CONNECT WITH US  

ಜನಸೇರಿಸುವ ಪೈಪೋಟಿಯಲ್ಲಿ ಅಭ್ಯರ್ಥಿ ಹೈರಾಣ​​​​​​​

ಸಾಲಿಗ್ರಾಮ ಪಟ್ಟಣ ಪಂಚಾಯತ್‌: ರಂಗೇರಿದ ಮನೆ-ಮನೆ ಪ್ರಚಾರ

ಕೋಟ: ಸಾಲಿಗ್ರಾಮದಲ್ಲಿ ಪ .ಪಂ. ಚುನಾವಣೆ ಮತದಾನದ ದಿನ ಹತ್ತಿರವಾಗುತ್ತಿದ್ದಂತೆ ಚುನಾವಣೆ ಕಾವು ನಿಧಾನವಾಗಿ ಏರುತ್ತಿದೆ. ಕಾರ್ಯಕರ್ತರು, ಬೆಂಬಲಿಗರ ದೊಡ್ಡ  ದಂಡಿನೊಂದಿಗೆ ಅಭ್ಯರ್ಥಿಗಳು  ಮನೆ-ಮನೆ ಪ್ರಚಾರದಲ್ಲಿ ಮಗ್ನರಾಗಿದ್ದಾರೆ. ಹಾಗೆಯೇ  ಪ್ರಚಾರಕ್ಕೆ ಜನ ಸೇರಿಸುವ ಭರಾಟೆಯಲ್ಲಿ ಅಭ್ಯರ್ಥಿಗಳು ಹೈರಾಣಾಗುತ್ತಿದ್ದಾರೆ.

ಇಂದು ಈ ಪಕ್ಷ - ನಾಳೆ ಆ ಪಕ್ಷ
ಮತಬೇಟಿಗೆ ತಮ್ಮ ತಂಡವನ್ನು ಸೇರಿಕೊಳ್ಳುವಂತೆ ಪ್ರತಿ ಮನೆಗಳಿಗೆ ತೆರಳಿ  ಆಹ್ವಾನ ನೀಡಲಾಗುತ್ತದೆ. ಅಭಿಮಾನ, ಆಮಿಷ, ಮುಲಾಜಿಗೆ ಕಟ್ಟುಬಿದ್ದು  ಒಂದು ಪಕ್ಷದ ಪರ ಪ್ರಚಾರದಲ್ಲಿ ಭಾಗವಹಿಸಿದರೆ, ಸಂಜೆ ಎದುರಾಳಿ ಪಕ್ಷದವರು ಆ ಮನೆಗೆ ಬಂದು ನಮ್ಮಿಂದ ಏನು ಅನ್ಯಾಯವಾಗಿದೆ. ಯಾಕೆ ಆ ಪಕ್ಷದವರ ಜತೆ ಗುರುತಿಸಿಕೊಂಡಿದ್ದೀರಿ. ದಯವಿಟ್ಟು ನಮ್ಮ ಜತೆಗೂ ಬನ್ನಿ  ಎಂದು ಮತ್ತೆ  ಆಸೆ, ಆಮಿಷ, ಒತ್ತಡಗಳನ್ನು ಹೇರುತ್ತಾರೆ. ಹೀಗಾಗಿ ಹಿಂದಿನ ದಿನ ಆ ಪಕ್ಷದ ಪರ ಪ್ರಚಾರ ನಡೆಸಿದವರು, ಮಾರನೇ ದಿನ ಮತ್ತೂಂದು ಪಕ್ಷದ ಜತೆ  ಪ್ರಚಾರದಲ್ಲಿ ಭಾಗಿಯಾಗುವ ಸನ್ನಿವೇಶಗಳು ಕೆಲವು ಕಡೆ ಕಂಡುಬರುತ್ತಿದೆ. ನಾವು ಪ್ರಚಾರಕ್ಕೆ ಎರಡು ಕಡೆಯವರ ಜತೆ ಬರ್ತೇವೆ ಆದ್ರೆ ಓಟು ನಿಮಗೇ ಹಾಕ್ತೇವೆ ಎಂದು ಮೊದಲೇ ಭರವಸೆ ನೀಡಿ ಎರಡು ಪಕ್ಷಗಳಿಂದ ಲಾಭಪಡೆಯುವ ಬುದ್ಧಿವಂತರೂ ಇದ್ದಾರೆ.

ಒಟ್ಟಾರೆ ಐನೂರರಿಂದ- ಸಾವಿರ ದೊರೆಗಿನ ಹಣ, ಊಟ ಸಿಗುವುದರಿಂದ ಕೆಲವು ಮಂದಿಗೆ ಚುನಾವಣೆ ಎನ್ನುವುದು ಹಬ್ಬದಂತಾಗಿದೆ. ಇದರ ಜತೆಗೆ ಯಾವುದೇ ಆಸೆ ಆಮಿಷಗಳಿಲ್ಲದೆ  ಪಕ್ಷ ಸಿದ್ಧಾಂತ, ಅಭ್ಯರ್ಥಿಯ ಮೇಲಿನ ಅಭಿಮಾನದಿಂದ ಧರ್ಮಕ್ಕೆ  ಪ್ರಚಾರ ನಡೆಸುವವರೂ ಇದ್ದಾರೆ.

ಪ್ರತಿಷ್ಠೆಯ ಭರಾಟೆ; ಅಭ್ಯರ್ಥಿ ಹೈರಾಣ
ಪ.ಪಂ. ವ್ಯಾಪ್ತಿಯಲ್ಲಿ  ಇದುವರೆಗೆ ಯಾವುದೇ ಪಕ್ಷಗಳು ಸಭೆ, ಸಮಾವೇಶಗಳಿಗೆ ಹೆಚ್ಚು ಒತ್ತು ನೀಡಿಲ್ಲ. ಬದಲಿಗೆ 50-60ಮಂದಿಯ ತಂಡವನ್ನು ಕಟ್ಟಿಕೊಂಡು ಮತದಾರರನ್ನು ನೇರವಾಗಿ ಭೇಟಿಯಾಗುತ್ತಿದ್ದಾರೆ.  ನಮಗೆ ಹೆಚ್ಚಿನ ಜನ ಬೆಂಬಲವಿದೆ ಎನ್ನುವುದನ್ನು ತೋರಿಸಲು ಪ್ರಚಾರದ ಜನಸಂಖ್ಯೆಯೇ ಮಾನದಂಡವಾಗುತ್ತಿದೆ ಮತ್ತು ಅಕ್ಕ-ಪಕ್ಕದ ಊರುಗಳಿಂದಲು ಜನರನ್ನು ಕರೆತರಲಾಗುತ್ತದೆ.

ಪಕ್ಷೇತರವಾಗಿ ಸ್ಪರ್ಧೆ ಮಾಡಿದವರು ರಾಷ್ಟ್ರೀಯ ಪಕ್ಷಗಳಿಗಾದರೆ  ಆ ಫ‌ಂಡ್‌- ಈ ಫ‌ಂಡ್‌ ಅಂತ ಬರುತ್ತದೆ. ಆದರೆ ನಮಗೆ ಯಾವ ಫ‌ಂಡು ಬರೋದಿಲ್ಲ ಎಂದು ಆರೇಳು ಮಂದಿಯ ತಂಡದೊಂದಿಗೆ ಮನೆ-ಮನೆ ತಿರುಗಾಡುತ್ತಿದ್ದಾರೆ.
ಒಟ್ಟಾರೆ ಪ್ರತಿಷ್ಠೆ, ಜನಸೇರಿಸುವ ಭರಾಟೆಯಲ್ಲಿ ಚುನಾವಣೆಗೆ ನಿಂತ ಅಭ್ಯರ್ಥಿ ಹೈರಾಣಾಗಿದ್ದು ಚುನಾ ವಣೆಯೂ ಸಾಕು ಈ ಜನಸೇರಿಸೊ ತಾಪತ್ರೆಯೂ ಸಾಕು ಎನ್ನುವ ಮಾತು ಹೆಚ್ಚಿನ ಕಡೆಗಳಲ್ಲಿ ಕೇಳಿ ಬರುತ್ತಿದೆ.

ಆಮಿಷಗಳಿಗೆ ಬಲಿಯಾಗದಿರಿ 
ಈ ರೀತಿ ಚುನಾವಣೆಯ ಸಂದರ್ಭ ಅಭ್ಯರ್ಥಿಗಳು ಪ್ರಚಾರ, ವೋಟಿಗಾಗಿ  ಲಕ್ಷಾಂತರ ಹಣ ಸಾಲ-ಸೂಲ ಮಾಡಿ ಖರ್ಚು ಮಾಡುವುದರಿಂದ  ಜನಪ್ರತಿನಿಧಿಯಾದವನಿಗೆ  ರಾಜಕೀಯದಲ್ಲಿ  ಹಣ ಮಾಡಲು ಪ್ರೇರೇಪಣೆಯಾಗುತ್ತದೆ. ಆದ್ದರಿಂದ ಚುನಾವಣೆಯ ಸಂದರ್ಭ ಮತದಾರರು ಈ ರೀತಿ ಆಸೆ-ಆಮಿಷಗಳಿಗೆ ಬಲಿಯಾಗದೆ  ತಮ್ಮ ಇಷ್ಟದ ಅಭ್ಯರ್ಥಿಯ ಜತೆ ಪ್ರಾಮಾಣಿಕವಾಗಿ ದುಡಿದರೆ ವ್ಯವಸ್ಥೆಯನ್ನು ಸ್ವಲ್ಪಮಟ್ಟಿಗಾದರು ಸರಿಪಡಿಸಬಹುದು ಎನ್ನುವುದು ಪ್ರಜ್ಞಾವಂತ ಮತದಾರರ ಅಭಿಪ್ರಾಯವಾಗಿದೆ.

Trending videos

Back to Top