CONNECT WITH US  

ನಾನ್‌ಸಿಆರ್‌ಝಡ್‌ ವ್ಯಾಪ್ತಿಯಲ್ಲಿ ಅವಕಾಶ ನೀಡಲು ಆಗ್ರಹ

ಜಿಲ್ಲಾ ರೈತ ಸಂಘದ ಸಮಾಲೋಚನ ಸಭೆ; ಮರಳು ಸಮಸ್ಯೆ ಪ್ರಸ್ತಾವ

ಸಭೆಯನ್ನುದ್ದೇಶಿಸಿ ಸಂಘದ ಅಧ್ಯಕ್ಷ ಪ್ರತಾಪ್‌ಚಂದ್ರ ಶೆಟ್ಟಿ ಮಾತನಾಡಿದರು.

ಕುಂದಾಪುರ: ಉಡುಪಿ ಜಿಲ್ಲೆಯಲ್ಲಿ ಮರಳು ಸಮಸ್ಯೆ ಗಂಭೀರವಾಗಿದ್ದು,  ಈ ಸಂಬಂಧ ಸಿಆರ್‌ಝಡ್‌ ವ್ಯಾಪ್ತಿಯಲ್ಲಿ ಕಾನೂನಿನ ತೊಡಕಿದ್ದರೂ, ನಾನ್‌ ಸಿಆರ್‌ಝಡ್‌ ವ್ಯಾಪ್ತಿಯಲ್ಲಿ ಅನುಮತಿ ನೀಡಲು ಅವಕಾಶವಿದ್ದು, ಡಿಸಿಯವರು ಅನುಮತಿ ನೀಡಲಿ ಎಂದು ಉಡುಪಿ ಜಿಲ್ಲಾ ರೈತ ಸಂಘ ಆಗ್ರಹಿಸಿದೆ.
 
ಕುಂದಾಪುರದ ಆರ್‌.ಎನ್‌. ಶೆಟ್ಟಿ ಸಭಾಂಗಣದಲ್ಲಿ ಶನಿವಾರ ನಡೆದ ಉಡುಪಿ ಜಿಲ್ಲಾ ರೈತ ಸಂಘದ ಪದಾಧಿಕಾರಿಗಳು ಹಾಗೂ ಕುಂದಾಪುರ ತಾಲೂಕು ಗ್ರಾ.ಪಂ. ಪ್ರತಿನಿಧಿಗಳ ಒಕ್ಕೂಟದ ವತಿಯಿಂದ ನಡೆದ ಸಮಾಲೋಚನಾ ಸಭೆಯಲ್ಲಿ ಮರಳುಗಾರಿಕೆಗೆ ಅನುಮತಿ ನೀಡಬೇಕೆಂದು ಆಗ್ರಹಿಸಿ ನಿರ್ಣಯ ಕೈಗೊಳ್ಳಲಾಯಿತು. 

ಮರಳುಗಾರಿಕೆ ಆರಂಭಕ್ಕೆ ಪ್ರಯತ್ನ
ಮತ್ತೆ ಮರಳುಗಾರಿಕೆ ಆರಂಭಿಸಲು ರೈತ ಸಂಘ ಎಲ್ಲ ರೀತಿಯ ಪ್ರಯತ್ನಗಳನ್ನು ಮಾಡುತ್ತಿದೆ. ಜಿಲ್ಲೆಯ ಎಲ್ಲ ಶಾಸಕರು ಈಗಾಗಲೇ ಸಿಎಂ ಅವರನ್ನು ಭೇಟಿ ಮಾಡಿ ಮರಳುಗಾರಿಕೆಗೆ ಅನುಮತಿ ನೀಡಲು ಒತ್ತಾಯಿಸಲಾಗಿದ್ದು, ಅವರು ಕೂಡ ಸಕಾರಾತ್ಮಕವಾಗಿ ಸ್ಪಂದಿಸುವ ಭರವಸೆ ನೀಡಿದ್ದಾರೆ. ಚೌತಿ ಬಳಿಕ ಬೆಂಗಳೂರಿನಲ್ಲಿ ಸಭೆ ಕರೆದಿದ್ದಾರೆ. ನಾನ್‌ ಸಿಆರ್‌ಝಡ್‌ ವ್ಯಾಪ್ತಿಯಲ್ಲಿ ಅನುಮತಿ ನೀಡಲು ಡಿಸಿಗೆ ಅವಕಾಶವಿದೆ. ಈ ಕುರಿತಂತೆ ಪ್ರಯತ್ನ ಮುಂದುವರಿಸಲಾಗುವುದು ಎಂದು ವಿಧಾನ ಪರಿಷತ್‌ ಸದಸ್ಯ, ರೈತ ಸಂಘದ ಜಿಲ್ಲಾಧ್ಯಕ್ಷ ಪ್ರತಾಪ್‌ಚಂದ್ರ ಶೆಟ್ಟಿ ಹೇಳಿದರು. 

ದೊಡ್ಡ ದೊಡ್ಡ ಗುತ್ತಿಗೆದಾರರಿಗೆ ಯಾರಿಗೂ ಮರಳಿನ ಸಮಸ್ಯೆ ಆಗಿಲ್ಲ. ಆದರೆ ಬಡವರಿಗೆ ಮಾತ್ರ ಸಮಸ್ಯೆ ಯಾಗಿದ್ದು. ಸೌಮ್ಯ ಹೋರಾಟದಿಂದ ಯಾವುದೇ ಪ್ರಯೋಜನವಾಗುತ್ತಿಲ್ಲ. ಇದಕ್ಕೆ ಉಗ್ರ ಹೋರಾಟದ ಅಗತ್ಯವಿದೆ. ಡಿಸಿಗೆ ಕಾನೂನಿನ ಸರಳೀಕರಣ ಮಾಡುವ ಅವಕಾಶವಿದ್ದರೂ, ಅವರು ಜನಸಾಮಾನ್ಯರತ್ತ ಚಿಂತಿಸುತ್ತಿಲ್ಲ ಎಂದು ರೈತ ಸಂಘದ ಕೆದೂರು ಸದಾನಂದ ಶೆಟ್ಟಿ ಹೇಳಿದರು. 

ಸಂತೊಷ್‌ ಶೆಟ್ಟಿ, ಪ್ರದೀಪ್‌ ಬಲ್ಲಾಳ್‌, ಜಾನಕಿ ಬಿಲ್ಲವ, ವಂಡಬಳ್ಳಿ ಜಯರಾಂ ಶೆಟ್ಟಿ, ಗ್ರಾ.ಪಂ. ಜನಪ್ರತಿನಿಧಿಗಳ ಒಕ್ಕೂಟದ ಅಧ್ಯಕ್ಷ ಉದಯ ಕುಮಾರ್‌ ಶೆಟ್ಟಿ ಮತ್ತಿತರರು ಮರಳು ನಿಷೇಧ ದಿಂದ ಆಗುತ್ತಿರುವ ಸಮಸ್ಯೆಗಳನ್ನು ಪ್ರಸ್ತಾಪಿಸಿದರು. 

ರೈತ ಸಂಘದ ಮಲ್ಯಾಡಿ ಶಿವರಾಮ ಶೆಟ್ಟಿ, ಸತೀಶ್‌ ಕಿಣಿ ಬೆಳ್ವೆ, ಕೃಷ್ಣರಾಜ ಕಾರಂತ, ಅಣ್ಣಯ್ಯ ಪುತ್ರನ್‌, ವಿಕಾಸ್‌ ಹೆಗ್ಡೆ ಮತ್ತಿತರರು ಪಾಲ್ಗೊಂಡಿದ್ದರು. 

ವಿಶೇಷ ಗ್ರಾಮಸಭೆ: ನಿರ್ಣಯ
ಅನೇಕ ಕಡೆಗಳಲ್ಲಿ ಮನೆ ಕಟ್ಟಲು, ಪಂಚಾಯತ್‌ ಅಭಿವೃದ್ಧಿ ಕಾಮಗಾರಿ ಸೇರಿದಂತೆ ವಸತಿ ಯೋಜನೆಯಡಿ ಮಂಜೂರಾದ ಮನೆಗಳಿಗೆ ಹೊಯ್ಗೆ ಇಲ್ಲದೆ ಸಮಸ್ಯೆಯಾಗುತ್ತಿದೆ. ಈ ಸಂಬಂಧ ಕೂಡಲೇ ಜಿಲ್ಲೆಯ ಎಲ್ಲ ಗ್ರಾ.ಪಂ.ಗಳಲ್ಲಿ ವಿಶೇಷ ಗ್ರಾಮಸಭೆ ಕರೆದು ಮರಳುಗಾರಿಕೆಗೆ ಪಂಚಾಯತ್‌ ವ್ಯಾಪ್ತಿಯಲ್ಲಿ ಅನುಮತಿ ನೀಡುವಂತೆ ನಿರ್ಣಯ ಕೈಗೊಳ್ಳಬೇಕು. ಆ ನಿರ್ಣಯವನ್ನು ಡಿಸಿ ಹಾಗೂ ರಾಜ್ಯ ಸರಕಾರಕ್ಕೆ ಸಲ್ಲಿಸಲಾಗುವುದು ಎಂದು ಇದೇ ವೇಳೆ ಸಭೆಯಲ್ಲಿ ತೀರ್ಮಾನ ಕೈಗೊಳ್ಳಲಾಯಿತು. 


Trending videos

Back to Top