CONNECT WITH US  

ಮಹಾಪುರುಷರ ಜೀವನ ಕ್ರಮ ಆದರ್ಶವಾಗಲಿ

ಮಾಲೂರು: ಸಮಾಜದ ಸುಧಾರಣೆ ಮತ್ತು ಪ್ರಗತಿಗಾಗಿ ಶ್ರಮಿಸಿದ ಮಹಾಪುರುಷರು ನಮ್ಮ ಜೀವನದ ಆದರ್ಶವಾಗಬೇಕು ಎಂದು ತುಮಕೂರು ಪಟ್ಟನಾಯಕನಹಳ್ಳಿ ಶ್ರೀ ಗುರುಗುಂಡೇಶ್ವರ ಸ್ವಾಮಿ ಸಂಸ್ಥಾನ ಮಠದ ಪೀಠಾಧಿಪತಿ ಶ್ರೀನಂಜಾವದೂತ ಸ್ವಾಮೀಜಿ ತಿಳಿಸಿದರು.

ಪಟ್ಟಣದ ಆರ್‌.ಜಿ.ಕಲ್ಯಾಣ ಮಂಟಪದಲ್ಲಿ ಜಿ.ಇ.ರಾಮೇಗೌಡ ಚಾರಿಟಬಲ್‌ ಟ್ರಸ್ಟ್‌ ಹಮ್ಮಿಕೊಂಡಿದ್ದ ತಾಲೂಕಿನ 40 ಸಾವಿರ ವಿದ್ಯಾರ್ಥಿಗಳಿಗೆ ಉಚಿತ ನೋಟ್‌ಬುಕ್‌ ಹಾಗೂ, ಶಾಲಾ ಬ್ಯಾಗ್‌ ಹಾಗೂ ಪಿಯುಸಿಯಿಂದ ಪದವಿ ವರೆಗಿನ 6 ಸಾವಿರ ವಿದ್ಯಾರ್ಥಿಗಳಿಗೆ ಪಠ್ಯಪುಸ್ತಕಗಳನ್ನು ವಿತರಿಸುವ ಕಾರ್ಯಕ್ರಮದ ದಿವ್ಯ ಸಾನ್ನಿಧ್ಯ ವಹಿಸಿ ಮಾತನಾಡಿದರು.

ಚೆನ್ನಾಗಿ ಓದಿ ಸಮಾಜದ ಋಣ ತೀರಿಸಿ: ಬಡ ಕುಟುಂಬದಲ್ಲಿ ಜನಿಸಿ ಇಂಜಿನಿಯರ್‌ ಆಗಿ ತಾವುಗಳಿಸಿದ ಹಣದಲ್ಲಿ ಕಳೆದ 14 ವರ್ಷಗಳಿಂದ ನಿರಂತರವಾಗಿ ತಾಲೂಕಿನ ಬಡ ವಿದ್ಯಾರ್ಥಿಗಳಿಗೆ ಉಚಿತ ನೋಟ್‌ಬುಕ್‌ ಮತ್ತು ಪಠ್ಯಪುಸ್ತಕಗಳನ್ನು ನೀಡುತ್ತಿರುವ ರಾಮೇಗೌಡರ ಸಾಧನೆ ಶ್ಲಾಘನೀಯ. ವಿದ್ಯಾರ್ಥಿಗಳು ಅವರಿಂದ ಪಡೆದ ನೆರವನ್ನು ಮರೆಯದೇ ಚೆನ್ನಾಗಿ ಓದಿ ಮುಂದೆ ಅದನ್ನು ಸಮಾಜಕ್ಕೆ ಹಿಂದಿರುಗಿಸುವ ಕಾರ್ಯಕ್ಕೆ ಮುಂದಾಗಬೇಕೆಂದು ಸಲಹೆ ನೀಡಿದರು.
 
ತಾಂತ್ರಿಕ ಕಾಲೇಜು ಆರಂಭಿಸಲು ಚರ್ಚೆ: ಆದಿಚುಂಚನಗಿರಿ ಚಿಕ್ಕಬಳ್ಳಾಪುರ ಶಾಖಾ ಮಠದ ಶ್ರೀ ಮಂಗಳಾನಂದನಾಥ ಸ್ವಾಮೀಜಿ ಮಾತನಾಡಿ, ರಾಮೇಗೌಡರು ಶ್ರೀಮಠದ ಡಾ.ಬಾಲಗಂಗಾಧರ ನಾಥ ಸ್ವಾಮೀಜಿ ಪರಮ ಭಕ್ತರಾಗಿದ್ದು, ಇಂದಿಗೂ ಮಠದ ಭಕ್ತರಾಗಿ ಪ್ರಸ್ತುತ ಪೀಠಾಧಿಪತಿ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ ಮಾರ್ಗದರ್ಶನದಲ್ಲಿ ನಡೆಯುತ್ತಿದ್ದಾರೆ. ಅವರ ಬಹುದೊಡ್ಡ ಕನಸಾಗಿರುವ ಮಾಲೂರು ಪಟ್ಟಣಕ್ಕೆ ಹೊಂದಿಕೊಂಡಿರುವ ವೈಟ್‌ ಗಾರ್ಡ್‌ನ್‌ ಬಡಾವಣೆಯ ಬಳಿ ತಾವು ಖರೀದಿಸಿ ಶ್ರೀಮಠಕ್ಕೆ ಕಾಣಿಕೆಯಾಗಿ ನೀಡಿರುವ ನಾಲ್ಕು ಎಕರೆ ಭೂಮಿಯಲ್ಲಿ ತಾಂತ್ರಿಕ ವೃತ್ತಿಪರ ಶಿಕ್ಷಣದ ಕಾಲೇಜು ಆರಂಭಿಸುವ ಬಗ್ಗೆ ಪೀಠಾಧಿಪತಿಗಳೊಂದಿಗೆ ಚರ್ಚಿಸುವುದಾಗಿ ತಿಳಿಸಿದರು.

ಸೂಕ್ತ ಸ್ಥಾನಮಾನ: ಕಾರ್ಯಕ್ರಮ ಉದ್ಘಾಟಿಸಿದ ಶಾಸಕ ಕೆ.ವೈ.ನಂಜೇಗೌಡ ಮಾತನಾಡಿ, ತಾವು ತಾಲೂಕಿನಲ್ಲಿ ಯುವ ಕಾಂಗ್ರೆಸ್‌ ಅಧ್ಯಕ್ಷರಾಗಿದ್ದಾಗ ಜಿ.ಇ.ರಾಮೇಗೌಡರು ತಮ್ಮೊಂದಿಗೆ ಯುವ ಕಾಂಗ್ರೆಸ್‌ನ ಪ್ರಧಾನ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದ್ದರು. ಪಕ್ಷ ತೊರೆದ ಕಾರಣ ಅವರಿಗೆ ಸಿಗಬೇಕಾದ ರಾಜಕೀಯ ಸ್ಥಾನಮಾನಗಳು ವಿಳಂಬವಾಗಿವೆ. ಕಳೆದ ಚುನಾವಣೆಯಲ್ಲಿ ಮತ್ತೆ ಕಾಂಗ್ರೆಸ್‌ ಪಕ್ಷಕ್ಕೆ ಮರಳಿದ್ದು, ಮುಂದಿನ ದಿನಗಳಲ್ಲಿ ಸೂಕ್ತ ಸ್ಥಾನಮಾನಗಳು ಸಿಗಲಿವೆ ಎಂದರು.

ರಾಮೇಗೌಡರ ಕಾರ್ಯ ಶ್ಲಾಘನೀಯ: ರಾಮೇಗೌಡರು ಯಾವುದೇ ಪ್ರತಿಫ‌ಲಾಪೇಕ್ಷೆ ಇಲ್ಲದೇ ಸತತವಾಗಿ ವಿದ್ಯಾರ್ಥಿಗಳಿಗೆ ಉಚಿತವಾಗಿ ನೋಟ್‌ಬುಕ್‌ ಮತ್ತು ಪಠ್ಯಪುಸ್ತಕಗಳನ್ನು ನೀಡುತ್ತಿರುವುದು ಹೆಮ್ಮೆಯ ಸಂಗತಿಯಾಗಿದೆ. ತಾಲೂಕಿನ ಅಭಿವೃದ್ಧಿಯ ಹಿತದೃಷ್ಟಿಯಿಂದ ರಾಮೇಗೌಡರಂತಹ ದಾನಿಗಳ ಅಗತ್ಯವಿದೆ ಎಂದರು. 

 ಪ್ರಾಸ್ತಾವಿಕವಾಗಿ ಮಾತನಾಡಿದ ಟ್ರಸ್ಟ್‌ ಅಧ್ಯಕ್ಷ ರಾಮೇಗೌಡ, ತಾವು ವ್ಯಾಸಂಗದ ದಿನಗಳಲ್ಲಿ ಪಠ್ಯ ಪುಸ್ತಕದ ಕೊರತೆ ಇದ್ದುದನ್ನು ಅರಿತು ತಾಲೂಕಿನ ಪ್ರತಿಯೊಬ್ಬ ವಿದ್ಯಾರ್ಥಿಯೂ ಪಠ್ಯಪುಸ್ತಕಗಳನ್ನು ಖರೀದಿ ಮಾಡಲು ಸಾಧ್ಯವಾಗದ ಪರಿಸ್ಥಿತಿಯಲ್ಲಿ ತಮ್ಮ ಟ್ರಸ್ಟ್‌ನಿಂದ ಉಚಿತವಾಗಿ ಪಠ್ಯ ಪುಸಕ್ತ ನೀಡುವ ಕಾರ್ಯಕ್ರಮವನ್ನು ಆರಂಭಿಸಿದ್ದು, ಇದಕ್ಕೆ ಸ್ಫೂರ್ತಿ ತುಂಬಿದವರು ಸ್ಥಳೀಯ ಕೈಗಾರಿಗಾ ಪ್ರಾಂಗಣದ ಮೆಡೋಫಾರಂ ಕಾರ್ಖಾನೆಯ ಮಾಲಿಕ ರಂಜಿತ್‌ ಚಿರೋಡಿ. ಅವರು ಕಳೆದ 30 ವರ್ಷಗಳಿಂದ ಬೆಂಗಳೂರಿನಲ್ಲಿ ಇಂತಹ ಕಾರ್ಯ ಮಾಡುತ್ತಿದ್ದಾರೆ ಎಂದರು.

ಕಾರ್ಯಕ್ರಮದಲ್ಲಿ 10ನೇ ತರಗತಿ ಮತ್ತು ದ್ವಿತೀಯ ಪಿಯುಸಿಯಲ್ಲಿ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು. ವೇದಿಕೆಯಲ್ಲಿ ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷರಾದ ಸಿ.ರಾಜಣ್ಣ, ಟಿ.ಮುನಿಯಪ್ಪ, ಕೆ.ಹೆಚ್‌.ಚನ್ನರಾಯಪ್ಪ, ಬಿಇಒ ಮಾಧವರೆಡ್ಡಿ, ಕೆಐಡಿಬಿಯ ಜಗನ್ನಾಥ್‌, ಬಾಲಗಂಗಾಧರನಾಥ ಶಿಕ್ಷಣ ಸಂಸ್ಥೆ ಕಾರ್ಯದರ್ಶಿ ಬಿ.ಪಿ.ಬೈಯಣ್ಣ, ಭುನಹಳ್ಳಿ ಚನ್ನಪ್ಪ, ಮುನಿಸ್ವಾಮಿ, ಡಾ.ಎನ್‌.ರಾಮರೆಡ್ಡಿ, ನಲ್ಲಾಂಡಹಳ್ಳಿ ನಾಗರಾಜು, ಸುಜಾತಾ, ಬಾಳಿಗಾನಹಳ್ಳಿ ಶ್ರೀನಿವಾಸ್‌, ಅಲ್ಪಸಂಖ್ಯಾತ ಮುಖಂಡ ಅಯಾಜ್‌ ಪಾಷ, ರಾಮೇಗೌಡರ ಪತ್ನಿ ರಶ್ಮಿ, ಪರಮೇಶ್‌, ಟ್ರಸ್ಟ್‌ ಕಾರ್ಯದರ್ಶಿ ರಾಘವೇಂದ್ರ, ವಕೀಲ ಎಂ.ಕೆ.ಆನಂದಕುಮಾರ್‌, ಎಂ.ಜಿ.ಮಧುಸೂದನ್‌, ಭಾಸ್ಕರ್‌, ಕೃಷ್ಣಾರೆಡ್ಡಿ, ಇಮ್ರಾನ್‌, ಸುರೇಂದ್ರ ಚಿರೋಡಿಯ, ಲಕ್ಷ್ಮೀನಾರಾಯಣ್‌, ಶಿವಕುಮಾರ್‌, ರವಿ ಮತ್ತಿತರರು ಭಾಗವಹಿಸಿದ್ದರು
 
ಡಿ.ಕೆ.ರವಿ ವಿದ್ಯಾರ್ಥಿಗಳಿಗೆ ಸ್ಫೂರ್ತಿಯಾಗಲಿ
 ಕೋಲಾರ ಜಿಲ್ಲೆಯಲ್ಲಿ ಅನೇಕ ಸುಧಾರಣೆಗಳನ್ನು ತರುವ ಮೂಲಕ ಮನೆಮಾತಾಗಿರುವ ಹಿಂದಿನ ಜಿಲ್ಲಾಧಿಕಾರಿ ದಿ.ಡಿ.ಕೆ.ರವಿ ಅವರು ವಿದ್ಯಾರ್ಥಿಗಳ ಸ್ಫೂರ್ತಿಯಾಗಬೇಕಾಗಿದೆ. ಪ್ರತಿಯೊಬ್ಬ ವಿದ್ಯಾರ್ಥಿಗೂ ಕಲಿಕೆಯಲ್ಲಿ ಗುರಿ ಹಾಗೂ ಗುರಿ ಸಾಧನೆಗೆ ತಮ್ಮದೇ ಆದ ಪರಿಶ್ರಮದ ಅಗತ್ಯವಿದೆ. ಡಿ.ಕೆ.ರವಿ ಆತ್ಮಹತ್ಯೆ ಮಾಡಿಕೊಂಡಿರುವುದು ಅವರ ವಯಕ್ತಿಕ ವಿಚಾರವಾಗಿದ್ದು, ಸಮಾಜದ ಸುಧಾರಣೆಯಲ್ಲಿ ಅವರ ಪಾತ್ರ ಎಲ್ಲಾ ವಿದ್ಯಾರ್ಥಿಗಳು ಅನುಕರಿಸಬಹುದಾದ ಮಾರ್ಗವಾಗಿದೆ ಎಂದು
ತುಮಕೂರು ಪಟ್ಟನಾಯಕನಹಳ್ಳಿ ಶ್ರೀ ಗುರುಗುಂಡೇಶ್ವರ ಸ್ವಾಮಿ ಸಂಸ್ಥಾನ ಮಠದ ಪೀಠಾಧಿಪತಿ ಶ್ರೀನಂಜಾವದೂತ ಸ್ವಾಮೀಜಿ ತಿಳಿಸಿದರು.

ಈ ಹಿಂದೆ ನಾನು ಕೂಡ ವಿದ್ಯಾರ್ಥಿಗಳ ಸಾಲಿನಲ್ಲಿ ಕುಳಿತು ರಾಮೇಗೌಡರು ನೀಡಿದ ಪುಸ್ತಕಗಳನ್ನು ಪಡೆದು ಕಾನೂನು ಪದವಿ ಗಳಿಸಿದ್ದೇನೆ. ತಾಲೂಕಿನ ವಿದ್ಯಾರ್ಥಿಗಳು ಉನ್ನತ ಶಿಕ್ಷಣ ಪಡೆದು ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಉತ್ತೀರ್ಣರಾದಲ್ಲಿ ರಾಮೇಗೌಡರ ಸಹಕಾರಕ್ಕೆ ಪೂರ್ಣ ಫ‌ಲ ಸಿಗಲಿದೆ.
 ತ್ರಿವರ್ಣಾರವಿ, ತಾಪಂ ಅಧ್ಯಕ್ಷೆ

ಸಮಾಜಕ್ಕೆ ಅನ್ನದಾನ ನೀಡಿದಲ್ಲಿ ಕ್ಷಣಿಕ ತೃಪ್ತಿಯಾಗಲಿದ್ದು, ವಿದ್ಯಾದಾನ ಮಾಡುವುದರಿಂದ ಜೀವನದಲ್ಲಿ ಶಾಶ್ವತ ತೃಪ್ತಿ ಸಿಗಲಿದೆ. ಈ ನಿಟ್ಟಿನಲ್ಲಿ ರಾಮೇಗೌಡರ ಕಾರ್ಯ ಸಮಾಜ ಮುಖೀಯಾಗಿದೆ. 
  ಶ್ರೀ ಮಂಗಳಾನಂದನಾಥ ಸ್ವಾಮೀಜಿ, ಚಿಕ್ಕಬಳ್ಳಾಪುರ ಶಾಖಾ ಮಠ


Trending videos

Back to Top