CONNECT WITH US  

ಕೈಯಿಂದ ಮಲ ಸ್ವಚ್ಚಗೊಳಿಸಿದವರ ವಿರುದ್ಧ ಕ್ರಮ ಕೈಗೊಳ್ಳಿ

ಕೋಲಾರ: ನಗರದ ಕನಕನಪಾಳ್ಯದಲ್ಲಿ ಕೈಯಿಂದಲೇ ಮಲದ ಗುಂಡಿ ಸ್ವಚ್ಚ ಮಾಡಿಸಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ತಪ್ಪಿತಸ್ಥರ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸಬೇಕೆಂದು ರಾಜ್ಯ ಮಲ ಸ್ವಚ್ಚತಾ ವೃತ್ತಿಯ ನೇಮಕ ನಿಷೇಧ ಕಾಯಿದೆ ಹಾಗೂ ಪುನರ್ವಸತಿ ಮೇಲ್ವಿಚಾರಣಾ ಸಮಿತಿ ಸದಸ್ಯ ಕೆ.ಬಿ.ಓಬಳೇಶ ಜಿಲ್ಲಾಡಳಿತವನ್ನು ಆಗ್ರಹಿಸಿದರು.

ನಗರದ ಪತ್ರಕರ್ತರ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೋಲಾರ ನಗರಸಭೆ ವ್ಯಾಪ್ತಿಯ 5ನೇ ವಾರ್ಡ್‌ನಲ್ಲಿ ಕೈಯಲ್ಲಿ ಮಲದ ಗುಂಡಿ ಸ್ವಚ್ಚಗೊಳಿಸಿದವರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು.

ಸುಪ್ರೀಂ ತೀರ್ಪಿನ ಉಲ್ಲಂಘನೆ: ಕಳೆದ 2018ರ ಫೆ.15ರಂದು ಕನಕನಪಾಳ್ಯದಲ್ಲಿ ನಗರಸಭೆ ಪೌರಾಯುಕ್ತ ರಾಮಪ್ರಕಾಶ್‌, ವಾರ್ಡ್‌ ಸದಸ್ಯ ಸೋಮಶೇಖರ್‌ ನೇತƒತ್ವದಲ್ಲಿ ಎಸ್ಸಿ ಸಮುದಾಯದ 7 ಕಾರ್ಮಿಕರನ್ನು ಯುಜಿಡಿ ಮ್ಯಾನ್‌ಹೋಲ್‌ ಒಳಗೆ ಇಳಿಸಿ ಮಲ ಸ್ವಚ್ಚಗೊಳಿಸಿರುವ ಪ್ರಕರಣ 2013ರ ಮಲ ಸ್ವಚ್ಚ

-ಮಾಡುವ ವೃತ್ತಿ ನಿಷೇಧ ಕಾಯಿದೆ ಮತ್ತು ಸುಪ್ರೀಂಕೋರ್ಟ್‌ ತೀರ್ಪಿನ ಉಲ್ಲಂಘನೆಯಾಗಿದೆ. ಪ್ರಕರಣ ಸಫಾಯಿ ಕರ್ಮಚಾರಿ ಕಾವಲು ಸಮಿತಿ ಗಮನಕ್ಕೆ ಬಂದಾಗ ಪೊಲೀಸರಿಗೆ ದೂರು ನೀಡಿದ್ದರೂ ಕೇಸು ದಾಖಲಿಸಿಕೊಳ್ಳಲು ನಿರಾಕರಿಸಿದ್ದರು ಎಂದು ಕಿಡಿಕಾರಿದರು.

ಪೊಲೀಸರು ಯಾವುದೇ ಕ್ರಮ ಕೈಗೊಂಡಿಲ್ಲ: ಫೆ.19ರಂದು ಉಪವಿಭಾಗಾಧಿಕಾರಿಗೆ ದೂರು ನೀಡಿದಾಗ ಅವರು ತನಿಖೆ ನಡೆಸಿ ಘಟನೆ ನಡೆದಿದ್ದು ಸತ್ಯ ಎಂಬುದನ್ನು ಮನಗಂಡು ದೂರು ದಾಖಲಿಸಿಕೊಳ್ಳಲು ಸ್ಥಳೀಯ ಪೊಲೀಸರಿಗೆ ನಿರ್ದೇಶಿಸಿದ್ದರು. ಫೆ. 22ರಂದು ಕೇಸು ದಾಖಲಾಗಿದ್ದರೂ ಪೊಲೀಸರು ಇದುವರೆಗೆ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಆರೋಪಿಸಿದರು.

ಅರಿವು ಮೂಡಿಸುವ ಕಾರ್ಯಕ್ರಮ: ಕಾರ್ಮಿಕರ ಅಸಹಾಯಕತೆಯನ್ನು ದುರುಪಯೋಗ ಮಾಡಿಕೊಂಡು ಇಂತಹ ಕೃತ್ಯಗಳಲ್ಲಿ ತೊಡಗಿಸಿಕೊಳ್ಳಲಾಗುತ್ತಿದೆ. ಈ ಬಗ್ಗೆ ಸಮಿತಿಯಿಂದ ಶೀಘ್ರವೇ ಕಾರ್ಮಿಕರಿಗೆ ಅರಿವು ಮೂಡಿಸುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗುವುದು ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಪುನರ್ವಸತಿ ಕಲ್ಪಿಸಿ: ಸಮಿತಿಯ ರಾಜ್ಯ ಸಂಚಾಲಕಿ ಎಂ.ಪದ್ಮಾ ಮಾತನಾಡಿ, ಕೋಲಾರ ನಗರದಲ್ಲಿ ನಡೆದಿರುವ ಪ್ರಕರಣ ಎಸ್ಸಿ, ಎಸ್ಟಿ ದೌರ್ಜನ್ಯ ಕಾಯಿದೆಯಡಿ ಬರುವುದರಿಂದ ಸಮಾಜ ಕಲ್ಯಾಣ ಇಲಾಖೆ ಸಂಬಂಧಿಸಿದ ಸಿಬ್ಬಂದಿಯನ್ನು ಗುರುತಿಸಿ ಪರಿಹಾರ ನೀಡಬೇಕಿತ್ತು. ಆ ಕೆಲಸವನ್ನೂ ಮಾಡಿಲ್ಲ ಎಂದು ಆಪಾದಿಸಿದರು. ಅಲ್ಲದೇ, ಮಲ ಸ್ವಚ್ಚ ಮಾಡುವ ವೃತ್ತಿಯ ನೇಮಕ ನಿಷೇಧ ಕಾಯಿದೆ ಪ್ರಕಾರ 7 ಜನ ಕಾರ್ಮಿಕರನ್ನು ನೋಂದಾಯಿಸಿಕೊಂಡು ಪುನರ್ವಸತಿ ಕಲ್ಪಿಸಬೇಕೆಂದು ಆಗ್ರಹಿಸಿದರು.

ಆಧುನಿಕ ಯಂತ್ರ ಬಳಸಿ: ಜಿಲ್ಲೆಯಲ್ಲಿ ಮಲ ಸ್ವಚ್ಚ ಮಾಡುವ ವೃತ್ತಿಯಲ್ಲಿ ತೊಡಗಿರುವವರ ಬಗ್ಗೆ ಸರ್ಕಾರ ಮಾಹಿತಿ ಕೇಳಿದ ಸಂದರ್ಭದಲ್ಲಿ ಅಧಿಕಾರಿಗಳು ಅಂತಹ ಕಾರ್ಮಿಕರೇ ಇಲ್ಲ ಎಂದು ವರದಿ ನೀಡುತ್ತಾರೆ ಎಂದು ಆರೋಪಿಸಿದ ಅವರು, ಜಿಲ್ಲೆಯಲ್ಲಿ ಕೈಯಿಂದ ಮಲ ಸ್ವಚ್ಚ ಮಾಡುವ ಪದ್ಧತಿ ಸಂಪೂರ್ಣವಾಗಿ ನಿವಾರಣೆಯಾಗಬೇಕಾದರೆ ಆಧುನಿಕ ಯಂತ್ರಗಳನ್ನು ಬಳಸಬೇಕೆಂದು ಆಗ್ರಹಿಸಿದರು.

ಸಮಿತಿ ರಾಜ್ಯ ಸಂಚಾಲಕ ಬಳ್ಳಾರಿಯ ರಾಮಚಂದ್ರ, ಸಫಾಯಿ ಕರ್ಮಚಾರಿಗಳಾದ ನರಸಿಂಹಯ್ಯ, ನಾರಾಯಣಮ್ಮ, ರಾಮಪ್ಪ ಮತ್ತಿತರರಿದ್ದರು.

Trending videos

Back to Top