CONNECT WITH US  

ಪೊಲೀಸ್‌ ನೇಮಕಾತಿಯಲ್ಲಿ ಅಕ್ರಮ ಸಾಬೀತು

ಕೆಜಿಎಫ್: ರಾಜ್ಯದಲ್ಲೇ ಪ್ರತ್ಯೇಕ ಪೊಲೀಸ್‌ ಜಿಲ್ಲೆ ಎಂಬ ಖ್ಯಾತಿ ಪಡೆದಿರುವ ಕೆಜಿಎಫ್ ಘಟಕದಲ್ಲಿ ನಡೆದ ಬ್ಯಾಕ್‌ಲಾಗ್‌ ನೇರ ನೇಮಕಾತಿಯಲ್ಲಿ ಮೇಲ್ನೋಟಕ್ಕೆ ಅಕ್ರಮ ನಡೆದಿದೆ ಎಂದು ರಾಜ್ಯ ಪೊಲೀಸ್‌ ಮಹಾ ನಿರ್ದೇಶಕರಿಗೆ ಸಿಐಡಿ ತನ್ನ ತನಿಖಾ ವರದಿಯನ್ನು ಸಲ್ಲಿಸಿದೆ.

ಎಸ್‌ಟಿ ಕೋಟಾದಲ್ಲಿ ಆರು ಹುದ್ದೆಗಳಿಗೆ ನೇರ ನೇಮಕಾತಿ ಮಾಡಿಕೊಂಡು, ತನ್ನ ಕುಟುಂಬದ ಸದಸ್ಯ ರಿಗೆ ನೀಡಿದ ಆರೋಪದ ಎದುರಿಸುತ್ತಿದ್ದ ಹಿಂದಿನ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಭಗವಾನ್‌ದಾಸ್‌ ವಿರುದ್ಧ ವರದಿ ಸಲ್ಲಿಸಲಾಗಿದೆ.

ಕೆಜಿಎಫ್ ಪೊಲೀಸ್‌ ಜಿಲ್ಲೆಯಲ್ಲಿ ದ್ವಿತೀಯ ದರ್ಜೆ ಸಹಾಯಕ, ಎಪಿಸಿ, ಸಿಪಿಸಿ ಮತ್ತು ಮಹಿಳಾ ಕಾನ್ಸ್‌ ಟೇಬಲ್‌ ಹುದ್ದೆಗಳ ಭರ್ತಿ ಕುರಿತು ಹಿರಿಯ ಅಧಿಕಾರಿಗಳಿಗೆ ಮಾಹಿತಿ ನೀಡದೇ ಹಾಗೂ ನಿಯ ಮಾವಳಿಗಳನ್ನು ಮೀರಿ ನೇರ ನೇಮಕಾತಿ ಮಾಡಿರುವುದು ಸ್ಪಷ್ಟವಾಗಿದೆ ಎಂದು ವರದಿಯಲ್ಲಿ ತಿಳಿಸಲಾಗಿದೆ.

ತನಿಖೆಗೆ ಶಿಫಾರಸು: ಕೆಜಿಎಫ್ ಪೊಲೀಸ್‌ ಅಧೀಕ್ಷಕರು ನೇಮಕಾತಿ ಮಾಡಿರುವುದು ಕಾನೂನು ಬಾಹಿರವಾಗಿದ್ದು, ತನ್ನ ಅಧಿಕಾರ ದುರ್ಬಳಕೆ ಮಾಡಿಕೊಂಡು ನೇಮಕ ಮಾಡಿರುವ ಅಭ್ಯರ್ಥಿಗಳಿಗೆ ಅನುಕೂಲ ಮಾಡಿಕೊಟ್ಟಿರು ವುದು ಕಂಡು ಬಂದಿರುವುದರಿಂದ ಭ್ರಷ್ಟಾಚಾರ ನಿರ್ಮೂಲನಾ ಕಾಯ್ದೆ 1988 ರೀತ್ಯಾ ಭಗವಾನ್‌ದಾಸ್‌ ವಿರುದ್ಧ ಪ್ರಕರಣ ದಾಖಲು ಮಾಡಿಕೊಂಡು ಎಸಿಬಿಯಿಂದ ತನಿಖೆ ನಡೆಸಬೇಕು ಎಂದು ಶಿಫಾರಸು ಸಲ್ಲಿಸಿದೆ.

ನೇಮಕಾತಿ ರದ್ದು ಸಾಧ್ಯತೆ: ಇದರಿಂದಾಗಿ ಹಿಂದಿನ ಎಸ್ಪಿ ಭಗವಾನ್‌ದಾಸ್‌ ಅವರು ದ್ವಿತೀಯ ದರ್ಜೆ ಸಹಾಯಕಿಯಾಗಿ ನೇಮಕ ಮಾಡಿದ್ದ ಅವರ ಅಕ್ಕನ ಮಗಳು ರೂಪಾ, ರೂಪಾರವರ ಪತಿ ಎಸಿಪಿ ಮಲ್ಲಿಕಾರ್ಜುನ, ಹತ್ತಿರದ ಸಂಬಂಧಿಗಳಾದ ಮಹಿಳಾ ಸಿವಿಲ್‌ ಕಾನ್ಸ್‌ಟೇಬಲ್‌ ನೇತ್ರಾವತಿ, ಜಿಲ್ಲಾ ಸಶಸ್ತ್ರ ಮೀಸಲು ಪೊಲೀಸ್‌ ಪಡೆಯ ಕಾನ್ಸ್‌ಟೇಬಲ್‌ ನಾಗರಾಜ್‌, ಮಹಿಳಾ ಸಿವಿಲ್‌ ಕಾನ್ಸ್‌ಟೇಬಲ್‌ ಕಲ್ಪನಾ, ಸಿವಿಲ್‌ ಕಾನ್ಸ್‌ಟೇಬಲ್‌ ಲೋಹಿತ್‌ಕುಮಾರ್‌ ಮೇಲೆ ತೂಗುಕತ್ತಿ ಬೀಸಿದ್ದು, ಯಾವುದೇ ಕ್ಷಣದಲ್ಲಿ ಅವರ ನೇಮಕಾತಿ ರದ್ದುಗೊಳ್ಳುವ ಸಾಧ್ಯತೆ ಇದೆ. 

ಆಕಾಂಕ್ಷಿಗಳಿಂದ ದೂರು: 2016ರಲ್ಲಿ ಭಗವಾನ್‌ ದಾಸ್‌ ಕೆಜಿಎಫ್ ಪೊಲೀಸ್‌ ಜಿಲ್ಲೆಯ ವರಿಷ್ಠಾಧಿಕಾರಿ ಯಾಗಿದ್ದಾಗ ಈ ಎಲ್ಲಾ ನೇಮಕಾತಿಗಳು ನಡೆದಿತ್ತು. ಈ ನೇಮಕಾತಿಯಲ್ಲಿ ಅಕ್ರಮ ನಡೆದಿದೆ ಎಂದು ಬೆಮಲ್‌ನ ಗೀತಾ, ಮುಳಬಾಗ ಲಿನ
ವೆಂಕಟೇಶಬಾಬು ಮತ್ತು ಬಾಗಲ ಕೋಟೆ ಜಿಲ್ಲೆಯ ಹುನು ಗುಂದದ ರೇಣುಕಾ ಬಳವಂತ ರಾವ್‌ ಹಿರಿಯ ಅಧಿಕಾರಿಗಳಿಗೆ ಮತ್ತು ಸರ್ಕಾರಕ್ಕೆ ದೂರು ಸಲ್ಲಿಸಿದ್ದರು.

ಪ್ರಾಥಮಿಕ ಹಂತದ ತನಿಖೆ ನಡೆಸಿದ್ದ ಕೇಂದ್ರ ವಲಯದ ಐಜಿಪಿಯವರು ಪೊಲೀಸ್‌ ಮಹಾನಿರ್ದೇಶಕರಿಗೆ ಪತ್ರ ಬರೆದಿದ್ದರು. ಅದರಂತೆ 2017ರ ಜೂನ್‌ 27ರಂದು ಪೊಲೀಸ್‌ ಮಹಾ ನಿರ್ದೇಶಕ ಓಂ ಪ್ರಕಾಶ್‌ ಅವರು, ಕೆಜಿಎಫ್ ಅಧೀಕ್ಷ ಕರು ಮಾಡಿರುವ ನೇಮಕಾತಿ ಅಕ್ರಮ ಎಂದು ಮೇಲ್ನೋಟಕ್ಕೆ ಕಂಡು ಬಂದಿರುವುದರಿಂದ ನೇಮ ಕಾತಿಯನ್ನು ಅವಶ್ಯಕ ನಿಯಮಾನುಸಾರ ರದ್ದು ಗೊಳಿಸಲು ಪರಿಶೀಲಿಸಬೇಕು ಎಂದು ಸೂಚನೆ ನೀಡಿದ್ದರು.

ಆದರೆ, ಪುನಃ ಒಂದು ಆದೇಶ ಹೊರಡಿಸಿ, ಮೊದಲಿನ ಆದೇಶವನ್ನು ತಾತ್ಕಾಲಿಕವಾಗಿ ಸ್ಥಗಿತ ಗೊಳಿಸಿ ಆದೇಶ ನೀಡಿದ್ದರು. ಇದು ಹಲವಾರು ಸಂದೇಹಗಳಿಗೆ ಕಾರಣವಾಗಿತ್ತು. ನಂತರ ಅವರು ನಿವೃತ್ತರಾದ ನಂತರ ಪ್ರಕರಣವನ್ನು ವಿವರವಾದ ತನಿಖೆಗಾಗಿ ಸಿಐಡಿಗೆ ವಹಿಸಲಾಯಿತು.  ಈ ಸಂಬಂಧ ವಿವರವಾದ ತನಿಖೆ ನಡೆಸಿದ ಸಿಐಡಿ ಪೊಲೀಸರು, ಕೆಜಿಎಫ್ ಎಸ್ಪಿಯವರು ಬ್ಯಾಕ್‌ಲಾಗ್‌ ಹುದ್ದೆಗಳನ್ನು ಮುಂಬಡ್ತಿ ಮೂಲಕ ಭರ್ತಿ ಮಾಡಿಕೊಳ್ಳದೇ ಕಾನೂನುಬಾಹಿರವಾಗಿ ನೇರ ನೇಮಕಾತಿ ಮೂಲಕ ಭರ್ತಿ ಮಾಡಿಕೊಂಡಿರುವುದು ವಿಚಾರಣೆ ಯಿಂದ ಮೇಲ್ನೋಟಕ್ಕೆ ಸಾಬೀತಾಗಿದೆ ಎಂದು ತಿಳಿಸಿದೆ.

ಮಹತ್ವದ ಹೇಳಿಕೆ: ನೇರ ನೇಮಕಾತಿ ಸಮಿತಿಯಲ್ಲಿ ಸದಸ್ಯರಾಗಿರುವ ಕೆಜಿಎಫ್ ಪೊಲೀಸ್‌ ಕಚೇರಿಯ ಸಹಾಯಕ ಆಡಳಿತಾಧಿಕಾರಿ ವಿಶ್ವನಾಥ್‌ ಸಿಐಡಿಗೆ ಮಹತ್ವದ ಹೇಳಿಕೆ ನೀಡಿದ್ದಾರೆ. "ಸಮಿತಿಗೆ ನನ್ನನ್ನು ಸದಸ್ಯರನ್ನಾಗಿ ನೇಮಕ ಮಾಡಿರುವ ಬಗ್ಗೆ ನನಗೆ ಮಾಹಿತಿ ಇಲ್ಲ. ಯಾವುದೇ ಸಭೆಗಳಿಗೆ ಹಾಜರಾಗಿರುವುದಿಲ್ಲ. ಸಭೆಯ ಹಾಜರಾತಿ ಪುಸ್ತಕ ಮತ್ತು ನಡವಳಿ ಪುಸ್ತಕದಲ್ಲಿ ಸಹಿ ಮಾಡಿರುವುದಿಲ್ಲ. ಬ್ಯಾಕ್‌ ಲಾಗ್‌ ಹುದ್ದೆಗಳ ಬಗ್ಗೆ ಯಾವುದೇ ಮಾಹಿತಿ ಇಲ್ಲ' ಎಂದು ಸಿಐಡಿ ಮುಂದೆ ಹೇಳಿಕೆ ನೀಡಿದ್ದಾರೆ.

ವಿಶ್ವನಾಥ್‌ ಹೇಳಿಕೆ ಹಾಗೂ ಅನ್ಯಾಯಕ್ಕೊಳಗಾದ ಹುದ್ದೆ‌ ಆಕಾಂಕ್ಷಿಗಳ ದೂರಿನನ್ವಯ ಪೊಲೀಸ್‌ ಇಲಾಖೆ ವಿಸ್ತಾರವಾದ ತನಿಖೆ ನಡೆಸಿತ್ತು. "ಬ್ಯಾಕ್‌ಲಾಗ್‌ ಹುದ್ದೆಗಳ ನೇರ ನೇಮಕಾತಿ ಬಗ್ಗೆ ಎಸ್ಪಿಯವರು ಸರ್ಕಾರ ದಿಂದ ಅಥವಾ ಹಿರಿಯ ಅಧಿಕಾರಿಗಳಿಂದ ಅನುಮತಿ ಪಡೆದಿರಲಿಲ್ಲ. ಸಮಾಜ ಕಲ್ಯಾಣ ಇಲಾಖೆಯ ಆಯುಕ್ತರು ನೀಡಿದ್ದ ನಿರ್ದೇಶನವನ್ನು ಸ್ಪಷ್ಟವಾಗಿ ಉಲ್ಲಂಘಿಸಿದ್ದಾರೆ. ಸಾಮಾನ್ಯ ಪರೀಕ್ಷೆ ನಡೆಸಿಲ್ಲ. ಮುಂಬಡ್ತಿ ಮೂಲಕ ನೇಮಕಾತಿ ಮಾಡದೆ ಇದ್ದುದರಿಂದ ದಲಾಯತ್‌ ಒಬ್ಬರಿಗೆ ಅನ್ಯಾಯವಾಗಿದೆ' ಎಂದು ವರದಿಯಲ್ಲಿ ತಿಳಿಸಲಾಗಿದೆ.

ತಪ್ಪು ಮಾಹಿತಿ: ಕೆಜಿಎಫ್ ಪೊಲೀಸ್‌ ಜಿಲ್ಲೆಯಲ್ಲಿ ಒಂದು ಸಹಾಯಕ ಸಬ್‌ ಇನ್ಸ್‌ಪೆಕ್ಟರ್‌ ಹಾಗೂ ಒಂದು ದ್ವಿತೀಯ ದರ್ಜೆ ಸಹಾಯಕ ಹುದ್ದೆಗಳು ಎಸ್‌ಟಿ ಬ್ಯಾಕ್‌ಲಾಗ್‌ ಮುಂಬಡ್ತಿ ಪ್ರಕಾರ ಖಾಲಿ ಇರುವುದಾಗಿ 2014ರ ನವೆಂಬರ್‌ 17ರಂದು ಕೆಜಿಎಫ್ ಎಸ್ಪಿಯವರು ಪೊಲೀಸ್‌ ಪ್ರಧಾನಕಚೇರಿಗೆ ವರದಿ ಕಳಿಸಿದ್ದರು. ವರದಿಯಲ್ಲಿ ಎಪಿಸಿ, ಸಿಪಿಸಿ, ಮಹಿಳಾ ಪಿಸಿ ಹುದ್ದೆಗಳ ರಿಕ್ತಸ್ಥಾನಗಳ ಬಗ್ಗೆ ಯಾವುದೇ ಮಾಹಿತಿ ಇರುವುದಿಲ್ಲ. ಎಸ್‌ಟಿ ಹುದ್ದೆ ಗಳು ಹೇಗೆ ಸೃಷ್ಟಿಯಾದವು ಎಂಬ ಬಗ್ಗೆ ಸ್ಪಷ್ಟ ಮಾಹಿತಿ ಇರುವುದಿಲ್ಲ ಎಂದು ನ್ಯೂನತೆಗಳ ಸರಮಾಲೆಯನ್ನು ಸಿಐಡಿ ಗುರುತಿಸಿದೆ.

ಹುದ್ದೆ ವಂಚಿತ ಆಕಾಂಕ್ಷಿಗಳು ನೀಡಿರುವ ದೂರು ಏನು?
ಪೊಲೀಸ್‌ ಹುದ್ದೆ ಆಕಾಂಕ್ಷಿ ರೇಣುಕಾ ಬಳವಂತರಾವ್‌ ಹೇಳಿಕೆ ನೀಡಿ, "ತಮ್ಮ ಸಂದರ್ಶನದ ವೇಳೆಯಲ್ಲಿ ಒಬ್ಬ ಅಧಿಕಾರಿ
ಡ್ರೆಸ್‌ನಲ್ಲಿದ್ದು, ಮತ್ತೂಬ್ಬರು ಸಿವಿಲ್‌ ಡ್ರೆಸ್‌ನಲ್ಲಿದ್ದರು. ಸಂದರ್ಶನದಲ್ಲಿ ಯಾವುದೇ ಪರೀಕ್ಷೆ ನಡೆಸಲಿಲ್ಲ. 15 ದಿನಗಳ ನಂತರ ನನಗಿಂತ ಕಿರಿಯರು ಮತ್ತು ಪಿಯುಸಿಯಲ್ಲಿ ನನಗಿಂತ ಕಡಿಮೆ ಅಂಕ ಪಡೆದವರನ್ನು ಆಯ್ಕೆ ಮಾಡಲಾಗಿದೆ' ಎಂದು ತಿಳಿಸಿದ್ದಾರೆ.

ಅದೇ ರೀತಿ ಮತ್ತೋರ್ವ ಆಕಾಂಕ್ಷಿ ಗೀತಾ, ಸಹ ಹೇಳಿಕೆ ನೀಡಿ, "ನೇಮಕಾತಿಯಲ್ಲಿ ಅಕ್ರಮವಾಗಿ ನಡೆದಿದೆ. ನನ್ನಷ್ಟು ಅರ್ಹರಲ್ಲದ ವ್ಯಕ್ತಿಗೆ ಹುದ್ದೆ ನೀಡಲಾಗಿದೆ' ಎಂದು ದೂರಿದ್ದರು. ಮುಳಬಾಗಲಿನ ವೆಂಕಟೇಶಬಾಬು, "ದೈಹಿಕ ಸ್ಪರ್ಧೆಯಲ್ಲಿ ನಾನು ಅರ್ಹನಾಗಿದ್ದರೂ ಅನರ್ಹ ಎಂದು ನಮೂದಿಸಲಾಗಿದೆ. ಓಟ ಸ್ಪರ್ಧೆಯಲ್ಲಿ ನಿಗದಿತ ಸಮಯಕ್ಕೆ ಓಡಿದ್ದರೂ, 6.32 ನಿಮಿಷ ಎಂದು  ದುರುದ್ದೇಶಪೂರ್ವಕವಾಗಿ ಬರೆದ್ದಾರೆ' ಎಂದು ದೂರಿದ್ದರು.

Trending videos

Back to Top