CONNECT WITH US  

ಸರ್ಕಾರಕ್ಕೆ ನೆರೆ-ಬರದ ಹಾನಿ ವರದಿ ಸಲ್ಲಿಕೆ

ನೆರೆ-ಬರಗಾಲಕ್ಕೂ ಕಣ್ಣೀರಿಟ್ಟ ಅನ್ನದಾತ, ಮುಂಗಾರು ಪೂರ್ವ ಮಳೆಗಳೇ ಎಡವಟ್ಟು

ಕೊಪ್ಪಳ: ಮಳೆಯಿಂದಾಗಿ ಹಾನಿಗೀಡಾದ ಪ್ರದೇಶ.

ಕೊಪ್ಪಳ: ಜಿಲ್ಲೆಯಲ್ಲಿ ಒಂದೆಡೆ ಬರದ ಛಾಯೆ ಆವರಿಸಿದ್ದರಿಂದ ಬೆಳೆ ಒಣಗಿದ್ದರೆ, ಇನ್ನೊಂದೆಡೆ ತುಂಗಭದ್ರಾ ನದಿಯ ನೀರು ಹೆಚ್ಚು ಹರಿ ಬಿಟ್ಟಿದ್ದಕ್ಕೆ ಭತ್ತವೂ ಹಾನಿಯಾಗಿದೆ. ಕೃಷಿ-ತೋಟಗಾರಿಕೆ ಇಲಾಖೆಯು ಪ್ರತ್ಯೇಕ ವರದಿ ಸಿದ್ಧಪಡಿಸಿ ಹಾನಿಯ ಪ್ರಮಾಣದ ವರದಿ ಸರ್ಕಾರಕ್ಕೆ ಸಲ್ಲಿಸಿವೆ. ಸರ್ಕಾರ ಬರಪೀಡಿತ ಎಂದು ಘೋಷಣೆ ಮಾಡುವುದೊಂದೆ ಬಾಕಿಯಿದೆ.

ಕೃಷಿ ಇಲಾಖೆಯ ಮಾಹಿತಿ ಪ್ರಕಾರ, ಜಿಲ್ಲೆಯು 16 ವರ್ಷಗಳಲ್ಲಿ ಬರೊಬ್ಬರಿ 11 ವರ್ಷ ಬರದ ಬಿಸಿ ಕಂಡಿದೆ. ಬರದ ಕೆನ್ನಾಲಿಗೆಗೆ ಬೆಂದಿರುವ ಜಿಲ್ಲೆಯ ರೈತ ಸಮೂಹ ಕೃಷಿಯಿಂದ ದೂರ ಸರಿಯುತ್ತಿದ್ದಾರೆ. ಹಲವು ಕುಟುಂಬಗಳು ಗುಳೆ ಹೊರಟಿವೆ. ಸರ್ಕಾರ ಮಾತ್ರ ಕಾಟಾಚಾರಕ್ಕೆ ಎಂಬಂತೆ ಉದ್ಯೋಗ ಖಾತ್ರಿ ಯೋಜನೆ ಆರಂಭಿಸಿ ಜನರ ಗುಳೆ ತಡೆದು ಕೆಲಸ ಕೊಟ್ಟಿದ್ದೇವೆ ಎಂದು ಬೀಗುತ್ತಿದೆ. ಆದರೆ ವಾಸ್ತವದಲ್ಲಿ ಜನರ ನೋವು ಸರ್ಕಾರಕ್ಕೆ ಅರ್ಥವಾಗಿಲ್ಲ.

ಈಗ ಮತ್ತೆ ಬರದ ಪರಿಸ್ಥಿತಿ ಆವರಿಸಿದೆ. ಜಿಲ್ಲೆಯಲ್ಲಿ ಮುಂಗಾರು ಪೂರ್ವ ಮಳೆಗಳ ಆರ್ಭಟಕ್ಕೆ ರೈತ ಸಮೂಹ ಖುಷಿಯಾಗಿತ್ತು. ಕೆಲವೆಡೆ ಭರ್ಜರಿಯಾಗಿ ಬಿತ್ತನೆ ಮಾಡಲಾಯಿತು. ಕೃಷಿ ಇಲಾಖೆ ಲೆಕ್ಕಾಚಾರದ ಪ್ರಕಾರ, 2,52,500 ಹೆಕ್ಟೇರ್‌ ಬಿತ್ತನೆ ಗುರಿ ಪೈಕಿ, 2,28,736 ಹೆಕ್ಟೇರ್‌ ಪ್ರದೇಶದಲ್ಲಿ ಬಿತ್ತನೆಯಾಗಿದೆ. 1,57,763 ಮಳೆ ಕೊರತೆಯಿಂದ ಹಾನಿಯಾದ ಪ್ರದೇಶ ಎಂದು ಗುರುತಿಸಿದೆ. ಇದರಲ್ಲಿ 1,39,804 ಹೆಕ್ಟೇರ್‌ ಶೇ.50ಕ್ಕಿಂತ ಹೆಚ್ಚು ಹಾನಿಗೀಡಾಗಿದೆ. ಇನ್ನು ತೋಟಗಾರಿಕೆ ಬೆಳೆ ಪೈಕಿ, 15,400 ಹೆಕ್ಟೇರ್‌ ಬಿತ್ತನೆ ಗುರಿ ಪೈಕಿ, 12,156 ಬಿತ್ತನೆಯಾಗಿದ್ದು, 5080 ಹೆಕ್ಟೇರ್‌ ಮಳೆ ಕೊರತೆಯಿಂದ ಹಾನಿಯಾಗಿದ್ದು, ಅದರಲ್ಲಿ 4,103 ಹೆಕ್ಟೇರ್‌ ಬೆಳೆಯೂ ಶೇ.50ಕ್ಕಿಂತ ಹೆಚ್ಚು ಬಾತವಾಗಿದೆ ಎಂದು ಸರ್ಕಾರಕ್ಕೆ ವರದಿ ಸಲ್ಲಿಸಿವೆ.

ಪ್ರಸಕ್ತ ವರ್ಷ ಮುಂಗಾರು ಪೂರ್ವ ಮಳೆಗಳ ಆರ್ಭಟಕ್ಕೆ ಜನರು ಖುಷಿಯಾಗಿದ್ದರು. ಆದರೆ ಜೂನ್‌ ಕೊನೆ ವಾರ ಜುಲೈ ತಿಂಗಳು ಸಂಪೂರ್ಣ ಮಳೆಗಳು ಕೈಕೊಟ್ಟಿದ್ದರಿಂದ ರೈತ ಕಣ್ಣೀರಿಡುವಂತಾಯಿತು. ಪೂರ್ವಜರು ಹೇಳುವ ಮಾತಿನಂತೆ, ಮುಂಗಾರು ಪೂರ್ವ ಮಳೆಗೆ ಬಿತ್ತನೆ ಮಾಡಬಾರದು. ಬೆಳೆಯ ಋತುಮಾನದಲ್ಲೂ ಏರಿಳತವಾಗಲಿದೆ ಎನ್ನುವುದು ಮತ್ತೆ ಸತ್ಯವಾದಂತಾಗಿದೆ.

ನೆರೆಯಿಂದಲೂ 770 ಹೆಕ್ಟೇರ್‌ ಹಾನಿ: ಕರಾವಳಿ ಭಾಗದಲ್ಲಿ ಸುರಿದ ಮಳೆಯಿಂದಾಗಿ ತುಂಗಭದ್ರಾ ಜಲಾಶಯ ಭರ್ತಿಯಾಗಿದೆ. ನೀರಿನ ಒಳ ಹರಿವು ಹೆಚ್ಚಾಗಿದ್ದರಿಂದ ನದಿ ಪಾತ್ರಗಳಿಗೆ ಅಧಿಕ ನೀರು ಹರಿ ಬಿಟ್ಟಿರುವ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿ ಗಂಗಾವತಿ ಭಾಗದಲ್ಲಿ ಅಧಿಕ ಪ್ರಮಾಣದಲ್ಲಿ ಬೆಳೆ ಹಾನಿಯಾಗಿದೆ. ಅಚ್ಚುಕಟ್ಟು ಪ್ರದೇಶದ 35,400 ಹೆಕ್ಟೇರ್‌ ಪೈಕಿ 30,220 ಹೆಕ್ಟೇರ್‌ ಬಿತ್ತನೆಯಾಗಿದ್ದು, 770 ಹೆಕ್ಟೇರ್‌ ಬೆಳೆ ಬಾತವಾಗಿದ್ದು, ಅದರಲ್ಲಿ 770 ಹೆಕ್ಟೇರ್‌ ನೆರೆಯಿಂದ ಶೇ.50ಕ್ಕಿಂತ ಹೆಚ್ಚು ಹಾನಿಯಾಗಿದೆ. ಇನ್ನೂ ಸರ್ಕಾರಿ ಭೂಮಿಯಲ್ಲಿ ಭತ್ತ ಬೆಳೆದಿರುವ ರೈತರು ಹೆಚ್ಚು ಹಾನಿ ಅನುಭವಿಸಿದ್ದಾರೆ.

ಸರ್ಕಾರದ ಮುಂದೆ ಮಂಡೆಯೂರುವ ಸ್ಥಿತಿ: ಬರದ ಪರಿಸ್ಥಿತಿಯಿಂದಾಗಿ ಜಿಲ್ಲೆಯ ರೈತರು ಮತ್ತೆ ಸರ್ಕಾರದ ಮುಂದೆ ಮಂಡೆಯೂರುವಂತ ಸ್ಥಿತಿ ಬಂದಿದೆ. ಜನರ ಕೈಗೆ ಪುಡಿಗಾಸು ನೀಡಿ ಕೈತೊಳೆದುಕೊಳ್ಳುತ್ತದೆ. ಆದರೆ, ಬರದ ಪರಿಸ್ಥಿತಿ ಕಡಿಮೆ ಮಾಡಲು ಈ ಭಾಗದಲ್ಲಿ ಸರ್ಕಾರ ಮಹತ್ವದ ಯೋಜನೆಗಳನ್ನು, ಕೃಷಿ ಅಭಿವೃದ್ಧಿಗಾಗಿ ಪರ್ಯಾಯ ಮಾರ್ಗಗಳನ್ನು ಅನುಷ್ಠಾನ ಮಾಡುತ್ತಿಲ್ಲ. ಹೀಗಾಗಿ ರೈತರಿಗೆ ಪದೇ-ಪದೇ ಬರದ ಮೇಲೆ ಬರದ ಬರೆ ಬೀಳುತ್ತಿದೆ.

ಕೃಷಿ ಇಲಾಖೆಯಲ್ಲಿ ಡ್ರೋನ್‌ ಇಲ್ಲ!
ಕಂದಾಯ ಸಚಿವ ಆರ್‌.ವಿ. ದೇಶಪಾಂಡೆ ಅವರು ಇತ್ತೀಚೆಗೆ ಕೊಪ್ಪಳ ಜಿಲ್ಲೆಯಲ್ಲಿನ ಬರದ ಸ್ಥಿತಿ ಅಧ್ಯಯನ ಮಾಡಲು ಆಗಮಿಸಿದ್ದರು. ಕೆಲವೇ ನಿಮಿಷ ಬರ ನೋಡಿ ಆ.29ರೊಳಗೆ ಬರದ ವರದಿ ಕೊಡಿ ಎಂದು ಇಲಾಖೆಯ ಅ ಧಿಕಾರಿಗಳಿಗೆ ಸೂಚನೆ ನೀಡಿದ್ದರು. ಈ ಬಾರಿ ಡ್ರೋನ್‌ ಮೂಲಕ ಬೆಳೆ ಹಾನಿಯ ಕುರಿತು ವರದಿ ಸಿದ್ಧಪಡಿಸುವಂತೆ ಸೂಚನೆಯನ್ನೂ ನೀಡಿದ್ದರು. ಆದರೆ ಕೃಷಿ ಇಲಾಖೆಯಲ್ಲಿ ಡ್ರೋನ್‌ಗಳೇ ಇಲ್ಲ. ಬೆಂಗಳೂರಿನಿಂದ ತರಿಸಿ ಬೆಳೆ ಹಾನಿಯ ಕುರಿತು ಡಾಕ್ಯುಮೆಂಟರಿ ಮಾಡಿಸುವ ಕುರಿತು ಇನ್ನೂ ಇಲಾಖೆ ಅಧಿಕಾರಿಗಳು ಹೇಳುತ್ತಿದ್ದಾರೆ.

ಜಿಲ್ಲೆಯಲ್ಲಿ ಮಳೆಯ ಕೊರತೆಯಿಂದ ಹಾಗೂ ನೆರೆ ಹಾವಳಿಯಿಂದ ಹಾನಿಗೀಡಾದ ಪ್ರದೇಶದ ಕುರಿತು ಸರ್ವೇ ನಡೆಸಿ ಸರ್ಕಾರಕ್ಕೆ ವರದಿ ಸಲ್ಲಿಸಿದ್ದೇವೆ. ಇನ್ನೂ ಸಚಿವರು ಡ್ರೋನ್‌ ಮೂಲಕ ಸರ್ವೆ ನಡೆಸಿ ಡಾಕ್ಯುಮೆಂಟರಿ ಸಿದ್ಧಪಡಿಸಿ ಸಲ್ಲಿಸುವಂತೆ ಸೂಚನೆ ನೀಡಿದ್ದರು. ಆದರೆ ನಮ್ಮಲ್ಲಿ ಡ್ರೋನ್‌ ಇಲ್ಲ. ಬೆಂಗಳೂರಿನಿಂದ ತರಿಸಿ ಶೀಘ್ರದಲ್ಲಿ ಆಯ್ದ ಕೆಲವು ಭಾಗಗಳಲ್ಲಿ ಸರ್ವೇ ನಡೆಸಿ ವಿಡೀಯೋಗ್ರಾಫಿ ವರದಿ ಸಲ್ಲಿಸಲಾಗುವುದು.
 ಹೊನ್ನಮಪ್ಪಗೌಡ,
 ಜಂಟಿ ಕೃಷಿ ನಿರ್ದೇಶಕ, ಕೊಪ್ಪಳ


Trending videos

Back to Top