CONNECT WITH US  

ಕಳ್ಳ ಮತದಾನದ ಸುದ್ದಿ  ಸದ್ದು

ಕೊಪ್ಪಳ: ಜಿಲ್ಲೆಯಲ್ಲಿ ನಡೆದ ನಗರ, ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಕಳ್ಳ ಮತದಾನದ ಸುದ್ದಿ ಎಲ್ಲೆಡೆ ಭರ್ಜರಿ ಸುದ್ದಿಯಾಗಿದೆ. ಹಳ್ಳಿಯಲ್ಲಿ ವಾಸ ಮಾಡುವ ಜನರ ಮತಗಳು ನಗರ ಪ್ರದೇಶದ ಮತಪಟ್ಟಿಯಲ್ಲಿವೆ ಎನ್ನುವ ಗುಮಾನಿ ಜೋರಾಗಿ ಕೇಳಿ ಬಂದಿದೆ. ಜಿಲ್ಲಾಡಳಿತವು ಈ ಬಗ್ಗೆ ಪ್ರಾಮಾಣಿಕವಾಗಿ ತನಿಖೆ ಮಾಡಿಸಿದರೆ ಎಲ್ಲವೂ ಬಯಲಿಗೆ ಬರಲಿದೆ.

ಹೌದು.. ನಗರ, ಸ್ಥಳೀಯ ಸಂಸ್ಥೆಗಳ ಚುನಾವಣೆ ಘೋಷಣೆಯಾಗುವ ಮುನ್ನ ಸದ್ದು ಮಾಡದ ಕಳ್ಳ ಮತದಾನದ ಸುದ್ದಿ ಚುನಾವಣೆ ಘೋಷಣೆಯಾದ ಬಳಿಕ ಜೋರಾಗಿ ಕೇಳಿ ಬಂದಿದೆ. ಅದರಲ್ಲೂ ನಗರದ 3ನೇ ವಾರ್ಡ್‌ನಲ್ಲಿ ಕಾಂಗ್ರೆಸ್‌ ಅಭ್ಯರ್ಥಿ ಅಮ್ಜದ್‌ ಪಟೇಲ್‌ ಅವರು ಹಳ್ಳಿ ಜನರನ್ನು ಕರೆ ತಂದು ಮತದಾನ ಮಾಡಿಸುತ್ತಿದ್ದಾರೆ ಎಂದು ಬಿಜೆಪಿ ಹಾಗೂ ಜೆಡಿಎಸ್‌ ಮುಖಂಡರು ಆರೋಪ ಮಾಡಿದ್ದಾರೆ. ಬೇಕಿದ್ದರೆ, ಕೆಲವು ಹಳ್ಳಿಗಳ ಮತಪಟ್ಟಿ ಹಾಗೂ ಆಯಾ ವಾರ್ಡ್ನಲ್ಲಿನ ಮತದಾರರ ಮತಪಟ್ಟಿ ಪರಿಶೀಲನೆ ಮಾಡಿದರೆ, ಮತದಾರರ ಹೆಸರು ಎರಡೂ ಕಡೆ ಇವೆ. ಇಂತಹ ಕೆಲವು ಪ್ರಕರಣಗಳು ಬೆಳಕಿಗೆ ಬಂದಿವೆ ಎಂದು ಆರೋಪಿಸಿದ ಬಳಿಕ ಕಳ್ಳ ಮತದಾನದ ಸುದ್ದಿಗೆ ಮತ್ತಷ್ಟು ಮಹತ್ವ ಬಂದಿದೆ.

ನಗರ ಪ್ರದೇಶದ ಕೊನೆ ಭಾಗದ ವಾರ್ಡ್‌ಗಳಲ್ಲಿ ಗೌಪ್ಯವಾಗಿ ಕೆಲವು ರಾಜಕಾರಣಿಗಳು ತಮಗೆ ಬೇಕಾದ ಹಾಗೂ ಆಪ್ತರಾಗಿರುವ ಹಳ್ಳಿಗಳಲ್ಲಿನ ಜನರ ಹೆಸರನ್ನು ನಗರ ಪ್ರದೇಶಗಳಲ್ಲಿ ತಮಗೆ ಬೇಕಾದ ವಾರ್ಡ್‌ಗಳಲ್ಲಿ ಸೇರ್ಪಡೆ ಮಾಡಿಸಿದ್ದಾರೆ ಎನ್ನಲಾಗುತ್ತಿದೆ. ವಿಧಾನಸಭಾ ಚುನಾವಣೆ ಸಂದರ್ಭದಲ್ಲಿ ಮಾತ್ರ ಒಂದೇ ಕಡೆ ಮತದಾನ ಮಾಡುವ ಅಂತಹ ಮತದಾರರು, ನಗರ, ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಆಯಾ ವಾರ್ಡ್‌ಗಳಲ್ಲಿ ಅವರಿಗೆ ಬೇಕಾದ ಅಭ್ಯರ್ಥಿಗೆ ಮತದಾನ ಮಾಡುತ್ತಿದ್ದಾರೆಂದು ಆರೋಪ ಜೋರಾಗಿದೆ. ಅಲ್ಲದೇ, ಅಂತಹ ಮತದಾರರ ಹೆಸರು ಪಟ್ಟಿ ಮಾಡಿಕೊಂಡಿರುವ ಕೆಲವು ಅಭ್ಯರ್ಥಿಗಳು ಅವಶ್ಯವಿದ್ದಾಗ ಹಳ್ಳಿಗಳಿಂದ ಕರೆ ತಂದು ಮತದಾನ ಮಾಡಿಸುತ್ತಿದ್ದಾರೆ ಎನ್ನುವ ಮಾತು ಕೇಳಿ ಬಂದಿದೆ.

ಇನ್ನೂ ಕೆಲವು ನಿವಾಸಿಗಳು, ನಗರ ಪ್ರದೇಶದಿಂದ ಹಳ್ಳಿಗಳತ್ತ ಮುಖ ಅಲ್ಲಿಯೇ ವಾಸ ಮಾಡುತ್ತಿದ್ದು, ಆದರೆ ಅವರ ಹೆಸರು ಇನ್ನೂ ನಗರ ಪ್ರದೇಶಗಳಲ್ಲಿ ಮತಪಟ್ಟಿಯಲ್ಲಿವೆ. ಅಚ್ಚರಿಯಂದರೆ, ಅಂತಹ ಜನರು ಗ್ರಾಮೀಣ ಪ್ರದೇಶದಲ್ಲಿಯೂ ಮತಪಟ್ಟಿಯಲ್ಲಿ ಹೆಸರು ಸೇರ್ಪಡೆ ಮಾಡಿಸಿದ್ದು, ಎರಡೆರೆಡು ಚುನಾವಣಾ ಗುರುತಿನ ಚೀಟಿ ಹೊಂದಿದ್ದಾರೆ. ಒಂದಕ್ಕೆ ಮಾತ್ರ ಆಧಾರ್‌ ಕಾರ್ಡ್‌ ನಂಬರ್‌ ಲಿಂಕ್‌ ಮಾಡಿಸಿದ್ದಾರೆ. ಇನ್ನೊಂದನ್ನು ಕೇವಲ ಚುನಾವಣೆ ಬಂದಾಗ ಮಾತ್ರ ಬಳಕೆ ಮಾಡಿಕೊಳ್ಳುತ್ತಿದ್ದಾರೆ ಎನ್ನುವ ಚರ್ಚೆ ನಡೆದಿದೆ.

ಎಲ್ಲವೂ ನಿಷ್ಪಕ್ಷಪಾತ ತನಿಖೆಯಾಗಬೇಕಿದೆ: ಮತದಾರರ ಗುರುತಿನ ಕಾರ್ಡ್‌ ವಿತರಣೆ ಮಾಡುವ ಮುನ್ನ ಚುನಾವಣಾಧಿಕಾರಿಗಳು ಬೇರೆಕಡೆ ಮತಪಟ್ಟಿಯಲ್ಲಿ ಹೆಸರು ಇರುವ ಬಗ್ಗೆ ಗಂಭೀರವಾಗಿ ಪರಿಶೀಲನೆ ನಡೆಸುತ್ತಿಲ್ಲ. ಅಧಿಕಾರಿಗಳ ನಿರ್ಲಕ್ಷ್ಯದಿಂದ ಹೀಗೆಲ್ಲ ನಡೆಯುತ್ತಿವೆ ಎಂದು ಪ್ರಜ್ಞಾವಂತರು ಬೇಸರ ವ್ಯಕ್ತಪಡಿಸುತ್ತಿದ್ದಾರೆ. ಡಬಲ್‌ ಡಬಲ್‌ ಮತದಾರರ ಗುರುತಿನ ಚೀಟಿ ಇರುವ ದೂರು ಅಲ್ಲಲ್ಲಿ ಕೇಳಿ ಬಂದಿದ್ದು, ಕೊಪ್ಪಳ ಜಿಲ್ಲಾಡಳಿತ ಹಾಗೂ ಚುನಾವಣಾ ವಿಭಾಗವು ನಿಷ್ಪಕ್ಷಪಾತವಾಗಿ ತನಿಖೆ ಮಾಡಿಸಬೇಕಿದೆ. ಎಲ್ಲವೂ ಪರಿಶೀಲನೆ ನಡೆಸಿದಾಗ ಸತ್ಯ ಹೊರ ಬರಲಿದೆ.

ಹಳ್ಳಿಯ ಜನರ ಹೆಸರನ್ನು ನಗರ ಪ್ರದೇಶದ ಮತಪಟ್ಟಿಯಲ್ಲಿ ಸೇರ್ಪಡೆ ಮಾಡಲಾಗಿದೆ ಎನ್ನುವ ಕುರಿತು ನಾವು ಜಿಲ್ಲಾಡಳಿತಕ್ಕೆ ಒಂದು ತಿಂಗಳ ಹಿಂದೆಯೇ ದೂರು ನೀಡಿದ್ದೇವೆ. ಆದರೆ ಜಿಲ್ಲಾಡಳಿತ ಈ ಬಗ್ಗೆ ಗಂಭೀರವಾಗಿ ಪರಿಗಣಿಸಿಲ್ಲ. ಕೂಡಲೇ ಈ ಬಗ್ಗೆ ಪರಿಶೀಲನೆ ನಡೆಸಬೇಕಿದೆ.
 ನೂರಬಾಷಾ, ನಗರ ನಿವಾಸಿ

ನಾವು ಮತಪಟ್ಟಿ ಪರಿಷ್ಕರಣೆ ಮಾಡಿ ಅಂತಿಮ ಪಟ್ಟಿಯನ್ನು ಪ್ರಕಟಿಸುವ ಮುನ್ನ ಆಕ್ಷೇಪಣೆ ಆಹ್ವಾನ ಮಾಡಿರುತ್ತೇವೆ. ಆಗ ಜನರು ಅಂತಹ ದೂರುಗಳಿದ್ದರೆ ಸಲ್ಲಿಸಬೇಕು. ಆಗ ಯಾರೂ ದೂರು ಸಲ್ಲಿಸುವುದಿಲ್ಲ. ಈಗ ಮತದಾನದ ಸಂದರ್ಭದಲ್ಲಿ ಜನರು ಆರೋಪಿಸುತ್ತಾರೆ. ಅಂತಹ ಅನುಮಾನವಿದ್ದರೆ ನಮಗೆ ದಾಖಲೆಗಳ ಸಮೇತ ದೂರು ಕೊಡಲಿ ತನಿಖೆ ಮಾಡಿಸಿ ತಪ್ಪಿಸ್ಥರ ಮೇಲೆ ಕ್ರಮ ಕೈಗೊಳ್ಳುವೆನು.
 ಪಿ. ಸುನೀಲಕುಮಾರ, ಕೊಪ್ಪಳ ಜಿಲ್ಲಾಧಿಕಾರಿ.

ದತ್ತು ಕಮ್ಮಾರ

Trending videos

Back to Top