CONNECT WITH US  

ಅಂಪಾರಿನ ಕಂಬಳಿಜೆಡ್ಡುವಿಗೆ ಗದ್ದೆಯೇ ದಾರಿ

ದಶಕದ ಹೋರಾಟಕ್ಕೆ ಇನ್ನೂ ಸಿಗದ ಫಲ ; 2 ತಲೆಮಾರಿನಿಂದ ಈ ಊರಿಗೆ ರಸ್ತೆಯಿಲ್ಲ

ಅಂಪಾರಿನ ಕಂಬಳಿಜಡ್ಡುವಿಗೆ ಸಂಪರ್ಕ ಕಲ್ಪಿಸುವ ಗದ್ದೆಯ ನಡುವಿನ ಹಾದಿ.

ಅಂಪಾರು: ಈ ಊರಿಗೆ ಅಷ್ಟ ದಿಕ್ಕುಗಳಿಂದಲೂ ಯಾವುದೇ ರಸ್ತೆಯ ಸಂಪರ್ಕವಿಲ್ಲ. ಗದ್ದೆಯ ಬದುವೇ ಇಲ್ಲಿರುವ 11 ಮನೆಗಳಿಗೆ ಸಂಪರ್ಕ ಕಲ್ಪಿಸುವ ದಾರಿ. ಸುಮಾರು ಎರಡು ತಲೆಮಾರಿನಿಂದ ಈ ಊರಿನವರು ರಸ್ತೆಯೊಂದು ಇಲ್ಲದೆ ಯಾತನಾಮಯ ಬದುಕು ನಡೆಸುತ್ತಿದ್ದಾರೆ. 

ಇದು ಕುಂದಾಪುರದಿಂದ ಕೇವಲ 17 ಕಿ.ಮೀ. ದೂರದಲ್ಲಿರುವ ಅಂಪಾರು ಗ್ರಾಮದ ವ್ಯಾಪ್ತಿಯ ಕಂಬಳಿಜಡ್ಡು, ಬಲಾಡಿ, ಕತ್‌ಕೋಡು ಭಾಗದ ಜನರ ನಿತ್ಯದ ಗೋಳು. ಈ ಭಾಗದಲ್ಲಿ 12 ಮನೆಗಳಿದ್ದು, ಸುಮಾರು 100 ಮಂದಿ ಜನರಿದ್ದಾರೆ. ಇಲ್ಲಿಂದ 15 ವಿದ್ಯಾರ್ಥಿಗಳು ಕುಂದಾಪುರ, ಅಂಪಾರು, ನೆಲ್ಲಿಕಟ್ಟೆ, ಬಸೂÅರಿನ ಶಾಲಾ - ಕಾಲೇಜಿಗೆ ತೆರಳುತ್ತಾರೆ.

ರಸ್ತೆ ಆಗದಿರಲು ಕಾರಣವೇನು?
ಇಲ್ಲಿಗೆ ಸುಮಾರು 500 ಮೀಟರ್‌ ದೂರದಲ್ಲಿ 2 ಕಡೆಗಳಲ್ಲಿ ಪಂಚಾಯತ್‌ ರಸ್ತೆಯಿದೆ. ಆದರೆ ಆ ಎರಡು ಕಡೆಗಳಲ್ಲಿಯೂ ಖಾಸಗಿ ವ್ಯಕ್ತಿಗಳ ಹೆಸರಲ್ಲಿ ಜಾಗವಿದೆ. ಸುಮಾರು 45 ವರ್ಷಗಳ ಹಿಂದೆಯೇ ಆಗಿದ್ದ ಜಮೀನಾªರರು ಈ ಜಾಗವನ್ನು ಕೇರಳ ಮೂಲದ ವ್ಯಕ್ತಿಗಳಿಗೆ ಮಾರಾಟ ಮಾಡಿದ್ದಾರೆ. ಅದರ ಮಧ್ಯೆ ಈ ಊರಿದೆ. ಆದರೆ ಜಾಗ ಪಡೆದುಕೊಂಡ ಖಾಸಗಿ ವ್ಯಕ್ತಿಗಳು ಜಾಗ ಬಿಟ್ಟುಕೊಡದ ಕಾರಣ ಇವರ ರಸ್ತೆ ಕನಸಿಗೆ ಅಡ್ಡಿಯಾಗಿದೆ.
 
ಬೇಸಾಯಕ್ಕೂ ತೊಂದರೆ
ಇಲ್ಲಿರುವ 11 ಮನೆಗಳ ಎಲ್ಲರೂ ಬೇಸಾಯವನ್ನೇ ಆಶ್ರಯಿಸಿದ್ದಾರೆ. ಗದ್ದೆಯನ್ನು ಹದ ಮಾಡಲು ಟಿಲ್ಲರ್‌ ತರಲು ಆಗುತ್ತಿಲ್ಲ. ಇಲ್ಲಿನ ರೈತರು ಬೆಳೆದ ಭತ್ತವನ್ನು ತಲೆ ಮೇಲೆ ಹೊತ್ತು ಅರ್ಧ ಕಿ.ಮೀ.ದೂರ ನಡೆದುಕೊಂಡು ಹೋಗಿ, ಅಲ್ಲಿಂದ ದೋಣಿ ಮೂಲಕ ಬೈಲೂರಿನ ಅಕ್ಕಿ ಮಿಲ್‌ಗೆ ಸಾಗಿಸಬೇಕಿದೆ. 

3 ವರ್ಷಗಳಲ್ಲಿ  5 ಸಾವು
ಕಂಬಳಿಜೆಡ್ಡು ವಾಸಿಗಳಿಗೆ ರಸ್ತೆ ಸಂಪರ್ಕವಿಲ್ಲದ ಕಾರಣ ಅನಾರೋಗ್ಯ ಉಂಟಾದಾಗ ಅವರನ್ನು ತುರ್ತಾಗಿ ಆಸ್ಪತ್ರೆಗೆ ಸೇರಿಸಲು ಆಗದ ಕಾರಣ ಕಳೆದ 3 ವರ್ಷದಲ್ಲಿ 5 ಮಂದಿ ಸಾವನ್ನಪ್ಪಿರುವುದು ದುರಂತ. 

ರಸ್ತೆಯೊಂದು ಆಗಲಿ
ನಾನು ಹುಟ್ಟು ಅಂಗವಿಕಲೆ. ನಮ್ಮೂರಿಗೆ ರಸ್ತೆಯಿಲ್ಲ. ಆಸ್ಪತ್ರೆಗೆ ಔಷಧಿಗೆ ತೆರಳಬೇಕಾದರೆ ಯಾರಾದರೂ ಎತ್ತಿಕೊಂಡೇ ಹೋಗಬೇಕು. ಆದರೆ ಯಾವಾಗಲೂ ಇನ್ನೊಬ್ಬರನ್ನು ಅವಲಂಬಿಸಬೇಕಾಗಿದೆ. ರಸ್ತೆಯೊಂದು ಆದರೆ ನಮ್ಮ ಎಲ್ಲ  ಸಮಸ್ಯೆ ಇತ್ಯರ್ಥವಾದಂತೆ.
-  ಗಿರಿಜಾ,ಕಂಬಳಿಜೆಡ್ಡು 

ಗಮನಕ್ಕೆ ಬಂದಿದೆ
ಕಂಬಳಿಜೆಡ್ಡುವಿನ ಜನರಿಗೆ ರಸ್ತೆಯಿಲ್ಲದ ಬಗ್ಗೆ ಅಲ್ಲಿನವರು ದೂರು ನೀಡಿದ್ದಾರೆ. ಈ ಬಗ್ಗೆ ಪರಿಶೀಲನೆ ನಡೆಸಿದ್ದೇನೆ. ಯಾರೇ ಆಗಲಿ ರಸ್ತೆಗೆ ಜಾಗ ಬಿಟ್ಟುಕೊಡಬೇಕು ಎನ್ನುವುದು ಕಾನೂನಿನಲ್ಲೇ ಇದೆ. ರಸ್ತೆ ನಿರ್ಮಾಣಕ್ಕೆ ಎಲ್ಲ ರೀತಿಯ ಪ್ರಯತ್ನ ಮಾಡಲಾಗುವುದು. 
- ಟಿ. ಭೂಬಾಲನ್‌, ಸಹಾಯಕ ಆಯುಕ್ತ, ಕುಂದಾಪುರ ಉಪ ವಿಭಾಗ 

ಸಮಸ್ಯೆಯಾಗುತ್ತಿದೆ
ನನ್ನ ತಾಯಿಗೆ ವೃದ್ಧಾಪ್ಯದ ಸಮಸ್ಯೆ. ನಮ್ಮ ಮನೆಯಲ್ಲಿದ್ದರೆ ಆಗಾಗ ಆಸ್ಪತ್ರೆಗೆ ಕರೆದುಕೊಂಡು ಹೋಗಲು ಕಷ್ಟವಾಗುತ್ತದೆ ಎಂದು ಸಂಬಂಧಿಕರ ಮನೆಯಲ್ಲಿ ಬಿಟ್ಟಿದ್ದೆವು. ಆದರೆ ಹೆಚ್ಚು ದಿನ ಅಲ್ಲಿಯೇ ಬಿಡುವುದು ನಮಗೆ ಸರಿ ಕಾಣಲಿಲ್ಲ. ಈಗ ಬೆಂಗಳೂರಿನಲ್ಲಿ ಅಣ್ಣನೊಂದಿಗೆ ಇದ್ದಾರೆ. ವಯಸ್ಸಾದವರಿಗೆ ಬೆಂಗಳೂರಿನಂತಹ ನಗರದಲ್ಲಿರುವುದು ಕಟ್ಟಿಹಾಕಿದಂತೆ. ಇಲ್ಲಿಗೂ ಕರೆದುಕೊಂಡು ಬರಲು ಆಗಲ್ಲ. ರಸ್ತೆಯಿಲ್ಲದೆ ಶಾಲೆಗೆ ಹೋಗುವ ಮಕ್ಕಳಿಗೆ, ಕೆಲಸಕ್ಕೆ ಹೋಗುವವರಿಗೆ ಸಮಸ್ಯೆಯಾಗುತ್ತಿದೆ.
- ರಾಜೇಶ್‌ ಕಾಂಚನ್‌, ಬಲಾಡಿ 

- ಪ್ರಶಾಂತ್‌ ಪಾದೆ


Trending videos

Back to Top