CONNECT WITH US  

ಬುಟ್ಟಿಯಿಂದ ಬೆಟ್ಟಕ್ಕೆ ಹಸಿರು ಹೊದಿಕೆ

ಕೋಲಾರ: ಪರಿಸರ ಸಂರಕ್ಷಣೆಯ ಜತೆಗೆ ಸ್ವತ್ಛತಾ ಅಭಿಯಾನದ ಮೂಲಕ ಗ್ರಾಮಗಳನ್ನು ಸ್ವತ್ಛವಾಗಿಟ್ಟುಕೊಳ್ಳಲು ಪಣ ತೊಡಬೇಕೆಂದು ವಿದ್ಯಾರ್ಥಿ ಹಾಗೂ ಯುವಜನತೆಗೆ ಜಿಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಲತಾಕುಮಾರಿ ಸಲಹೆ ನೀಡಿದರು.

ನಗರದ ಜಿಪಂ,ಅರಣ್ಯ ಇಲಾಖೆ, ಸಾರ್ವಜನಿಕ ಶಿಕ್ಷಣ ಇಲಾಖೆ, ಸ್ಕೌಟ್ಸ್‌, ಗೆ„ಡ್ಸ್‌ ಸಂಯುಕ್ತ ಆಶ್ರಯದಲ್ಲಿ ತಾಲೂಕಿನ ಸೂಲೂರು ಗ್ರಾಪಂ ವ್ಯಾಪ್ತಿಯ ನುಗ್ಗಲಾಪುರ ವೀರಭದ್ರಸ್ವಾಮಿ ದೇವಾಲಯದ ಆವರಣದಲ್ಲಿ ಹಮ್ಮಿಕೊಂಡಿದ್ದ "ಬುಟ್ಟಿಯಿಂದ ಬೆಟ್ಟಕ್ಕೆ ಹಸಿರು ಹೊದಿಕೆ' ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡುತ್ತಿದ್ದರು.

ಗ್ರಾಮ ಸ್ವತ್ಛತೆ ಕುರಿತು ಅಧ್ಯಯನ ನಡೆಸಲು ಕೇಂದ್ರ ಸರ್ಕಾರದ ಸಮಿತಿ ಜಿಲ್ಲೆಗೆ ಬರುತ್ತಿದ್ದು, ನಾವು ಪ್ರತಿ ಗ್ರಾಮದಲ್ಲೂ ಸ್ವತ್ಛತೆಯ ಪರಿಕಲ್ಪನೆಯೊಂದಿಗೆ ಕೆಲಸ ಮಾಡಬೇಕಾಗಿದೆ ಎಂದು ಹೇಳಿದರು.

ಯುವಕ ಸಂಘ ಬಳಸಿಕೊಳ್ಳಲು ಸಲಹೆ: ಹಿಂದೆ ದೊಡ್ಡ ಕಾಡು ಇತ್ತು. ಈಗ ಮರಗಳೂ ಇಲ್ಲವಾಗುತ್ತಿವೆ. ಇದರಿಂದ ಪರಿಸರ ನಾಶವಾಗುತ್ತಿದ್ದು, ಆತಂಕ ಎದುರಾಗಿದೆ. ಅಹಂ, ಮೇಲು, ಕೀಳು ಇಲ್ಲದೇ ಪ್ರತಿಯೊಬ್ಬರೂ ಪರಿಸರ ಸಂರಕ್ಷಣೆಗೆ ಕಾಣಿಕೆ ನೀಡೋಣ.

ಗ್ರಾಮೀಣ ಯುವಕ ಸಂಘಗಳನ್ನು ಬಳಸಿಕೊಂಡು "ಬುಟ್ಟಿಯಿಂದ ಬೆಟ್ಟಕ್ಕೆ ಹಸಿರು ಹೊದಿಕೆ' ಅಭಿಯಾನವನ್ನು ಮತ್ತಷ್ಟು ಯಶಸ್ವಿಗೊಳಿಸಬೇಕೆಂದು ಸಲಹೆ ನೀಡಿದರು. ಪ್ರತಿ ಗ್ರಾಪಂನಲ್ಲೂ ಇಂತಹ ಕಾರ್ಯಕ್ರಮ ನಡೆಯುವಂತಾಗಬೇಕು. ಈ ಸಂಬಂಧ ಎಲ್ಲಾ ಗ್ರಾಪಂ ಅಧ್ಯಕ್ಷರು, ಸದಸ್ಯರು ಗಮನ ಹರಿಸಬೇಕು ಎಂದು ಕೋರಿದರು.

ಸಂಸ್ಕರಿತ ಬೀಜ: ನಿವೃತ್ತ ಅರಣ್ಯಾಧಿಕಾರಿ ಮುಕುಂದರಾವ್‌ ಮಾತನಾಡಿ, ತಾವು ಹಸಿರಿನ ಕಾಳಜಿಯಿಂದ ಈಗಾಗಲೇ ರಾಜ್ಯದಲ್ಲಿ 1.72ಲಕ್ಷ ವಿದ್ಯಾರ್ಥಿಗಳನ್ನು ಬಳಸಿಕೊಂಡು 2 ಕೋಟಿಗೂ ಅಧಿಕ ಬೀಜ ನೆಟ್ಟಿದ್ದೆವು. ಇದೀಗ 60 ಸಾವಿರ ಬೀಜ ನೀಡಿದ್ದು, ಈ ಬೀಜಗಳನ್ನು ಜೀವಾಮೃತದಲ್ಲಿ ಸಂಸ್ಕರಿಸಿ ನೀಡಲಾಗಿದೆ. ಇದನ್ನು ಕ್ರಿಮಿಕೀಟಗಳು ತಿನ್ನಲ್ಲ. 15ದಿನ ಮಳೆ ಬಾರದಿದ್ದರೂ ಬೀಜಕ್ಕೆ ಹಾನಿಯಾಗದು. ಆದ್ದರಿಂದ, ಇದರ ಸದುಪಯೋಗ ಮಾಡಿಕೊಳ್ಳಬೇಕೆಂದರು.

ಜಿಪಂ ಸದಸ್ಯ ಸಿ.ಎಸ್‌.ವೆಂಕಟೇಶ್‌ ಮಾತನಾಡಿ, ಇಡೀ ದೇಶಕ್ಕೆ ರೇಷ್ಮೆ, ಚಿನ್ನ, ಹಾಲು ನೀಡಿದ ಜಿಲ್ಲೆಯಲ್ಲಿ ಅಂತರ್ಜಲ 1500 ಅಡಿಗೆ ತಲುಪಿದೆ. ಇದರಿಂದ ಮಾರಕ ಪರಿಣಾಮಗಳನ್ನು ಅನುಭವಿಸುತ್ತಿದ್ದೇವೆ. ಎಲ್ಲರ ಸಹಕಾರದಿಂದ ಇಡೀ ಪರಿಸರವನ್ನು ಹಸಿರುಮಯವಾಗಿ ಮಾಡೋಣ ಎಂದರು. 

ಸೂಲೂರು ಸರಕಾರಿ ಪ್ರೌಢಶಾಲೆ, ಚೊಕ್ಕಹಳ್ಳಿ ಚಿನ್ಮಯ ವಿದ್ಯಾಲಯ, ಕೆಂದಟ್ಟಿ ಬಸವೇಶ್ವರ ಶಾಲೆ ಸೇರಿದಂತೆ ಸುತ್ತಮುತ್ತಲ ಗ್ರಾಮಗಳ 400 ವಿದ್ಯಾರ್ಥಿಗಳು ಬುಟ್ಟಿಯಿಂದ ಬೆಟ್ಟಕ್ಕೆ ಹಸಿರು ಹೊದಿಕೆ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದು, ಬೀಜಗಳನ್ನು ಇಡೀ ಬೆಟ್ಟದಲ್ಲಿ ನೆಟ್ಟರು.

ಇಡೀ ಕಾರ್ಯಕ್ರಮದ ಉಸ್ತುವಾರಿಯನ್ನು ತಾಪಂ ಇಒ ಮಂಜುನಾಥ್‌, ಸೂಲೂರು ಗ್ರಾಪಂ ಅಧ್ಯಕ್ಷ ಚನ್ನಪ್ಪ ಒಡೆಯರ್‌ ವಹಿಸಿದ್ದರು. ವಿದ್ಯಾರ್ಥಿಗಳ ರಕ್ಷಣೆಗಾಗಿ ಅರಣ್ಯ ಅಧಿಕಾರಿಗಳು, ಸಿಬ್ಬಂದಿ, ಗ್ರಾಪಂ ಸಿಬ್ಬಂದಿ ಕಾರ್ಯನಿರ್ವಹಿಸಿದರು. ಇದೇ ಸಂದರ್ಭದಲ್ಲಿ ಶೇ.100 ಫಲಿತಾಂಶಕ್ಕೆ ಕಾರಣರಾದ ಸೂಲೂರು ಸರಕಾರಿ ಪ್ರೌಢಶಾಲೆ ಮುಖ್ಯ ಶಿಕ್ಷಕ ಚಂದ್ರಪ್ಪ ಅವರನ್ನು ಸನ್ಮಾನಿಸಲಾಯಿತು. 

ಕಾರ್ಯಕ್ರಮದಲ್ಲಿ ಜಿಲ್ಲಾ ಅರಣ್ಯ ಸಂರಕ್ಷಣಾಧಿಕಾರಿ ಶ್ರೀನಿವಾಸರಾವ್‌, ವನ್ಯಜೀವಿ ಪರಿಪಾಲಕ ತ್ಯಾಗರಾಜ್‌, ಗ್ರಾಪಂ ಅಧ್ಯಕ್ಷರಾದ ಸವಿತಾ, ಶಶಿಕಲಾ, ಪ್ರಭಾವತಿ, ಸುಗುಣಮ್ಮ, ಸಿರಾಜ್‌, ಕ್ಷೇತ್ರ ಸಮನ್ವಯಾಧಿಕಾರಿ ರಾಮಕೃಷ್ಣಪ್ಪ, ಎಸ್‌ಡಿಎಂಸಿ ಅಧ್ಯಕ್ಷ ಬಿ.ಎಂ.ಮುನಿರಾಜು, ರವಿ,ಬಾಲಾಜಿ, ಅರಣ್ಯಾಧಿಕಾರಿ ರಂಗನಾಥ್‌, ಶಾಲಿನಿ, ಪರಿಮಳಾ, ಮೋಹನ್‌ಕುಮಾರ್‌ ಮತ್ತಿತರರಿದ್ದರು. ಚಿನ್ಮಯ ಶಾಲೆ ವಿದ್ಯಾರ್ಥಿನಿಯರು ಪ್ರಾರ್ಥಿಸಿ, ಗ್ರಾಪಂ ಅಧ್ಯಕ್ಷ ಒಡೆಯರ್‌ ಸ್ವಾಗತಿಸಿ, ವಂದಿಸಿದರು.

Trending videos

Back to Top