CONNECT WITH US  

ಜಿಲ್ಲೆಯ ಅಭಿವೃದ್ಧಿಗಾಗಿ ಸಿಎಂ ಬಳಿಗೆ ನಿಯೋಗ

ಕೋಲಾರ: ಜಿಲ್ಲೆಯ ಅಭಿವೃದ್ಧಿಗೆ ಸಂಬಂಧಿಸಿದಂತೆ ಚರ್ಚಿಸಲು ಜು.10ರಂದು ಕೋಲಾರ ಶಾಸಕ ಕೆ.ಶ್ರೀನಿವಾಸಗೌಡರ ನೇತೃತ್ವದಲ್ಲಿ ಮುಖ್ಯಮಂತ್ರಿಗಳ ಬಳಿಗೆ ಜಿಲ್ಲೆಯಿಂದ ನಿಯೋಗ ತೆರಳಲು ಪ್ರಯತ್ನ ನಡೆದಿದೆ ಎಂದು ಸಂಸದ ಕೆ.ಎಚ್‌.ಮುನಿಯಪ್ಪ ತಿಳಿಸಿದರು. ಶನಿವಾರ ನಗರದ ಜಿಪಂ ಸಭಾಂಗಣದಲ್ಲಿ ನಡೆದ ಸಾಮಾನ್ಯ ಸಭೆಯ ಬಳಿಕ ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದರು.

ಜಿಲ್ಲೆಯಲ್ಲಿ ಇನ್ನೂ ಆಗಬೇಕಿರುವ ಅಭಿವೃದ್ಧಿ ಕಾರ್ಯಗಳು, ನ್ಯೂನತೆಗಳ ಪಟ್ಟಿಯನ್ನು ಸಿಇಒ ಜು.9ರ ಒಳಗಾಗಿ ಸಿದ್ಧಪಡಿಸಲಿದ್ದಾರೆ. ಜಿಲ್ಲೆಯ ಶಾಸಕರು, ಜಿಪಂ ಅಧ್ಯಕ್ಷರು, ಉಪಾಧ್ಯಕ್ಷರು, ಸದಸ್ಯರು ಸೇರಿದಂತೆ ಶಾಸಕ ಕೆ.ಶ್ರೀನಿವಾಸಗೌಡ ನೇತೃತ್ವದಲ್ಲಿ ತೆರಳಿ ಸಿಎಂ ಬಳಿ ಚರ್ಚಿಸಲಾಗುವುದು ಎಂದರು.

ಅವಳಿ ಜಿಲ್ಲೆಗಳ ನೀರಿಗೆ ಸಾಕಷ್ಟು ಹಣ: ಬಜೆಟ್‌ಗೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಸಂಸದರು, ಈ ಹಿಂದಿನ ಯೋಜನೆಗಳು ಸೇರಿದಂತೆ ಎಲ್ಲವನ್ನೂ ಕ್ರೋಢೀಕರಿಸಿ ಬಜೆಟ್‌ನಲ್ಲಿ ಆದ್ಯತೆ ನೀಡಲಾಗಿದೆ. ಸಿದ್ದರಾಮಯ್ಯ ನೇತೃತ್ವದ ಸರಕಾರದ ಯೋಜನೆಗಳು ಯಥಾವತ್ತಾಗಿ ಮುಂದುವರಿಯುತ್ತವೆ.

ವಿಶೇಷವಾಗಿ ಕೋಲಾರ-ಚಿಕ್ಕಬಳ್ಳಾಪುರ ಜಿಲ್ಲೆಗಳಿಗೆ ನೀರು ನೀಡಲು 13 ಸಾವಿರ ಕೋಟಿ ರೂ.ಎತ್ತಿನಹೊಳೆಗೆ, ಕೆ.ಸಿ.ವ್ಯಾಲಿಗೆ 1,300 ಕೋಟಿ ರೂ., ಹೆಬ್ಟಾಳ, ನಾಗವಾರ ಯೋಜನೆಗೆ 1,000 ಕೋಟಿ ರೂ. ಅನ್ನು ಈಗಾಗಲೇ ನೀಡಲಾಗಿದ್ದು, ಇವು ದೇಶದಲ್ಲೇ ಬಹಳ ಮಹತ್ತರವಾದ ಯೋಜನೆಗಳಾಗಿದೆ. ಮೊದಲಿನ ಯೋಜನೆಗಳನ್ನು ಮಾಡುವುದಕ್ಕೆ 5 ವರ್ಷ ಬೇಕು. ಅವುಗಳನ್ನು ಒಳಗೊಂಡಂತೆ ಇತರೆ ಯೋಜನೆಗಳನ್ನು ನೀಡಲಾಗಿದೆ ಎಂದು ಹೇಳಿದರು. 

ಜಿಲ್ಲೆಗೆ ಅಭಿವೃದ್ಧಿ ಯೋಜನೆ: ಶಾಸಕ ಕೆ.ಶ್ರೀನಿವಾಸಗೌಡ ಮಾತನಾಡಿ, ಬಜೆಟ್‌ಗೆ ಸಂಬಂಧಿಸಿದಂತೆ 2 ಲಕ್ಷ ರೂ.ಸಾಲ ಮನ್ನಾದಿಂದ ಸಾಕಷ್ಟು ಮಂದಿಗೆ ಅನುಕೂಲವಾಗುತ್ತದೆ. ಬಜೆಟ್‌ನಲ್ಲಿರುವುದನ್ನು ಬಿಟ್ಟು, ಬೇರೆ ಅಭಿವೃದ್ಧಿ ಯೋಜನೆಗಳನ್ನು ಜಿಲ್ಲೆಗೆ ತರುತ್ತೇವೆ ಎಂದು ಹೇಳಿದರು.

ನರಸಾಪುರ ಕೆರೆ ಬಳಿಯ ಬೃಹತ್‌ ಕಟ್ಟಡಕ್ಕೆ ರಾಜಕಾಲುವೆ ಒತ್ತುವರಿ ಮಾಡಿಕೊಂಡಿಲ್ಲ ಎನ್ನುವುದು ತಿಳಿದುಬಂದಿದೆ. ಸರ್ವೆ ನಡೆಸಿದ ಬಳಿಕ ತಪ್ಪು ಕಂಡು ಬಂದರೆ ಮುಲಾಜಿಲ್ಲದೆ ತೆರವು ಮಾಡಿಸಲಾಗುವುದು. ಸದ್ಯ ನೀರನ್ನು ತಿರುಗಿಸಿದ್ದಾರೆ. ಕಾನೂನು ಬದ್ಧವಾಗಿ ಕ್ರಮ ಜರುಗಿಸುತ್ತೇವೆ ಎಂದರು.

ಕ್ರಷರ್‌ಗಳು ಅಧಿಕಾರಿಗಳ ವಶ: ಮಾಲೂರು ಶಾಸಕ ಕೆ.ವೈ.ನಂಜೇಗೌಡ ಮಾತನಾಡಿ, ಈಗಲೂ ನನ್ನ ಕ್ರಷರ್‌ಗಳು ಅನಧಿಕೃತವಾಗಿವೆ ಎಂದು ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ. ಅದಕ್ಕೆ ನ್ಯಾಯ ಪಡೆದುಕೊಳ್ಳುತ್ತೇನೆ. ಆದರೆ, ನಾನು ಯಾರ ಕ್ರಷರ್‌ಗಳಿಗೂ ಬೀಗ ಹಾಕಿಸುವ ಕೆಲಸಕ್ಕೆ ಕೈ ಹಾಕಿಲ್ಲ. ಹಾಕುವುದೂ ಇಲ್ಲ ಎಂದು ಸ್ಪಷ್ಟಪಡಿಸಿದರು.

Trending videos

Back to Top