CONNECT WITH US  

ಕುಂದಾಪುರ ಪುರಸಭೆ: ಬಹುಮತ ಬಿಜೆಪಿಗೆ, ಅಧಿಕಾರ ಕಾಂಗ್ರೆಸ್‌ಗೆ!

ಕುಂದಾಪುರ: ಇಲ್ಲಿನ ಪುರಸಭೆಯಲ್ಲಿ 23 ಸ್ಥಾನಗಳಲ್ಲಿ 14 ಸ್ಥಾನ ಬಿಜೆಪಿ ಗಳಿಸಿದ್ದರೂ ಅಧಿಕಾರದಿಂದ ವಂಚಿತವಾಗಲಿದೆ. 8 ಸ್ಥಾನ ಪಡೆದ ಕಾಂಗ್ರೆಸ್‌ ಅಧಿಕಾರದ ಗದ್ದುಗೆಯೇರುವ ಮೀಸಲಾತಿ ಪ್ರಕಟವಾಗಿದೆ. 1 ಪಕ್ಷೇತರ ಸ್ಥಾನವಿದ್ದರೂ ಬಹುಮತ ಸಾಬೀತಿನ ಅವಶ್ಯಕತೆ ಇಲ್ಲದ ಕಾರಣ ಅವರ ಮತ ಪಕ್ಷೇತರವಾಗಿಯೇ ಉಳಿಯಲಿದೆ. 

ಸಾಮಾನ್ಯ ಮಹಿಳಾ ಮೀಸಲಾತಿ ಇದ್ದ ಪುರಸಭೆ ಅಧ್ಯಕ್ಷತೆಗೆ ಈಗ ಹಿಂದುಳಿದ ವರ್ಗ ಬಿ ಮಹಿಳೆ ಸ್ಥಾನ ಮೀಸಲಾತಿ ಬದಲಾಗಿ ಪ್ರಕಟವಾಗಿದೆ. ಸೆ.6ರಂದು ಪ್ರಕಟವಾದ ರಾಜ್ಯ ಗಜೆಟ್‌ ನೋಟಿಫಿಕೇಶನ್‌ನಲ್ಲಿ ಈ ಬದಲಾವಣೆ ಮಾಡಲಾಗಿದೆ. ಈ ಮೀಸಲಾತಿಯಿಂದ ಆಯ್ಕೆಯಾದ ಅಭ್ಯರ್ಥಿ ಇರುವುದು ಕಾಂಗ್ರೆಸ್‌ನಲ್ಲಿ ಮಾತ್ರ. ಇತರ ಎಲ್ಲ ವರ್ಗದ ಅಭ್ಯರ್ಥಿಗಳು ಬಿಜೆಪಿಯಲ್ಲಿದ್ದರೂ, ಬಹುಮತಕ್ಕಿಂತ ಅಧಿಕ ಮತ ಇದ್ದರೂ ಬಿಜೆಪಿಗೆ ಅಧಿಕಾರ ಚಲಾವಣೆ ಯೋಗ ಇಲ್ಲ. 

ಏಕೈಕರು
ಈ ಬದಲಾದ ಮೀಸಲಾತಿ ಕುರಿತು ಯಾರು ಕೂಡಾ ನ್ಯಾಯಾಲಯಕ್ಕೆ ಹೋಗದೇ ಇದ್ದಲ್ಲಿ; ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಮೀಸಲಾತಿಯಿಂದ ಏಕೈಕ ವ್ಯಕ್ತಿಗಳೇ ಇರುವ ಕಾರಣ ಅವಿರೋಧ ಆಯ್ಕೆ ನಡೆಯುವ ಸಾಧ್ಯತೆ ಇದೆ. ಕಾಂಗ್ರೆಸ್‌ನಿಂದ ಈ ಮೀಸಲಾತಿಯಿಂದ ಆಯ್ಕೆಯಾದ ಪ್ರಭಾವತಿ ಜೆ. ಶೆಟ್ಟಿ ಅವರು ಚುನಾವಣೆಯಲ್ಲಿ ಅವಿರೋಧವಾಗಿ ಅಧ್ಯಕ್ಷರಾಗಲಿದ್ದಾರೆ. ಉಪಾಧ್ಯಕ್ಷರಾಗಿ ಬಿಜೆಪಿಯ ಶ್ರೀಕಾಂತ್‌ ಅವರು ಮೀಸಲಾತಿ ಪ್ರಕಾರ ಏಕೈಕ ಅಭ್ಯರ್ಥಿಯಾಗಿದ್ದು ಬಹುಮತ ಇರುವ ಕಾರಣ ಚುನಾವಣೆಯ ಆವಶ್ಯಕತೆ ಇರದೇ ಅವಿರೋಧವಾಗಿ ಆಯ್ಕೆಯಾಗಲಿದ್ದಾರೆ. ಪುರಸಭೆಯಲ್ಲಿ ಅಧ್ಯಕ್ಷತೆಯಲ್ಲಿದ್ದ 10 ಮಂದಿ ಪೈಕಿ 7 ಮಂದಿ ಮಹಿಳೆಯರೇ ಇದ್ದರು. ಈ ಬಾರಿಯೂ ಮಹಿಳಾ ಮೀಸಲಾತಿ ಬಂದಿದ್ದು ಮಹಿಳಾ ಆಡಳಿತ ನಡೆಯಲಿದೆ.

ಈ ಮೊದಲ ಅಧ್ಯಕ್ಷರು
1973ರಿಂದ 1975ರವರಗೆ ವಿನ್ನಿಫ್ರೆಡ್‌ ಫೆರ್ನಾಂಡಿಸ್‌ ಅವರು ಅಧ್ಯಕ್ಷರಾಗಿದ್ದರು. ಇವರು 1967, 1972ರಲ್ಲಿ ಶಾಸಕರಾಗಿ ಆಯ್ಕೆಯಾಗಿದ್ದು ಮಾಜಿ ಶಾಸಕರಾದ ಬಳಿಕ ಪುರಸಭಾ ಅಧಿಕಾರ ಚಲಾಯಿಸಿದ ದಣಿವಿರದ ರಾಜಕಾರಣಿ. ನಂತರ ವಿಧಾನ ಪರಿಷತ್‌ ಸದಸ್ಯಯೆಯಾಗಿ ಕಾರ್ಯನಿರ್ವಹಿಸಿ, ಈಗ ವಿಶ್ರಾಂತ ಜೀವನ ನಡೆಸುತ್ತಿದ್ದಾರೆ. 1975ರಿಂದ 1976, 1977ರಿಂದ 1979ರವರೆಗೆ ಎಡ್ವಿನ್‌ ಕ್ರಾಸ್ತಾ, 1984ರಿಂದ 1988 ಅವಧಿಯಲ್ಲಿ ವಿನ್ನಿಫ್ರೆಡ್‌ ಫೆರ್ನಾಂಡಿಸ್‌, 1990ರಿಂದ 1995 ಜಿ.ಎಲ್‌. ಡಿ'ಲೀಮಾ, 1996ರಿಂದ 1999ರವರೆಗೆ ವಿ. ನರಸಿಂಹ, 1999ರಿಂದ 2001ರವರೆಗೆ ಗುಣರತ್ನಾ, 2001ರಿಂದ 2004ರವರೆಗೆ ಪಿ. ದೇವಕಿ ಸಣ್ಣಯ್ಯ, 2004ರಿಂದ 2006 ಬಿ.ಹಾರೂನ್‌ ಸಾಹೇಬ್‌, 2008ರಿಂದ 2013ರವರೆಗೆ ಮೋಹನ್‌ದಾಸ್‌ ಶೆಣೈ, 2013ರಿಂದ 2016ರವರೆಗೆ ಕಲಾವತಿ ಯು.ಎಸ್‌., 2016ರಿಂದ 2018ರವರೆಗೆ ವಸಂತಿ ಮೋಹನ ಸಾರಂಗ ಅವರು ಅಧ್ಯಕ್ಷರಾಗಿದ್ದರು.

ಉಪಾಧ್ಯಕ್ಷರು
ಇದೇ ಅವಧಿಗಳಲ್ಲಿ  ಅಬ್ರಹಾಂ ಕರ್ಕಡ ಮೂರು ಬಾರಿ, ಜಿ. ರಾಮಕೃಷ್ಣ ರಾವ್‌, ಕೆ. ಶ್ರೀನಿವಾಸ್‌, ರಾಜೀವ ಕೋಟ್ಯಾನ್‌, ತಾರಾ, ಜಾಕೋಬ್‌ ಡಿ'ಸೋಜಾ, ಲೆನ್ನಿ  ಕ್ರಾಸ್ತಾ, ನಾಗರಾಜ ಕಾಂಚನ್‌, ಕಲಾವತಿ ಯು.ಎಸ್‌., ನಾಗರಾಜ, ರಾಜೇಶ್‌ ಕಾವೇರಿ  ಉಪಾಧ್ಯಕ್ಷರಾಗಿದ್ದರು.  ಶೂನ್ಯ ವಿ. ನರಸಿಂಹ, ಗುಣರತ್ನ, ಕಲಾವತಿ ಮೊದಲಾದ ಅಧ್ಯಕ್ಷರನ್ನು ಪುರಸಭೆಗೆ ಕೊಟ್ಟ ಸಿಪಿಐಎಂ ಈ ಬಾರಿ ಒಂದೇ ಒಂದು ಸ್ಥಾನ ಗಳಿಸಲು ಕೂಡಾ ಶಕ್ತವಾಗಿಲ್ಲ. ವಸಂತಿ ಮೋಹನ ಸಾರಂಗ ಹಾಗೂ ಗುಣರತ್ನ ಅವರು ಈ ಹಿಂದೆ ಅಧ್ಯಕ್ಷರಾಗಿದ್ದರೂ ಈ ಬಾರಿ ಸೋಲು ಅನುಭವಿಸಿದ್ದಾರೆ.


Trending videos

Back to Top