CONNECT WITH US  

ಶಿಕ್ಷಕರ ನೇಮಕಕ್ಕೆ ಆಗ್ರಹಿಸಿ ಶಾಲೆಗೆ ಬೀಗ

ಮುಳಬಾಗಿಲು: ತಾಲೂಕಿನ ತೊಂಡಹಳ್ಳಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶಿಕ್ಷಕರ ಕೊರತೆಯನ್ನು ನೀಗಿಸ ಬೇಕೆಂದು ಒತ್ತಾಯಿಸಿ ಗ್ರಾಮಸ್ಥರು ಮಕ್ಕಳೊಂದಿಗೆ ಸೇರಿ ಶಾಲೆಗೆ ಬೀಗ ಹಾಕಿ ಪ್ರತಿಭಟನೆ ನಡೆಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಗ್ರಾಮಸ್ಥರು, ತಾಲೂಕಿನ ಬೈರಕೂರು ಗ್ರಾಪಂ ವ್ಯಾಪ್ತಿಯ ತೊಂಡಹಳ್ಳಿ ಮತ್ತು ಸಿದ್ದನಹಳ್ಳಿ ಎರಡೂ ಗ್ರಾಮಗಳ ಮಕ್ಕಳ ಶಿಕ್ಷಣಕ್ಕಾಗಿ ಸರ್ಕಾರ ಹಿರಿಯ ಪ್ರಾಥಮಿಕ ಶಾಲೆ ಪ್ರಾರಂಭಿಸಿದೆ. ಇತ್ತೀಚಿನ ದಿನಗಳಲ್ಲಿ ಪೋಷಕರು ಖಾಸಗಿ ಶಾಲೆಗಳ ವ್ಯಾಮೋಹಕ್ಕೆ ಒಳಗಾಗಿ ಸರ್ಕಾರಿ ಶಾಲೆಗಳಿಗೆ ತಮ್ಮ ಮಕ್ಕಳನ್ನು ದಾಖಲು ಮಾಡದೇ ಬಹಳಷ್ಟು ಸರ್ಕಾರಿ ಶಾಲೆಗಳನ್ನು ಮುಚ್ಚುವ ಪರಿಸ್ಥಿತಿ ನಿರ್ಮಾಣವಾಗಿದೆ. ಈ ಸಮಯದಲ್ಲಿ ಈ ಎರಡೂ ಹಳ್ಳಿಗಳಿಂದ 1ನೇ ತರಗತಿಯಿಂದ 7ನೇ ತರಗತಿ ವರೆಗೂ 50 ಮಕ್ಕಳಿದ್ದು, ಕೇವಲ ಒಬ್ಬ ಮುಖ್ಯ ಶಿಕ್ಷಕ ಮತ್ತು ಸಹ ಶಿಕ್ಷಕರನ್ನು ಶಿಕ್ಷಣ ಇಲಾಖೆ ನಿಯೋಜಿಸಿದೆ ಎಂದರು.

ಮನವಿಗೆ ಸ್ಪಂದಿಸಿಲ್ಲ: ಆದರೆ, ಶಾಲೆ ಪ್ರಾರಂಭವಾದ ಜೂನ್‌ ತಿಂಗಳಿನಿಂದ ಪೋಷಕರು ಶಿಕ್ಷಣ ಇಲಾಖೆಗೆ ಹೆಚ್ಚುವರಿ ಶಿಕ್ಷಕರನ್ನು ನೇಮಿಸುವಂತೆ ಹಲವಾರು ಬಾರಿ ಮನವಿ ಮಾಡಿದರೂ ಯಾವುದೇ ಕ್ರಮ ಕೈಗೊಳ್ಳದ ಇಲಾಖೆ ಅಧಿಕಾರಿಗಳ ಧೋರಣೆಯನ್ನು ಖಂಡಿಸಿ ಎರಡೂ ಗ್ರಾಮಗಳ ವಿದ್ಯಾರ್ಥಿಗಳು ಹಾಗೂ ಪೋಷಕರು ಶಿಕ್ಷಕರನ್ನು ಶಾಲೆಯಿಂದ ಹೊರಗೆ ಕಳುಹಿಸಿ, ಶಾಲೆಗೆ ಬೀಗ ಹಾಕಿ ಪ್ರತಿಭಟನೆ ನಡೆಸಿದರು. 

ಬಿಇಒ ಭೇಟಿ, ಭರವಸೆ: ಪ್ರತಿಭಟನೆ ಸುದ್ದಿ ತಿಳಿದ ಕ್ಷೇತ್ರ ಶಿಕ್ಷಣಾಧಿಕಾರಿ ಸಂಜೆ ನಾಲ್ಕು ಗಂಟೆಗೆ ಶಾಲೆಗೆ ಭೇಟಿ ನೀಡಿ ಪೋಷಕ ರೊಂದಿಗೆ ಚರ್ಚಿಸಿದರು. ಶುಕ್ರವಾರದಿಂದಲೇ ಹೆಚ್ಚುವರಿಯಾಗಿ ಇಬ್ಬರು ಶಿಕ್ಷಕರನ್ನು ನಿಯೋಜಿಸುವುದಾಗಿ ಭರವಸೆ ನೀಡಿದ ನಂತರ ಶಾಲೆಗೆ ಹಾಕಿದ್ದ ಬೀಗವನ್ನು ಪೋಷಕರು ತೆರೆದು, ಪ್ರತಿಭಟನೆ ಕೈಬಿಟ್ಟರು. ಪ್ರತಿಭಟನೆಯಲ್ಲಿ ಎಸ್‌ಡಿಎಂಸಿ ಮಾಜಿ ಅಧ್ಯಕ್ಷ ಧನಶೇಖರ್‌ರಾಜು, ಭಾಸ್ಕರ್‌ರೆಡ್ಡಿ, ಚಿನ್ನಪ್ಪಯ್ಯರಾಜು, ರಾಮಚಂದ್ರರಾಜು, ಅರಿವು ಪ್ರಭಾಕರ್‌, ಸುಬ್ರಹ್ಮಣ್ಯ ಮತ್ತು
ಮಕ್ಕಳು, ಪೋಷಕರು ಪಾಲ್ಗೊಂಡಿದ್ದರು. 

ತಾಲೂಕಿನ ಬೈರಕೂರು ಗ್ರಾಪಂ ವ್ಯಾಪ್ತಿಯ ಸಿದ್ದನಹಳ್ಳಿ ಮತ್ತು ತೊಂಡಹಳ್ಳಿ ಗ್ರಾಮದ ಶಾಲೆಗೆ ಶಿಕ್ಷಕರು ಇಲ್ಲದಿರುವ ಕುರಿತು ಗ್ರಾಮಸ್ಥರು ಹಾಗೂ ಪೋಷಕರು ಮನವಿ ಮಾಡಿದ್ದರು. ಆದರೆ, ಶಿಕ್ಷಕರು ಲಭ್ಯವಿಲ್ಲದ ಕಾರಣ ಅವರ ಮನವಿಗೆ ಸ್ಪಂದಿಸಲು ಸಾಧ್ಯವಾಗಿರಲಿಲ್ಲ. ಗ್ರಾಮಸ್ಥರು ಶಾಲೆಗೆ ಬೀಗ ಹಾಕಿದ ವಿಚಾರ ತಿಳಿದು ಶಾಲೆಗೆ ಭೇಟಿ ನೀಡಿದ್ದು, ಹೆಚ್ಚುವರಿಯಾಗಿ ಇಬ್ಬರು ಶಿಕ್ಷಕರನ್ನು ತಾತ್ಕಾಲಿಕವಾಗಿ ನಿಯೋಜಿಸಲಾಗಿದೆ.
  ಕೆಂಪರಾಮ್‌, ಬಿಇಒ, ಮುಳಬಾಗಿಲು 

ತಾಲೂಕಿನ ಬೈರಕೂರು ಗ್ರಾಪಂ ವ್ಯಾಪ್ತಿಯ ಸಿದ್ದನಹಳ್ಳಿ ಮತ್ತು ತೊಂಡಹಳ್ಳಿ ಗ್ರಾಮದಲ್ಲಿ ಕೂಲಿ ಕೆಲಸ ಮಾಡುವ ಕುಟುಂಬಗಳಿದ್ದು, ಯಾರು ಸಹ ತಮ್ಮ ಮಕ್ಕಳನ್ನು ಖಾಸಗಿ ಶಾಲೆಗಳಿಗೆ ದಾಖಲಿಸಿ ಓದಿಸುವಷ್ಟು ಶಕ್ತರಿಲ್ಲ. ಇಲಾಖೆಗೆ ಎಷ್ಟು ಮನವಿ ಮಾಡಿದರೂ ಕ್ರಮ ಕೈಗೊಳ್ಳದ ಪರಿಣಾಮ ಪೋಷಕರೆಲ್ಲ ಒಟ್ಟುಗೂಡಿ ಶಾಲೆಗೆ ಬೀಗ ಹಾಕಿ ಪ್ರತಿಭಟನೆ ಮಾಡಿದರು. ಇದರಿಂದ, ಬಿಇಒ ಗ್ರಾಮಕ್ಕೆ ಬಂದು ಹೆಚ್ಚುವರಿ ಯಾಗಿ ಇಬ್ಬರು ಶಿಕ್ಷಕರನ್ನು ನೇಮಿಸಲಾಗುವುದೆಂದು ಭರವಸೆ ನೀಡಿದ್ದಾರೆ. ಶಿಕ್ಷಕರು ಬರದಿದ್ದರೆ ಮತ್ತೆ ಪ್ರತಿಭಟನೆ
ಮುಂದುವರಿಸ ಲಾಗುವುದು.
  ಮುದ್ದುರಾಜ್‌, ಎಸ್‌ಡಿಎಂಸಿ ಅಧ್ಯಕ್ಷರು, ಸರ್ಕಾರಿ ಶಾಲೆ, ತೊಂಡಹಳ್ಳಿ 

Trending videos

Back to Top