CONNECT WITH US  

ಕುಂದಾಪುರ ನಗರದಲ್ಲಿ ಬಂದ್‌, ಇತರೆಡೆ ಭಾಗಶಃ

ಬಂದ್‌ ಹಿನ್ನೆಲೆಯಲ್ಲಿ ಬಿಕೋ ಎನ್ನುತ್ತಿರುವ ಶಾಸ್ತ್ರಿ ಸರ್ಕಲ್‌.

ಕುಂದಾಪುರ: ತೈಲ ಬೆಲೆ ಏರಿಕೆ ಖಂಡಿಸಿ ಕಾಂಗ್ರೆಸ್‌, ಸಿಪಿಐಎಂ ಹಾಗೂ ಇತರ ಪಕ್ಷಗಳು ಕರೆ ನೀಡಿದ್ದ ಭಾರತ ಬಂದ್‌ ಗೆ ಕುಂದಾಪುರ ನಗರದಲ್ಲಿ ಉತ್ತಮ ಬೆಂಬಲ ವ್ಯಕ್ತವಾಗಿದೆ. ಆದರೆ ತಾಲೂಕಿನ ಇತರೆಡೆ ಭಾಗಶಃ ಪರಿಣಾಮ ವ್ಯಕ್ತವಾಗಿದೆ. ನಗರದಲ್ಲಿ ಬೆಳಗ್ಗೆಯಿಂದಲೇ ಸರಕಾರಿ ಹಾಗೂ ಖಾಸಗಿ ಬಸ್‌ಗಳ ಓಡಾಟ ಇರಲಿಲ್ಲ. ಶಾಲಾ ಕಾಲೇಜುಗಳಿಗೆ ರಜೆ ನೀಡಿದ್ದರಿಂದ ಮುಂಜಾನೆಯ ವಿದ್ಯಾರ್ಥಿಗಳ ಓಡಾಟವೂ ಇರಲಿಲ್ಲ. ಹೋಟೇಲ್‌ ಸೇರಿದಂತೆ ನಗರದ ಬಹುತೇಕ ಅಂಗಡಿ ಮುಂಗಟ್ಟುಗಳು ಬೆಳಗ್ಗೆ ತೆರೆಯಲೇ ಇಲ್ಲ. ಸುಮಾರು 9.30ರ ವೇಳೆಗೆ ಕೆಲವು ಅಂಗಡಿಗಳು ಬಾಗಿಲು ತೆರೆಯಲಾರಂಭಿಸಿದಾಗ ಕಾಂಗ್ರೆಸ್‌ ಪಕ್ಷದ ನಾಯಕರು ಹಾಗೂ ಕಾರ್ಯಕರ್ತರು ಮೆರವಣಿಗೆ ಮೂಲಕ ತೆರಳಿ ಮುಚ್ಚುವಂತೆ ಬಂದ್‌ಗೆ ಸಹಕರಿಸುವಂತೆ ಮನವಿ ಮಾಡಿದರು. ಬಳಿಕ ಎಲ್ಲ ಅಂಗಡಿಗಳನ್ನು ಮುಚ್ಚಲಾಗಿ ಬಂದ್‌ ನಗರ ಪ್ರದೇಶದಲ್ಲಿ ಯಶಸ್ವಿಯಾಗಿತ್ತು. ಬಂದ್‌ಗೆ ಜೆಡಿಎಸ್‌ ಕೂಡ ಬೆಂಬಲ ನೀಡಿತ್ತು. 

ಜನರಿಲ್ಲ
ಸರಕಾರಿ ಕಚೇರಿಗಳು, ಬಸ್‌ ನಿಲ್ದಾಣಗಳಲ್ಲಿ ಜನರಿರಲಿಲ್ಲ. ಬಸ್‌ಗಳ ಓಡಾಟವೇ ಇಲ್ಲದ ಕಾರಣ ಹೊರ ಊರುಗಳಿಂದ ಜನರ ಆಗಮನ ಕಷ್ಟವಾಗಿತ್ತು. ರಿಕ್ಷಾಗಳ ಓಡಾಟ ಕೂಡಾ ವಿರಳವಾಗಿತ್ತು. ಕೇವಲ ಖಾಸಗಿ ವಾಹನಗಳಷ್ಟೇ ರಸ್ತೆಗಳಿದವು. ಬ್ಯಾಂಕ್‌ಗಳನ್ನು ಪ್ರಾರಂಭದಲ್ಲಿ ಮುಚ್ಚಲಾಗಿದ್ದರೂ ನಂತರ ತೆರೆಯಲಾಯಿತು. ಬಿಜೆಪಿ ನಾಯಕರು, ಕಾರ್ಯಕರ್ತರು ಕೂಡಾ ಬ್ಯಾಂಕ್‌ಗಳನ್ನು ತೆರೆಯಲು ಒತ್ತಾಯಿಸಿದರು. ನಂತರ ಪೊಲೀಸರು ಕೂಡಾ ಸೂಚನೆ ನೀಡಿ ಭದ್ರತೆಯ ಅವಶ್ಯಕತೆ ಇದ್ದರೆ ನೀಡುವುದಾಗಿ ಹೇಳಿದರು. ಆದರೆ ಬ್ಯಾಂಕುಗಳಲ್ಲಿ ಕೂಡ ಗ್ರಾಹಕರ ಸಂಖ್ಯೆ ಕಡಿಮೆಯಿತ್ತು.


ಪೊಲೀಸರ ಜತೆ ವಾಗ್ವಾದ

ಬಲವಂತವಾಗಿ ಬಂದ್‌ ಮಾಡಲು ಮುಂದಾಗಿದ್ದಾರೆ ಎಂದು ವರ್ತಕರು ಹಾಗೂ ಬಿಜೆಪಿಯವರು ದೂರಿದರು. ಪೊಲೀಸರು ಕಾಂಗ್ರೆಸ್‌ ಕಾರ್ಯಕರ್ತರ ಬಲವಂತದ ಬಂದ್‌ ಪ್ರಯೋಗಕ್ಕೆ ತಡೆಯೊಡ್ಡಿದಾಗ ಕಾಂಗ್ರೆಸ್‌ ಮುಖಂಡರು, ಕಾರ್ಯಕರ್ತರು ಹಾಗೂ ಪೊಲೀಸರ ನಡುವೆ ಮಾತಿನ ಚಕಮಕಿ ಉಂಟಾಗಿತ್ತು. ಅಂತೆಯೇ ಮುಚ್ಚಿದ್ದ  ಅಂಗಡಿ ಮತ್ತೆ ತೆರೆಸಲು ಹೊರಟ ಬಿಜೆಪಿಯವರ ಜತೆಗೂ ಪೊಲೀಸರಿಗೆ ಮಾತಿನ ಚಕಮಕಿ ನಡೆಯಿತು. ತಮಗೆ ಪೊಲೀಸರು ಬೆಂಬಲ ನೀಡುತ್ತಿಲ್ಲ ಎಂದು ಎರಡೂ ಪಕ್ಷದವರು ಆಪಾದಿಸಿದರು.


ಮೆರವಣಿಗೆ

ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಮಲ್ಯಾಡಿ ಶಿವರಾಮ ಶೆಟ್ಟಿ, ನಾಯಕರಾದ ವಿಕಾಸ್‌ ಹೆಗ್ಡೆ, ಪುರಸಭೆ ಸದಸ್ಯರಾದ ದೇವಕಿ ಸಣ್ಣಯ್ಯ, ಚಂದ್ರಶೇಖರ ಖಾರ್ವಿ, ಶ್ರೀಧರ ಶೇರೆಗಾರ್‌, ಮಾಜಿ ಸದಸ್ಯ ಪ್ರಭಾಕರ ಕೋಡಿ, ಕೇಶವ ಭಟ್‌, ಗಣೇಶ್‌ ಶೇರೆಗಾರ್‌, ಪಿಎಲ್‌ಡಿ ಬ್ಯಾಂಕ್‌ ಅಧ್ಯಕ್ಷ  ಹರಿಪ್ರಸಾದ್‌ ಶೆಟ್ಟಿ, ರಿಕ್ಷಾ ಕಾರು ಮೆಟಡೋರ್‌ ಚಾಲಕರ ಸಂಘದ ಗೌರವಾಧ್ಯಕ್ಷ ಜಾಕೋಬ್‌ ಡಿ'ಸೋಜಾ ಮೆರವಣಿಗೆ ನಡೆಸಿ ಬಂದ್‌ ನಡೆಸುವಂತೆ ಕೇಳಿಕೊಂಡರು.

ಬಿಜೆಪಿ ಅಧ್ಯಕ್ಷ ಕಾಡೂರು ಸುರೇಶ್‌ ಶೆಟ್ಟಿ, ಪ್ರಧಾನ ಕಾರ್ಯದರ್ಶಿ ಭಾಸ್ಕರ ಬಿಲ್ಲವ, ಯುವಮೋರ್ಚಾ ರಾಜ್ಯ ಕಾರ್ಯಕಾರಿಣಿ ಸದಸ್ಯ ಮಹೇಶ್‌ ಕುಮಾರ್‌, ಜಿಲ್ಲಾ ಯುವಮೋರ್ಚಾ ಉಪಾಧ್ಯಕ್ಷ ಸುನಿಲ್‌ ಶೆಟ್ಟಿ ಹೇರಿಕುದ್ರು, ಪುರಸಭೆ ಸದಸ್ಯ ಪ್ರಭಾಕರ್‌, ಶ್ರೀಕಾಂತ್‌, ಮಾಜಿ ಸದಸ್ಯ ಸತೀಶ್‌ ಶೆಟ್ಟಿ, ವಿನೋದ್‌ ಪೂಜಾರಿ, ದಿವಾಕರ ಕಡ್ಗಿಮನೆ ಮೊದಲಾದವರು ಬಂದ್‌ ನಡೆಸದಂತೆ ಕೇಳಿಕೊಂಡರು.

ಜೆಡಿಎಸ್‌ ಪ್ರಧಾನ ಕಾರ್ಯದರ್ಶಿ ಹುಸೈನ್‌ ಹೈಕಾಡಿ ಬಂದ್‌ಗೆ ಬೆಂಬಲ ನೀಡಿದವರಿಗೆ ಅಭಿನಂದನೆ ಸಲ್ಲಿಸಿದರು. ಸಿಪಿಐಎಂನವರು ಬಂದ್‌ಗೆ ಬೆಂಬಲ ಸೂಚಿಸಿದವರನ್ನು ಅಭಿನಂದಿಸಿದರು. ಶಾಸ್ತ್ರಿ ಸರ್ಕಲ್‌ ಬಳಿ ಸಿಪಿಐಎಂನವರು ಕೇಂದ್ರ ಸರಕಾರದ ವಿರುದ್ಧ ಪ್ರತಿಭಟನೆ ನಡೆಸಿದರು. ರಿಕ್ಷಾ, ಕಾರು, ಮೆಟಡೋರ್‌ ಚಾಲಕರ ಸಂಘದವರು ಬಂದ್‌ಗೆ ಬೆಂಬಲ ಸೂಚಿಸಿದ್ದರು. 

ಬಸ್ಸಿಲ್ಲದೆ ದೂರದ ಪ್ರಯಾಣಿಕರ ಪರದಾಟ

ಬಂದ್‌ನಿಂದಾಗಿ ಯಾವುದೇ ಖಾಸಗಿ ಹಾಗೂ ಸರಕಾರಿ ಬಸ್‌ಗಳು ಸಂಚಾರ ನಡೆಸದೇ ಇರುವುದರಿಂದ ಅನೇಕ ಮಂದಿ ದೂರ-ದೂರದ ಪ್ರಯಾಣಿಕರು ತೊಂದರೆ ಅನುಭವಿಸಿದರು. ಕುಂದಾಪುರ ಕೆಎಸ್‌ಆರ್‌ಟಿಸಿ ಡಿಪೋದಿಂದ ಸಂಜೆಯವರೆಗೆ ಯಾವುದೇ ಬಸ್‌ಗಳು ಸಂಚರಿಸಿಲ್ಲ. ಬೆಳಗ್ಗೆ ಧರ್ಮಸ್ಥಳ ಡಿಪೋದಿಂದ ಉತ್ತರ ಕನ್ನಡ ಕಡೆಗೆ ಎರಡು ಬಸ್‌ಗಳು ಬಂದಿದ್ದು, ಕುಂದಾಪುರದಲ್ಲಿ ನಿಲ್ಲಿಸಲಾಗಿತ್ತು. ಇದರಿಂದ ಹಾವೇರಿ, ಕುಮಟಾ, ಹೊನ್ನಾವರ ಕಡೆಗೆ ಹೋಗುವ ಜನರು ಪರದಾಟ ನಡೆಸಿದರು. 

- ಬಂದ್‌ ಶಾಂತಿಯುತವಾಗಿ ನಡೆದಿದೆ.
- ನಗರದಲ್ಲಿ ಬಂದ್‌ ಪೂರ್ಣ ಪ್ರಮಾಣದಲ್ಲಿ ಇದ್ದರೂ ತಾಲೂಕಿನ ಇತರೆಡೆ ಪೂರ್ಣಪ್ರಮಾಣದ ಬಂದ್‌ ನಡೆಯಲಿಲ್ಲ. 
- ಹೋಟೇಲ್‌, ಅಂಗಡಿಮುಂಗಟ್ಟುಗಳು, ಖಾಸಗಿ ಸರಕಾರಿ ಬಸ್‌ ಸಂಚಾರ ಇರಲಿಲ್ಲ.
- ಆಸ್ಪತ್ರೆ, ಮೆಡಿಕಲ್‌, ಪೆಟ್ರೋಲ್‌ ಬಂಕ್‌, ಹಾಲಿನ ಅಂಗಡಿ ತೆರೆದಿತ್ತು. 
- ಸರಕಾರಿ ಆಸ್ಪತ್ರೆ ಬಳಿಯ ಪೆಟ್ರೋಲ್‌ ಪಂಪ್‌ ಕೂಡಾ ಬಂದ್‌ ಆಗಿತ್ತು.
- ರಾಷ್ಟ್ರೀಯ ಹೆದ್ದಾರಿಯಲ್ಲಿ ವಾಹನಗಳನ್ನು ತಡೆದು ಪ್ರತಿಭಟಿಸಲಾಯಿತು. ಮೈಲುಗಟ್ಟಲೆ ಲಾರಿಗಳ ಸಾಲು ಕಂಡು ಬಂತು. 
- ಜನರಿಂದ ತುಂಬಿರುವ ಹೊಸ ಬಸ್‌ ನಿಲ್ದಾಣ ಮತ್ತು ಕುಂದಾಪುರ ಶಾಸ್ತ್ರಿ ಪಾರ್ಕ್‌ ಬಳಿ ಜನ ಸಂಚಾರ ಕಡಿಮೆಯಿತ್ತು. 
- ನಗರದಲ್ಲಿ ಕಾಂಗ್ರೆಸ್‌ ರೋಡ್‌ ಶೋ ನಡೆಸಿ ಮೋದಿ ಸರಕಾರದ ವಿರುದ್ಧ ವಾಗ್ಧಾಳಿ ನಡೆಸಿತು.
- ಬಿಜೆಪಿ ರೋಡ್‌ ಶೋ ನಡೆಸಿ ಕಾಂಗ್ರೆಸ್‌ ವಿರುದ್ಧ ಅಸಹನೆ ವ್ಯಕ್ತಪಡಿಸಿತು. 
- ಡಿವೈಎಸ್‌ಪಿ ಬಿ.ಪಿ. ದಿನೇಶ್‌ ಕುಮಾರ್‌ ನೇತೃತ್ವದಲ್ಲಿ ಭದ್ರತೆ ಮಾಡಲಾಗಿತ್ತು.


Trending videos

Back to Top