CONNECT WITH US  

ಕೊಪ್ಪಳ ನಗರಸಭೆಯಲ್ಲಿ ಕುಣಿದ ಕುರುಡು ಕಾಂಚಾಣ?

ಅಭ್ಯರ್ಥಿಗಳಿಂದ ಮತದಾರನಿಗೆ ಆಮಿಷ -ಕ್ಯಾಮರಾ ನೋಡಿ ಓಡಿದ ಮಧ್ಯವರ್ತಿಗಳು

ಕೊಪ್ಪಳ: ನಗರದ 26ನೇ ವಾರ್ಡಿನಲ್ಲಿ ಕ್ಯಾಮರಾ ಕಂಡು ಪಲಾಯನ ಮಾಡಿದ ಜನರು.

ಕೊಪ್ಪಳ: ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆ ಭರ್ಜರಿ ರಂಗೇರಿದ್ದು, ಮತದಾನಕ್ಕೆ ಕ್ಷಣಗಣನೆ ಶುರುವಾಗಿದೆ. ಅಭ್ಯರ್ಥಿಗಳ ಮಧ್ಯೆ ಕುರುಡು ಕಾಂಚಾಣ ಕುಣಿದಾಡುತ್ತಿದೆ ಎನ್ನುವ ಆಪಾದನೆ ಕೇಳಿ ಬಂದಿದೆ. ನಗರದ 26ನೇ ವಾರ್ಡ್‌ನ ಪಕ್ಷೇತರ ಅಭ್ಯರ್ಥಿ ಜನರನ್ನು ಗುಂಪು ಗುಂಪಾಗಿ ನಿಲ್ಲಿಸಿಕೊಂಡು ಗುಸುಗುಸು ಚರ್ಚೆ ನಡೆಸಿದ್ದು, ಕ್ಯಾಮರಾ, ಪೊಲೀಸರು ಕಣ್ಣಿಗೆ ಬೀಳುತ್ತಿದ್ದಂತೆ ದಿಕ್ಕಾಪಾಲಾಗಿ ಓಡಾಡಿದ ಪ್ರಸಂಗ ಗುರುವಾರ ನಡೆದಿದೆ.

ಸ್ಥಳೀಯ ಚುನಾವಣೆಗಳು ಮುಂದೆ ಲೋಕಸಭಾ ಚುನಾವಣೆಗೆ ತಳಪಾಯವಾಗಲಿವೆ ಎಂದು ಅರಿತ ಶಾಸಕ ಹಾಗೂ ಸಂಸದರು ಪ್ರತಿಷ್ಠೆಯನ್ನಾಗಿ ತಗೆದುಕೊಂಡಿದ್ದಾರೆ. ಅದರಲ್ಲೂ ಕೊಪ್ಪಳ ನಗರಸಭೆ ಕೈ ವಶ ಮಾಡಿಕೊಳ್ಳಬೇಕೆಂದು ಪಣ ತೊಟ್ಟಿದ್ದ ಶಾಸಕ ರಾಘವೇಂದ್ರ ಹಿಟ್ನಾಳ ವಾರ್ಡ್‌, ವಾರ್ಡ್‌ನಲ್ಲೂ ಸುತ್ತಾಟ ನಡೆಸಿ ಮತ ಕೇಳಿದ್ದರು. ಕೈ ಅಭಿವೃದ್ಧಿ ನೋಡಿ ಬೆಂಬಲಿಸಿ ಎಂದಿದ್ದರು. ಶಾಸಕರಾಗಿದ್ದೂ ನಗರಸಭೆಯಲ್ಲಿ ಅಧಿಕಾರ ಕಳೆದುಕೊಂಡರೆ ಆಡಳಿತ ಪಕ್ಷಕ್ಕೆ ಮುಜುಗುರ ಉಂಟಾಗಲಿದೆ ಎನ್ನುವುದನ್ನು ಅರಿತು ತಾವೇ ಚುನಾವಣೆಗೆ ನಿಂತವರಂತೆ ಭರ್ಜರಿ ಯೋಜನೆ ಹಾಕಿ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದ್ದಾರೆ.

ಇನ್ನೂ ಮುಂದೆ ಲೋಕಸಭೆ ಚುನಾವಣೆ ನಡೆಯುವ ಹಿನ್ನೆಲೆಯಲ್ಲಿ ಸಂಸದ ಸಂಗಣ್ಣ ಕರಡಿ ಅವರಂತೂ ಪ್ರತಿ ವಾರ್ಡ್‌ನಲ್ಲೂ ಸುತ್ತಾಟ ನಡೆಸಿ ಪಕ್ಕಾ ಅಭ್ಯರ್ಥಿಗಳನ್ನು ಹುಡುಕಿ ಕಣಕ್ಕಿಳಿಸಿದ್ದು ಬಿಜೆಪಿ ಬಾವುಟ ಹಾರಿಸಲೇಬೇಕೆಂದು ಶಪಥ ಮಾಡಿದ್ದಾರೆ. ಉಳಿದಂತೆ ಗಂಗಾವತಿ, ಕುಷ್ಟಗಿ ಹಾಗೂ ಯಲಬುರ್ಗಾದಲ್ಲೂ ಕೈ-ಕಮಲವೇ ನೇರ ಹಣಾಹಣಿಯಲ್ಲಿವೆ. ಈ ಎಲ್ಲ ಅಭ್ಯರ್ಥಿಗಳ ಸುತ್ತಲೂ ಮಧ್ಯವರ್ತಿಗಳ ಮೂಲಕ ಕುರುಡ ಕಾಂಚಾಣ ಕುಣಿಯುತ್ತಿದೆ ಎನ್ನುವ ಆಪಾದನೆ ಜೋರಾಗಿ ಕೇಳಿ ಬಂದಿದೆ. 

ಅದರಲ್ಲೂ ಕೊಪ್ಪಳದಲ್ಲಿ ಪಕ್ಷೇತರ ಅಭ್ಯರ್ಥಿ ಲಲಿತಾ ಮಾಲಗಿತ್ತಿ ಅವರು 26ನೇ ವಾರ್ಡ್‌ನಲ್ಲಿ ಮತದಾರರನ್ನು ಸೆಳೆಯಲು ಗುರುವಾರ ನಾನಾ ಪ್ರಯತ್ನ ನಡೆಸಿದ್ದಾರೆ ಎನ್ನುವ ಮಾಹಿತಿ ದೊರೆತ ಬೆನ್ನಲ್ಲೇ ಪೊಲೀಸರು ದಿಢೀರ್‌ ಭೇಟಿ ನೀಡಿದರು. ಜೊತೆಗೆ ಮಾಧ್ಯಮಗಳ ಕಣ್ಣು ಅತ್ತ ಬೀಳುತ್ತಿದ್ದಂತೆ ವಾಹನದಲ್ಲಿ ಅಭ್ಯರ್ಥಿಗಳ ಬೆಂಬಲಿಗರು ಪಲಾಯನ ಮಾಡಿದರು. ಇನ್ನೂ ಮಹಿಳೆಯರ ಹೆಸರು ಪಟ್ಟಿ ಮಾಡುತ್ತಿದ್ದು ಕ್ಯಾಮರಾದಲ್ಲಿ ಸೆರೆಯಾಯಿತು. ಅಲ್ಲದೇ, ಕ್ಯಾಮರಾ ಕಂಡ ತಕ್ಷಣ ಟಾಟಾ ಏಸ್‌ ವಾಹನ ಏರಿ ಕಾಲ್ಕಿತ್ತರು.

ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಅಭ್ಯರ್ಥಿಗಳು ಮಕ್ಕಳನ್ನು ಬಳಕೆ ಮಾಡಿಕೊಂಡು ಪ್ರಚಾರ ನಡೆಸಿದ್ದರೂ ಚುನಾವಣಾ ವೀಕ್ಷಕರು, ಅಧಿಕಾರಿಗಳು ಜಾಣ ಕುರುಡುತನ ಪ್ರದರ್ಶಿಸಿದರು. ಕೆಲ ವಾರ್ಡ್‌ನಲ್ಲಿ ಮಾತ್ರ ನಿಗಾ ವಹಿಸಿದ್ದ ಅಧಿಕಾರಿಗಳ ತಂಡ ಬೆರಳೆಣಿಕೆಯಷ್ಟು ಪ್ರಕರಣ ದಾಖಲಿಸಿ ಜಾರಿಕೊಂಡಿದ್ದು ಕಂಡು ಬಂದಿತು.


Trending videos

Back to Top