CONNECT WITH US  

100 ಕೋಟಿ ಪ್ಯಾಕೇಜ್‌ಗೆ ಕೇಂದ್ರಕ್ಕೆ ಪ್ರಸ್ತಾವನೆ 

ಕೊಪ್ಪಳ: ಜಿಲ್ಲೆಯ ಏಳು ತಾಲೂಕಿನಲ್ಲಿ ಬರದ ಪರಿಸ್ಥಿತಿ ಗಂಭೀರವಾಗಿದೆ. ಬೆಳೆ ಹಾನಿಗೆ ಜಿಲ್ಲೆಗೆ 100 ಕೋಟಿ ರೂ. ಪ್ಯಾಕೇಜ್‌ ಘೋಷಿಸುವಂತೆ ಕೇಂದ್ರ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದ್ದೇವೆ ಎಂದು ಅರಣ್ಯ ಸಚಿವ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಆರ್‌. ಶಂಕರ್‌ ಹೇಳಿದರು. ತಾಲೂಕಿನ ವಣ ಬಳ್ಳಾರಿ ಸೇರಿದಂತೆ ವಿವಿಧೆಡೆ ಶನಿವಾರ ಮಳೆಯ ಕೊರತೆಯಿಂದ ಹಾನಿಯಾದ ಬೆಳೆ ವೀಕ್ಷಿಸಿ ಅವರು ಮಾತನಾಡಿದರು.

ರಾಜ್ಯದ ಕೆಲವು ಜಿಲ್ಲೆಗಳಲ್ಲಿ ಬರದ ಪರಿಸ್ಥಿತಿಯಿದೆ. ಮಳೆಯ ಕೊರತೆಯಿಂದ ಬೆಳೆ ಸಂಪೂರ್ಣ ಹಾನಿಯಾಗಿದೆ. ಸರ್ಕಾರವೂ ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿದೆ. ಕಂದಾಯ ಸಚಿವ ಆರ್‌.ವಿ. ದೇಶಪಾಂಡೆ ಅವರೇ ಜಿಲ್ಲೆಯಲ್ಲಿ ಬರ ಅಧ್ಯಯನ ಮಾಡಿದ್ದಾರೆ. ಹಾನಿಯ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಿದ್ದೇವೆ. ಮುಂದಿನ ಸಚಿವ ಸಂಪುಟದೊಳಗೆ ಬರ ಪೀಡಿತ ಜಿಲ್ಲೆಗಳನ್ನು ಸರ್ಕಾರ ಶೀಘ್ರದಲ್ಲೇ ಘೋಷಿಸಲಿದೆ ಎಂದರು.

ಸಸಿ ಬೆಳೆಸಿ: ಸತತ ಬರದ ಪರಿಸ್ಥಿತಿ ತಪ್ಪಿಸಲು ರೈತರೇ ಜಾಗೃತಿ ಹೊಂದಬೇಕಿದೆ. ಜಿಲ್ಲಾದ್ಯಂತ ಶಾಶ್ವತ ಬರ ನಿವಾರಣೆಗೆ ಸಸಿ ನೆಡಬೇಕಿದೆ.. ಆಗ ಮಾತ್ರ ಶಾಶ್ವತ ಬರ ನಿವಾರಣೆ ಮಾಡಲು ಸಾಧ್ಯವಿದೆ. ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ರೈತರು ಮತ್ತಷ್ಟು ಕಷ್ಟ ಎದುರಿಸಬೇಕಾಗುತ್ತದೆ.ಅರಣ್ಯ ಇಲಾಖೆಯಿಂದ ರಿಯಾಯ್ತಿ ದರದಲ್ಲಿ ಸಸಿ ವಿತರಿಸಲಿದ್ದೇವೆ. ರೈತರು ಅವುಗಳನ್ನು ನೆಟ್ಟು ಬೆಳೆಸಬೇಕೆಂದರು.

ಅಭಿವೃದ್ಧಿಗೆ ಇನ್ಮುಂದೆ ವೇಗ: ಜಿಲ್ಲೆಯಲ್ಲಿ ಸ್ಥಳೀಯ ಸಂಸ್ಥೆಗಳ ಚುನಾವಣೆ ಕಾರ್ಯಗಳು ನಡೆದಿರುವುದರಿಂದ ಅಭಿವೃದ್ಧಿ ಕೆಲಸಗಳಲ್ಲಿ ವಿಳಂಬವಾಗುತ್ತಿದೆ. ಚುನಾವಣೆ ಮುಗಿದ ಬಳಿಕ ವೇಗ ಪಡೆಯಲಿವೆ. ಜಿಲ್ಲೆಯಲ್ಲಿ ಹಲವು ಅಧಿಕಾರಿಗಳ ಹುದ್ದೆಗಳು ಖಾಲಿಯಿದ್ದು, ಕೆಲವು ಪ್ರಭಾರಿಗಳು ಇರುವ ಬಗ್ಗೆ ಮಾಹಿತಿ ಬಂದಿದ್ದು, ಅದೆಲ್ಲವನ್ನು ಸರಿದೂಗಿಸಲಿದ್ದೇವೆ ಎಂದರು.

ಕರಡಿಧಾಮ ನಿರ್ಮಾಣಕ್ಕೆ ಒತ್ತು: ಜಿಲ್ಲೆಯಲ್ಲಿ ಕರಡಿಗಳು ಹೆಚ್ಚಿವೆ ಎನ್ನುವ ಮಾಹಿತಿಯಿದ್ದು, ನಮ್ಮ ಇಲಾಖೆ ಅಧಿಕಾರಿಗಳ ಜೊತೆ ಚರ್ಚಿಸಿ ಅವಶ್ಯವಿದ್ದರೆ ಕರಡಿ ಧಾಮ ನಿರ್ಮಾಣಕ್ಕೆ ಒತ್ತು ನೀಡಲಿದ್ದೇವೆ. ಜಿಂಕೆ ವನ ನಿರ್ಮಾಣಕ್ಕೂ ಪ್ರಸ್ತಾವನೆ ಮುಂದಿದ್ದು, ಈ ಬಗ್ಗೆ ಪರಿಶೀಲಿಸಲಿದ್ದೇವೆ. ನರಿಗಳನ್ನು ಬೇಟೆಯಾಡಲಾಗುತ್ತಿದೆ ಎನ್ನುವ ದೂರುಗಳು ಬಂದಿದ್ದು, ಅಂತಹ ವ್ಯಕ್ತಿಗಳ ಮೇಲೆ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದರು. 

ಅವಶ್ಯವಿದ್ದರೆ ಮರು ಮತದಾನ: ಕೊಪ್ಪಳದ 3ನೇ ವಾರ್ಡ್ ನಲ್ಲಿ ಮತದಾನ ವೇಳೆ ಗಲಾಟೆ ನಡೆದಿದೆ. ಚುನಾವಣೆ ಸಂದರ್ಭದಲ್ಲಿ ಇಂತಹ ಬೆಳವಣಿಗೆ ಬೆಳಕಿಗೆ ಬರುವುದು ಸಹಜ. ಎರಡು ಕಡೆ ಮತಪಟ್ಟಿಗಳಲ್ಲಿ ಹೆಸರಿದ್ದರೆ ಅವುಗಳ ಬಗ್ಗೆ ಆಯೋಗ ಪರಿಶೀಲಿಸಲಿದೆ. ಅಲ್ಲಿನ ಜನರು ಮರು ಮತದಾನಕ್ಕೆ ಒತ್ತಾಯಿಸಿದರೆ, ಅಂತಹ ಅಗತ್ಯವಿದ್ದರೆ ಮರು ಮತದಾನಕ್ಕೆ ನನ್ನ ಬೆಂಬಲವಿದೆ. ಹಾವೇರಿಯಲ್ಲಿ ಬಿಜೆಪಿ-ಕಾಂಗ್ರೆಸ್‌ ಕಾರ್ಯಕರ್ತರ ನಡುವೆ ಗಲಾಟೆ ನಡೆದಿದೆ. ವ್ಯಕ್ತಿಯೋರ್ವನಿಗೆ ಗಾಯವಾಗಿದೆ ತಪ್ಪಿಸ್ಥ ಅಧಿಕಾರಿಗಳ ಮೇಲೆ ಶಿಸ್ತು ಕ್ರಮಕ್ಕೆ ಸೂಚಿಸಿದ್ದೇನೆ ಎಂದರು. ಸಂಸದ ಸಂಗಣ್ಣ ಕರಡಿ, ಶಾಸಕರಾದ ಪರಣ್ಣ ಮುನವಳ್ಳಿ, ಬಸವರಾಜ ದಡೆಸೋಗೂರು, ಜಿಪಂ ಸದಸ್ಯರಾದ ರಾಮಣ್ಣ ಚೌಡ್ಕಿ, ಗವಿಸಿದ್ದಪ್ಪ ಕರಡಿ ಸೇರಿದಂತೆ ಕೃಷಿ ಇಲಾಖೆ ಅಧಿಕಾರಿಗಳು, ರೈತರು ಇದ್ದರು.

ಜಿಲ್ಲೆಯಲ್ಲಿ ಜಿಂಕೆ ಹಾವಳಿಯ ಮಾಹಿತಿ ನನ್ನ ಗಮನಕ್ಕೆ ಬಂದಿದೆ. ಜಿಂಕೆ ವನ ನಿರ್ಮಾಣಕ್ಕೂ ಒತ್ತಾಯಿಸಲಾಗುತ್ತಿದೆ. ಆ ಪ್ರಸ್ತಾವನೆ ಪರಿಶೀಲಿಸಲಿದ್ದು, ರೈತರಿಗೆ ಜಿಂಕೆಗಳಿಂದಾಗುವ ಹಾನಿ ತಪ್ಪಿಸಲು ತಂತಿ ಬೇಲಿ ನಿರ್ಮಾಣಕ್ಕೆ ಶೇ. 50 ಸಹಾಯಧನ ನೀಡಲಾಗುವುದು.
. ಆರ್‌. ಶಂಕರ್‌, ಅರಣ್ಯ ಸಚಿವರು.

Trending videos

Back to Top