CONNECT WITH US  

15 ಸಾವಿರ ಖಾತೆ ಅನಧಿಕೃತ: ನೋಟಿಸ್‌ಗೆ ಪಟ್ಟು

ಕೋಲಾರ: ನಗರಸಭೆ ವ್ಯಾಪ್ತಿಯಲ್ಲಿ ಅನಧಿಕೃತ ಬಡಾವಣೆಗಳ ಹಾವಳಿ ಮಿತಿ ಮೀರಿದೆ, ಸುಮಾರು 15 ಸಾವಿರ ಅನಧಿಕೃತ ಖಾತೆದಾರರಿದ್ದಾರೆ. ಇವರ ವಿರುದ್ಧ ಕ್ರಮ ಕೈಗೊಳ್ಳಲು ನಿರ್ಲಕ್ಷ್ಯ ಏಕೆ ಎಂದು ಪ್ರಶ್ನಿಸಿದ ನಗರಸಭಾ ಸದಸ್ಯರು ನೋಟಿಸ್‌ ಜಾರಿಗೆ ಪಟ್ಟು ಹಿಡಿದರು.

ನಗರಸಭಾಧ್ಯಕ್ಷೆ ಮಹಾಲಕ್ಷ್ಮಿಅಧ್ಯಕ್ಷತೆಯಲ್ಲಿ ಸೋಮವಾರ ನಡೆದ ನಗರಸಭೆ ಸಾಮಾನ್ಯ ಸಭೆಯಲ್ಲಿ ಕೆಲವು ಸದಸ್ಯರು ವಿಷಯ ಪ್ರಸ್ತಾಪಿಸಿ ಕಠಿಣ ನಿರ್ಧಾರಕ್ಕೆ ಒತ್ತಾಯಿಸಿದರು.

ನಗರಸಭೆ ವ್ಯಾಪ್ತಿಯಲ್ಲಿ 34 ಸಾವಿರ ಆಸ್ತಿಗಳು, 23 ಸಾವಿರ ಖಾತೆಗಳಿವೆ. ಅದರಲ್ಲಿ 15 ಸಾವಿರ ಖಾತೆಗಳು ಅನಧಿಕೃತ ಎಂದು ಗೊತ್ತಿದ್ದರೂ ಕ್ರಮ ಕೈಗೊಳ್ಳದಿರಲು ಕಾರಣವೇನು ಎಂದು ಪ್ರಶ್ನಿಸಿದ ನಗರಸಭೆ ಸದಸ್ಯರು, ಕೂಡಲೇ ನೋಟಿಸ್‌ ನೀಡುವಂತೆ ಕಂದಾಯ ಅಧಿಕಾರಿಗೆ ತಾಕೀತು ಮಾಡಿದರು.

ಹಾವಳಿ: ನಗರಸಭಾ ಸದಸ್ಯ ಎಸ್‌.ಆರ್‌. ಮುರಳಿಗೌಡ ಮಾತನಾಡಿ, ನಗರಸಭೆ ವ್ಯಾಪ್ತಿಯಲ್ಲಿ ಅನಧಿಕೃತ ಕಟ್ಟಡಗಳು, ಬಡಾವಣೆಗಳ ಹಾವಳಿ ಮಿತಿಮೀರಿದೆ. ಅಲ್ಲದೇ ಸರಿಯಾಗಿ ತೆರಿಗೆಯನ್ನೂ ಪಾವತಿಸುತ್ತಿಲ್ಲ. ಆದರೂ ಅಂತಹ ಬಡಾವಣೆಗಳಿಗೆ ಮಾತ್ರ ಹೆಚ್ಚಿನ ಸೌಲಭ್ಯಗಳನ್ನು ಹೇಗೆ ನೀಡುತ್ತಿದ್ದೀರಿ ಎಂದು ಕಿಡಿಕಾರಿದರು.

ಅಧಿಕಾರಿಗಳು, ಸಿಬ್ಬಂದಿ ಅವಶ್ಯವಿಲ್ಲದ ಕೆಲಸಗಳನ್ನೆಲ್ಲಾ ಮಾಡುತ್ತೀರಿ, ಆದರೆ ತೆರಿಗೆ ವಸೂಲಿಗೆ ಮುಂದಾಗುವುದಿಲ್ಲ. ಕಂದಾಯ ಸಂಗ್ರಹ ವೃದ್ಧಿಗೆ ಯಾವುದೇ ಕ್ರಮಕೈಗೊಳ್ಳುತ್ತಿಲ್ಲ ಎಂದರೆ ಅರ್ಥವೇನು ಎಂದು ಆಕ್ರೋಶ ವ್ಯಕ್ತಪಡಿಸಿದರು.

15 ಸಾವಿರ ಅನಧಿಕೃತ ಖಾತೆಗಳಿಗೆ ಕೂಡಲೇ ನೋಟಿಸ್‌ ನೀಡಬೇಕು ಎಂದು ಆಗ್ರಹಿಸಿದಾಗ ಕೆಲವು ಸದಸ್ಯರು ಪ್ರತಿರೋಧ ವ್ಯಕ್ತಪಡಿಸಿದ್ದರಿಂದಾಗಿ ಸದಸ್ಯರ ನಡುವೆಯೇ ಮಾತಿನ ಚಕಮಕಿಗೂ ಕಾರಣವಾಯಿತು.

ಜನಪ್ರತಿನಿಧಿ ವಿರುದ್ಧ ಕೇಸ್‌ಗೆ ಖಂಡನೆ: ನಗರದಲ್ಲಿ ಜನಪ್ರತಿನಿಧಿಗಳಾಗಿರುವವರು ಜನರ ಸಮಸ್ಯೆಗಳಿಗೆ ಸ್ಪಂದಿಸಲು ತೆರಳುತ್ತಾರೆ. ಆದರೆ, ಅದನ್ನೇ ಬೇರೆ ರೀತಿ ಅರ್ಥ ಮಾಡಿಕೊಂಡು ಕ್ರಿಮಿನಲ್‌ ಪ್ರಕರಣ ದಾಖಲಿಸುವುದು ಸರಿಯಲ್ಲ. ಈ ಬಗ್ಗೆ ಕೂಡಲೇ ಪರಿಶೀಲಿಸಿ ಕ್ರಮಕೈಗೊಳ್ಳಿ ಎಂದು ನಗರಸಭೆ ಆಯುಕ್ತರನ್ನು ಸದಸ್ಯರು ಪಟ್ಟು ಹಿಡಿದರು.
 
ಸದಸ್ಯ ಬಿ.ಎಂ.ಮುಬಾರಕ್‌ ಮಾತನಾಡಿ, ಕನಕನಪಾಳ್ಯ ಬಡಾವಣೆಯಲ್ಲಿ ಏಳು ಕಾರ್ಮಿಕರನ್ನು ಬಳಸಿಕೊಂಡು ಮಲದಗುಂಡಿ ಸ್ವತ್ಛ ಮಾಡಲಾಗಿದೆ. ಸಂಘಟನೆಯ ಮುಖಂಡರು ಸಫಾಯಿ ಕರ್ಮಚಾರಿ ಆಯೋಗಕ್ಕೆ ದೂರು ಸಲ್ಲಿಸಿದ್ದು, ಸದಸ್ಯ ಸೋಮ ಶೇಖರ್‌ ಸೇರಿದಂತೆ ಆಯುಕ್ತರ ಮೇಲೆಯೂ ಕ್ರಿಮಿನಲ್‌ ಪ್ರಕರಣ ದಾಖಲಿಸಲಾಗಿದೆ ಎಂದರು.

ಒಬ್ಬ ಜನಪ್ರತಿನಿಧಿಯನ್ನು ಪ್ರಕರಣದ ಪ್ರಮುಖ ಆರೋಪಿಯಾಗಿಸಿದ್ದಾರೆ. ಜನಪ್ರತಿನಿಧಿಯಾಗಿ ಸಮಸ್ಯೆಗಳಿಗೆ ಸ್ಪಂದಿಸುವುದು ತಪ್ಪೇ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಸಂಘದವರು ಸರಕಾರವನ್ನು ಎಚ್ಚರಿಸಲಿ. ಇಲ್ಲವೇ ಅಧಿಕಾರಿಗಳ ಮೇಲೆ ಪ್ರಕರಣ ದಾಖಲಿಸಿಕೊಳ್ಳಲಿ, ಅದನ್ನು ಬಿಟ್ಟು, ಈ ರೀತಿ ನಮ್ಮ ಮೇಲೆ ಪ್ರಕರಣ ದಾಖಲಿಸುವುದು ಎಷ್ಟು ಸರಿ ಎಂದು ಪ್ರಶ್ನಿಸಿದರು. ಇದಕ್ಕೆ ದನಿಗೂಡಿಸಿದ ಸದಸ್ಯ ಸೋಮಶೇಖರ್‌, ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದ್ದ ವೇಳೆ ಫೋಟೋ ಹಿಡಿದು, ನಾನೇ ನಿಂತು ಕೆಲಸ ಮಾಡಿಸಿದ್ದೇನೆ ಎಂದು ಆರೋಪಿಸಿದ್ದಾರೆ. ಅಲ್ಲಿದ್ದ ಏಳು ಮಂದಿಯು ಸಫಾಯಿ ಕರ್ಮಚಾರಿಗಳೇ ಅಲ್ಲ ಎಂದು ಆಯುಕ್ತರ ಗಮನಕ್ಕೆ ತಂದರು. ಆಯುಕ್ತ ಸತ್ಯನಾರಾಯಣ ಮಾತನಾಡಿ, ಈ ಬಗ್ಗೆ ಪರಿಶೀಲಿಸಿ ಕ್ರಮಕೈಗೊಳ್ಳುವ ಭರವಸೆ ನೀಡಿದರು.

ನೀರಿನ ಸಮಸ್ಯೆ: ಸಲ್ಲಾವುದ್ದೀನ್‌ ಬಾಬು, ಅಮ್ಮೇರಹಳ್ಳಿ ಕೆರೆಯಲ್ಲಿ 20, ಮಡೇರಹಳ್ಳಿಯಲ್ಲಿ 10 ಕೊಳವೆಬಾವಿಗಳಿದ್ದು, ಪಂಪು ಮೋಟರ್‌ ಸರಿಯಾಗಿ ಅಳವಡಿಸಿದರೆ ಸಾಕಷ್ಟು ನೀರಿನ ಸಮಸ್ಯೆ ನಿವಾರಣೆಯಾಗುತ್ತದೆ ಎಂದರು.

ಸದಸ್ಯ ಸೋಮಶೇಖರ್‌, ತಮ್ಮ ವಾರ್ಡಿನಲ್ಲಿ ಮಲದಗುಂಡಿ ತುಂಬಿ ಕೆಲ ಮನೆಗಳಿಗೆ ಸಾಕಷ್ಟು ತೊಂದರೆಯಾಗಿದ್ದರೂ ಯಾವುದೇ ಕ್ರಮವಹಿಸಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು. ಸದಸ್ಯ ನವಾಜ್‌, ನಮ್ಮ ವಾರ್ಡಿನಲ್ಲಿ ನೀರಿನ ಸಮಸ್ಯೆ ಇದೆ. ಕೊಳವೆ ಬಾವಿ ರೀಬೋರ್‌ ಮಾಡಬೇಕು ಎಂದು ಹಲವಾರು ಬಾರಿ ಹೇಳಿದ್ದರೂ ಪ್ರಯೋಜನವಾಗಿಲ್ಲ. ಕೂಡಲೇ ಕ್ರಮಕೈಗೊಳ್ಳಿ ಎಂದು ಆಗ್ರಹಿಸಿದರು. ಕಳೆದ ಸಾಮಾನ್ಯ ಸಭೆಯಲ್ಲಿ ಬಾಕಿ ಇದ್ದ ವಿಷಯಗಳ ಕುರಿತು ಸುದೀರ್ಘ‌ ಚರ್ಚೆ
ನಡೆಸಲಾಯಿತು. ಸದಸ್ಯರು ತಮ್ಮ ವಾರ್ಡ್‌ಗಳ ಸಮಸ್ಯೆಗಳನ್ನು ಸಭೆಯ ಗಮನಕ್ಕೆ ತಂದರು. ಸಭೆಯಲ್ಲಿ ಉಪಾಧ್ಯಕ್ಷೆ ಸುಜಾತಮ್ಮ, ಆಯುಕ್ತ ಸತ್ಯನಾರಾಯಣ ಸೇರಿದಂತೆ ಸದಸ್ಯರು ಉಪಸ್ಥಿತರಿದ್ದರು.

ಮಾಹಿತಿ ನೀಡದ ಎಇಇಗೆ ನೋಟಿಸ್‌ ನೀಡಿ ನಗರಸಭೆ ವ್ಯಾಪ್ತಿಯಲ್ಲಿನ ಕೊಳವೆಬಾವಿಗಳಿಗೆ ಪಂಪು, ಮೋಟರ್‌ ಇತರೆ ಸಲಕರಣೆಗಳು ಎಷ್ಟು ಖರೀದಿಸಿದ್ದೀರಿ, ಎಷ್ಟು ಬಳಕೆಯಲ್ಲಿವೆ, ದುರಸ್ತಿ ಯಲ್ಲಿವೆ ಎನ್ನುವ ಮಾಹಿತಿ ಕೇಳಿದ ನಗರಸಭಾ
ಸದಸ್ಯರಿಗೆ ಅಧಿಕಾರಿಗಳಿಂದ ಉತ್ತರ ಬರಲಿಲ್ಲ. ಒಂದು ಪುಸ್ತಕವನ್ನು ನಿರ್ವಹಣೆ ಮಾಡಿಲ್ಲ ಎಂದರೆ ಹೇಗೆ ಎಂದು ಆಯುಕ್ತರನ್ನು ಪ್ರಶ್ನಿಸಿ, ಕೂಡಲೇ ಎಇಇಗೆ ಶೋಕಾಸ್‌ ನೋಟಿಸ್‌ ನೀಡಬೇಕು ಎಂದು ಆಗ್ರಹಿಸಿದರು.

ಸದಸ್ಯ ಪ್ರಸಾದ್‌ಬಾಬು ಮಾತನಾಡಿ, ಒಂದು ವರ್ಷದಿಂದ ಹೇಳುತ್ತಾ ಬಂದಿದ್ದೇವೆ. ಪಂಪು, ಮೋಟರ್‌ ಕಳುವಾಗಿದೆ ದೂರು ನೀಡಿ ಎಂದು ಆದರೆ, ಅದನ್ನು ಮಾಡದೆ ಯಾರ ಒತ್ತಾಯಕ್ಕೆ ಏನೇನೋ ಮಾಡಿ, ನಮ್ಮ ತಲೆಗೆ ತಂದು ಇಡು
ತ್ತೀರಿ. ಕೂಡಲೇ ದೂರು ನೀಡಿ ಎಂದು ಸೂಚಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಅಧ್ಯಕ್ಷೆ ಮಹಾಲಕ್ಷ್ಮಿ, ಸಭೆ ಇರುವುದು ನಿಮಗೆ ಗೊತ್ತಿಲ್ಲವೇ, ಕಳೆದ ಸಭೆಯಲ್ಲಿ ತಿಳಿಸಲಾಗಿದ್ದರೂ ಮಾಹಿತಿ ಯಾಕೆ ಇಲ್ಲ ಎಂದು ಅಧಿಕಾರಿಯನ್ನು ತರಾಟೆಗೆ ತೆಗೆದುಕೊಂಡರು.


Trending videos

Back to Top