CONNECT WITH US  

ಮತಾಂತರವಾಗಿದ್ದ ಅತ್ತೆಯ ಮಗಳನ್ನು ವಿವಾಹವಾಗಿ ಮಾತೃಧರ್ಮಕ್ಕೆ ಸೇರಿಸಿದ

ಬೈಂದೂರು: ಎರಡೂವರೆ ದಶಕಗಳ ಹಿಂದೆ ಅಂತರ್ಮತೀಯನನ್ನು ವಿವಾಹವಾಗಿದ್ದ ಮಹಿಳೆಯ ಪುತ್ರಿಯನ್ನು ಆಕೆಯ ಮಾತೃಧರ್ಮದ ಯುವಕ ಮದುವೆಯಾದ ಘಟನೆ ನಡೆದಿದೆ. ಬೈಂದೂರಿನ ಯುವತಿ ರೇಷ್ಮಾ ಬಾನು ಅವರ ತಾಯಿ 26 ವರ್ಷಗಳ ಹಿಂದೆ ಅಂತರ್‌ ಮತೀಯ ವಿವಾಹವಾಗಿದ್ದರು. ಈಗ ಆಕೆಯ ಪುತ್ರಿ ಅಂತಧರ್ಮೀಯ ಯುವಕನನ್ನು ಮದುವೆಯಾಗುವ ಮೂಲಕ ಮರಳಿ ಮಾತೃಧರ್ಮಕ್ಕೆ ಬಂದಂತಾಗಿದೆ. ಭಟ್ಕಳದ ಆಸರಕೇರಿ ಶ್ರೀ ನಿಚ್ಚಳಮಕ್ಕಿ ದೇವಸ್ಥಾನದಲ್ಲಿ ರವಿವಾರ ನಡೆದ ವಿವಾಹ ಇಂತಹ ಕುತೂಹಲದ ಪ್ರಸಂಗಕ್ಕೆ ಸಾಕ್ಷಿಯಾಯಿತು. ರೇಷ್ಮಾ ಬಾನು ಭಟ್ಕಳದ ತಲಗೋಡದ ಯುವಕ ವಿಶ್ವನಾಥ ನಾಯ್ಕ ಅವರನ್ನು ವಿವಾಹವಾದರು.

ಪ್ರೇಮ ವಿವಾಹ
ರೇಷ್ಮಾ ಬಾನುಗೆ 6 ತಿಂಗಳ ಹಿಂದೆ ವಿಶ್ವನಾಥರ ಪರಿಚಯವಾಗಿ ಅವರು ಮದುವೆಯಾಗಲು ನಿರ್ಧ ರಿಸಿದ್ದರು. ಊರಿನಲ್ಲಿ ಮದುವೆ ಆದರೆ ಧರ್ಮದ ಸಮಸ್ಯೆಯಾಗಬಹುದು ಎಂದು ಬೆಂಗಳೂರಿನಲ್ಲಿ ವಿವಾಹವಾಗಿದ್ದರು. ಆದರೆ ಹೆತ್ತವರು ಹಾಗೂ ಬಂಧುಗಳಿಂದಾಗಿ ಪ್ರಕರಣ ಪೊಲೀಸ್‌ ಠಾಣೆ ಮೆಟ್ಟಿಲೇರಿತ್ತು. ಬಳಿಕ ಯುವಕ ಬೆಂಗಳೂರಿನಿಂದ ಭಟ್ಕಳಕ್ಕೆ ಬಂದು ಇಲ್ಲಿನ ತಮ್ಮ ಕುಲ ದೇವಸ್ಥಾನವಾದ ನಿಚ್ಚಲಮಕ್ಕಿ ತಿರುಮಲ ವೆಂಕಟರಮಣ ದೇವಸ್ಥಾನದಲ್ಲಿ ಹೋಮ ಹವನ ಮಾಡುವ ಮೂಲಕ ಯುವತಿಯನ್ನು ಯುವಕನ ಕುಟುಂಬದವರ ಉಪಸ್ಥಿತಿಯಲ್ಲಿ ಸಮಾಜದ ಹಿರಿಯರ ಮಾರ್ಗದರ್ಶನ ಹಾಗೂ ಹಿಂದೂ ಸಂಪ್ರದಾಯದಂತೆ ಅರ್ಚಕರು ಮುದ್ರಾಣಿಕೆಯನ್ನು ನೀಡಿ ಯುವತಿಯನ್ನು ಹಿಂದೂ ಧರ್ಮಕ್ಕೆ ಬರಮಾಡಿಕೊಂಡು ವಿವಾಹವಾದರು. ತಲೆ ಕಾಣಿಕೆ, ಮುಚ್ಚಳಿಕೆ, ಅಫಿಡವಿಟ್‌ ಅನ್ನು ಸಮಾಜದ ಅಧ್ಯಕ್ಷರಿಗೆ ಒಪ್ಪಿಸಿದ್ದಾರೆ.

ಅತ್ತೆಯೂ ಇದೇ ರೀತಿ ಮದುವೆ ಆಗಿದ್ದರು
ವಿಶ್ವನಾಥ ಅವರ ಕುಟುಂಬದ ಮಹಿಳೆ 26 ವರ್ಷಗಳ ಹಿಂದೆ ಅನ್ಯ ಮತೀಯರೊಬ್ಬರನ್ನು ಪ್ರೀತಿಸಿ ಮದುವೆಯಾಗಿದ್ದರು. ಮೊದಲ ಐದು ವರ್ಷ ಹಿಂದೂ ಸಂಪ್ರದಾಯದಂತೆ ಸಂಸಾರ ನಡೆಸಿದ್ದರೂ ಅನಂತರ ಮತಾಂತರವಾಗಿದ್ದರು. ಹಾಗೆ ಮತಾಂತರವಾದ ಮಹಿಳೆಯ ಪುತ್ರಿಯೇ ರೇಷ್ಮಾಬಾನು. ರಕ್ತ ಸಂಬಂಧದ ನೆಲೆಯಲ್ಲಿ ವಿಶ್ವನಾಥ ರೇಷ್ಮಾಬಾನುವಿಗೆ ಅತ್ತೆ ಮಗನಾಗಬೇಕು. ರೇಷ್ಮಾ ಅವರ ತಂದೆ ಅನಾರೋಗ್ಯದಿಂದ 6 ತಿಂಗಳ ಹಿಂದೆ ಮೃತ ಪಟ್ಟಿದ್ದರು. ಆ ಬಳಿಕ ವಿಶ್ವನಾಥ ಅವರು ರೇಷ್ಮಾ ಅವರ ಮನೆಗೊಮ್ಮೆ ತೆರಳಿದ್ದಾಗ ಪರಿಚಯವಾಗಿ ಫೋನ್‌ ಮೂಲಕ ಸಂಭಾಷಣೆ ಆರಂಭವಾಗಿ ಅದೇ ಪ್ರೀತಿ ಉದಯಿಸಲು ಕಾರಣವಾಗಿತ್ತು. ರಕ್ತಸಂಬಂಧಿ ಎಂದು ತಿಳಿದೇ ಇಬ್ಬರೂ ವಿವಾಹವಾಗಲು ನಿರ್ಧರಿಸಿದ್ದರು. ಆದರೆ ಯುವತಿಗೆ ಬೇರೆ ಮದುವೆ ನಡೆಸಲು ಸಿದ್ಧತೆ ನಡೆಯುತ್ತಿದೆ ಎಂದು ಅರಿತು ವಿಶ್ವನಾಥ ಯುವತಿ ಜತೆಗೆ ಜೂ.18ರಂದು ಬೆಂಗಳೂರಿಗೆ ತೆರಳಿ ಅಲ್ಲಿನ ದೇವಸ್ಥಾನವೊಂದರಲ್ಲಿ ವಿವಾಹವಾಗಿದ್ದರು. ಬಳಿಕ ಯುವಕನ ಕುಟುಂಬದವರು ದಂಪತಿಯನ್ನು ಊರಿಗೆ ಕರೆಸಿಕೊಂಡಿದ್ದರು.


Trending videos

Back to Top