CONNECT WITH US  

ಜೆಡಿಎಸ್‌ ಎದುರು ಮಂಡಿಯೂರಿದ ಕಾಂಗ್ರೆಸ್‌: ಸಂಸದೆ ಶೋಭಾ

ಕುಂದಾಪುರ ಬಿಜೆಪಿ ಕಾರ್ಯಕರ್ತರಿಗೆ ಕೃತಜ್ಞತಾ ಸಮಾರಂಭ

ಸಮಾರಂಭವನ್ನು ಉದ್ದೇಶಿಸಿ ಸಂಸದೆ ಶೋಭಾ ಕರಂದ್ಲಾಜೆ ಮಾತನಾಡಿದರು.

ಕೋಟೇಶ್ವರ: ರಾಷ್ಟ್ರೀಯ ಪಕ್ಷವಾದ ಕಾಂಗ್ರೆಸ್‌ ರಾಜ್ಯದಲ್ಲಿ ಜನಾದೇಶವಿಲ್ಲದ ಜೆಡಿಎಸ್‌ ಜತೆಗೆ ಅಪವಿತ್ರ ಮೈತ್ರಿ ಮಾಡಿಕೊಂಡು ಮಂಡಿಯೂರಿ ನಿಲ್ಲುವ ಪರಿಸ್ಥಿತಿಯಲ್ಲಿದೆ ಎಂದು ಸಂಸದೆ ಶೋಭಾ ಕರಂದ್ಲಾಜೆ ಟೀಕಿಸಿದರು. ಅವರು ಕೋಟೇಶ್ವರದ ಸಹನಾ ಕನ್ವೆನ್ಶನ್‌ ಸೆಂಟರ್‌ನಲ್ಲಿ ರವಿವಾರ ಸಂಜೆ ನಡೆದ ಕುಂದಾಪುರ ವಿಧಾನಸಭಾ ಕ್ಷೇತ್ರದ ಬಿಜೆಪಿ ಕಾರ್ಯಕರ್ತರ ಕೃತಜ್ಞತಾ ಸಭೆಯಲ್ಲಿ ಭಾಗವಹಿಸಿ ಮಾತನಾಡಿದರು.

ಕಾರ್ಯಕರ್ತರ ಶ್ರಮ ಅಭಿನಂದನಾರ್ಹ
ಮುಂದಿನ ಪ್ರಧಾನಿಯಾಗಿ ರಾಹುಲ್‌ ಗಾಂಧಿ ಅವರನ್ನು ಬಿಂಬಿಸಲು ಹೊರಟಿರುವ ಕಾಂಗ್ರೆಸ್‌ ಪಕ್ಷಕ್ಕೆ ಯಾವ ನೈತಿಕತೆ ಇದೆ?  ದೇಶ - ವಿದೇಶಗಳಲ್ಲಿ ಭಾರತವನ್ನು ನಂ. 1 ರಾಷ್ಟ್ರವಾಗಿ ಗುರುತಿಸುವಂತೆ ಮಾಡಿದ ಪ್ರಧಾನಿ ನರೇಂದ್ರ ಮೋದಿ ಅವರೊಡನೆ ರಾಹುಲ್‌ ಗಾಂಧಿ ಅವರನ್ನು ತುಲನೆ ಮಾಡಲು ಸಾಧ್ಯವೇ ಎಂದರು. ಹಾಲಾಡಿ ಶ್ರೀನಿವಾಸ ಶೆಟ್ಟಿ 5ನೇ ಬಾರಿ ದಾಖಲೆಯ ಮತಗಲಿಂದ ಜಯ ಸಾಧಿಸಿ, ಬಿಜೆಪಿಯ ಪ್ರಾಬಲ್ಯವನ್ನು ಹೆಚ್ಚಿಸಿದ್ದಾರೆ. ಇದರಲ್ಲಿ ಬಿಜೆಪಿ ಕಾರ್ಯಕರ್ತರ ಹೋರಾಟ ಅಭೂತಪೂರ್ವ. ಫೇಸ್‌ಬುಕ್‌ನಲ್ಲಿ ಬಂದ ವಿಚಾರಗಳಿಗೆ ಮತದಾರರೇ ಉತ್ತರ ನೀಡುವುದರ ಮೂಲಕ ಶೆಟ್ಟರ ವರ್ಚಸ್ಸನ್ನು ಹೆಚ್ಚಿಸಿದ್ದಾರೆ ಎಂದರು.

ಉಭಯ ಜಿಲ್ಲೆಗಳಲ್ಲಿ ಬಿಜೆಪಿ ಸಾಧನೆ, ಮತದಾರರಿಗೆ ಪಕ್ಷದ ಮೇಲಿರುವ ಪ್ರೀತಿ-ವಿಶ್ವಾಸದ ಸಂಕೇತವಾಗಿದ್ದು, ಕೇಂದ್ರ ಸರಕಾರದ ಜನಪರ ಧೋರಣೆ ಹಾಗೂ ಪ್ರಧಾನಿ ಮೋದಿಯವರ ಅಭಿವೃದ್ಧಿ ಕಾರ್ಯಗಳು ಪ್ರಭಾವ ಬೀರಿವೆ. ಮತದಾರರು ಹಾಲಾಡಿ ಶ್ರೀನಿವಾಸ ಶೆಟ್ಟರ ಮೇಲಿಟ್ಟಿರುವ ಪೂರ್ಣ ವಿಶ್ವಾಸವೇ ಇಷ್ಟು ಅಂತರದ ಗೆಲುವಿಗೆ ಕಾರಣ ಎಂದು ವಿಧಾನ ಪರಿಷತ್‌ ಸದಸ್ಯ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು.

ಬಿಜೆಪಿ ಜಿಲ್ಲಾಧ್ಯಕ್ಷ ಮಟ್ಟಾರು ರತ್ನಾಕರ ಹೆಗ್ಡೆ ಅಧ್ಯಕ್ಷತೆ ವಹಿಸಿದ್ದರು. ಬಿಜೆಪಿ ರಾಜ್ಯ ಕಾರ್ಯಕಾರಣಿ ಸದಸ್ಯ ಕಿರಣ್‌ ಕೊಡ್ಗಿ, ಜಿ.ಪಂ. ಸದಸ್ಯರಾದ ಪ್ರತಾಪ್‌ ಹೆಗ್ಡೆ ಮಾರಾಳಿ, ರಾಘವೇಂದ್ರ ಕಾಂಚನ್‌, ಸುಪ್ರೀತಾ ಕುಲಾಲ್‌, ಶ್ರೀಲತಾ ಎಸ್‌. ಶೆಟ್ಟಿ, ಲಕ್ಷ್ಮೀ ಮಂಜು ಬಿಲ್ಲವ, ಜ್ಯೋತಿ ಉದಯ ಪೂಜಾರಿ, ತಾ.ಪಂ. ಅಧ್ಯಕ್ಷೆ ಜಯಶ್ರೀ ಮೊಗವೀರ, ಕೋಟೇಶ್ವರ ಗ್ರಾ.ಪಂ. ಅಧ್ಯಕ್ಷೆ ಜಾನಕಿ ಬಿಲ್ಲವ, ಜಿಲ್ಲಾ ಮೀನುಗಾರಿಕಾ ಪ್ರಕೋಷ್ಠದ ಅಧ್ಯಕ್ಷ ಸದಾನಂದ ಬಳ್ಕೂರು, ಸಾಲಿಗ್ರಾಮ ಪ.ಪಂ. ಉಪಾಧ್ಯಕ್ಷ ಉದಯ ಪೂಜಾರಿ, ಬಿಜೆಪಿ ಜಿಲ್ಲಾ ಪ್ರ. ಕಾರ್ಯದರ್ಶಿ ಸಂಧ್ಯಾ ರಮೇಶ್‌, ಜಿಲ್ಲಾ ಕಾರ್ಯದರ್ಶಿ ಗಣಪತಿ ಶ್ರೀಯಾನ್‌, ಯುವ ಮೋರ್ಚಾ ಅಧ್ಯಕ್ಷ ಸತೀಶ್‌ ಪೂಜಾರಿ, ತಾ.ಪಂ. ಸದಸ್ಯರು ಮತ್ತಿತರರು ಉಪಸ್ಥಿತರಿದ್ದರು.

ಕ್ಷೇತ್ರಾಧ್ಯಕ್ಷ ಕಾಡೂರು ಸುರೇಶ್‌ ಶೆಟ್ಟಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಪ್ರ. ಕಾರ್ಯದರ್ಶಿಗಳಾದ ಭಾಸ್ಕರ ಬಿಲ್ಲವ ಸ್ವಾಗತಿಸಿ, ಶಂಕರ ಅಂಕದಕಟ್ಟೆ ಕಾರ್ಯಕ್ರಮ ನಿರ್ವಹಿಸಿದರು.

ಜನರ ಪ್ರೋತ್ಸಾಹದಿಂದ 5ನೇ ಬಾರಿ ಆಯ್ಕೆ
ಕುಂದಾಪುರ ಕ್ಷೇತ್ರದ ಬಿಜೆಪಿ ಕಾರ್ಯಕರ್ತರು ಸೈನಿಕರಂತೆ ಕೈಜೋಡಿಸಿ, ಅವರ ಸಹಕಾರದಿಂದ 5ನೇ ಬಾರಿಗೆ ಗೆದ್ದಿದ್ದೇನೆ. ಕ್ಷೇತ್ರದ ಅಭಿವೃದ್ಧಿಯ ಜವಾಬ್ದಾರಿ ಹೆಚ್ಚಿದ್ದು, ಪಕ್ಷದ ಎಲ್ಲ ಕಾರ್ಯಕರ್ತರ ಸಹಕಾರದೊಡನೆ, ಅಭಿವೃದ್ಧಿ ಕಾರ್ಯಕ್ಕೆ ಹೆಚ್ಚು ಒತ್ತು ಕೊಟ್ಟು ಶ್ರಮಿಸುತ್ತೇನೆ. ಮುಂಬರುವ ವಿಧಾನ ಪರಿಷತ್‌ ಚುನಾವಣೆಯಲ್ಲಿ ಬಿಜೆಪಿ ಬೆಂಬಲಿತ ಅಭ್ಯರ್ಥಿಗಳಿಗೆ ಮತ ನೀಡಿ, ಗೆಲ್ಲಿಸಬೇಕು.
 ಹಾಲಾಡಿ ಶ್ರೀನಿವಾಸ ಶೆಟ್ಟಿ, ಕುಂದಾಪುರ ಶಾಸಕ 

Trending videos

Back to Top