ಜಾಗತಿಕ ಪೈಪೋಟಿಗೆ ಪೂರಕ ಯೋಜನೆ ಅಗತ್ಯ

ಕೋಲಾರ: ಜಾಗತಿಕ ಮಟ್ಟದ ಪೈಪೋಟಿ ಎದುರಿಸಲು ಅಗತ್ಯವಾದ ಗುಣಮಟ್ಟದ ಕಲಿಕಾ ಯೋಜನೆ ರೂಪಿಸಿಕೊಂಡು ಶ್ರದ್ಧೆ, ಶಿಸ್ತಿನಿಂದ ಗುರಿ ಮುಟ್ಟಲು ವಿದ್ಯಾರ್ಥಿಗಳು ಪ್ರಯತ್ನಿಸಬೇಕು ಎಂದು ವಿಧಾನ ಪರಿಷತ್ ಮಾಜಿ ಸಭಾಪತಿ ವಿ.ಆರ್.ಸುದರ್ಶನ್ ಸಲಹೆ ನೀಡಿದರು.
ನಗರದಲ್ಲಿ ಜ್ಯೋತಿ ಎಜುಕೇಷನ್ ಟ್ರಸ್ಟ್ ವತಿಯಿಂದ ಭಾನುವಾರ ಎಸ್ಸೆಸ್ಸೆಲ್ಸಿ ಮತ್ತು ದ್ವಿತೀಯ ಪಿಯುಸಿ ಪ್ರತಿಭಾವಂತ ವಿದ್ಯಾರ್ಥಿಗಳಿಗಾಗಿ ಹಮ್ಮಿಕೊಂಡಿದ್ದ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳನ್ನು ಪುರಸ್ಕರಿಸಿ ಮಾತನಾಡುತ್ತಿದ್ದರು.
ಸ್ವಾವಲಂಬಿಗಳಾಗಿ: ಎಸ್ಸೆಸ್ಸೆಲ್ಸಿ ನಂತರ ಮುಂದಿನ ಶಿಕ್ಷಣ ಆಯ್ಕೆ ಮಾಡಿಕೊಳ್ಳಲು ಹಲವು ಅವಕಾಶಗಳಿದ್ದು, ವಾಣಿಜ್ಯ, ಕಲಾ, ವಿಜ್ಞಾನ ವಿಭಾಗವನ್ನು ಆಯ್ಕೆ ಮಾಡಿಕೊಳ್ಳಬಹುದು. ಆನಂತರ ಉದ್ಯೋಗ, ಮುಂದಿನ ಪದವಿ ವ್ಯಾಸಂಗ ಮಾಡಬಹುದು. ಇದರ ಜತೆಗೆ ಕೌಶಲ್ಯ ತರಬೇತಿ ಪಡೆಯುವ ಮೂಲಕ ಸ್ವಾವಲಂಬಿ ಬದುಕಿಗೆ ಆಸರೆ ಮಾಡಿಕೊಳ್ಳಬೇಕು ಎಂದು ಸಲಹೆ ನೀಡಿದರು.
ವೆಬ್ಸೈಟ್ನಿಂದ ಗೆಲುವಿನ ಶಕ್ತಿ: ಮೊಬೆ„ಲ್, ಕಂಪ್ಯೂಟರ್ ಸದ್ಬಳಕೆಯಾಗಬೇಕು. ವೆಬ್ಸೆ„ಟ್ ನೋಡುವ ಅಭ್ಯಾಸ ಬೆಳೆಸಿಕೊಳ್ಳುವುದರಿಂದ ಕುಳಿತ ಕಡೆಯೇ ವಿವಿಧ ಕ್ಷೇತ್ರಗಳಿಗೆ ಸಂಬಂ ಧಿಸಿದ ಮಾಹಿತಿ ಪಡೆದುಕೊಳ್ಳಬಹುದು. ಜೀವನದ ದಿಕ್ಕನ್ನು ಗೆಲುವಿನ ಕಡೆ ಕೊಂಡೊಯ್ಯುವ ಶಕ್ತಿ ವೆಬ್ಸೆ„ಟ್ಗಿದೆ ಎಂದು ಹೇಳಿದರು.
ಸ್ಪರ್ಧಾತ್ಮಕ ಪರೀಕ್ಷೆ ಎದುರಿಸಿ: ಎಲ್ಲಿ ನೋಡಿದರೂ ರಾಜ್ಯದಲ್ಲಿನ ಬ್ಯಾಂಕ್ಗಳಲ್ಲಿ ಹೊರ ರಾಜ್ಯದವರು ಕೆಲಸ ಮಾಡುತ್ತಿದ್ದಾರೆ. ಸ್ಥಳೀಯ ವಿದ್ಯಾರ್ಥಿಗಳು ಬ್ಯಾಂಕಿಂಗ್ ಪರೀಕ್ಷೆಗಳನ್ನು ತೆಗೆದುಕೊಳ್ಳದಿರುವುದೇ ಇದಕ್ಕೆ ಕಾರಣವಾಗಿದೆ. ಯಾವುದೇ ಒಂದು ಸ್ಪರ್ಧಾತ್ಮಕ ಪರೀಕ್ಷೆ ಎದುರಿಸಲು ಸಿಗುವ ಸೌಕರ್ಯಗಳನ್ನು ಪಡೆದುಕೊಂಡು ಪರೀಕ್ಷೆ ತೆಗೆದುಕೊಳ್ಳಲು ಮುಂದಾಗಬೇಕೆಂದು ಕಿವಿಮಾತು ಹೇಳಿದರು.
ಪ್ರತಿಭಾವಂತರಾಗಿ: ಪರೀಕ್ಷೆಗಳಲ್ಲಿ ಉತ್ತಮ ಫಲಿತಾಂಶ ಪಡೆದ ಸ್ನೇಹಿತರನ್ನು ಸ್ಫೂರ್ತಿಯಾಗಿ ತೆಗೆದುಕೊಳ್ಳಬೇಕೇ ಹೊರತು ಶತ್ರುಗಳಂತೆ ಪರಿಗಣಿಸಬಾರದು. ಅದು ಶೆ„ಕ್ಷಣಿಕ ಅಭಿವೃದ್ಧಿಯ ಮೇಲೆ ಪರಿಣಾಮ ಬೀರುತ್ತದೆ. ಅವರನ್ನು ಮಾದರಿಯನ್ನಾಗಿಸಿಕೊಂಡು ಪ್ರತಿಭಾವಂತ ವ್ಯಕ್ತಿಗಳಾಗಿ ಎಂದರು.
ಸಮುದಾಯದಲ್ಲಿನ ಸ್ಥಿತಿವಂತರು ಟ್ರಸ್ಟ್ ಅಭಿವೃದ್ಧಿಗೆ ಸಹಾಯ ಹಸ್ತ ಚಾಚಿದಾಗ ಸಮುದಾಯ ಮತ್ತಷ್ಟು ಸಮಾಜದಲ್ಲಿ ಬಲಗೊಳ್ಳಲು ಸಾಧ್ಯವಾಗುತ್ತದೆ. ವಿದ್ಯಾರ್ಥಿಗಳಿಗೆ ಶಿಕ್ಷಣಕ್ಕಾಗಿ ಸರ್ಕಾರಗಳು ಬಿಡುಗಡೆ ಮಾಡಿರುವ ಯೋಜನೆಗಳ ಪ್ರಯೋಜನೆ ಪಡೆದುಕೊಳ್ಳಬೇಕು ಎಂದು ಸಲಹೆ ನೀಡಿದರು.
ಟ್ರಸ್ಟ್ ಸಂಸ್ಥಾಪಕ ಅಧ್ಯಕ್ಷ ಆರ್.ನಾಗರಾಜಶೆಟ್ಟಿ, ಸಮುದಾಯದಲ್ಲಿನ ಬಡ ವಿದ್ಯಾರ್ಥಿಗಳ ಶೆ„ಕ್ಷಣಿಕ ಪ್ರಗತಿಗೆ ಪೂರಕವಾದ ಯೋಜನೆಗಳನ್ನು ರೂಪಿಸಲು ಟ್ರಸ್ಟ್ ಉದ್ದೇಶವಾಗಿದೆ. ರಾಜ್ಯದ ಕರಾವಳಿ ಮತ್ತು ದಕ್ಷಿಣ ಭಾಗದ 15 ಜಿಲ್ಲೆಗಳಲ್ಲಿ ಗಾಣಿಗ ಸಮುದಾಯದವರು ಹೆಚ್ಚಾಗಿದ್ದು, ಮೊದಲ ಹಂತದಲ್ಲಿ 5 ಜಿಲ್ಲೆಗಳಲ್ಲಿ ಟ್ರಸ್ಟ್ನ್ನು ವಿಸ್ತರಿಸಲು ಕ್ರಮಕೈಗೊಳ್ಳಲಾಗಿದೆ. ಇದರಿಂದ ವಿದ್ಯಾಸಂಸ್ಥೆಗಳನ್ನು ಸ್ಥಾಪನೆ ಮಾಡಿ ಸಮುದಾಯದ ವಿದ್ಯಾರ್ಥಿಗಳಿಗೆ ಉಚಿತ ಶಿಕ್ಷಣ ನೀಡುವ ಉದ್ದೇಶವಾಗಿದೆ ಎಂದರು.
ಇದೇ ಸಂದರ್ಭದಲ್ಲಿ ಎಸ್ಸೆಸ್ಸೆಲ್ಸಿ ಮತ್ತು ದ್ವಿತೀಯ ಪಿಯುಸಿ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಸ್ಮಾನಿಸಿ ಪುರಸ್ಕರಿಸಲಾಯಿತು. ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾ ಧಿಕಾರಿ ಡಾ.ವಿಜಯ್ಕುಮಾರ್, ಟ್ರಸ್ಟ್ ಉಪಾಧ್ಯಕ್ಷ ಟಿ.ವಿ.ವೇಣುಗೋಪಾಲ್, ಕಾರ್ಯದರ್ಶಿ ಕೆ.ಎನ್.ರಾಮಚಂದ್ರಪ್ಪ, ಖಜಾಂಚಿ ಕೆ.ಎಂ.ನಾರಾಯಣಪ್ಪ, ಕೆಜಿಎಫ್ ಗೌತಮಿ ಆಸ್ಪತ್ರೆ ಅಧ್ಯಕ್ಷ ಸಿ.ಕೆ.ಆನಂದ್ಕುಮಾರ್, ಕಾಂಗ್ರೆಸ್ ಮುಖಂಡ ಅಶೋಕ್ಕುಮಾರ್ ಮತ್ತಿತರರು ಉಪಸ್ಥಿತರಿದ್ದರು.