CONNECT WITH US  

ಕೆ.ಸಿ.ವ್ಯಾಲಿ ನೀರಿನ ನೊರೆಗೆ ಕಾರಣ ನೀಡಿ

ಕೋಲಾರ: ಶುದ್ಧೀಕರಿಸಿ ಬಿಡಬೇಕಾದ ಕೆ.ಸಿ.ವ್ಯಾಲಿ ನೀರಿನಲ್ಲಿ ನೊರೆ ಕಾಣಿಸಿಕೊಳ್ಳಲು ಸ್ಪಷ್ಟ ಕಾರಣದ ಜತೆಗೆ ಸಾರ್ವಜನಿಕರ ಪ್ರಶ್ನೆಗಳಿಗೆ ಸಮರ್ಪಕ ಉತ್ತರ ನೀಡಬೇಕೆಂದು ಸಣ್ಣ ನೀರಾವರಿ ಇಲಾಖೆ ಹಾಗೂ ಯೋಜನೆಯ ಕಾಮಗಾರಿ ನಡೆಸಿದ ಮೆಗಾ ಕಂಪನಿ ಅಧಿಕಾರಿಗಳನ್ನು ಪ್ರಭಾರ ಜಿಲ್ಲಾಧಿಕಾರಿ ಶುಭಾ ಕಲ್ಯಾಣ್‌ ತರಾಟೆಗೆ ತೆಗೆದುಕೊಂಡರು.

ನಗರದ ಜಿಲ್ಲಾಡಳಿತ ಭವನದಲ್ಲಿ ಶುಕ್ರವಾರ ಕೆ.ಸಿ.ವ್ಯಾಲಿ ಯೋಜನೆಯ ಅಧಿಕಾರಿಗಳ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ನೀವು ನೀರನ್ನು ಎರಡು ಬಾರಿ ಶುದ್ಧೀಕರಿಸಿ ಹರಿಸಿದರೂ ನೊರೆ ಏಕೆ ಕಾಣಿಸಿಕೊಂಡಿದೆ ಎಂಬುದಕ್ಕೆ ಸೂಕ್ತ ಉತ್ತರ ನೀಡಬೇಕೆಂದು ತಾಕೀತು ಮಾಡಿದರು. 

ವೈರಲ್‌: ನೊರೆಯ ವಿಡಿಯೋಗಳು ವೈರಲ್‌ ಆಗಿದ್ದು, ಸುತ್ತಮುತ್ತಲಿನ ಜನ ಆತಂಕಗೊಂಡಿದ್ದಾರೆ. ನೀರನ್ನು ಪ್ರಯೋಗಾಲಯಕ್ಕೆ ಕಳುಹಿಸಿಕೊಟ್ಟು ಪರೀಕ್ಷಿಸಬೇಕು. ಈ ಯೋಜನೆಯಡಿ ಬೆಂಗಳೂರಿನ ತ್ಯಾಜ್ಯ ನೀರನ್ನು ಎರಡು ಬಾರಿ ಶುದ್ಧೀಕರಿಸಿ ಬಿಡಬೇಕೆಂಬ ನಿಯಮವಿದ್ದರೂ, ನೀರಿನಲ್ಲಿ ನೊರೆ ಕಾಣಿಸಿಕೊಂಡಿರುವುದು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ ಎಂದರು.

ಈ ಸಂಬಂಧ ಸಾರ್ವಜನಿಕರು, ಸಂಘಟನೆ ಗಳಿಗೆ ಉತ್ತರ ನೀಡಲು ಸಾಧ್ಯವಾಗುತ್ತಿಲ್ಲ. ಬೆಳ್ಳಂದೂರು ಸಮೀಪದ ಎಸ್‌ಟಿಪಿಯಿಂದ ಹರಿಯ ಬಿಡುವ ನೀರಿಗೆ ಕೆರೆ ನೀರು ಮಿಶ್ರಣಗೊಂಡಿ ರುವುದರಿಂದ ಲಕ್ಷ್ಮೀಸಾಗರ ಕೆರೆ ಬಳಿಯೂ ನೊರೆ ಕಾಣಿಸಿಕೊಂಡಿದೆ. ಈಗಾಗಲೇ ಈ ನೀರನ್ನು ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ ಎಂದು ಸಣ್ಣ ನೀರಾವರಿ ಇಲಾಖೆ ಕಾರ್ಯಪಾಲಕ ಅಭಿಯಂತರ ಕೃಷ್ಣಪ್ಪ ಸಮಜಾಯಿಷಿ ನೀಡಿದರು.

ಕೋಡಿ ಬಿದ್ದ ಕೆರೆ ನೀರು ಮಿಶ್ರಣ: ಆರಂಭದಲ್ಲಿ ಒಂದು ಮೋಟಾರ್‌ ಪಂಪ್‌ ಮೂಲಕ 130 ಎಂಎಲ್‌ಡಿ ನೀರು ಹರಿಸಲಾಗುತ್ತಿತ್ತು. ಕಳೆದ ಭಾನುವಾರದಿಂಂದ 2 ಮೋಟಾರ್‌, ಪಂಪ್‌ ಚಾಲನೆ ಮಾಡಿ 70ಎಂಎಲ್‌ಡಿ ನೀರನ್ನು ಹೆಚ್ಚಿಸಲಾಯಿತು. ನೀರಿನ ಹರಿವನ್ನು ಹೆಚ್ಚಿಸಿದ ಸಂದರ್ಭದಲ್ಲಿ ನೀರಿನ ಶುದ್ಧೀಕರಿಸುವ ಎಸ್‌ಟಿಪಿ ಘಟಕಗಳು ಇರುವ ಕಡೆಯೇ ಕೆರೆಯ ಕೋಡಿಯೂ ಇದ್ದು, ಇದರ ಮೂಲಕವೇ ನೀರು ಹರಿದಿರುವುದರಿಂದ ಮಿಶ್ರಣಗೊಂಡಿದೆ ಎಂದು ಮಾಹಿತಿ ನೀಡಿದರು.

ಕೆ.ಸಿ.ವ್ಯಾಲಿ ಯೋಜನೆಯ ಮೂಲಕ ಜಿಲ್ಲೆಗೆ ಒಟ್ಟು 400 ಎಂಎಲ್‌ಡಿ ನೀರು ಲಭ್ಯವಾಗುತ್ತದೆ. ಸದ್ಯಕ್ಕೆ 200 ಎಂಎಲ್‌ಡಿ ಮಾತ್ರ ಹರಿದು ಬರುತ್ತಿದೆ. ಮುಂದಿನ ದಿನಗಳಲ್ಲಿ ಉಳಿದ 200 ಎಂಎಲ್‌ಡಿ ಹರಿಸಲು ಕ್ರಮ ಕೈಗೊಳ್ಳಲಾಗುತ್ತಿದೆ. ಈಗಾಗಲೇ ಲಕ್ಷ್ಮೀಸಾಗರ, ಜೋಡಿ ಕೃಷ್ಣಾಪುರ, ನರಸಾಪುರ ಕೆರೆಗಳಿಗೆ ನೀರು ಹರಿದಿದೆ ಎಂದು ಸ್ಪಷ್ಟನೆ ನೀಡಿದರು.

ಜನ ಜಿಲ್ಲಾಡಳಿತವನ್ನು ಪ್ರಶ್ನಿಸುತ್ತಾರೆ: ಯೋಜನೆ ಯಾವುದೇ ಇರಲಿ ಅದರ ಕಾಮಗಾರಿಯ ಜವಾಬ್ದಾರಿ ಯಾರೇ ವಹಿಸಿಕೊಂಡಿದ್ದರೂ ಅದರಿಂದ ಅನಾಹುತ ಸಂಭವಿಸಿದರೆ ಜನ ಮೊದಲು ಜಿಲ್ಲಾಡಳಿತವನ್ನು ಪ್ರಶ್ನಿಸುತ್ತಾರೆ. ಹೆಚ್ಚುವರಿಯಾಗಿ ನೀರು ಹರಿಸುವ ಬಗ್ಗೆ ನಮ್ಮ ಗಮನಕ್ಕೆ ಯಾಕೆ ತರಲಿಲ್ಲ ಎಂದು ಅಧಿಕಾರಿಗಳನ್ನು ಪ್ರಶ್ನಿಸಿದರು.
 
ಕೆ.ಸಿ.ವ್ಯಾಲಿ ನೀರಿನಲ್ಲಿ ನೊರೆ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ನೀರಿನ ಗುಣಮಟ್ಟ ಪರಿಶೀಲಿಸಲು ಕಳುಹಿಸಿದ್ದೇವೆ. ಪ್ರತಿ ಹಂತದಲ್ಲಿ ಶುದ್ಧೀಕರಿಸಿದ ನೀರನ್ನು ಪರೀಕ್ಷಿಸಲಾಗುತ್ತಿದೆ. ಹಿಂದೆ ಯಾವುದೇ ಲೋಪ ಆಗಿಲ್ಲ. ಈಗ ಕೆರೆ ನೀರು ಮಿಶ್ರಣಗೊಂಡಿ ರುವುದರಿಂದ ನೊರೆ ಬಂದಿದೆ ಎಂದು ಮೆಗಾ ಕಂಪನಿ ತಾಂತ್ರಿಕಾ ವಿಭಾಗದ ಇಂಜಿನಿಯರ್‌ ವಿಜಯ್‌ ಸಮರ್ಥನೆ ನೀಡಿದರು. ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಕೆ.ವಿದ್ಯಾಕುಮಾರಿ, ಸಹಾಯಕ ಪರಿಸರಾಧಿಕಾರಿ ಮೃತ್ಯುಂಜಯ್‌ ಮತ್ತಿತರ ಅಧಿಕಾರಿಗಳು ಭಾಗವಹಿಸಿದ್ದರು.

ಕೆ.ಸಿ.ವ್ಯಾಲಿ ಯೋಜನೆಯ ಪ್ರತಿಯೊಂದು ಬದಲಾವಣೆಯ ಬಗ್ಗೆ ಜಿಲ್ಲಾಡಳಿತದ ಗಮನಕ್ಕೆ ತರಬೇಕು. ಬದಲಾವಣೆಯಿಂದ ಏನಾದರೂ ಸಮಸ್ಯೆ ಸಂಭವಿಸುವ ಸಾಧ್ಯತೆಯಿದ್ದರೆ ತಡೆಗಟ್ಟಲು ಕ್ರಮಕೈಗೊಳ್ಳಬೇಕು. ಈಗ ನೊರೆ ಕಾಣಿಸಿ ಕೊಂಡಿರುವುದಕ್ಕೆ ಸ್ಪಷ್ಟನೆ ನೀಡುವ ಮೂಲಕ ಜನರಲ್ಲಿನ ಆತಂಕ ನಿವಾರಿಸಬೇಕು.
  ಶುಭಾ ಕಲ್ಯಾಣ್‌, ಜಿಲ್ಲಾಧಿಕಾರಿ 

ಕೆ.ಸಿ.ವ್ಯಾಲಿ ಯೋಜನೆ ಮೂಲಕ ಜಿಲ್ಲೆಗೆ ನೀರು ಹರಿಸಿದ ಆರಂಭದಲ್ಲಿ ನೀರನ್ನು ಪರೀಕ್ಷೆಗೆ ಒಳಪ ಡಿಸಲಾಗಿದ್ದು, ಯಾವುದೇ ತೊಂದರೆಯಿಲ್ಲ.ಪೈಪ್‌ ಲೆ„ನ್‌ ಮೂಲಕ ಲಕ್ಷ್ಮೀಸಾಗರ ಕೆರೆಗೆ ಬಂದ ನೀರನ್ನು ಏಕಾಏಕಿಯಾಗಿ ಜಾನುವಾರುಗಳಿಗೆ ಕುಡಿಸಲು ಯೋಗ್ಯವಲ್ಲ. ಕೃಷಿ ಅಥವಾ ಕೈಗಾರಿಕೆ ಗಳಿಗೆ ಬಳಸಿಕೊಳ್ಳಬಹುದು. ಅಲ್ಲಿಂದ ಮತ್ತೂಂದು ಕೆರೆಗೆ ಹರಿದ ನೀರನ್ನು ಪರೀಕ್ಷಿಸಿದಾಗ ಜಾನುವಾರು, ಮೀನು ಸಾಕಾಣಿಕೆಗೆ ಉಪಯೋಗಿಸಿಕೊಳ್ಳ ಬಹುದು ಎಂದು ವರದಿ ಬಂದಿದೆ.
  ಸಿ.ಆರ್‌.ಮಂಜುನಾಥ್‌, ಜಿಲ್ಲಾ ಪರಿಸರ ಅಧಿಕಾರಿ

Trending videos

Back to Top