CONNECT WITH US  

ಬಹಿರಂಗ ಪ್ರಚಾರ ಅಂತ್ಯ ; ಈ ಬಾರಿ ಮನೆ-ಮನೆ ಪ್ರಚಾರಕ್ಕೆ ಹೆಚ್ಚು ಒತ್ತು

ಕೋಟ: ಸಾಲಿಗ್ರಾಮ ಪ.ಪಂ. ಬಹಿರಂಗ ಚುನಾವಣೆ ಪ್ರಚಾರ ಆ.29ರಂದು ಬೆಳಗ್ಗೆ 7ಕ್ಕೆ ಅಂತ್ಯಗೊಳ್ಳುತ್ತಿದ್ದು, ಇದೀಗ ಕೇವಲ ತೆರೆಮರೆಯ ಕಸರತ್ತು ಮಾತ್ರ ಬಾಕಿ ಉಳಿದಿದೆ. ಪ.ಪಂ.ನ ಆಡಳಿತ ಹಿಡಿಯಲು ಬಿಜೆಪಿ - ಕಾಂಗ್ರೆಸ್‌ ಸಾಕಷ್ಟು ಕಸರತ್ತು ನಡೆಸುತ್ತಿವೆ.

ಮನೆ-ಮನೆ ಪ್ರಚಾರಕ್ಕೆ ಒತ್ತು
ಮೂರೂ ಪಕ್ಷಗಳು ಹಾಗೂ ಪಕ್ಷೇತರರು ಈ ಬಾರಿ ಮನೆ-ಮನೆ ಪ್ರಚಾರಕ್ಕೆ ಹೆಚ್ಚು ಒತ್ತು ನೀಡಿರುವುದು ಕಂಡುಬಂದಿತು. ಬಿಜೆಪಿಯಿಂದ ಸಂಸದೆ ಶೋಭಾ ಕರಂದ್ಲಾಜೆ, ಶಾಸಕ ಹಾಲಾಡಿ ಶ್ರೀನಿವಾಸ್‌ ಶೆಟ್ಟಿ, ವಿಧಾನಪರಿಷತ್‌ ವಿಪಕ್ಷ ನಾಯಕ ಕೋಟ ಶ್ರೀನಿವಾಸ್‌ ಪೂಜಾರಿ ಹಲವು ವಾರ್ಡ್‌ಗಳಿಗೆ ತೆರಳಿ ಮತ ಯಾಚಿಸಿದರು. ಆದರೆ ಕಾಂಗ್ರೆಸ್‌ ಪಕ್ಷ  ಸ್ಟಾರ್‌ ಪ್ರಚಾರಕರಿಗೆ ಒತ್ತು ನೀಡದೆ ಕೇವಲ ಸ್ಥಳೀಯ ಮುಖಂಡರನ್ನೇ ಬಳಸಿಕೊಂಡಿದೆ. ಎಲ್ಲಾ  ಪಕ್ಷಗಳದ್ದೂ ಅಭಿವೃದ್ಧಿಯನ್ನು ಮುಂದಿಟ್ಟುಕೊಂಡೇ ಕಾರ್ಯನಿರತವಾಗಿವೆ.

ಬಹುತೇಕ ಹೊಸಮುಖ
ಒಟ್ಟು 16ವಾರ್ಡ್‌ಗಳಲ್ಲಿ ಒಟ್ಟು 45ಮಂದಿ ಕಣದಲ್ಲಿದ್ದಾರೆ. ಬಿಜೆಪಿಯಿಂದ 10ಮಂದಿ ಹೊಸಮುಖಗಳು, 6 ಮಂದಿ ಹಾಲಿ ಸದಸ್ಯರು ಹಾಗೂ ಕಾಂಗ್ರೆಸ್‌ನಿಂದ 11 ಹೊಸಮುಖಗಳು, 5 ಹಾಲಿ ಸದಸ್ಯರು ಕಣದಲ್ಲಿದ್ದಾರೆ. ಜೆಡಿಎಸ್‌ನಿಂದ ಒಬ್ಬರು ಹಾಲಿ ಸದಸ್ಯೆ, ಮಿಕ್ಕೆಲ್ಲರೂ ಹೊಸಮುಖ. ಪಕ್ಷೇತರರಲ್ಲಿ ಪೇಟೆ ವಾರ್ಡ್‌ನಲ್ಲಿ ಸ್ಪರ್ಧಿಸಿರುವ ಪ.ಪಂ. ಅಧ್ಯಕ್ಷೆ ರತ್ನಾ ನಾಗರಾಜ್‌ ಗಾಣಿಗ ಹೊರತುಪಡಿಸಿ ಮಿಕ್ಕೆಲ್ಲ ಹೊಸಮುಖಗಳಾಗಿವೆ.

ಒಟ್ಟು 12,869 ಮತದಾರರು
ಸಾಲಿಗ್ರಾಮ ಪ.ಪಂ. ವ್ಯಾಪ್ತಿಯ 16 ವಾರ್ಡ್‌ಗಳಲ್ಲಿ  6171 ಪುರುಷರು 6698 ಮಹಿಳಾ ಮತದಾರರ ಸಹಿತ ಒಟ್ಟು 12,869 ಮತದಾರರಿದ್ದಾರೆ.

ಮತಜಾಗೃತಿ ಕಾರ್ಯಕ್ರಮದ ಕೊರತೆ
ವಿಧಾನಸಭಾ, ಲೋಕಸಭಾ ಚುನಾವಣೆಯ ಸಂದರ್ಭ ಮತದಾನಕ್ಕೆ ತಿಂಗಳಿರುವಾಗ  ಹತ್ತಾರು ಕಾರ್ಯಕ್ರಮಗಳು ಆಯೋಜಿಸಿ ಮತದಾನದ ಪ್ರಮಾಣ ಹೆಚ್ಚಿಸಲು ಜಾಗೃತಿ ಮೂಡಿಸಲಾಗುತ್ತದೆ. ಆದರೆ ನಗರ ಸ್ಥಳೀಯಾಡಳಿತ ಚುನಾವಣೆಯಲ್ಲಿ  ಇಂಥ ಯಾವುದೇ ಕಾರ್ಯಕ್ರಮಗಳು ಹಮ್ಮಿಕೊಂಡಿಲ್ಲ. ಹಾಗಾಗಿ ಮತದಾನದ ಪ್ರಮಾಣದ ಮೇಲೆ ಪರಿಣಾಮ ಬೀರುವುದೇ ಎಂಬುದನ್ನು ಕಾದು ನೋಡಬೇಕಿದೆ.

Trending videos

Back to Top