CONNECT WITH US  

ವಾಜಪೇಯಿ ಅಗಲಿಕೆಯಿಂದ ದೇಶ, ಪಕ್ಷಕ್ಕೆ ಅಪಾರ ನಷ್ಟ 

ಬಂಗಾರಪೇಟೆ: ವಿಶ್ವದ ಅಜಾತಶತ್ರು, ಭಾರತ ರತ್ನ ಹಾಗೂ ದೇಶದ ನಂ.1 ನಾಯಕರಾಗಿದ್ದ ಮಾಜಿ ಪ್ರಧಾನಿ ಅಟಲ್‌ ಬಿಹಾರಿ ವಾಜಪೇಯಿ ಅವರ ನಿಧನದಿಂದ ಇಡೀ ದೇಶಕ್ಕೆ ಹಾಗೂ ಬಿಜೆಪಿ ಪಕ್ಷಕ್ಕೆ ಅಪಾರ ನಷ್ಟ ಉಂಟಾಗಿದೆ. ಅವರ ಆತ್ಮಕ್ಕೆ ದೇವರು ಶಾಂತಿ ಕಲ್ಪಿಸಲಿ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಬಿ.ಪಿ.ವೆಂಕಟಮುನಿಯಪ್ಪ ಹೇಳಿದರು.

ಪಟ್ಟಣದ ಕುವೆಂಪು ವೃತ್ತದಲ್ಲಿ ಬಿಜೆಪಿ ಹಮ್ಮಿಕೊಂಡಿದ್ದ ಗುರುವಾರ ನಿಧನರಾದ ಮಾಜಿ ಪ್ರಧಾನಿ ಅಟಲ್‌ ಬಿಹಾರಿ ವಾಜಪೇಯಿ ಅವರ ಶ್ರದ್ದಾಂಜಲಿ ಸಭೆಯಲ್ಲಿ ಪುಷ್ಪ ನಮನ ಸಲ್ಲಿಸಿ ಮಾತನಾಡಿದರು.

ವಿಶ್ವದ ಅಗ್ರಗಣ್ಯ ನಾಯಕ: ದೇಶದ ಪ್ರಧಾನ ಮಂತ್ರಿಗಳಲ್ಲಿ ಅತ್ಯುತ್ತಮ ಆಡಳಿತ ನಡೆಸಿದವರಲ್ಲಿ ಅಟಲ್‌ ಬಿಹಾರಿ ವಾಜಪೇಯಿ ಅವರು ಮೊದಲಾದವರಾಗಿದ್ದಾರೆ. ವಿಶ್ವದ ಅಗ್ರಗಣ್ಯ ನಾಯಕರಲ್ಲಿ ವಾಜಪೇಯಿ ಅವರದು ಮಹತ್ತರ ಸ್ಥಾನವಿದೆ.  

ಪ್ರಧಾನಿಯಾಗಿದ್ದಾಗ ದೀನ ದಲಿತರು, ಬಡವರು ಸೇರಿದಂತೆ ಸಮಾಜದ ಎಲ್ಲಾ ವರ್ಗದ ಜನರಿಗೂ ಅನುಕೂಲವಾಗುವಂತೆ ಸರ್ಕಾರವನ್ನು ಮುನ್ನಡೆಸಿದ ಕೀರ್ತಿ ಪಡೆದಿದ್ದರಿಂದ 2014ರ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಅಧಿಕಾರಕ್ಕೆ ಬರಲು ಸಾಧ್ಯವಾಗಿತ್ತು ಎಂದು ಗುಣಗಾನ ಮಾಡಿದರು.

ಸೈನಿಕರ ಹುರಿದುಂಬಿಸುತ್ತಿದ್ದ ಪ್ರಧಾನಿ: ಪೋಕ್ರಾನ್‌ ಅಣು ಪರೀಕ್ಷೆ ಹಾಗೂ ಲಾಹೋರ್‌ ಬಸ್‌ನಲ್ಲಿ ಪ್ರಯಾಣ ಸೇರಿದಂತೆ ಹಲವಾರು ದಿಟ್ಟ ಕಾರ್ಯಕ್ರಮಗಳನ್ನು ಕೈಗೊಂಡಿದ್ದ ವಾಜಪೇಯಿ, ತಮ್ಮ ಅಧಿಕಾರಾವಧಿಯಲ್ಲಿ ದೇಶದ ಗಡಿ ಕಾಯುವ ಸೈನಿಕರ ಬಳಿ
ತೆರಳಿ ಹುರಿದುಂಬಿಸುತ್ತಿದ್ದರು. ನೆರೆಯ ಪಾಕಿಸ್ತಾನದವರೂ ವಾಜಪೇಯಿ ಅವರನ್ನು ಗೌರಸುತ್ತಿದ್ದರೆಂದು ಹೇಳಿದರು.

ವಾಜಪೇಯಿ ಅವರು ಪ್ರಧಾನಿಯಾಗಿದ್ದ ಸಂದರ್ಭದಲ್ಲಿ ದೇಶದಲ್ಲಿನ ಸುಮಾರು 18 ಸಾವಿರ ಕಿ.ಮೀ.ರಸ್ತೆಗಳನ್ನು ಅತ್ಯಾಧುನಿಕವಾಗಿ ಅಭಿವೃದ್ಧಿಪಡಿಸಿ, ಚಿಕ್ಕ ರಸ್ತೆಗಳನ್ನು ಮೇಲ್ದರ್ಜೆಗೇರಿಸಿದ್ದರಿಂದ ಕೋಲಾರದಿಂದ ಬೆಂಗಳೂರಿಗೆ ಕೇವಲ ಒಂದು ಗಂಟೆಯಲ್ಲಿ ಪ್ರಯಾಣಿಸುವಂತಾಗಿದೆ. ದೇಶದ ನೂರಾರು ಕೋಟಿ ಅಭಿಮಾನಿಗಳನ್ನು ಮರೆತು ಇಂದು ಕಣ್ಮರೆಯಾಗಿದ್ದಾರೆಂದು ನೋವು ತೋಡಿಕೊಂಡರು. 

ಅಟಲ್‌ ಆತ್ಮಕ್ಕೆ ಶಾಂತಿ ಸಿಗಲಿ: ಭಾರತರತ್ನ ವಾಜಪೇಯಿ ಅವರು ಎಲ್ಲರೂ ಮೆಚ್ಚುವ ರೀತಿಯ ಆಡಳಿತ ನೀಡುವ ಮೂಲಕ ಭಾರತದಲ್ಲಿ ಸಮ್ಮಿಶ್ರ ಸರ್ಕಾರ ನಡೆಸಬಹುದೆಂದು ತೋರಿಸಿಕೊಟ್ಟ ಮಹಾನ್‌ ಆಡಳಿತಗಾರರಾಗಿದ್ದರು. ದೇವರು ವಾಜಪೇಯಿ ಅವರಿಗೆ 94 ವರ್ಷಗಳ ಕಾಲ ಒಳ್ಳೆಯ ಆರೋಗ್ಯ, ಆಯಸ್ಸು ನೀಡಿದ್ದು, ಇನ್ನು ಮುಂದೆ ಅವರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಕೋರಿದರು.

ತಾಲೂಕು ಬಿಜೆಪಿ ಅಧ್ಯಕ್ಷ ಎ.ಹನುಮಪ್ಪ, ಮಾಜಿ ಸದಸ್ಯ ಬಿ.ಹೊಸರಾಯಪ್ಪ,  ಪುರಸಭೆ ಸದಸ್ಯ ಎಂಸಿಜೆ ವೇಲುಮುರುಗನ್‌, ಬಿ.ಸಿ.ಶ್ರೀನಿವಾಸಮೂರ್ತಿ, ಮಾಜಿ ಸದಸ್ಯ ಶಶಿಕುಮಾರ್‌, ಶಾಂತಿನಗರ ಮಂಜುನಾಥ್‌, ಭಜರಂಗದಳ ಮಹೇಶ್‌, ಲೋಕೇಶ್‌, ಯಲಬುರ್ಗಿ ಅರುಣ್‌, ಕುಮಾರ್‌ ಮುಂತಾದವರು ಹಾಜರಿದ್ದರು.

Trending videos

Back to Top