ಪಿಒಪಿ ಗಣೇಶ ಮಾರಾಟ ಪೂರ್ಣ ನಿಷೇಧ

ಕೋಲಾರ: ಜಿಲ್ಲೆಯಲ್ಲಿ ಗಣೇಶ ಹಬ್ಬಕ್ಕೆ ಸಿದ್ಧತೆ ನಡೆಯುತ್ತಿರುವಾಗಲೇ, ಪರಿಸರಕ್ಕೆ ಮಾರಕವಾಗಿರುವ ಪ್ಲಾಸ್ಟರ್ ಆಫ್ ಪ್ಯಾರೀಸ್ ಗಣೇಶ ಮೂರ್ತಿಗಳ ಮಾರಾಟಕ್ಕೆ ಸಂಪೂರ್ಣ ನಿಷೇಧ ಹೇರಲಾಗಿದೆ. ಪರಿಸರಕ್ಕೆ ಮಾರಕವಾಗುವ ಕೆರೆಯ ನೀರನ್ನು ಕಲುಷಿತಗೊಳಿಸುವ ಪಿಒಪಿ ಗಣೇಶ ಮೂರ್ತಿಗಳನ್ನು ನಿಷೇಧಿಸುವಂತೆ ರಾಜ್ಯ ಹೈಕೋರ್ಟ್ ಕಳೆದ ವರ್ಷ ಸೂಚನೆ ನೀಡಿದ್ದರ ಮೇರೆಗೆ, ಹಿಂದಿನ ವರ್ಷವೇ ಜಿಲ್ಲಾಡಳಿತ ಹಾಗೂ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ಜಿಲ್ಲೆಯಲ್ಲಿ ಪಿಒಪಿ ಗಣೇಶ ಮೂರ್ತಿಗಳ ಮಾರಾಟಕ್ಕೆ ನಿಷೇಧ ಹೇರಿತ್ತು.
ಸುತ್ತೋಲೆ: ಆದರೆ,ಕಳೆದ ವರ್ಷ ಗಣೇಶ ಹಬ್ಬದ ಸನಿಹದಲ್ಲಿಯೇ ಹೈಕೋರ್ಟ್ ಮತ್ತು ಸರಕಾರದಿಂದ ಇಂತದ್ದೊಂದು ಆದೇಶ ಬಂದಿದ್ದರಿಂದ, ಆ ವೇಳೆಗಾಗಲೇ ಪಿಒಪಿ ಗಣೇಶ ಮೂರ್ತಿಗಳು ಮಾರಾಟಕ್ಕೆ ಮಾರುಕಟ್ಟೆಗೆ ಬಂದು ಬಿಟ್ಟಿತ್ತು.
ವ್ಯಾಪಾರಸ್ಥರ ಮತ್ತು ಗಣೇಶ ಮೂರ್ತಿಗಳ ಪ್ರತಿಷ್ಠಾಪಿಸುವ ಮಂಡಳಿಗಳ ಹಿತದೃಷ್ಟಿಯಿಂದ ಹಬ್ಬಕ್ಕೆ ವಿಘ್ನವಾಗಬಾರದು ಎನ್ನುವ ಕಾರಣಕ್ಕೆ ಪಿಒಪಿ ಗಣೇಶ ಮೂರ್ತಿಗಳ ಮಾರಾಟ ಮತ್ತು ಪೂಜೆಗೆ ಕೊಂಚ ಸಡಿಲಿಕೆ ಮಾಡಲಾಗಿತ್ತು. ಆದರೆ, ಈ ಬಾರಿ ಪಿಒಪಿ ಗಣೇಶ ಮೂರ್ತಿಗಳ ಮಾರಾಟಕ್ಕೆ ಸಂಪೂರ್ಣ ನಿಷೇಧ ಹೇರಿರುವ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿಯು, ಈಗಾಗಲೇ ಗಣೇಶ ಮೂರ್ತಿಗಳ ತಯಾರಕರು ಹಾಗೂ ಮಾರಾಟಗಾರರಿಗೆ ಪಿಒಪಿ ಗಣೇಶ ಮೂರ್ತಿಗಳನ್ನು ತಯಾರಿಸದಂತೆ ಸುತ್ತೋಲೆ ಕಳುಹಿಸಿ ಎಚ್ಚರಿಸಿದೆ.
ಮೊಕದ್ದಮೆ ಎಚ್ಚರಿಕೆ: ಕೋಲಾರ ಜಿಲ್ಲಾ ಕೇಂದ್ರದ ಸುತ್ತಮುತ್ತಲೂ ಸುಮಾರು ಹತ್ತು ಮಂದಿ ಗಣೇಶ ಮೂರ್ತಿಗಳ ತಯಾರಕರಿದ್ದು, ಈ ಎಲ್ಲಾ ತಯಾರಕರಿಗೆ ಪಿಒಪಿ ಗಣೇಶ ಮೂರ್ತಿಗಳನ್ನು ಯಾವುದೇ ಕಾರಣಕ್ಕೂ ತಯಾರಿಸಬಾರದು ಮತ್ತು ಹೊರಗಿನಿಂದ ತರಿಸಿ ಮಾರಾಟ ಮಾಡಬಾರದು ಎಂದು ತಾಕೀತು ಮಾಡಲಾಗಿದೆ.
ಪರಿಸರ ಮಾಲಿನ್ಯ ನಿಯಂತ್ರಣಾಧಿಕಾರಿಗಳೇ ಖುದ್ದು ಒಂದು ಸುತ್ತು ಗಣೇಶ ಮೂರ್ತಿಗಳ ತಯಾರಿಸುವ ಘಟಕಗಳಿಗೆ ಭೇಟಿ ನೀಡಿ ಪಿಒಪಿ ಗಣೇಶ ಮೂರ್ತಿಗಳ ತಯಾರಿಸುತ್ತಿಲ್ಲವೆನ್ನುವುದನ್ನು ಖಚಿತಪಡಿಸಿಕೊಂಡಿದ್ದಾರೆ. ಕಳೆದ ವರ್ಷ ಮಾರಾಟವಾಗದೆ ಉಳಿದ ಹತ್ತಾರು ಪಿಒಪಿ ಗಣೇಶ ಮೂರ್ತಿಗಳನ್ನು ಯಾವುದೇ ಕಾರಣಕ್ಕೂ ಮಾರುಕಟ್ಟೆಗೆ ತರಬಾರದು ಹಾಗೇನಾದರೂ ಪಿಒಪಿ ಗಣೇಶ ಮೂರ್ತಿಗಳನ್ನು ಮಾರಾಟಕ್ಕೆ ತಂದರೆ ಗಣೇಶ ಮೂರ್ತಿಗಳನ್ನು ವಶಪಡಿಸಿಕೊಂಡು ಮೊಕದ್ದಮೆ ಹೂಡಬೇಕಾಗುತ್ತದೆಯೆಂದು ಎಚ್ಚರಿಸಿದ್ದಾರೆ.
ಮಾರಾಟದ ಮೇಲೆ ನಿಗಾ: ಕೋಲಾರ ಜಿಲ್ಲಾ ಕೇಂದ್ರದಲ್ಲಿ ಸದ್ಯಕ್ಕೆ ಇನ್ನೂ ಗಣೇಶ ಮೂರ್ತಿಗಳು ಮಾರಾಟಕ್ಕೆ ಬಂದಿಲ್ಲವಾದರೂ, ಮುಂದಿನ ವಾರದಿಂದ ಗಣೇಶ ಮೂರ್ತಿಗಳನ್ನು ಆಯಕಟ್ಟಿನ ಜಾಗಗಳಲ್ಲಿ ಮಾರಾಟ ಮಾಡಲು ಸಿದ್ಧತೆ ನಡೆಸಲಾಗುತ್ತಿದೆ. ಈ ಮಾರಾಟ ಕೇಂದ್ರಗಳ ಮೇಲೆ ಹದ್ದಿನ ಕಣ್ಣಿಡುವ ಮೂಲಕ ಪಿಒಪಿ ಗಣೇಶ ಮೂರ್ತಿಗಳ ಪ್ರದರ್ಶನ ಹಾಗೂ ಮಾರಾಟ ಮಾಡದಂತೆ ನೋಡಿಕೊಳ್ಳಲಾಗುತ್ತಿದೆ. ಜತೆಗೆ ಗಣೇಶ ಉತ್ಸವ ಮಂಡಳಿಗಳು ಜಿಲ್ಲೆಯ ತಯಾರಿಕರಿಂದ ಮಾತ್ರವಲ್ಲದೆ ಮುಂಬೈ ಮತ್ತು ಇತರೇ ರಾಷ್ಟ್ರಗಳಿಂದಲೂ ಪಿಒಪಿ ಗಣೇಶ ಮೂರ್ತಿಗಳನ್ನು ತರಿಸದಂತೆ ಎಚ್ಚರಿಕೆ ನೀಡಲಾಗುತ್ತಿದೆ.
ಪರ್ಯಾಯ: ಕೋಲಾರ ಜಿಲ್ಲೆಯ ಪರಿಸರಕ್ಕೆ ಹಾನಿಯಾಗದಂತೆ ಮಣ್ಣಿನ ಹಾಗೂ ಪೇಪರ್ ಮತ್ತು ಹುಣಸೇ ಬೀಜದ ಗೊಂದಿನಿಂದ ಗಣೇಶ ಮೂರ್ತಿಗಳನ್ನು ತಯಾರಿಸಲು ತಯಾರಕರು ನಿರ್ಧರಿಸಿ ಕಾರ್ಯೋನ್ಮುಖರಾಗಿದ್ದಾರೆ. ಈಗಾಗಲೇ ಕೋಲಾರ ನಗರದ ಗಣೇಶ ಮೂರ್ತಿಗಳ ತಯಾರಕರು ಹಿಂದಿನ ಸಂಪ್ರದಾಯದಂತೆ ಮಣ್ಣಿನ ಮೂರ್ತಿಗಳನ್ನು ತಯಾರಿಸಲು ಮುಂದಾಗಿದ್ದಾರೆ.
ತೂಕವಿಲ್ಲದ ಗಣೇಶ ಮೂರ್ತಿಗಳನ್ನು ಪೇಪರ್ ಹಾಗೂ ಹುಣಿಸೇ ಬೀಜದ ಗೊಂದಿನಿಂದ ಮೌಲ್ಡ್ ಮಾಡಿ ತಯಾರಿಸಲಾಗುತ್ತಿದೆ. ಈ ಎಲ್ಲಾ ಕಟ್ಟು ನಿಟ್ಟಿನ ಕ್ರಮಗಳಿಂದಾಗಿ ಕೋಲಾರ ಜಿಲ್ಲೆಯಲ್ಲಿ ಈ ಬಾರಿ ಸಂಪೂರ್ಣ ಪರಿಸರ ಪ್ರೇಮಿ, ಮಣ್ಣಿನ ಹಾಗೂ ಪೇಪರ್ ಗಣೇಶ್ ಮೂರ್ತಿಗಳ ಮಾರಾಟ ಹಾಗೂ ಪ್ರದರ್ಶನ ನಡೆಯುವ ನಿರೀಕ್ಷೆ ಇದೆ.
ಈ ಬಾರಿ ಯಾವುದೇ ಕಾರಣಕ್ಕೂ ಪಿಒಪಿ ಗಣೇಶ ಮೂರ್ತಿಗಳ ತಯಾರಿಕೆ ಮತ್ತು ಮಾರಾಟಕ್ಕೆ ಅವಕಾಶವಿಲ್ಲದಂತೆ ಎಚ್ಚರ ವಹಿಸಲಾಗಿದೆ. ಹೊರಗಿನಿಂದ ಪಿಒಪಿ ಗಣೇಶ ತಂದು ಮಾರಾಟ ಮಾಡಿದರೂ ಅಂತವರ ಮೇಲೆ ನಿರ್ದಾಕ್ಷಿಣ್ಯವಾಗಿ ಕಾನೂನು ಕ್ರಮ ಜರುಗಿಸಲಾಗುತ್ತದೆ. ಗಣೇಶ ಮೂರ್ತಿಗಳನ್ನು ವಶಪಡಿಸಿಕೊಳ್ಳಲಾಗುತ್ತದೆ.
ಮಂಜುನಾಥ್, ಪರಿಸರ ಅಧಿಕಾರಿ, ಕೋಲಾರ ಜಿಲ್ಲೆ
ಗಣೇಶ ಮೂರ್ತಿ ತಯಾರಕರು ಮತ್ತು ಮಾರಾಟಗಾರರು ಈ ಬಾರಿ ಮಣ್ಣು ಮತ್ತು ಪೇಪರ್ ಹುಣಸೇ ಗೋಂದಿನಿಂದ
ಭಾರ ರಹಿತ ಗಣೇಶ ಮೂರ್ತಿಗಳನ್ನು ತಯಾರಿಸುತ್ತಿದ್ದು, ಜಿಲ್ಲೆಯ ಹೊರಗಿನಿಂದ ಅಥವಾ ಹೊರ ರಾಜ್ಯಗಳಿಂದಲೂ ಪಿಒಪಿ ಗಣೇಶ ಮೂರ್ತಿಗಳನ್ನು ತರಿಸಬಾರದೆಂದು ಜಿಲ್ಲೆಯ ತಯಾರಕರೇ ಜಿಲ್ಲಾಡಳಿತವನ್ನು ಒತ್ತಾಯಿಸುತ್ತಿದ್ದೇವೆ.
ಸ್ಪಂದನ ರಂಗನಾಥ್, ಗಣೇಶ್ ಮೂರ್ತಿಗಳ ಮಾರಾಟಗಾರರು, ಕೋಲಾರ
ಕೆ.ಎಸ್.ಗಣೇಶ್