CONNECT WITH US  

ಜಿಲ್ಲೆಯ ವಿಕಲಚೇತನರ ಪಟ್ಟಿ ಸಿದ್ಧಪಡಿಸಿ

ಕೋಲಾರ: ಜಿಲ್ಲೆಯಲ್ಲಿ ಸಾಧನ ಸಲಕರಣೆಗಳ ಅಗತ್ಯತೆ ಇರುವ ವಿಕಲಚೇತನರ ಪಟ್ಟಿಯನ್ನು ಮೂರು ತಿಂಗಳಲ್ಲಿ ಸಿದ್ಧಪಡಿಸಿ ಸಲ್ಲಿಸಬೇಕೆಂದು ಜಿಲ್ಲಾಧಿಕಾರಿಗಳು ಹಾಗೂ ಜಿಪಂ ಸಿಇಒರಿಗೆ ಸಂಸದ ಕೆ.ಎಚ್‌.ಮುನಿಯಪ್ಪ ಸೂಚಿಸಿದರು.

ನಗರದ ಅಂತರಗಂಗಾ ವಿದ್ಯಾಸಂಸ್ಥೆಯ ಆವರಣದಲ್ಲಿ ಶನಿವಾರ ಕೇಂದ್ರ ಸರ್ಕಾರದ ವಿಶೇಷ ಅಡಿಪ್‌ ಯೋಜನೆಯಡಿ ಹಮ್ಮಿಕೊಂಡಿದ್ದ ಸಾಮಾಜಿಕ ಅಧಿಕಾರಿತ ಶಿಬಿರದಲ್ಲಿ ವಿಕಲಚೇತನರಿಗೆ ಉಚಿತ ಸಾಧನ ಸಲಕರಣೆಗಳನ್ನು ವಿತರಿಸಿ ಮಾತನಾಡುತ್ತಿದ್ದರು.

ವಿಕಲಚೇತನರ ಸಂಖ್ಯೆ ಕಡಿಮೆಯಾಗಲು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಹಲವಾರು ಯೋಜನೆಗಳನ್ನು ಜಾರಿಗೆ ತಂದಿವೆ. ಪೋಲಿಯೋ ಲಸಿಕಾ ಅಭಿಯಾನವೂ ಇದರಲ್ಲಿ ಪ್ರಮುಖ ಕಾರ್ಯಕ್ರಮವಾಗಿದೆ. ಈ ಎಲ್ಲಾ ಕಾರಣಗಳಿಂದ ವಿಕಲಚೇತನರ ಸಂಖ್ಯೆ ಕಡಿಮೆಯಾಗುತ್ತಿದೆ ಎಂದು ಹೇಳಿದರು.

ಸೌಲಭ್ಯ ಸದ್ಬಳಕೆ ಮಾಡಿಕೊಳ್ಳಿ: ವಿಕಲಚೇತನರಿಗೆ ಉದ್ಯೋಗ ಒಳಗೊಂಡು ಶೇ.3ರ ಮೀಸಲಾತಿಯನ್ನು ಶೇ.5ಕ್ಕೆ ಹೆಚ್ಚಿಸಿ ಕಾನೂನು ಜಾರಿ ಮಾಡಲಾಗಿದೆ. ವಿಕಲಚೇತನರು  ಸರ್ಕಾರದ ಸೌಲಭ್ಯಗಳನ್ನು ಸದ್ಬಳಕೆ ಮಾಡಿಕೊಂಡು ಮುಖ್ಯವಾಹಿನಿಯಲ್ಲಿ ಸೇರಿಕೊಳ್ಳಬೇಕೆಂದು ಮನವಿ ಮಾಡಿದರು.

ಅಧ್ಯಕ್ಷತೆ ವಹಿಸಿದ್ದ ಮಾಲೂರು ಶಾಸಕ ಕೆ.ವೈ.ನಂಜೇಗೌಡ ಮಾತನಾಡಿ, ವಿಕಲಚೇತನರಿಗೆ ಉದ್ಯೋಗ ಸೇರಿದಂತೆ ಎಲ್ಲ ಯೋಜನೆಗಳಲ್ಲೂ ಶೇ.5ರಷ್ಟು ಮೀಸಲಾತಿ ನೀತಿಯಂತೆ ರಾಜಕೀಯದಲ್ಲೂ ಶೇ.1ರಿಂದ 2ರಷ್ಟು ಮೀಸಲಾತಿಯನ್ನು ಗ್ರಾಪಂ ಮಟ್ಟದಿಂದಲೇ ನೀಡುವಂತಾಗಬೇಕೆಂದು ಪ್ರತಿಪಾದಿಸಿದರು.

ವಿಕಲಚೇತನರನ್ನು ಗುರುತಿಸಿ ಸೌಲಭ್ಯ ಕಲ್ಪಿಸುವ ಕೆಲಸ ಶೀಘ್ರವಾಗಿ ನಡೆಯಲು ಅಗತ್ಯ ಸಹಕಾರ ನೀಡುವುದಾಗಿ ತಿಳಿಸಿದ ಅವರು, ಅವರಿಗೆ ಅನುಕಂಪದ ಅಗತ್ಯವಿಲ್ಲ. ಸೌಲಭ್ಯಗಳನ್ನು ನೀಡಿ ಸ್ವಾವಲಂಬಿಗಳನ್ನಾಗಿ ಮಾಡಬೇಕೆಂದರು.

ಕೇಂದ್ರ ಸ್ವಾಮ್ಯದ ಅಲಿಂಮೊ ಸಂಸ್ಥೆಯ ಪ್ರತಿನಿಧಿ ಶಿವಕುಮಾರ್‌ ಮಾತನಾಡಿ, ಸರ್ಕಾರದ ವಿವಿಧ ಯೋಜನೆಗಳಿಗೆ ಅಲಿಂಮೊ ಸಂಸ್ಥೆ ಕಡಿಮೆ ವೆಚ್ಚದಲ್ಲಿ ಸುಮಾರು 250ಕ್ಕೂ ಅಧಿಕ ಗುಣಮಟ್ಟದ ಸಾಧನ ಸಲಕರಣೆಗಳನ್ನು ಸಿದ್ಧಪಡಿಸಿ ಫಲಾನುಭವಿಗಳಿಗೆ ವಿತರಿಸುತ್ತಿದೆ.

ರಾಜ್ಯದಲ್ಲಿ 18 ಕಡೆ ಸಾಮಾಜಿಕ ಅಧಿಕಾರಿತಾ ಶಿಬಿರಗಳನ್ನು ನಡೆಸಿ, 3046 ಫಲಾನುಭವಿಗಳನ್ನು ಆಯ್ಕೆ ಮಾಡಿ 2 ಕೋಟಿ ರೂ.ವೆಚ್ಚದಲ್ಲಿ ಸಾಧನ ಸಲಕರಣೆ  ನೀಡಲಾಗಿದೆ. ಕೋಲಾರದಲ್ಲಿ 127 ಫಲಾನುಭವಿಗಳಿಗೆ 8.50 ಲಕ್ಷ ರೂ. ವೆಚ್ಚದ ಸಾಧನ ಸಲಕರಣೆಗಳನ್ನು ನೀಡಿರುವುದಾಗಿ ತಿಳಿಸಿದರು.

ಜಿಲ್ಲಾಧಿಕಾರಿ ಜೆ.ಮಂಜುನಾಥ್‌ ಮಾತನಾಡಿ, ಜಿಲ್ಲೆಯಲ್ಲಿ 78,539 ವಿಕಲಚೇತನರಿದ್ದು, 45,000 ಮಂದಿಗೆ ಗುರುತಿನ ಚೀಟಿ ನೀಡಲಾಗಿದೆ. ಅವರಲ್ಲಿ 38,000 ಮಂದಿಗೆ ವಿವಿಧ ಸಾಧನ ಸಲಕರಣೆಗಳನ್ನು ಒದಗಿಸಲಾಗಿದೆ. ಉಳಿದವರಿಗೆ ಅಗತ್ಯ ಸಾಧನ ಸಲಕರಣೆಗಳ ಪಟ್ಟಿಯನ್ನು ಶೀಘ್ರವೇ ಸಿದ್ಧಪಡಿಸಿ ನೀಡುವುದಾಗಿ ತಿಳಿಸಿದರು.

ಈ ಸಂದರ್ಭದಲ್ಲಿ ಶಾಸಕಿ ಎಂ.ರೂಪಕಲಾ, ಜಿಪಂ ಅಧ್ಯಕ್ಷೆ ಗೀತಮ್ಮ ಆನಂದರೆಡ್ಡಿ, ಜಿಪಂ ಸದಸ್ಯರಾದ ರೂಪಶ್ರೀ, ಅರವಿಂದ್‌, ತಾಪಂ ಅಧ್ಯಕ್ಷ ಸೂಲೂರು ಎಂ.ಆಂಜಿನಪ್ಪ, ಎಸ್ಪಿ ಡಾ.ರೋಹಿಣಿ ಕಟೋಚ್‌ ಸೆಪಟ್‌, ಜಿಪಂ ಉಪ ಕಾರ್ಯದರ್ಶಿ ಲಕ್ಷ್ಮೀನಾರಾಯಣ್‌,

ಜಿಲ್ಲಾ ವಿಕಲಚೇತನರ ಕಲ್ಯಾಣಾಧಿಕಾರಿ ವೆಂಕಟರಾಮಪ್ಪ, ನಗರಸಭೆ ಸದಸ್ಯರಾದ ಕಾಶಿ ವಿಶ್ವನಾಥ್‌, ಸಲಾವುದ್ದೀನ್‌ಬಾಬು, ಪ್ರಸಾದ್‌ಬಾಬು, ರಮೇಶ್‌, ಕಾಂಗ್ರೆಸ್‌ ಮುಖಂಡರಾದ ಕುಮಾರ್‌, ರಾಜಣ್ಣ, ವಿದ್ಯಾಸಂಸ್ಥೆ ಕಾರ್ಯದರ್ಶಿ ಕೆ.ಎಸ್‌.ಶಂಕರ್‌ ಇತರರು ಹಾಜರಿದ್ದರು.


Trending videos

Back to Top