CONNECT WITH US  

ಬಾವಿಗೆ ಬಿದ್ದ ಗಂಡು ಚಿರತೆ ರಕ್ಷಣೆ

ಸಿದ್ದಾಪುರ: ಆಹಾರವನ್ನು ಅರಸಿಕೊಂಡು ನಾಡಿಗೆ ಬಂದ ಚಿರತೆಯೊಂದು ನಾಯಿಯನ್ನು ಅಟ್ಟಿಸಿಕೊಂಡು ಹೋಗುವ ಸಂದರ್ಭದಲ್ಲಿ ಬಾವಿಗೆ ಬಿದ್ದ ಘಟನೆಯು ಶಂಕರನಾರಾಯಣ ಹತ್ತಿರದ ಕುಳ್ಳುಂಜೆಯಲ್ಲಿ ನಡೆದಿದೆ. ಚಿರತೆ ಕುಳ್ಳುಂಜೆ ಗ್ರಾಮದ ಕಲ್ಲುಮನೆ ರಘುರಾಮ ಕುಲಾಲ್‌ ಅವರ ಮನೆಯ ನಾಯಿಯನ್ನು ಅಟ್ಟಿಸಿಕೊಂಡು ಬರುವಾಗ ಆಕಸ್ಮಿಕವಾಗಿ ಮನೆಯ ಮುಂಭಾಗದಲ್ಲಿರುವ ಬಾವಿಗೆ ಶನಿವಾರ ರಾತ್ರಿ ಸಮಯದಲ್ಲಿ ಬಿದ್ದ ಘಟನೆ ನಡೆದಿದೆ.

ಸುಮಾರು 3ವರ್ಷ ಪ್ರಾಯದ ಗಂಡು ಚಿರತೆಯಾಗಿದೆ. ಮನೆಯವರು ಕೂಡಲೆ ಅರಣ್ಯ ಇಲಾಖೆಗೆ ಮಾಹಿತಿ ನೀಡಿದರು. ಕೂಡಲೇ ಸ್ಥಳಕ್ಕಾಗಮಿಸಿದ ಅರಣ್ಯ ಇಲಾಖೆಯವರು ಬಾವಿಯಲ್ಲಿರುವ ಚಿರತೆಯನ್ನು ಬೋನಿನ ಮೂಲಕ ಸುರಕ್ಷಿತ ವಾಗಿ ರಾತ್ರಿಯೇ ಮೆಲಕ್ಕೆತ್ತಿ ಅರಣ್ಯಪ್ರದೇಶಕ್ಕೆ ಬಿಟ್ಟರು. ಕಾರ್ಯಚರಣೆಯಲ್ಲಿ ಶಂಕರನಾರಾಯಣ ವಲಯ ಅರಣ್ಯ ಅಧಿಕಾರಿ ಎ.ಎ. ಗೋಪಾಲ್‌, ಉಪವಲಯ ಅರಣ್ಯಾಧಿಕಾರಿ ಹರೀಶ್‌, ಅರಣ್ಯ ರಕ್ಷಕರಾದ ಶ್ರೀಕಾಂತ್‌, ರವಿ, ಗುರುರಾಜ್‌, ಸಂತೋಷ್‌ ಅವರೊಂದಿಗೆ ಸ್ಥಳೀಯರು ಸಹಕರಿಸಿದರು.


Trending videos

Back to Top