CONNECT WITH US  

ಸಾಲಿಗ್ರಾಮ ಪ.ಪಂ. ಅಭಿವೃದ್ಧಿ ವಿಚಾರದಲ್ಲಿ ಪಕ್ಷಗಳು ಹೇಳೋದೇನು?

ಚುನಾವಣೆ ಹಿನ್ನೆಲೆಯಲ್ಲಿ ಪಕ್ಷದ ಸ್ಥಳೀಯ ಮುಖ್ಯಸ್ಥರೊಂದಿಗೆ ಮಾತುಕತೆ

ಕೋಟ: ಸಾಲಿಗ್ರಾಮ ಪ.ಪಂ. ಚುನಾವಣೆ ಕಣ ರಂಗೇರಿದ್ದು ಗೆದ್ದು ಅಧಿಕಾರ ಹಿಡಿಯಲು ಬಿಜೆಪಿ ಹಾಗೂ ಕಾಂಗ್ರೆಸ್‌ ಪಕ್ಷಗಳು ಹವಣಿಸುತ್ತಿದೆ. ಇದರ ಜತೆಗೆ ಆರು ಸ್ಥಾನಗಳಲ್ಲಿ ಸ್ಪರ್ಧಿಸಿರುವ ಜೆಡಿಎಸ್‌ ಕೂಡ ಹೆಚ್ಚಿನ ಸ್ಥಾನಗಳನ್ನು ಗಳಿಸಿ ತನ್ನ ಅಸ್ಥಿತ್ವ ಸ್ಥಾಪಿಸಲು ಹೋರಾಟ ನಡೆಸುತ್ತಿದೆ. ಈ ಹಿನ್ನೆಲೆಯಲ್ಲಿ ಭಿನ್ನ ಕಾರ್ಯತಂತ್ರದೊಂದಿಗೆ ಮತಬೇಟೆಯಲ್ಲಿ ತೊಡಗಿದ ಪಕ್ಷದ ಮುಖಂಡರ ಅಭಿಮತ ಹೀಗಿದೆ.

ಗೆಲುವಿಗೆ ಯಾವ ಅಂಶ ಪೂರಕವಾಗಲಿದೆ ?
- ರಾಜ್ಯದಲ್ಲಿ ನಮ್ಮದೇ ಸರಕಾರ ಆಡಳಿತದಲ್ಲಿದೆ. ಇದರಿಂದ ಹೆಚ್ಚಿನ ಅನುದಾನ ತಂದು ಅಭಿವೃದ್ಧಿ ಕಾರ್ಯಕ್ಕೆ ಅವಕಾಶವಿದೆ. ಇದನ್ನು ಜನರ ಮುಂದಿಡಲಿದ್ದೇವೆ. ಬಿಜೆಪಿ ಅವಧಿಯಲ್ಲಿ ನಡೆದ ಅಧಿಕಾರ ದುರುಪಯೋಗ ಮತ್ತು ಅಭಿವೃದ್ಧಿ ಚಿಂತನೆ ಇಲ್ಲದಿರುವುದನ್ನು ಜನರಿಗೆ ತಿಳಿಸುವ ಯತ್ನ ಮಾಡುತ್ತೇವೆ.  

ಪ್ರಚಾರ ಯಾವ ರೀತಿ ಸಾಗುತ್ತಿದೆ ?
-
ಮನೆ-ಮನೆ ಪ್ರಚಾರಕ್ಕೆ ಹೆಚ್ಚು ಒತ್ತು ನೀಡಿದ್ದು ಎರಡು-ಮೂರು ಸುತ್ತಿನ ಪ್ರಚಾರ ಮುಗಿದಿದೆ. ಮುಂದೆ ರಾಜ್ಯ ಮಟ್ಟದ ನಾಯಕರು, ಜಿಲ್ಲಾ ಉಸ್ತುವಾರಿ ಸಚಿವರು ಆಗಮಿಸಿ ಭಾಗಿಯಾಗಲಿದ್ದಾರೆ.

ಅಭಿವೃದ್ಧಿಗೆ ನಿಮ್ಮ ದೃಷ್ಟಿಕೋನಗಳಾವುವು ?
-
ಇದುವರೆಗೆ ಕೇವಲ ರಸ್ತೆ, ಚರಂಡಿ, ದಾರಿದೀಪಗಳನ್ನೇ ದೊಡ್ಡ ಮಟ್ಟದ ಅಭಿವೃದ್ಧಿ ಎಂದು ಬಿಂಬಿಸುವ ಕೆಲಸವಾಗುತ್ತಿದೆ. ಆದರೆ ಇದನ್ನು ಹೊರತುಪಡಿಸಿ ಶಾಶ್ವತ ಕುಡಿಯುವ ನೀರಿನ ಯೋಜನೆ, ಸಾಲಿಗ್ರಾಮದ ಪೇಟೆಯ ಅಭಿವೃದ್ಧಿ, ಸುವ್ಯವಸ್ಥಿತ ಬಸ್ಸು ನಿಲ್ದಾಣ ನಿರ್ಮಾಣ ಹೀಗೆ ಪ.ಪಂ. ಚಿತ್ರಣವನ್ನು ಬದಲಾಯಿಸುವ ಹಲವಾರು ಯೋಜನೆಗಳು ನಮ್ಮ ಬಳಿ ಇದೆ.

ಚುನಾವಣೆಯಲ್ಲಿ ಎಷ್ಟು ಸ್ಥಾನ ಗೆಲ್ಲಲಿದ್ದೀರಿ?
-
ಈ ಬಾರಿ ಕಾಂಗ್ರೆಸ್‌ ಪಕ್ಷ  11ಕ್ಕೂ ಅಧಿಕ ಸ್ಥಾನವನ್ನು ನಿಶ್ಚಿತವಾಗಿ ಗೆದ್ದು ಅಧಿಕಾರ ಹಿಡಿಯಲಿದ್ದೇವೆ.

-- ಶಂಕರ್‌ ಕುಂದರ್‌, ಕೋಟ ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ 

ಗೆಲುವಿಗೆ ಯಾವ ಅಂಶ ಪೂರಕವಾಗಲಿದೆ ?
-
ನಮ್ಮ ಅಭ್ಯರ್ಥಿಗಳು ಜನರೊಂದಿಗೆ ಹೊಂದಿರುವ ಉತ್ತಮ ಸಂಬಂಧ ಹಾಗೂ ಈ ಹಿಂದೆ ಅಧಿಕಾರದಲ್ಲಿದ್ದಾಗ ಮಾಡಿದ ಅಭಿವೃದ್ಧಿ ಕಾರ್ಯಗಳು ನಮಗೆ ಶ್ರೀರಕ್ಷೆ.ನಮ್ಮ ಪಕ್ಷದ ಶಾಸಕರು, ಸಂಸದರು, ವಿಧಾನಪರಿಷತ್‌ ಸದಸ್ಯರು ಅಧಿಕಾರದಲ್ಲಿರುವುದರಿಂದ ಹೆಚ್ಚಿನ ಅಭಿವೃದ್ಧಿ ಕೆಲಸಗಳನ್ನು ಮಾಡಲು ಅವಕಾಶವಿದೆ.  

ಪ್ರಚಾರ ಯಾವ ರೀತಿ ಸಾಗುತ್ತಿದೆ ?
-
ಮನೆ-ಮನೆ ಪ್ರಚಾರಕ್ಕೆ ಹೆಚ್ಚು ಒತ್ತು ನೀಡಿದ್ದೇವೆ. ಎರಡು-ಮೂರು ಸುತ್ತಿನ ಮತ ಪ್ರಚಾರ ಮುಗಿದಿದೆ.  ಈಗಾಗಲೇ ಶಾಸಕರು, ಸಂಸದರು, ವಿಧಾನಪರಿಷತ್‌ ಸದಸ್ಯರು ಪ್ರಚಾರದಲ್ಲಿ ತೊಡಗಿಕೊಂಡಿದ್ದಾರೆ.

ಅಭಿವೃದ್ಧಿಗೆ ಮುಂದಿನ ನಿಮ್ಮ ದೃಷ್ಟಿಕೋನಗಳಾವುವು ?
-
ಸಾಲಿಗ್ರಾಮದಲ್ಲಿ ಸುಸಜ್ಜಿತ ಮೀನು ಮಾರುಕಟ್ಟೆ, ಕ್ರೀಡಾಂಗಣ, ಶಾಶ್ವತ ಕುಡಿಯುವ ನೀರಿನ ಯೋಜನೆ, ಘನ-ದ್ರವ ತ್ಯಾಜ್ಯ ಸಂಪನ್ಮೂಲ ಸಂಸ್ಕರಣಾ ಘಟಕ ಸ್ಥಾಪನೆ ಅಗತ್ಯವಿದೆ. ಬಾಕಿ ಉಳಿದಿರುವ ರಸ್ತೆಗಳ ಕಾಂಕ್ರೀಟ್‌, ದಾರಿ ದೀಪ ಅಳವಡಿಕೆ, ಚರಂಡಿ ನಿರ್ಮಾಣ ಮುಂತಾದ ಕಾಮಗಾರಿ  ಭವಿಷ್ಯದ ಯೋಜನೆಗಳಾಗಿದೆ.

ಚುನಾವಣೆಯಲ್ಲಿ ಎಷ್ಟು ಸ್ಥಾನ ಗೆಲ್ಲಲಿದ್ದೀರಿ ?
-
ಬಿಜೆಪಿ ಈ ಬಾರಿ 13ಕ್ಕೂ ಹೆಚ್ಚು ಸ್ಥಾನಗಳಲ್ಲಿ ಜಯಗಳಿಸಿ ಸ್ಪಷ್ಟಬಹುಮತದೊಂದಿಗೆ ಅಧಿಕಾರ ಹಿಡಿಯಲಿದ್ದೇವೆ ಎನ್ನುವ ಭರವಸೆ ಇದೆ.

-- ರಾಜು ಪೂಜಾರಿ, ಬಿಜೆಪಿ ಶಕ್ತಿಕೇಂದ್ರದ ಅಧ್ಯಕ್ಷರು

ಗೆಲುವಿಗೆ ಯಾವ ಅಂಶ ಪೂರಕವಾಗಲಿದೆ ?
-
ನಮ್ಮ ಪಕ್ಷದವರಾದ ಮುಖ್ಯಮಂತ್ರಿ ಕುಮಾರ ಸ್ವಾಮಿಯವರ ಜನಪರ ಕಾರ್ಯಕ್ರಮಗಳು ಹಾಗೂ ದೂರದೃಷ್ಟಿಯ ಕುರಿತು ಮತದಾರರಿಗೆ ಒಲವಿದೆ. ಹೀಗಾಗಿ ನಮ್ಮ ಅಭ್ಯರ್ಥಿಗಳು ಜಯಗಳಿಸಿದರೆ ಸರಕಾರದಿಂದ ವಿಶೇಷ ಯೋಜನೆಗಳನ್ನು ತಂದು ಅಭಿವೃದ್ಧಿ ಕಾರ್ಯ ನಡೆಸುವ ಅವಕಾಶಗಳಿವೆ.

ಪ್ರಚಾರ ಯಾವ ರೀತಿ ಸಾಗುತ್ತಿದೆ ?
-
ಮನೆ - ಮನೆಗೆ ತೆರಳಿ ಜೆಡಿಎಸ್‌ ಪಕ್ಷದ ಜನಪರ ಕಾರ್ಯಕ್ರಮ ಹಾಗೂ ಇಷ್ಟು ವರ್ಷ ಪ.ಪಂ.ನಲ್ಲಿ ಆಡಳಿತ ನಡೆಸಿದ ಪಕ್ಷಗಳ ವಿಫಲತೆಗಳನ್ನು ಜನರ ಮುಂದಿಟ್ಟು ಮತ ಕೇಳಲಿದ್ದೇವೆ. ನಮ್ಮ ರಾಜ್ಯ ನಾಯಕರು ಪ್ರಚಾರಕ್ಕೆ ಆಗಮಿಸುವ ನಿರೀಕ್ಷೆ ಇದೆ.

ಪ.ಪಂ.ಅಭಿವೃದ್ಧಿಯ ಕುರಿತು ನಿಮ್ಮ ದೃಷ್ಟಿಕೋನಗಳಾವುವು?
-
ಸಾಲಿಗ್ರಾಮವನ್ನು ಸ್ವಚ್ಛ, ಸುಂದರ ನಗರವನ್ನಾಗಿ ಮಾಡಬೇಕು ಎನ್ನುವುದು ನಮ್ಮ ಮೊದಲ ಕನಸಾಗಿದೆ. ಜತೆಗೆ ಶಾಶ್ವತ ಕುಡಿಯುವ ನೀರಿನ ಯೋಜನೆ, ವೈಜ್ಞಾನಿಕ ರೀತಿಯಲ್ಲಿ ಘನತ್ಯಾಜ್ಯ ನಿರ್ವಹಣೆ, ಪ.ಪಂ.ನ ಸಿಬಂದಿ ಕೊರತೆಗೆ ಪರಿಹಾರ, ಉದ್ಯಾನವನ ನಿರ್ಮಾಣ, ನಾಯ್ಕನಬೈಲು ಮರದ ಸೇತುವೆಗೆ ಮುಕ್ತಿ. ಪಾರ್ಕಿಂಗ್‌ ವ್ಯವಸ್ಥೆ ಸುಧಾರಣೆ ನಮ್ಮ ಪ್ರಮುಖ ಗುರಿಗಳಾಗಿದೆ.

ಚುನಾವಣೆಯಲ್ಲಿ ಎಷ್ಟು ಸ್ಥಾನ ಗೆಲ್ಲಲಿದ್ದೀರಿ ?
-
ನಾವು ಆರು ವಾರ್ಡ್ ಗಳಲ್ಲಿ  ಸ್ಪರ್ಧೆ ಮಾಡಿದ್ದೇವೆ. ಇದರಲ್ಲಿ ನಾಲ್ಕು ಸ್ಥಾನಗಳಲ್ಲಿ ಜಯಗಳಿಸುವ ಭರವಸೆ ಇದೆ ಮತ್ತು ಆಡಳಿತ ನಡೆಸಲು ಎರಡು ಪ್ರಮುಖ ಪಕ್ಷಗಳಿಗೆ ನಮ್ಮ ಸಹಕಾರ ಬೇಕಾಗಲಿದೆ.

-- ಅರುಣ್‌ ಕುಮಾರ್‌ ಕಲ್ಲುಗದ್ದೆ, ಜೆಡಿಎಸ್‌ ಚುನಾವಣಾ ಉಸ್ತುವಾರಿ

Trending videos

Back to Top