದು ಎಂದು ಬಜೆಟ್‌ನಲ್ಲಿ ಪ್ರಕಟಿಸಲಾಗಿದೆ. ಟೊಮೆಟೋ ಮತ್ತು ಮಾವಿನ ಹಣ್ಣು ಬೆಳೆಯುವಲ್ಲಿ ಮಂಚೂಣಿಯಲ್ಲಿರುವ ಕೋಲಾರ ಜಿಲ್ಲೆಗೆ ಇದರಿಂದ ಅನುಕೂಲವಾಗಬಹುದು. ಆದರೆ, ಈ ಸಂಸ್ಕರಣಾ ಘಟಕಗಳನ್ನು ಯಾವ ಜಿಲ್ಲೆಯಲ್ಲಿ ಆರಂಭಿಸಲಾಗುವುದು ಎನ್ನುವುದನ್ನು ಸ್ಪಷ್ಟವಾಗಿ ಹೇಳದಿರುವುದರಿಂದ ಇವು ಹಾಸನ, ರಾಮನಗರ ಪಾಲಾಗಲಿವೆಯೇ ಎಂಬ ಅನುಮಾನ ಕಾಡುತ್ತಿದೆ.

ರೇಷ್ಮೆ-ಹಾಲು ಕಡೆಗಣನೆ: ರಾಜ್ಯದಲ್ಲಿಯೇ ಅತೀ ಹೆಚ್ಚು ರೇಷ್ಮೆ ಹಾಗೂ ಹಾಲು ಉತ್ಪಾದಿಸುವ ಜಿಲ್ಲೆಯೆಂಬ ಹೆಗ್ಗಳಿಕೆ ಕೋಲಾರ ಜಿಲ್ಲೆಗಿದೆ. ಆದರೆ, ಕೋಲಾರ ಜಿಲ್ಲೆಯ ಈ ಎರಡೂ ಕ್ಷೇತ್ರಗಳ ಅಭಿವೃದ್ಧಿ ಯೋಜನೆಗಳ ವಿಚಾರದಲ್ಲಿ  ಕಡೆಗಣಿಸಲಾಗಿದೆ. ಹಾಲಿನ ವಿಚಾರದಲ್ಲಿ 15 ಲಕ್ಷ ಲೀ. ಸಾಮರ್ಥ್ಯದ ಮೆಗಾ ಡೇರಿಯನ್ನು ಹಾಸನಕ್ಕೆ ಮಂಜೂರು ಮಾಡಿದ್ದರೆ, ರೇಷ್ಮೆ ಯೋಜನೆಗಳನ್ನು ಮೈಸೂರು ಹಾಗೂ ರಾಮನಗರ ಜಿಲ್ಲೆಗಳಿಗೆ ಮಂಜೂರು ಮಾಡಲಾಗಿದೆ.

ಸಮಾಜ ಕಲ್ಯಾಣ: ಕೋಲಾರ ಜಿಲ್ಲೆ ಅತೀ ಹೆಚ್ಚು ಪರಿಶಿಷ್ಟ ಜಾತಿ ಮತ್ತು ವರ್ಗದ ಜನರು ವಾಸ ಮಾಡುವ ಜಿಲ್ಲೆಯಾಗಿದ್ದರೂ, ಸಮಾಜ ಕಲ್ಯಾಣ ಇಲಾಖೆ ಕಾರ್ಯಕ್ರಮಗಳಲ್ಲೂ ಕೋಲಾರ ಜಿಲ್ಲೆಯನ್ನು ನಿರ್ಲಕ್ಷಿಸಲಾಗಿದೆ. ಸಮಾಜ ಕಲ್ಯಾಣ ಇಲಾಖೆಯ ಇತರೇ ಯೋಜನೆಗಳಲ್ಲಿ ಕೋಲಾರ ಜಿಲ್ಲೆಯ ಯುವಕ ಯುವತಿಯರು ಪಾಲು ಪಡೆದುಕೊಳ್ಳಬೇಕೆ ಹೊರತು,ಜಿಲ್ಲೆಯ ಪರಿಶಿಷ್ಟರಿಗೆ ವಿಶೇಷ ಯೋಜನೆಗಳನ್ನು ಬಜೆಟ್‌ನಲ್ಲಿ ಪ್ರಕಟಿಸಿಲ್ಲ.

ಸಾಲ ಮನ್ನಾ ನಿರಾಸೆ: ರಾಜ್ಯದಲ್ಲಿಯೇ ಅತೀ ಹೆಚ್ಚು ಸ್ತ್ರೀಶಕ್ತಿ ಸ್ವಹಾಯ ಸಂಘಗಳ ಮೂಲಕ ಸಾಲ ನೀಡಿದ ಹೆಗ್ಗಳಿಕೆಗೆ ಕೋಲಾರ ಡಿಸಿಸಿ ಬ್ಯಾಂಕ್‌ ಪಾತ್ರವಾಗಿತ್ತು. ರಾಜ್ಯದಲ್ಲಿ 1,100 ಕೋಟಿ ರೂ.ಅನ್ನು ಸ್ತ್ರೀಶಕ್ತಿ ಸ್ವಸಹಾಯ ಸಂಘಗಳಿಗೆ ಶೂನ್ಯ ಬಡ್ಡಿ ದರದಲ್ಲಿ ಸಾಲ ನೀಡಿದ್ದರೆ, ಇದರಲ್ಲಿ ಶೇ.50ರಷ್ಟು ಅಂದರೆ, ಸುಮಾರು 600 ಕೋಟಿ ರೂ.ನಷ್ಟು ಸಾಲವನ್ನು ಕೋಲಾರ, ಚಿಕ್ಕಬಳ್ಳಾಪುರ ಜಿಲ್ಲೆಯ ಸ್ವಸಹಾಯ ಸಂಘಗಳಿಗೆ ನೀಡಲಾಗಿತ್ತು.  

ಚುನಾವಣಾ ಪ್ರಚಾರದ ಸಂದರ್ಭದಲ್ಲಿ ಕೋಲಾರ, ಚಿಕ್ಕಬಳ್ಳಾಪುರ ಜಿಲ್ಲೆಗಳಿಗೆ ಆಗಮಿಸಿದ್ದ ಕುಮಾರಸ್ವಾಮಿ, ಮಹಿಳಾ ಸಂಘಗಳು ಪಡೆದುಕೊಂಡಿರುವ ಸಾಲವನ್ನು ಮನ್ನಾ ಮಾಡುವುದಾಗಿ ವಾಗ್ಧಾನ ಮಾಡಿದ್ದರು. ಈ ಹಿನ್ನೆಲೆಯಲ್ಲಿ ಮಹಿಳೆಯರು ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿದ್ದರಿಂದ ಸಾಲ ಮರುಪಾವತಿಸುವುದನ್ನೇ ಬಿಟ್ಟಿದ್ದರು. ಆದರೆ, ಬಜೆಟ್‌ನಲ್ಲಿ ಕುಮಾರಸ್ವಾಮಿ ತಾವು ನೀಡಿದ್ದ ವಾಗ್ಧಾನವನ್ನು ಮರೆತಿರುವುದರಿಂದ ಮಹಿಳೆಯರು ನಿರಾಸೆಯಲ್ಲಿ ಮುಳುಗಿದ್ದು, ಸಾಲ ಮರುಪಾವತಿ ಮಾಡುವ ಒತ್ತಡಕ್ಕೆ ಸಿಲುಕಿದ್ದಾರೆ.

ಮೇಕೆದಾಟು ಯೋಜನೆ: ಕೋಲಾರ ಜಿಲ್ಲೆಗೆ ಕುಡಿಯುವ ನೀರು ಪೂರೈಸುತ್ತದೆ ಎಂದು ಹೇಳಲಾಗುತ್ತಿರುವ ಮೇಕೆದಾಟು ಯೋಜನೆಯ ಬಗ್ಗೆ ಬಜೆಟ್‌ನಲ್ಲಿ ಪ್ರಸ್ತಾಪಿಸಿರುವುದು ಜಿಲ್ಲೆಯ ಜನತೆಗೆ ಸ್ವಲ್ಪ ಸಮಾಧಾನ ತಂದಿದೆ. ಮೇಕೆದಾಟು ಯೋಜನೆ ಕುರಿತು ಪೂರ್ವ ಸಾಧ್ಯತಾ ವರದಿ ಪ್ರಸ್ತಾವನೆಗೆ ಸಕ್ಷಮ ಪ್ರಾಧಿಕಾರದಿಂದ ಅನುಮೋದನೆ ಪಡೆಯುವ ಪ್ರಕ್ರಿಯೆ ಜಾರಿಯಲ್ಲಿದ್ದು, ಇದನ್ನು ಚುರುಕುಗೊಳಿಸಿ ತೀರುವಳಿ ಪಡೆದು ಯೋಜನೆಯನ್ನು ಕಾರ್ಯಗತಗೊಳಿಸಲು ಕ್ರಮ ವಹಿಸಲಾಗುವುದು ಎಂದು ಬಜೆಟ್‌ ಘೋಷಿಸಿದೆ. ಆದರೆ, ಈ ಯೋಜನೆಗೆ ಎಷ್ಟು ಅನುದಾನ ಇಡಲಾಗಿದೆ ಎಂಬ ಬಗ್ಗೆ ಚಕಾರ ಎತ್ತಿಲ್ಲ.

* ಕೆ.ಎಸ್‌.ಗಣೇಶ್‌

Trending videos

Back to Top