CONNECT WITH US  

ಶೀಘ್ರ ಪರಿಷ್ಕೃತ ಮತದಾರರ ಪಟ್ಟಿ ನೀಡಿ

ಕೋಲಾರ: ಮುಂದಿನ 2019ರ ಲೋಕಸಭೆ ಚುನಾವಣೆಯ ಮತದಾರರ ಪಟ್ಟಿ ಪರಿಷ್ಕರಣೆ ಪ್ರಕ್ರಿಯೆ ಪ್ರಗತಿಯಲ್ಲಿದ್ದು, ಮತಗಟ್ಟೆ ಅಧಿಕಾರಿಗಳಿಂದ ಸಮಗ್ರ ಮಾಹಿತಿ ಪಡೆದು, ಕೂಡಲೇ ನೀಡಬೇಕೆಂದು ಜಿಲ್ಲೆಯ ಎಲ್ಲಾ ತಾಲೂಕುಗಳ
ತಹಶೀಲ್ದಾರರಿಗೆ ಜಿಲ್ಲಾಧಿಕಾರಿ ಜೆ.ಮಂಜುನಾಥ್‌ ಸೂಚನೆ ನೀಡಿದರು.

ನಗರದ ಜಿಲ್ಲಾಡಳಿತ ಭವನದಲ್ಲಿ ಬುಧವಾರ ಮತದಾರರ ಪಟ್ಟಿ ಪರಿಷ್ಕರಣೆ ಸಂಬಂಧ ಏರ್ಪಡಿಸಿದ್ದ ಅಧಿಕಾರಿಗಳ ಸಭೆಯಲ್ಲಿ ಅವರು ಮಾತನಾಡುತ್ತಿದ್ದರು.

ನಿರ್ಲಕ್ಷ್ಯ ಬೇಡ: ಈಗಾಗಲೇ ಚುನಾವಣಾ ಆಯೋಗ ನೀಡಿರುವ ಆದೇಶದ ಅನ್ವಯ ಮತ ಗಟ್ಟೆ ಅಧಿಕಾರಿಗಳು ಪ್ರತಿ ಮನೆಗೂ ತೆರಳಿ ಮತ ದಾರರ ಕುರಿತು ಸಮಗ್ರ ಮಾಹಿತಿ ಒದಗಿಸಬೇಕು. ನಿರ್ಲಕ್ಷ್ಯವಹಿಸಿದರೆ ಮುಲಾ ಜಿಲ್ಲದೇ ಕ್ರಮ ಕೈಗೊಳ್ಳಬೇಕಾಗುತ್ತದೆ ಎಂದು ಎಚ್ಚರಿಸಿದರು.

ನಕಲಿ ಮತದಾರರ ಚೀಟಿ ಬಗ್ಗೆ ಎಚ್ಚರ ವಹಿಸಿ: ಗುರುತಿನ ಚೀಟಿಗಳ ವಿತರಣೆಯಲ್ಲಿ ವಿಳಂಬ ಮಾಡುತ್ತಿರುವುದರಿಂದಾಗಿ ಅನೇಕ ಸಮಸ್ಯೆಗಳು ಉಂಟಾಗುತ್ತಿವೆ. ಆಗಿಂದಾಗ್ಗೆ ಮತದಾರರ ಗುರುತಿನ ಚೀಟಿಗಳು ವಿತರಣೆಯಾಗಬೇಕು. ನಕಲಿ ಮತದಾರರ ಚೀಟಿಗಳ ಬಗ್ಗೆ ಅಗತ್ಯ ಎಚ್ಚರ ವಹಿಸಬೇಕೆಂದು ಹೇಳಿದರು.

ಅಸಮರ್ಪಕ ಮಾಹಿತಿ ಬೇಡ: ಸಭೆಯಲ್ಲಿ ಮತದಾರರ ಪಟ್ಟಿಗೆ ಸಂಬಂಧಿಸಿದಂತೆ ಯಾವ ವಿಧಾನಸಭಾ ಕ್ಷೇತ್ರದಿಂದಲೂ ಸಮರ್ಪಕ ಮಾಹಿತಿ ಬರಲಿಲ್ಲ. ಇದರಿಂದ ಅಸಮಧಾನಗೊಂಡ ಜಿಲ್ಲಾಧಿಕಾರಿಗಳು, ಬೂತ್‌ ಮಟ್ಟದ ಅಧಿಕಾರಿಗಳ ಸಭೆಗಳನ್ನು ಏಕೆ ನಡೆಸುತ್ತಿಲ್ಲ. ಸಭೆಗಳನ್ನು ಆಗಿಂದಾಗ್ಗೆ ನಡೆಸುತ್ತಿದ್ದರೆ ಎಲ್ಲ ಮಾಹಿತಿಯೂ ತಮ್ಮ ಬಳಿ ಲಭ್ಯವಿರುತ್ತಿದ್ದವು. ತಾವು ಇಲ್ಲಿ ಸಭೆ ನಡೆಸಿದಂತೆ ಚುನಾವಣಾ ಆಯೋಗದವರು ಸಭೆ ನಡೆಸಿ ನಮ್ಮನ್ನು ಮಾಹಿತಿ ಕೇಳುತ್ತಾರೆ. ಇಂತಹ ಅಸಮರ್ಪಕ ಮಾಹಿತಿಯನ್ನು ಒದಗಿಸು ವುದಾದರೂ ಹೇಗೆ ಎಂದು ಕಿಡಿಕಾರಿದರು.

 10ರೊಳಗೆ ಮಾಹಿತಿ ಕಡ್ಡಾಯ: ವಿಧಾನಸಭಾ ಚುನಾವಣೆ ಮುಗಿದು ಮೂರು ತಿಂಗಳು ಕಳೆದಿದೆ. ಇನ್ನೂ ಚುನಾವಣಾ ವೆಚ್ಚದ ಬಗ್ಗೆ ಮಾಹಿತಿ ನೀಡಿಲ್ಲವೆಂದರೆ ಅರ್ಥವೇನು ಎಂದು ಪ್ರಶ್ನಿಸಿದ ಡೀಸಿ, ಆ.10ರ ಒಳಗಾಗಿ ಮಾಹಿತಿಯನ್ನು
ಪ್ರತಿಯೊಬ್ಬರೂ ಕಡ್ಡಾಯವಾಗಿ ಸಲ್ಲಿಸಲೇಬೇಕು. ಈಗಾಗಲೇ ಚುನಾವಣಾ ಆಯೋಗ ದಿನಾಂಕ ನಿಗಪಡಿಸಿದ್ದು, ಆ ವೇಳೆ ಮಾಹಿತಿ ನೀಡದಿದ್ದರೆ ನೋಟಿಸ್‌ ನೀಡಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

ಈಗಾಗಲೇ 18 ವರ್ಷ ತುಂಬಿದ್ದು, ಮತದಾರರ ಪಟ್ಟಿಗೆ ಸೇರ್ಪಡೆ ಮಾಡಲು ಫಾರಂ.6 ಅನ್ನು ಭರ್ತಿ ಮಾಡಿ ಬಿಎಲ್‌ಒ ಅಥವಾ ತಹಶೀಲ್ದಾರರಿಗೆ ನೀಡಬಹುದಾಗಿದೆ. ಕಾರಣಾಂತರಗಳಿಂದ ಮರಣ ಹೊಂದಿದ್ದರೆ ಅಥವಾ ಬೇರೆಡೆಗೆ ವರ್ಗಾವಣೆಯಾಗಿ ಮತದಾರರ ಪಟ್ಟಿಗೆ ಸೇರ್ಪಡೆ ಅಥವಾ ತೆಗೆದು ಹಾಕುವುದಕ್ಕೆ ಫಾರಂ ನಮೂನೆ 7 ಅನ್ನು ಭರ್ತಿ ಮಾಡಿ ನೀಡಬೇಕು. ಮತದಾರರ ಪಟ್ಟಿಯಲ್ಲಿ ಹೆಸರು ಇದ್ದು, ಹುಟ್ಟಿದ ದಿನಾಂಕ, ತಂದೆ, ಗಂಡ ಹೆಸರು ಸೇರಿದಂತೆ ಯಾವುದೇ ತಿದ್ದುಪಡಿಗಳಿದ್ದರೆ ಫಾರಂ.8ರ ಮೂಲಕ ಸಲ್ಲಿಸಬೇಕಿದೆ.

ಒಂದೇ ವಿಧಾನಸಭಾ ಕ್ಷೇತ್ರದಲ್ಲಿದ್ದು, ಪಟ್ಟಿಯಲ್ಲಿ ಹೆಸರಿದ್ದು, ವಿಳಾಸ ಬದಲಾಗಿದ್ದರೆ ಅಂತಹವರು ಫಾರಂ 18 ಅನ್ನು ಭರ್ತಿ ಮಾಡಿ ನೀಡಬೇಕು. ಈ ಎಲ್ಲದಕ್ಕೂ ಅಕ್ಟೋಬರ್‌ 10ರವರೆಗೂ ಅವಕಾಶ ಕಲ್ಪಿಸಲಾಗಿದೆ ಎಂದು ತಿಳಿಸಿದರು.

ಚುನಾವಣಾ ಶಾಖೆ ಚುರುಕುಗೊಳ್ಳಲಿ: ಅಪರ ಜಿಲ್ಲಾಧಿಕಾರಿ ಕೆ.ವಿದ್ಯಾಕುಮಾರಿ ಮಾತನಾಡಿ, ಚುನಾವಣಾ ಶಾಖೆಯವರು ಚುರುಕುಗೊಂಡು ಕೆಲಸ ಮಾಡಬೇಕಿದೆ. ಅದನ್ನು ಬಿಟ್ಟು, ಬರುವ ಮಾಹಿತಿಯನ್ನು ಮೂಟೆ ಕಟ್ಟಿ ಬಿಸಾಡಿಸದರೆ ಮುಲಾಜಿಲ್ಲದೇ ಮನೆಗೆ ಕಳುಹಿಸಬೇಕಾಗುತ್ತದೆ ಎಂದು ಎಚ್ಚರಿಸಿದರು.

ಉಪವಿಭಾಗಾಧಿಕಾರಿ ಶುಭಾ ಕಲ್ಯಾಣ್‌ ಮಾತನಾಡಿ, ಚುನಾವಣೆ, ಮತದಾರರ ಪಟ್ಟಿಗೆ ಸಂಬಂಧಿಸಿದಂತೆ ಶ್ರೀನಿವಾಸಪುರ ವಿಧಾನಸಭಾ ಕ್ಷೇತ್ರದಲ್ಲಿ ಸಾಕಷ್ಟು ದೂರುಗಳಿದ್ದು, ಸರಿಪಡಿಸಿಕೊಳ್ಳಬೇಕು ಎಂದು ತಹಶೀಲ್ದಾರರಿಗೆ ಸೂಚಿಸಿದರು. 

ದೂರು ಬಂದರೆ ಗ್ರಹಚಾರ ಬಿಡಿಸ ಬೇಕಾಗುತ್ತೆ: ಡೀಸಿ ಮತದಾರರ ಪಟ್ಟಿಗೆ ಸಂಬಂಧಿಸಿದಂತೆ ಕಾಟಾಚಾರಕ್ಕೆ
ಮನಬಂದಂತೆ ಬೂತ್‌ ಮಟ್ಟದ ಅಧಿಕಾರಿಗಳಿಂದ ಮಾಹಿತಿ ಸಂಗ್ರಹಿಸುವಂತಿಲ್ಲ. ಪ್ರತಿ ದಿನ ಮಾಹಿತಿ ಪಡೆದುಕೊಂಡರೆ ಅನುಕೂಲವಾಗುತ್ತದೆ ಎಂದು ಸಲಹೆ ನೀಡಿದ ಡೀಸಿ, ಹೊಸ ಮತದಾರರಿಗೆ ಸಂಬಂಧಿಸಿದಂತೆ ಮನೆ ಮನೆ ಭೇಟಿಗೂ ಮುನ್ನ ದ್ವಿತೀಯ ಪಿಯುಸಿ, ಐಟಿಐ, ಡಿಪ್ಲೋಮಾ ಪರೀಕ್ಷೆಗಳಿಗೆ ಎಷ್ಟು ಮಂದಿ ಹಾಜರಾಗುತ್ತಿದ್ದಾರೆ ಎಂಬ ಮಾಹಿತಿಯನ್ನು ಡಿಡಿಪಿಯು ಅವರಿಂದ ಪಡೆದುಕೊಂಡರೆ ಅಂದಾಜು ಸಂಖ್ಯೆಯಾದರೂ ಸಿಗುತ್ತದೆ. ಇಷ್ಟೆಲ್ಲಾ ಅವಕಾಶಗಳನ್ನು ನೀಡಿದ್ದರೂ ನಿರ್ಲಕ್ಷ್ಯವಹಿಸಿದ್ದೇ ಆದಲ್ಲಿ ಇಡೀ ರಾತ್ರಿ ಜಾಗರಣೆ ಮಾಡಿಸಿ ಕೆಲಸ ಮಾಡಿಸಬೇಕಾಗುತ್ತದೆ. ನಾನೂ ಅನಿರೀಕ್ಷಿತವಾಗಿ ಮನೆಗಳಿಗೆ ಭೇಟಿ ನೀಡಿ ಮಾಹಿತಿ ಪಡೆದುಕೊಳ್ಳುತ್ತೇನೆ. ಯಾರಾದರೂ ತಮ್ಮ ಮನೆಗೆ ಅಧಿಕಾರಿಗಳು ಬಂದಿಲ್ಲ ಎಂದು ಹೇಳಿದರೆ ಸಂಬಂಧಪಟ್ಟ ಬಿಎಲ್‌ಒಗಳು ಸೇರಿದಂತೆ ಅಧಿಕಾರಿಗಳಿಗೆ ಗ್ರಹಚಾರ ಬಿಡಿಸಬೇಕಾಗುತ್ತದೆ ಎಂದು ಜಿಲ್ಲಾಧಿಕಾರಿ ಜೆ.ಮಂಜುನಾಥ್‌ ಎಚ್ಚರಿಸಿದರು.

2019ರ ಲೋಕಸಭೆ ಚುನಾವಣೆಗೆ ಸಂಬಂಧಿಸಿದಂತೆ ಮತದಾರರ ಪಟ್ಟಿ ಪ್ರಕ್ರಿಯೆ ಪ್ರಗತಿಯಲ್ಲಿದ್ದು, ಬಿಎಲ್‌ಒಗಳು ಪ್ರತಿ ಮನೆಗೆ ತೆರಳಿ 2019ರ ಜ.1ಕ್ಕೆ 18 ವರ್ಷ ತುಂಬಿದವರ ಮಾಹಿತಿಯನ್ನು ಕಲೆ ಹಾಕಿ, ನೋಂದಣಿ ಮಾಡಬೇಕು.
 ಜೆ.ಮಂಜುನಾಥ್‌, ಜಿಲ್ಲಾಧಿಕಾರಿ 


Trending videos

Back to Top