CONNECT WITH US  

ಗಜಮುಖನೆ ಗಣಪತಿಯೆ ನಿನಗೆ ವಂದನೆ

ಡೊಳ್ಳು ಹೊಟ್ಟೆ ಗಣಪ ಎನ್ನಿ ಅವನಿಗೆ ಬೇಸರ ಇಲ್ಲ. ದೊಡ್ಡ ಕಿವಿ, ಸೊಂಡಿಲು, ದೊಡ್ಡ ಹೊಟ್ಟೆಗೆ ಬಿಗಿದ ಹಾವು, ಕುಳ್ಳಗಿನ ದೇಹ ಹೀಗೆ ವಿಶಿಷ್ಟ ದೇಹಾಕಾರದಿಂದ ಇದ್ದರೂ ಎಲ್ಲರ ಮೆಚ್ಚುಗೆ ಗಳಿಸಿದ ದೇವರೆಂದರೆ ಅದು ಗಣಪತಿ ಮಾತ್ರ. ಅಷ್ಟೇ ಅಲ್ಲ ಕೇವಲ ಹಿಂದೂಗಳಿಗಷ್ಟೇ ಈತ ಆರಾಧ್ಯದೈವವಲ್ಲ. ಇತರ ಧರ್ಮೀಯರಿಗೂ ಈತನೆಂದರೆ ಅಚ್ಚುಮೆಚ್ಚು. ಅನೇಕ ಧರ್ಮಗಳಲ್ಲಿ ಈತನ ಆರಾಧಕರಿದ್ದಾರೆ. ಕೇವಲ ಭಾರತೀಯರಷ್ಟೇ ಅಲ್ಲ ಜಗತ್ತಿನ ಅತ್ಯಂತ ಹೆಚ್ಚು ದೇಶಗಳಲ್ಲಿ ಆರಾಧಿಸಲ್ಪಡುವ ಏಕೈಕ ದೇವರೆಂದರೆ ಅದು ಗಣಪತಿ ಮಾತ್ರ. ಇಂಡೋನೇಷಿಯಾದಂತ ರಾಷ್ಟ್ರಗಳು ಗಣಪತಿಯ ಚಿತ್ರ ಇರುವ ಕರೆನ್ಸಿಯನ್ನೇ ಮುದ್ರಿಸಿ ಗೌರವ ಸೂಚಿಸಿದೆ. 

ಗೌರೀಸುತ‌, ವಿಕಟ, ವಿಘ್ನರಾಜ, ಧೂಮ್ರವರ್ಣ, ಫಾಲಚಂದ್ರ, ಗಣೇಶ, ಗಣಪತಿ, ಲಂಬೋದರ, ಏಕದಂತ, ವಿಘ್ನೇಶ್ವರ, ವಿನಾಯಕ, ವಿಶ್ವಂಭರ, ವಕ್ರತುಂಡ, ಗಜಾನನ ಇವನಿಗೆ ಸಾವಿರಾರು ಹೆಸರುಗಳು. ಯಾವ ಹೆಸರಿನಿಂದ ಕರೆದರೂ ಪ್ರಸನ್ನ ಮೂರುತಿಯೇ. ಡೊಳ್ಳು ಹೊಟ್ಟೆ ಗಣಪ ಎನ್ನಿ ಅವನಿಗೆ ಬೇಸರ ಇಲ್ಲ. ದೊಡ್ಡ ಕಿವಿ, ಸೊಂಡಿಲು, ದೊಡ್ಡ ಹೊಟ್ಟೆಗೆ ಬಿಗಿದ ಹಾವು, ಕುಳ್ಳಗಿನ ದೇಹ ಹೀಗೆ ವಿಶಿಷ್ಟ ದೇಹಾಕಾರದಿಂದ ಇದ್ದರೂ ಎಲ್ಲರ ಮೆಚ್ಚುಗೆ ಗಳಿಸಿದ ದೇವರೆಂದರೆ ಅದು ಗಣಪತಿ ಮಾತ್ರ. ಅಷ್ಟೇ ಅಲ್ಲ ಕೇವಲ ಹಿಂದೂಗಳಿಗಷ್ಟೇ ಈತ ಆರಾಧ್ಯದೈವವಲ್ಲ. ಇತರ ಧರ್ಮೀಯರಿಗೂ ಈತನೆಂದರೆ ಅಚ್ಚುಮೆಚ್ಚು. ಅನೇಕ ಧರ್ಮಗಳಲ್ಲಿ ಈತನ ಆರಾಧಕರಿದ್ದಾರೆ. ಕೇವಲ ಭಾರತೀಯರಷ್ಟೇ ಅಲ್ಲ ಜಗತ್ತಿನ ಅತ್ಯಂತ ಹೆಚ್ಚು ದೇಶಗಳಲ್ಲಿ ಆರಾಧಿಸಲ್ಪಡುವ ಏಕೈಕ ದೇವರೆಂದರೆ ಅದು ಗಣಪತಿ ಮಾತ್ರ. ಇಂಡೋನೇಷಿಯಾದಂತ ರಾಷ್ಟ್ರಗಳು ಗಣಪತಿಯ ಚಿತ್ರ ಇರುವ ಕರೆನ್ಸಿಯನ್ನೇ ಮುದ್ರಿಸಿ ಗೌರವ ಸೂಚಿಸಿದೆ.

ಇತರ ದೇವತೆಗಳಂತೆ ಇವನನ್ನು ಒಲಿಸಿಕೊಳ್ಳುವುದು ಕಷ್ಟವಲ್ಲ. ಚೌತಿಯ ವೇಳೆ ಮಾತೆ ಗೌರಿಯ ಸಮೇತ ನಿಮ್ಮ ಮನೆಮನೆಗೂ ಬರುವವನನ್ನು ಪ್ರೀತಿಯಿಂದ ಒಳಗೆ ಕರೆದುಕೊಂಡರಾಯಿತು ಅಷ್ಟೇ. ಒಂದು ಹಿಡಿ ಗರಿಕೆ, ಒಂದು ದರ್ಭೆ, ಒಂದು ಉದ್ಧರಣೆ ನೀರು- ಇವನ ಪೂಜೆಗೆ ಇಷ್ಟು ಸಾಕು. ಗಜಾನನ ಅತ್ಯಂತ ಇಷ್ಟದ ದೇವರಾಗಲು ಇದೂ ಕಾರಣ ಇರಬಹುದು. ಯಾರೇನೇ ಅವನನ್ನು ಎಷ್ಟೇ ಟೀಕೆ ಮಾಡಲಿ, ಯಾವುದೇ ಬಗೆಯಲ್ಲಿ ವ್ಯಂಗ್ಯ ಮಾಡಲಿ, ಯಾವ ಸ್ವರೂಪದಲ್ಲೇ ಮೂರ್ತಿ ಮಾಡಿ ಹೇಗೇ ಪೂಜಿಸಲಿ, ಯಾವುದಕ್ಕೂ ಸಿಟ್ಟಾಗದ ಆರಾಧ್ಯಮೂರ್ತಿ ಎಂದರೆ ಅದು ಗಣಪತಿ. ಸಕಲರ ಇಷ್ಟಾರ್ಥಗಳನ್ನು ಈಡೇರಿಸುವ ಕರುಣಾಳು. ಗಣೇಶ ಚೌತಿಯ ದಿನ ಮೋದಕಪ್ರಿಯನ ಕುರಿತಾದ ಕತೆಗಳನ್ನು ಮೆಲುಕು ಹಾಕುವುದಾದರೆ ಹೀಗಿದೆ. 

ಗಣೇಶ ಹುಟ್ಟಿದ ಕತೆ
ಎಲ್ಲರಿಗೂ ತಿಳಿದೇ ಇರುವ ಕತೆ. ಗಣಪತಿಯ ಜನನ ಹೇಗಾಯಿತು ಎಂದು. ಪಾರ್ವತಿ ತನ್ನ ಮೈ ಕೊಳೆಯಿಂದ ಬಾಲಕನನ್ನು ಮಾಡಿದಳು. ಸ್ನಾನದ ಕೋಣೆಯಾಚೆ ಕಾವಲಿಗೆ ನಿಲ್ಲಿಸಿದಳು. ಅಲ್ಲಿಗೆ ಬಂದ ಶಿವ, ತನ್ನನ್ನು ಒಳಗೆ ಬಿಡದ ಬಾಲಕನ ಮೇಲೆ ಸಿಟ್ಟಾಗಿ ತ್ರಿಶೂಲದಿಂದ ಬಾಲಕನ ತಲೆಯನ್ನು ಕಡಿದ. ಹೊರಗೆ ಬಂದ ಪಾರ್ವತಿ ಇದನ್ನು ತಿಳಿದು ಗೋಳಾಡಿದಾಗ ಆಕೆಯನ್ನು ಸಮಾಧಾನಪಡಿಸಲು ಉತ್ತರ ದಿಕ್ಕಿಗೆ ತಲೆಯಿಟ್ಟು ಮಲಗಿದವರ ತಲೆಯನ್ನು ಹುಡುಕಿ ತನ್ನಿ ಎಂದು ಶಿವಗಣಗಳಿಗೆ ಆದೇಶ ಮಾಡಿದ. ಉತ್ತರ ದಿಕ್ಕಿಗೆ ತಲೆ ಹಾಕಿ ಮಲಗಿದ್ದ ಆನೆಯ ತಲೆಯನ್ನು ತಂದಾಗ  ಜೋಡಿಸಿ ಜೀವ ನೀಡಿದ. ಶಿವೆಗೆ ಇನ್ನಷ್ಟು ಸಂತೋಷವಾಗಲೆಂದು ಗಣಗಳ ಅಧಿಪತ್ಯ ನೀಡಿದ. ಹಾಗೆ ಹೊಸರೂಪ ಧರಿಸಿದವನೇ ಆನೆಮೋರೆಯ ಗಣಪ.


ಬ್ರಹ್ಮವೈವರ್ತ ಪುರಾಣದಲ್ಲಿ ಜನಪ್ರಿಯವಲ್ಲದ ಇನ್ನೊಂದು ಕತೆಯಿದೆ. ಶಿವನ ಸೂಚನೆಯಂತೆ ಪಾರ್ವತಿ ಒಂದು ವರ್ಷ ಕಾಲ ವಿಷ್ಣುವಿನ  ತಪಸ್ಸು ಮಾಡಿದಳು. ಪ್ರಸನ್ನನಾದ ವಿಷ್ಣು ಆಕೆಗೆ ಪ್ರತ್ಯಕ್ಷನಾಗಿ, ಮುಂದೆ ಪ್ರತಿ ಕಲ್ಪದಲ್ಲೂ ತಾನು ಆಕೆಯ ಮಗುವಾಗಿ ಜನಿಸುವುದಾಗಿ ವರ ನೀಡಿದ. ಹಾಗೆ ಜನಿಸಿದ ಮಗುವೇ ಗಣಪತಿ. ಮಗುವನ್ನು ನೋಡಲು ಎಲ್ಲ ದೇವತೆಗಳಿಗೆ ಆಹ್ವಾನ ಹೋಯಿತು. ಎಲ್ಲರೂ ಬಂದು ನೋಡಿ ಖುಷಿಪಟ್ಟರು. ಆದರೆ ಶನಿ ಬರಲು ಹಿಂಜರಿದ. ಯಾಕೆಂದು ಕೇಳಿದಾಗ, ತನ್ನ ದೃಷ್ಟಿ ಆ ಮಗುವಿನ ಮೇಲೆ ಬೀಳುವುದು ಅಷ್ಟೊಂದು ಒಳ್ಳೆಯದಲ್ಲ ಎಂದ. ಪಾರ್ವತಿ ಒತ್ತಾಯಿಸಿ ಮಗುವನ್ನು ನೋಡುವಂತೆ ಮಾಡಿದಳು. ಬೇರೆ ನಿರ್ವಾಹವಿಲ್ಲದೇ ಶನಿ ಗಣಪನತ್ತ ನೋಡಿದಾಗ ಮಗುವಿನ ತಲೆ ಭಸ್ಮವಾಯಿತು. ಗೌರಿ ಗೋಳಾಡಿದಳು. ಕೂಡಲೇ ಶಿವ- ವಿಷ್ಣು ಸೇರಿ ಗಂಧಮಾದನ ಪರ್ವತದಲ್ಲಿ ಉತ್ತರ ದಿಕ್ಕಿಗೆ ತಲೆಯಿಟ್ಟು ನಿದ್ರಿಸಿದ್ದ ಆನೆಯ ತಲೆಯನ್ನು ಕತ್ತರಿಸಿ ತಂದು ಜೋಡಿಸಿದರು ಎಂಬ ಉಲ್ಲೇಖವಿದೆ.

ವೇದವ್ಯಾಸರ ಲಿಪಿಕಾರ
ವೇದದ ಜೀವನಸಾರವನ್ನೂ, ಉಪನಿಷತ್ತುಗಳ ಚಿಂತನೆಯನ್ನೂ, ಪುರಾಣಗಳ ಕಥನಗುಣವನ್ನೂ ಉಳ್ಳ ಮಹಾಕಾವ್ಯವೊಂದನ್ನು ಬರೆಯಬೇಕು ಎಂಬ ಪ್ರೇರಣೆ ಮಹರ್ಷಿ ವೇದವ್ಯಾಸರಿಗೆ ಉಂಟಾಯಿತು. ವೇದವ್ಯಾಸರಿಗೆ ಮಿಂಚಿನಂತೆ ಕಾವ್ಯದ ಸಾಲುಗಳು ಹೊಳೆಯುತ್ತಿದ್ದವು. ಅವರು ಶುಭ್ರಾಂಗರಾಗಿ ಕುಳಿತು ಅರೆನಿಮೀಲಿತ ನೇತ್ರರಾಗಿ ಅವುಗಳನ್ನು ಉಚ್ಛರಿಸುವಾಗ, ಅವುಗಳನ್ನು ಅಷ್ಟೇ ವೇಗವಾಗಿ ಬರೆದುಕೊಳ್ಳುವ ಒಬ್ಬ ಶೀಘ್ರಲಿಪಿಕಾರ ಬೇಕಿತ್ತು. ಆದರೆ ವೇದವ್ಯಾಸರ ವೇಗವನ್ನು ಸರಿಗಟ್ಟುವವರು ಸಿಗಲಿಲ್ಲ. ಕಡೆಗೆ ಗಣಪತಿ ಮಹರ್ಷಿಗೆ ಲಿಪಿಕಾರನಾಗಲು ಒಪ್ಪಿದ. ಗಣಪತಿ ನೋಡಲು ಡೊಳ್ಳುಹೊಟ್ಟೆ, ನಿಧಾನಗತಿ ಎಂಬಂತೆ ಕಂಡರೂ, ಆತನದು ಮಿಂಚಿನ ಚಲನೆ. ‘ನಾನು ಬರೆಯುವ ವೇಗಕ್ಕೇ ನೀವು ಹೇಳುತ್ತ ಹೋಗಬೇಕು, ಮಧ್ಯದಲ್ಲಿ ನಿಲ್ಲಿಸುವಂತಾದರೆ ನಾನು ಬರೆಯುವುದು ನಿಲ್ಲಿಸಿ ಎದ್ದುಹೋಗುತ್ತೇನೆ’ ಎಂದು ಷರತ್ತು ಹಾಕಿದ. ವೇದವ್ಯಾಸರೂ ಕಡಿಮೆ ಆಸಾಮಿಯೇನಲ್ಲ. ‘ನಾನು ಹೇಳುತ್ತ ಹೋಗುತ್ತೇನೆ. ಆದರೆ ನೀನು ಪ್ರತಿ ಶ್ಲೋಕವನ್ನೂ ಅರ್ಥ ಮಾಡಿಕೊಂಡು ಬರೆಯಬೇಕು’ ಎಂದು ಅವರೂ ಶರತ್ತು ಹಾಕಿದರು. ಹೀಗೆ ಶುರುವಾಯಿತು ‘ಜಯ’ನಾಮಕ ಮಹಾಭಾರತ ರಚನೆ. ವ್ಯಾಸರು ವೇಗವಾಗಿ ಹೇಳುತ್ತ ಹೋದರು; ಗಣಪತಿ ಬರೆಯುತ್ತ ಹೋದ. ಮಧ್ಯೆ ವಿಶ್ರಾಂತಿ ಬೇಕೆನಿಸಿದಾಗ ವ್ಯಾಸರು ‘ಕೂಟಶ್ಲೋಕ’ವೊಂದನ್ನು ಹೊಸೆದು ಹೇಳಿಬಿಡುತ್ತಿದ್ದರು. ಕೂಟಶ್ಲೋಕವೆಂದರೆ ಅರ್ಥ ಸಂದಿಗ್ಧವಾಗಿರುವ, ನಾನಾ ಅರ್ಥಗಳುಳ್ಳ, ಮೊದಲ ಓದಿಗೆ ತನ್ನನ್ನು ಬಿಟ್ಟುಕೊಡದ ರಚನೆಗಳು. ಗಣಪತಿ ಇದನ್ನು ಮನನ ಮಾಡಿಕೊಂಡು ಬರೆಯುವಷ್ಟರಲ್ಲಿ ವ್ಯಾಸರು ವಿಶ್ರಾಂತಿ ಮುಗಿಸಿ ಮುಂದಿನ ಶ್ಲೋಕದೊಂದಿಗೆ ಸಜ್ಜಾಗಿರುತ್ತಿದ್ದರು. ವೇದವ್ಯಾಸರ ಉದ್ಗಾರದ, ಗಣಪನ ಬರೆಯುವ ವೇಗಕ್ಕೆ ಗರಿ ಮುರಿದುಹೋಗುತ್ತಿತ್ತು. ಇದರಿಂದ ರೋಸಿದ ಗಣಪ ತನ್ನ ಒಂದು ದಂತವನ್ನೇ ಮುರಿದು ಅದರಲ್ಲಿ ಬರೆದ. ಹೀಗೆ ಮೂರು ವರ್ಷ ಕಾವ್ಯದ ರಚನೆ ನಡೆಯಿತು. ಮಹಾಭಾರತದಲ್ಲಿ ಒಂದು ಲಕ್ಷಕ್ಕೂ ಅಧಿಕ ಶ್ಲೋಕಗಳಿವೆ.

ಚಂದ್ರನಿಗಾಗಿ ದಂತ ಮುರಿದ
ಗಣಪತಿಯ ಏಕದಂತದ ಕುರಿತಾಗಿ ಇರುವ ಜನಪ್ರಿಯ ಕಥೆಯಿದೆ. ಗಣೇಶ ಚತುರ್ಥಿ ಮುಗಿಸಿ ತುಂಬಿದ ಹೊಟ್ಟೆಯಲ್ಲಿ ಇಲಿಮೇಲೆ ಕುಳಿತು ಬರುತ್ತಿದ್ದ. ಗಣಪತಿಯ ಪಡಿಪಾಟಲು ನೋಡಿ ಆಗಸದಲ್ಲಿದ್ದ ಚಂದ್ರ ದೇವರಿಗೆ ನಗು ಬಂತು. ಗಣಪತಿ ಇಲಿ ಮೇಲಿಂದ ಬಿದ್ದಾಗ ಚಂದ್ರನಿಗೆ ನಗು ತಡೆಯಲಾಗಲಿಲ್ಲ. ಜೋರಾಗಿ ನಕ್ಕುಬಿಟ್ಟ. ಅದು ಗಣಪತಿಗೆ ಅವಮಾನವಾಗಿ ಒಂದು ದಂತವನ್ನೇ ಕಿತ್ತು ಚಂದ್ರ ಕಡೆಗೆ ಎಸೆದು ಶಾಪ ಕೊಟ್ಟ. ಕುರೂಪಿಯಾಗು ಎಂದು. ಹಾಗೆ ಶುಭ್ರಾಂಗನಾಂದ ಚಂದ್ರ ಕಲೆಗಳಿಂದ ಕೂಡಿದ ಚಂದ್ರಮನಾದ. ‘ಇನ್ನೊಬ್ಬರ ಅಂಗಾಂಗಗಳನ್ನು ನೋಡಿ ನಗುವ ನಿನ್ನ ಕಾಂತಿಯೆಲ್ಲ ಅಡಗಿ ಕಪ್ಪಾಗಿ ಹೋಗು’ ಎಂದು ಶಾಪ ಕೊಟ್ಟ. ಚಂದ್ರ ನಡುಗಿಹೋದ. ಬೆಳಕಿಲ್ಲದೆ ತನಗೆ ಅಸ್ತಿತ್ವವೇ ಇಲ್ಲ ಎಂಬುದು ಅವನಿಗೆ ಗೊತ್ತಾಯಿತು. ಗಣಪನನ್ನು ಪರಿಪರಿಯಾಗಿ ಪ್ರಾರ್ಥಿಸಿದ. ಬೆನಕನ ಮನಕರಗಿತು. ‘ಸರಿ. ನಿನ್ನ ಕಾಂತಿ ಮರಳಲಿ. ಆದರೆ ಮಾಸದಲ್ಲಿ ಹದಿನೈದು ದಿನ ಕ್ಷಯಿಸುತ್ತ ಹೋಗಿ ಅಮಾವಾಸ್ಯೆಯಂದು ಸಂಪೂರ್ಣ ಕಪ್ಪಾಗಿ, ಮತ್ತೆ ಹದಿನೈದು ದಿನ ವೃದ್ಧಿಯಾಗಿ ಪೂರ್ಣಿಮೆಯಂದು ಪೂರ್ತಿ ಬೆಳಗು. ಆದರೆ ಕಲೆ ನಿನ್ನಲ್ಲಿ ಉಳಿದೇ ಇರಲಿ. ಚೌತಿಯಂದು ನಿನ್ನನ್ನು ನೋಡಿದವರಿಗೂ ಅಪವಾದದ ಕಪ್ಪು ಕಲೆ ಉಳಿಯಲಿ’ ಎಂದು ಉಪಶಾಪ ನೀಡಿದ.


ಬೆಕ್ಕು ಪರಚಿದ ಮಗ

ತುಂಟ, ಬಾಲ ಗಣೇಶನಿಗೆ ಪ್ರಾಣಿಗಳೊಂದಿಗೆ ಆಡುವುದೆಂದರೆ ಇಷ್ಟ. ಒಂದು ಬೆಕ್ಕಿನ ಮರಿಯನ್ನು ಆತ ಸದಾ ಆಟವಾಡಿಸುತ್ತಿದ್ದ. ಆದರೆ ಬೆಕ್ಕಿನ ಮರಿಯ ಬಾಲ ಹಿಡಿದು ಗರಗರ ತಿರುಗಿಸಿ, ಅದರ ಕೂದಲು ಹಿಡಿದು ಎಳೆದು, ಬಾಯಿ ಹಿಸಿದು ಹಲ್ಲು ಎಣಿಸಿ- ಒಟ್ಟಾರೆ ಇದರಿಂದೆಲ್ಲ ಬೆಕ್ಕಿನ ಮರಿಗೆ ಇದರಿಂದ ಹಿಂಸೆಯಾಗುತ್ತಿತ್ತು. ಒಮ್ಮೆ ಬೆಕ್ಕಿನ ಮರಿಯ ಜೊತೆ ಆಟವಾಡುತ್ತ ಅದರ ಮೈತುಂಬ ಪರಚಿಬಿಟ್ಟ. ಮನೆಗೆ ಮರಳಿದಾಗ, ಅಮ್ಮ ಪಾರ್ವತಿ ಎದುರಾದಳು. ಆಕೆಯ ಮುಖದ ತುಂಬ ಪರಚಿದ ಗುರುತು! ಗಾಬರಿಯಾದ, ಸಿಟ್ಟಿಗೆದ್ದ ಗಣಪತಿ ‘ಯಾರಮ್ಮಾ ಇದನ್ನು ಮಾಡಿದ್ದು? ಹೇಳು, ಅವನಿಗೊಂದು ಗತಿ ಕಾಣಿಸುವೆ’ ಎಂದ. ‘ನೀನೇ’ ಎಂದಳು ಪಾರ್ವತಿ. ‘ನಾನೇ?’ ಎಂದ ಗಣೇಶ ಅರ್ಥವಾಗದೆ. ‘ಈಗತಾನೆ ಯಾರ ಮೈ ಪರಚಿದೆ ಹೇಳು?’ ಎಂದಳು ತಾಯಿ. ಲೋಕದ ಅಣುರೇಣು ತೃಣಕಾಷ್ಠಗಳಲ್ಲೂ ಜೀವಜಾತಿಗಳಲ್ಲೂ ಪ್ರಕೃತಿಮಾತೆಯಾಗಿ ತನ್ನ ತಾಯಿಯೇ ಇದ್ದಾಳೆಂಬುದನ್ನು ಗಣೇಶ ಅರ್ಥ ಮಾಡಿಕೊಂಡ.

ಕುಬೇರನಿಗೆ ನೀರು ಕುಡಿಸಿದ
ಕುಬೇರ ಸಂಪತ್ತಿನ ದೇವತೆ. ಆತನಿಗೆ ತಾನು ದೇವತೆಗಳಲ್ಲೆಲ್ಲ ಸಿರಿವಂತ ಎಂಬ ಹೆಮ್ಮೆ. ಒಮ್ಮೆ ಆತ ದೇವತೆಗಳನ್ನೆಲ್ಲ ಕರೆದು ಅದ್ದೂರಿ ಔತಣಕೂಟ ಏರ್ಪಡಿಸಿದ. ಎಲ್ಲ ದೇವತೆಗಳನ್ನೂ ಕರೆದಂತೆ ಶಿವ- ಪಾರ್ವತಿಯರನ್ನೂ ಕರೆದ. ಶಿವ ಪಾರ್ವತಿಯರು ತಾವು ಹೋಗುವ ಬದಲು ಮಗ ಗಣೇಶನನ್ನು ಕಳುಹಿಸಿದರು. ಕುಬೇರನ ಹೆಮ್ಮೆಯನ್ನು ಗಮನಿಸಿದ ಗಣೇಶ, ಆತನಿಗೆ ಪಾಠ ಕಲಿಸಲು ನಿರ್ಧರಿಸಿದ. ಭೋಜನದ ಎಲೆಯ ಮುಂದೆ ಕುಳಿತವನು ಮಾಡಿದ ಅಡುಗೆಯನ್ನೆಲ್ಲ ತಿಂದು ತೇಗಲು ಆರಂಭಿಸಿದ. ಬೇರಾವ ಅತಿಥಿಗಳಿಗೂ ಒಂದು ಅನ್ನದ ಅಗುಳೂ ಉಳಿಯದಂತಾಯಿತು. ಪುನಃ ಅಡುಗೆ ಸಿದ್ಧವಾಯಿತು. ಅದೆಲ್ಲವೂ ಗಣೇಶನ ಹೊಟ್ಟೆಗೇ ಹೋಯಿತು. ಹೀಗೆ ಗಣೇಶ ತಿನ್ನುತ್ತ ಹೋದಂತೆ ಕುಬೇರನ ಸಂಪತ್ತು ಕ್ಷಿಣವಾಗುತ್ತ ಹೋಯಿತು. ಖಜಾನೆ ಖಾಲಿಯಾಯಿತು. ಬಡಿಸಲು ಇನ್ನೇನೂ ಉಳಿಯದೆ ಹೋಯಿತು. ನನ್ನನ್ನು ತೃಪ್ತಿಪಡಿಸದಿದ್ದರೆ ನಿನ್ನನ್ನೇ ತಿನ್ನುವೆ ಎಂದು ಗಣೇಶ ಬೆದರಿಸಿದ. ಗಾಬರಿಯಾದ ಕುಬೇರ ಕಾಪಾಡಿರೆಂದು ಗಣೇಶನ ತಂದೆ ಶಿವನ ಮೊರೆ ಹೋದ. ಶಿವ ನೀಡಿದ ಸೂಚನೆಯಂತೆ, ಅಹಂಭಾವ ತೊರೆದು, ಭಕ್ತಿಭಾವದಿಂದ ತುಳಸಿ ಎಲೆ ಗರಿಕೆಯ ಸಮೇತ ಒಂದು ಉದ್ಧರಣೆ ತೀರ್ಥವನ್ನು ನೀಡಿದಾಗ ಗಣೇಶ ತೃಪ್ತನಾದ.

ಯಾರು ಗೆದ್ದವರು?
ಒಮ್ಮೆ ದೇವತೆಗಳು ಬಲು ಅಪರೂಪವಾದ ಜ್ಞಾನವೃಕ್ಷದ ಹಣ್ಣೊಂದನ್ನು ಪಾರ್ವತಿಗೆ ತಂದು ಕೊಟ್ಟರು. ಅದನ್ನು ಪಡೆಯಲು ಗಣಪತಿಗೂ ಷಣ್ಮುಖನಿಗೂ ಜಗಳವಾಯಿತು. ಜಗಳ ಬಿಡಿಸಲು ಶಿವ- ಪಾರ್ವತಿ ಒಂದು ಉಪಾಯ ಮಾಡಿದರು. ‘ಇಬ್ಬರೂ ಜಗತ್ತನ್ನು ಸುತ್ತಿ ಬನ್ನಿ. ಯಾರು ಮೊದಲು ಬರುತ್ತಾರೋ ಅವರಿಗೆ ಹಣ್ಣು’ ಎಂದು ಶಿವ ಹೇಳಿದ. ಆ ಕೂಡಲೇ ಕಾರ್ತಿಕೇಯ ತನ್ನ ವಾಹನ ನವಿಲನ್ನು ಏರಿ ವಿಶ್ವ ಸುತ್ತಲು ಹೊರಟೇಬಿಟ್ಟ. ನವಿಲು ಸುಬ್ರಹ್ಮಣ್ಯನನ್ನು ಕೂರಿಸಿ ಹಾರಿತು. ಗಣೇಶನ ವಾಹನ ಇಲಿ, ಗಣೇಶನನ್ನು ಹೊತ್ತುಕೊಂಡು ಪ್ರಪಂಚ ಸುತ್ತಬೇಕೆ ಎಂದು ಆತಂಕದಿಂದ ಆತನನ್ನು ನೋಡಿತು. ಆದರೆ ವಿಶ್ವಂಭರ ಕ್ಷಣಮಾತ್ರವೂ ಚಿಂತಿಸಲಿಲ್ಲ. ಮಿಂದು ಶುಚಿಭೂìತನಾಗಿ, ನಡೆಯುತ್ತಾ ತಂದೆ- ತಾಯಿಯರಿಗೆ ಒಂದು ಸುತ್ತು ಬಂದ. ‘ಜಗತಃ ಪಿತರೌ ವಂದೇ ಪಾರ್ವತೀ ಪರಮೇಶ್ವರೌ’ ಎಂದ. ಜಗತ್ತಿನ ತಾಯಿ- ತಂದೆಯರಾದ ಶಿವ ಪಾರ್ವತಿಯರಿಗೆ ಪ್ರದಕ್ಷಿಣೆ ಬಂದರೆ ಜಗತ್ತನ್ನೇ ಸುತ್ತಿದಂತೆ ಅಲ್ಲವೆ? ಹಣ್ಣು ಗಣಪತಿಗೆ ದಕ್ಕಿತು. ತುಂಬ ಹೊತ್ತಿನ ನಂತರ ಬಂದ ಕಾರ್ತಿಕೇಯ, ಹಣ್ಣೆಲ್ಲಿದೆ ಎಂದರೆ, ಅದನ್ನಾಗಲೇ ಗಣಪ ಪಡೆದು ತಿಂದು ಮುಗಿಸಿದ್ದಾನೆ.

ಶಿವನಿಗೂ ವಿಘ್ನ
ಏಕದಂತ ಪ್ರಥಮ ವಂದಿತ. ಎಲ್ಲರೂ ಯಾವುದೇ ಕೆಲಸಕ್ಕೆ ಮುಂದಾಗುವ ಮುನ್ನ ಮನದಲ್ಲಾದರೂ ವಿನಾಯಕನಿಗೆ ವಂದಿಸಲೇಬೇಕು. ಗಣಪ ನಮ್ಮ ಕೆಲಸದ ದಾರಿಯಲ್ಲಿ ಒದಗುವ ವಿಘ್ನಗಳನ್ನು ಕಳೆದು ಕಾರ್ಯವನ್ನು ಸುಗಮಗೊಳಿಸುತ್ತಾನೆ. ಗಣಪನಿಗೆ ಈ ಅಧಿಕಾರವನ್ನು ನೀಡಿದವನು ತಂದೆ ಈಶ್ವರನೇ. ಈ ನಿಯಮದಿಂದ ಶಿವನೂ ಹೊರತಲ್ಲ. ಆದರೆ ಒಮ್ಮೆ, ಶಿವನಿಗೇ ಗಣಪನನ್ನು ನೆನೆಯಲು ಮರೆತುಹೋಯಿತು. ತ್ರಿಪುರಾಸುರರು ವರಬಲದಿಂದ ಸೊಕ್ಕಿ ಮೆರೆಯುತ್ತಿದ್ದಾಗ, ಅವರನ್ನು ಸದೆಬಡಿಯಲು ಬ್ರಹ್ಮನ ಸಾರಥ್ಯದಲ್ಲಿ ಶಿವನೇ ಹೊರಟ. ಆದರೆ ಶಿವ ಕುಳಿತ ವಿಶ್ವಕರ್ಮ ನಿರ್ಮಿತ ರಥದ ಚಕ್ರದ ಕಡೆಗೀಲು ತಪ್ಪಿ ರಥ ಮುಗ್ಗರಿಸಿತು. ಅಪಶಕುನವಾಯಿತು. ಯಾಕೆ ಹೀಗೆಂದು ಚಿಂತಿಸಿದ ಶಿವನಿಗೆ, ಗಣಪತಿ ಪೂಜೆ ಮಾಡಲು ಬ್ರಹ್ಮ ನೆನಪಿಸಿದ. ವಿಘ್ನವಿನಾಶಕನನ್ನು ನೆನೆದ ಬಳಿಕ ವಿಘ್ನ ದೂರವಾಗಿ, ತ್ರಿಪುರಾಸುರರ ಮಥನ ಸಾಂಗವಾಗಿ ನೆರವೇರಿತು.

ವಿನಾಯಕಿ
ವಿನಾಯಕನ ಸ್ತ್ರೀ ಸ್ವರೂಪವೂ ಒಂದಿದೆ. ಈಕೆಯನ್ನು ವಿನಾಯಕಿ ಎಂದು ಕರೆಯುತ್ತಾರೆ. ತಾಂತ್ರಿಕ ಸಾಧನೆಗಳನ್ನು ಮಾಡುವವರು ಈಕೆಯನ್ನು ಪೂಜಿಸುತ್ತಾರೆ. ಒಮ್ಮೆ ಅಂಧಕನೆಂಬ ಅಸುರ ಕೈಲಾಸಕ್ಕೆ ಮುತ್ತಿಗೆ ಹಾಕಿ, ಪಾರ್ವತಿಯನ್ನು ಎಳೆದೊಯ್ಯಲು ಯತ್ನಿಸಿದ. ಶಿವ ಆತನನ್ನು ತ್ರಿಶೂಲದಿಂದ ಇರಿದಾಗ, ಆತನ ರಕ್ತದ ಬಿಂದು ಬಿದ್ದಲ್ಲೆಲ್ಲ ಅಂಧಕರು ಹುಟ್ಟಿಕೊಳ್ಳತೊಡಗಿದರು. ಆತನ ರಕ್ತ ನೆಲ ಸೇರದಂತೆ ಹೀರಿ ಮುಗಿಸಲು ಪ್ರತಿ ದೇವತೆಯೂ ತಮ್ಮ ಶಕ್ತಿ ರೂಪವನ್ನು ಯುದ್ಧಾಂಗಣದಲ್ಲಿ ಹೊರತೆಗೆಯುವಂತೆ ಪಾರ್ವತಿ ಸೂಚಿಸಿದಳು. ಹಾಗೆ ವಿನಾಯಕ ಹೊರಗೆಡಹಿದ ಆತನ ಸ್ತ್ರೀ ಸ್ವರೂಪವೇ ವಿನಾಯಕಿ. ಅಂಧಕನ ಹತ್ಯೆಯಲ್ಲಿ ಈಕೆಯೂ ಪಾಲ್ಗೊಂಡಳು.

ವಕ್ರತುಂಡಾಯ ಧೀಮಹಿ...
ಒಮ್ಮೆ ಕೈಲಾಸದಲ್ಲಿ ಗಣಗಳೊಂದಿಗೆ ಸಮಾಲೋಚನೆಯಲ್ಲಿದ್ದ ಶಿವನನ್ನು ಕಾಣಲು ರಾಜರ್ಷಿ ಪರಶುರಾಮ ಆಗಮಿಸಿದ. ಈಗ ಆತನನ್ನು ಕಾಣುವಂತಿಲ್ಲ ಎಂದು ಗಣೇಶ ತಡೆದ. ಇಬ್ಬರಿಗೂ ಮಾತಿಗೆ ಮಾತು ಬೆಳೆದು ಕದನ ಆರಂಭವಾಯಿತು. ಪರಶುರಾಮ ಸಿಟ್ಟಿನಿಂದ ತನ್ನ ಕೊಡಲಿಯನ್ನು ತೆಗೆದು ಬೀಸಿದ. ಈ ಕೊಡಲಿ ಶಿವನಿಂದಲೇ ಭಾರ್ಗವರಾಮನಿಗೆ ಕೊಡಲ್ಪಟ್ಟಿತ್ತಾದುದರಿಂದ, ವಿN°àಶನಿಗೆ ಅದನ್ನು ಗೌರವಿಸದೆ ನಿರ್ವಾಹವಿರಲಿಲ್ಲ. ತನ್ನ ದಂತವನ್ನು ಅದಕ್ಕೆ ಒಡ್ಡಿದ. ದಂತ ಮುರಿಯಿತು. ಹೀಗೆ ಕೂಡಾ ವಕ್ರದಂತನಾದ ಎಂಬ ಕಥೆಯಿದೆ.

ವಿಘ್ನೇಶ, ವಿಘ್ನವಿನಾಶ
ಮಹಾವಿಷ್ಣುವಿಗೆ ಸ್ವಯಂವರ ಏರ್ಪಾಡಾಯಿತು. ಮಹಾಲಕ್ಷ್ಮೀಯೇ ವಧು. ದೇವಾನುದೇವತೆಗಳೆಲ್ಲ ಅದ್ದೂರಿಯ ಮೆರವಣಿಗೆ ತೆಗೆದರು. ಗಣೇಶನಿಗೆ ಆಹ್ವಾನ ಇರಲಿಲ್ಲ. ಡುಮ್ಮಣ್ಣ ಗಣೇಶ ಇಲಿಯ ಮೇಲೆ ಬರತೊಡಗಿದರೆ ಮೆರವಣಿಗೆ ನಿಧಾನವಾದೀತೆಂದು ದೇವತೆಗಳು ತಮ್ಮೊಳಗೇ ಆತನನ್ನು ಗೇಲಿ ಮಾಡಿಕೊಂಡರು. ಮೆರವಣಿಗೆ ಶುರುವಾಯಿತು. ಇತ್ತ ಕೈಲಾಸದಲ್ಲಿ ಒಂಟಿಯಾಗಿ ಕುಳಿತಿದ್ದ ಗಣಪನ ಬಳಿಗೆ ಬಂದ ನಾರದ, ವಿಷ್ಣುವಿನ ಮದುವೆ ಸುದ್ದಿ ಬಿತ್ತರಿಸಿದ. ಗಣಪನನ್ನು ವ್ಯಂಗ್ಯ ಮಾಡುವುದಕ್ಕಾಗಿಯೇ ಆಮಂತ್ರಣ ನೀಡಿಲ್ಲವೆಂದು ಹಚ್ಚಿಕೊಟ್ಟ. ಸಿಟ್ಟಾದ ಗಣೇಶ, ಮೂಷಿಕನನ್ನು ಕರೆದು ಏನೋ ಹೇಳಿದ. ಮೂಷಿಕರಾಯ ಲಕ್ಷಾಂತರ ಇಲಿಗಳ ಸೈನ್ಯವನ್ನು ಕರೆದುಕೊಂಡು ಹೋಗಿ ದೇವತೆಗಳ ಮೆರವಣಿಗೆ ಸಾಗುವ ದಾರಿಯಲ್ಲಿ ಹಳ್ಳಗಳನ್ನು ಕೊರೆದಿಟ್ಟ. ದೇವತೆಗಳ ರಥಗಳೆಲ್ಲ ನೆಲ ಕುಸಿದು ಕೂತವು. ದೇವತೆಗಳಿಗೆ ಕಾರಣ ಗೊತ್ತಾಗಲಿಲ್ಲ. ಇದನ್ನೆಲ್ಲ ನೋಡುತ್ತಿದ್ದ ಮನುಷ್ಯನೊಬ್ಬ ‘ಏನೋ ತಪ್ಪಿರಬೇಕು. ನೀವು ಗಣೇಶನ ಪೂಜೆ ಮಾಡಿದ್ದೀರೋ ಇಲ್ಲವೋ?’ ಎಂದು ದೇವತೆಗಳನ್ನು ವಿಚಾರಿಸಿದ. ದೇವತೆಗಳಿಗೆ ತಮ್ಮ ತಪ್ಪಿನ ಅರಿವಾಯಿತು. ಆದಿವಂದಿತನನ್ನು ಕರೆಸಿ ಮಾನಿಸಿದ ನಂತರ ಮದುವೆ ನಿರ್ವಿಘ್ನವಾಯಿತು.

ತುಂಟ ಬಾಲ ಗಣಪ
ಬಾಲಗಣೇಶ ಮಹಾ ತುಂಟ. ಒಮ್ಮೆ ಆತ ತಂದೆ- ತಾಯಿಯರ ನಡುವೆ ಕುಳಿತಿದ್ದ. ಆತನಿಗೆ ತುಂಟತನ ಮಾಡುವ ಮನಸ್ಸಾಯಿತು. ‘ಅಪ್ಪಾ, ಅಮ್ಮಾ, ನೀವಿಬ್ಬರೂ ನನಗೆ ಏಕಕಾಲದಲ್ಲಿ ಕೆನ್ನೆಯ ಮೇಲೆ ಮುತ್ತು ಕೊಡಬೇಕು’ ಎಂದ. ಶಿವ-ಪಾರ್ವತಿ ಒಪ್ಪಿದರು. ಗಣಪ ‘ಸರಿ.. ಕೊಡಿ’ ಎಂದ. ಇಬ್ಬರೂ ಗಣಪನ ಕೆನ್ನೆಗೆ ಮುತ್ತು ನೀಡಲು ಎರಡೂ ಕಡೆಗಳಿಂದ ಬಗ್ಗಿದರು. ಅದೇ ಕ್ಷಣ ಬೆನಕ ಮುಖವನ್ನು ಹಿಂದಕ್ಕೆ ಎಳೆದುಕೊಂಡ. ಜಗದಾದಿ ದಂಪತಿಗಳು ಮುಖಗಳು ಪರಸ್ಪರ ಮುತ್ತಿಕ್ಕಿಕೊಂಡವು. ಇದನ್ನು ನೋಡಿ ಗಣಪ ಮನಸಾ ನಕ್ಕ. ಗೌರಿಯ ಮುಖ ಲಜ್ಜೆಯಿಂದ ಕೆಂಪಾಯಿತು.

ಆತ್ಮಲಿಂಗ ಸಂರಕ್ಷಕ
ಲಂಕಾಧಿಪತಿ ರಾವಣ, ತಾನು ತ್ರೈಭುವನಗಳಿಗೆ ಅಧಿಪತಿಯಾಗಬೇಕೆಂಬ ಆಸೆಯಿಂದ, ಈಶ್ವರನನ್ನು ಉದ್ದೇಶಿಸಿ ಘನಘೋರ ತಪಸ್ಸು ಮಾಡಿದ. ಶಂಕರ ಒಲಿದು ಪ್ರತ್ಯಕ್ಷನಾದ. ‘ನಿನ್ನ ಆತ್ಮಲಿಂಗವನ್ನು ಕೊಡು’ ಎಂದು ಬೇಡಿದ ರಾವಣ. ಆತ್ಮಲಿಂಗವು ಅನ್ಯರ ಕೈವಶವಾದರೆ ಶಿವನ ಶಕ್ತಿಸರ್ವಸ್ವವೂ ಆತನ ಕೈ ಸೇರಿದಂತೆ. ಆದರೆ ಶಂಕರ ಮರುಯೋಚನೆಯನ್ನೇ ಮಾಡದೆ ‘ತಥಾಸ್ತು’ ಎಂದ. ‘ಈ ಲಿಂಗವನ್ನು ನೆಲದಲ್ಲಿ ಇಡಕೂಡದು’ ಎಂದು ನಿಬಂಧನೆ ವಿಧಿಸಿದ. ಆಗಲಿ ಎಂದು ರಾವಣ, ಆತ್ಮಲಿಂಗವನ್ನು ಪಡೆದು, ಲಂಕೆಯ ದಾರಿಯಲ್ಲಿ ಸಾಗಿದ. ದೇವತೆಗಳಲ್ಲಿ ಕೋಲಾಹಲವಾಯಿತು. ಶಿವನ ಆತ್ಮಲಿಂಗ ರಾವಣನ ವಶವಾದರೆ ಮುಂದೇನು ಗತಿ? ಪರಿಸ್ಥಿತಿಯನ್ನು ನಿಭಾಯಿಸಲು ಗಣಪನ ಮೊರೆಹೋದರು. ಗಣಪ ಮುಗುಳ್ನಕ್ಕ. ಇತ್ತ ರಾವಣ ಸಮುದ್ರ ತೀರದಲ್ಲಿ ಸಾಗುತ್ತಿದ್ದಾಗ ಸಂಜೆಯಾಯಿತು. ರಾವಣನಿಗೆ ಸಂಧ್ಯಾವಂದನೆ ಮಾಡುವ ಸಮಯ. ಆದರೆ ಲಿಂಗವನ್ನು ನೆಲದಲ್ಲಿ ಇಡುವಂತಿಲ್ಲ. ಅದೇ ಹೊತ್ತಿಗೆ ಅಲ್ಲೊಬ್ಬ ಬ್ರಾಹ್ಮಣ ವಟು ಬಂದ. ‘ಅಯ್ಯಾ, ನಾನು ಸಂಧ್ಯಾವಂದನೆ ಮುಗಿಸಿ ಬರುವವರೆಗೂ ಇದನ್ನು ಹಿಡಿದುಕೊಂಡಿರು. ನೆಲಕ್ಕೆ ಮಾತ್ರ ಇಡಬೇಡ’ ಎಂದು ವಟುವಿಗೆ ನೀಡಿದ. ‘ಆಯಿತು. ಆದರೆ ನನಗೆ ಇದು ಭಾರವೆನಿಸಿದರೆ, ನಾನು ಕೂಗಿದಾಗ ನೀನು ಬರಬೇಕು. ಮೂರು ಸಲ ಕೂಗಿದರೂ ಬರದಿದ್ದರೆ ನೆಲದಲ್ಲಿ ಇಟ್ಟುಬಿಡುತ್ತೇನೆ’ ಎಂದ ವಟು. ರಾವಣ ಅತ್ತ ಹೋಗಿ ಸ್ವಲ್ಪ ಹೊತ್ತಾಗುತ್ತಲೇ ಈ ವಟು ‘ರಾವಣಾ’ ಎಂದು ಮೂರು ಸಲ ಕೂಗಿ ಲಿಂಗವನ್ನು ನೆಲದಲ್ಲಿ ಇಟ್ಟುಬಿಟ್ಟ. ಗಾಬರಿಯಿಂದ ಓಡಿಬಂದ ರಾವಣ ನೋಡುತ್ತಾನೆ, ಲಿಂಗ ನೆಲದಲ್ಲಿ ಹೂತುಹೋಗಿದೆ. ಅದನ್ನು ಎಳೆಯಲು ಪ್ರಯತ್ನಿಸಿದ. ಬರಲಿಲ್ಲ. ನಿಂತು ನೋಡುತ್ತಿದ್ದ ವಟುವಿನ ತಲೆಗೆ ಸಿಟ್ಟಿನಿಂದ ಕುಟ್ಟಿದ. ವಟುವಿನ ತಲೆಗೆ ಗಾಯವಾಯಿತು. ಲಿಂಗ ನೆಲದಲ್ಲಿ ನಿಂತ ಸ್ಥಳವೇ ಗೋಕರ್ಣ. ಇಲ್ಲಿನ ಲಿಂಗ ನೆಲದೊಳಗೇ ಇದೆ. ಇಲ್ಲಿರುವ ಗಣೇಶನ ಮೂರ್ತಿಯ ತಲೆಯಲ್ಲಿ ಗಾಯದ ಗುರುತಿದೆ. ಲಿಂಗವನ್ನು ಕೀಳಲು ಯತ್ನಿಸಿದಾಗ ಅದು ಚೂರಾಗಿ ವಿವಿಧೆಡೆ ಹೋಗಿ ಬಿದ್ದಿತು. ಹಾಗೆ ಬಿದ್ದಲ್ಲೆಲ್ಲ ದೇವಾಲಯಗಳ ನಿರ್ಮಾಣ ಮಾಡಲಾಯಿತು.

ಕಾವೇರಿ ಸೃಷ್ಟಿಕರ್ತ
ಕಾವೇರಿ ನದಿಯ ಹುಟ್ಟಿನ ಹಿಂದೆ ಗಣೇಶನಿದ್ದಾನೆ. ಒಮ್ಮೆ ಮಹರ್ಷಿ ಅಗಸ್ತ್ಯರು, ಭಾರತದ ದಕ್ಷಿಣ ಭಾಗದಲ್ಲಿ ನದಿಯೊಂದನ್ನು ಸೃಷ್ಟಿಸುವ ಉದ್ದೇಶದಿಂದ, ಶಿವನನ್ನು ಕುರಿತು ತಪಸ್ಸು ಮಾಡಿದರು. ಶಿವನಿಂದ ಪರಮ ಪಾವನೆಯಾದ ಗಂಗೆಯ ಒಂದು ಭಾಗವನ್ನು ಪಡೆದು, ಆಕೆಯನ್ನು ಸೂಕ್ಷ್ಮ ರೂಪದಲ್ಲಿ ಕಮಂಡಲದಲ್ಲಿ ತುಂಬಿಸಿಕೊಂಡು ದಕ್ಷಿಣದತ್ತ ಪ್ರಯಾಣಿಸಿದರು. ಕೊಡಗಿನ ಬ್ರಹ್ಮಗಿರಿಯಲ್ಲಿ ಪ್ರಯಾಣಿಸುತ್ತಿದ್ದಾಗ, ಅಲ್ಲಿ ಕಾಣಿಸಿಕೊಂಡ ಬ್ರಾಹ್ಮಣ ಹುಡುಗನೊಬ್ಬನ ಕೈಯಲ್ಲಿ ಕಮಂಡಲವನ್ನು ಕೊಟ್ಟು, ಶೌಚಬಾಧೆ ಕಳೆಯಲು ಹೋದರು. ಕಮಂಡಲವನ್ನು ನೆಲದಲ್ಲಿ ಇಡಬಾರದೆಂದು ಎಚ್ಚರಿಸಿದರು. ಈ ಹುಡುಗ ಇನ್ಯಾರೂ ಅಲ್ಲ, ಗಣೇಶ. ಆತ ಕಮಂಡಲುವನ್ನು ಅಲ್ಲಿಯೇ ಇಟ್ಟುಬಿಟ್ಟ. ಅದರ ಮೇಲೊಂದು ಪಕ್ಷಿ ಬಂದು ಕೂತಿತು. ಅಗಸ್ತ್ಯರು ಪಕ್ಷಿಯನ್ನು ಓಡಿಸಿದಾಗ, ಅದು ಹಾರಿದ ರಭಸಕ್ಕೆ ಕಮಂಡಲು ಮಗುಚಿ ಗಂಗೆ ಚೆಲ್ಲಿ ಕಾವೇರಿ ನದಿಯಾಗಿ ಹರಿದಳು.

ಸಿದ್ಧಿ- ಬುದ್ಧಿಯರ ಒಡೆಯ
ಪ್ರಜಾಪತಿ ಬ್ರಹ್ಮನಿಗೆ ಸಿದ್ಧಿ ಮತ್ತು ಬುದ್ಧಿ ಎಂಬ ಇಬ್ಬರು ಪುತ್ರಿಯರಿದ್ದರು. ಅವರಲ್ಲಿ ಒಬ್ಬಳನ್ನು ಗಣೇಶನಿಗೂ, ಇನ್ನೊಬ್ಬಳನ್ನು ಕಾರ್ತಿಕೇಯನಿಗೂ ವಿವಾಹ ಮಾಡಿಕೊಡಬೇಕೆಂಬುದು ಆತನ ಇಷ್ಟ. ಇದನ್ನು ಆತ ಶಿವನಲ್ಲಿ ಹೇಳಿದ. ಆದರೆ ಶಿವ ಹೇಳಿದ ‘ಬರಿಯ ಸಿದ್ಧಿಯಿದ್ದು ಬುದ್ಧಿ ಇಲ್ಲದಿದ್ದರೆ ಪ್ರಯೋಜನವಿಲ್ಲ, ಬರಿಯ ಬುದ್ಧಿಯಿದ್ದು ಸಿದ್ಧಿಯಿಲ್ಲದಿದ್ದರೂ ಪ್ರಯೋಜನವಿಲ್ಲ. ಆದ್ದರಿಂದ ಇಬ್ಬರೂ ಜತೆಗೇ ಇರಲಿ. ಗಣಪತಿ ಜ್ಞಾನದ ಅಧಿಪತಿಯಾದುದರಿಂದ ಇಬ್ಬರೂ ಅವನನ್ನೇ ವರಿಸಲಿ’ ಎಂದ. ಹಾಗೇ ಸಿದ್ಧಿ- ಬುದ್ಧಿ ಇಬ್ಬರೂ ಗಣಪನನ್ನು ಮದುವೆಯಾದರು. ಇವರಿಬ್ಬರಿಗೆ ಶುಭ- ಲಾಭ ಎಂಬ ಮಕ್ಕಳು ಜನಿಸಿದರು.

ಗಣಪತಿಗೆ ಈ ಐದು ಇಷ್ಟವಂತೆ
ಗಣೇಶ ಚತುದರ್ಶಿಯಂದು ಗಣಪತಿ ದೇವರನ್ನು ಸಂಭ್ರಮದಿಂದ ಪೂಜಿಸಲಾಗುವುದು. ಎಲ್ಲರಿಗೂ ತುಂಬ ಇಷ್ಟ ದೇವರು ಎಂದರೆ ಅದು ಗಣಪತಿ. ಡೊಳ್ಳು ಹೊಟ್ಟೆ, ಗಜಮುಖನೆಂದು ಪೂಜಿಸಲ್ಪಡುವ ಗಣೇಶ ದೇವರು ಕೆಡುಕು ಹಾಗೂ ಪಾಪ ವಿಮೋಚನೆ ಮಾಡುವ ಎಲ್ಲರ ಸ್ನೇಹಿತ ದೇವರು. ಗಣಪತಿ ದೇವರನ್ನು ಕೇವಲ ಹಿಂದೂಗಳು ಮಾತ್ರವಲ್ಲದೆ ಬೇರೆ ಧರ್ಮದವರು ಕೂಡ ಪೂಜಿಸುವುದು ಅವರ ಸುಂದರ ದೇಹ ಹಾಗೂ ಭಕ್ತರಿಗೆ ಒಲಿಯುವ ಕಾರಣಕ್ಕಾಗಿ. ಗಣೇಶ ದೇವರನ್ನು ಜನರ ಅಧಿಪತಿ ಗಣಪತಿ ಎಂದು ಕರೆಯಲಾಗುತ್ತದೆ.

ಮೋದಕ
ಗಣಪತಿ ದೇವರು ತಿಂಡಿ ಪ್ರಿಯ ಎಂದೇ ಪ್ರತೀತಿ. ಗಣೇಶ ದೇವರ ವಿಗ್ರಹದ ಕೈಗಳಲ್ಲಿ ಹಾಗೂ ಅವರ ಎದುರಿಗೆ ಇರುವಂತಹ ತಿಂಡಿಗಳನ್ನು ನೋಡಿದಾಗ ಗಣಪತಿ ದೇವರಿಗೆ ಆಹಾರ ತುಂಬಾ ಇಷ್ಟ ಎಂದು ತಿಳಿದುಬರುವುದು. ಗಣಪತಿ ದೇವರನ್ನು ಬೇಗನೆ ಪ್ರಸನ್ನರಾಗಿಸಲು ಅವರಿಗೆ ಪ್ರಿಯವಾದ ತಿಂಡಿ ಮಾಡಬೇಕು. ಮೋದಕವು ಗಣಪತಿಗೆ ತುಂಬಾ ಇಷ್ಟವಾದ ತಿಂಡಿ. ಗಣೇಶ ಚತುದರ್ಶಿಯಂದು ಮೋದಕವನ್ನು ಮಾಡಿ ಬಡಿಸುತ್ತಾರೆ.

ಗರಿಕೆ
ಗಣಪತಿ ದೇವರಿಗೆ ಇಷ್ಟವಾಗುವಂತಹ ಮತ್ತೂಂದು ಹೂವು ಅಥವಾ ಆಹಾರ ಗರಿಕೆ. ಗಣಪತಿ ದೇವರಿಗೆ ಗರಿಕೆ ಯಾಕೆ ಇಷ್ಟ ಎನ್ನುವ ಬಗ್ಗೆ ಒಂದು ಕಥೆಯೇ ಇದೆ. ದೇವರುಗಳಿಗೆ ಕೆಡುಕನ್ನು ಉಂಟು ಮಾಡುತ್ತಿದ್ದ ಅನಲಾಸುರನನ್ನು ಗಣಪತಿ ದೇವರು ಒಂದು ಸಲ ತಿಂದರಂತೆ. ಅನಲಾಸುರ ಜೀರ್ಣವಾಗದೆ ಗಣಪತಿಯ ಹೊಟ್ಟೆಯಲ್ಲಿ ಉರಿ ತಾಳಲಾರದೇ ಇರುವಾಗ ಋಷಿಮುನಿಗಳು ಗಣಪತಿ ದೇವರ ಹೊಟ್ಟೆಯ ಮೇಲೆ 21 ಸಲ ದೇವರ ಸ್ತುತಿ ಮಾಡಿ ಗರಿಕೆ ಹುಲ್ಲನ್ನು ಹಾಕುತ್ತಾರೆ. ಈ ವೇಳೆ ಗಣಪತಿ ದೇವರ ಹೊಟ್ಟೆ ಉರಿ ಶಮನವಾಗುತ್ತದೆ. ಇದರ ಬಳಿಕ ಗಣಪತಿ ದೇವರಿಗೆ ಗರಿಕೆ ಹುಲ್ಲು ತುಂಬಾ ಇಷ್ಟ.

ಚೆಂಡು ಹೂ
ಗಣೇಶನನ್ನು ಮನೆಗೆ ತರುವಾಗ ಹೆಚ್ಚಿನ ಮನೆಗಳಲ್ಲಿ ಕೇಸರಿ ಹಾಗೂ ಹಳದಿ ಬಣ್ಣದ ಚೆಂಡು ಹೂಗಳಿಂದ ಮನೆಯನ್ನು ಅಲಂಕಾರ ಮಾಡಲಾಗುತ್ತದೆ. ಗಣಪತಿಗೆ ಚೆಂಡು ಹೂ ತುಂಬಾ ಇಷ್ಟ. ಗಣಪತಿ ದೇವರು ಯಾವಾಗಲು ಚೆಂಡು ಹೂವು ಮತ್ತು ಗರಿಕೆ ಹುಲ್ಲಿನ ಮಾಲೆ ಹಾಕಿರುತ್ತಾರೆ.

ಶಂಖ
ಗಣಪತಿಗೆ ನಾಲ್ಕು ಕೈಗಳಿವೆ ಮತ್ತು ಒಂದು ಕೈಯಲ್ಲಿ ಶಂಖವನ್ನು ಹಿಡಿದುಕೊಂಡಿದ್ದಾರೆ.  ಹಬ್ಬಗಳ ವೇಳೆ ಶಂಖನಾದ ಮೊಳಗಿಸಲಾಗುತ್ತದೆ. ಶಂಖನಾದವೆಂದರೆ ಗಣಪತಿ ದೇವರಿಗೆ ತುಂಬಾ ಇಷ್ಟವಂತೆ. ಗಣಪತಿ ಆರತಿ ಮಾಡುವಾಗ ಶಂಖನಾದ ಮೊಳಗಿಸುವರು. ಶಂಖನಾದವು ದುಷ್ಟಶಕ್ತಿಗಳನ್ನು ದೂರ ಮಾಡುತ್ತದೆ ಎಂದು ನಂಬಿಕೆ ಇದೆ. ಅದಕ್ಕಾಗಿಯೇ ಆಗಮಾರ್ಥಂತು ದೇವಾನಾಂ ಗಮನಾರ್ಥಂತು ರಕ್ಷಸಾಂ ಎಂದು ಪೂಜಾರಂಭದಲ್ಲಿ ಘಂಟಾನಾದ ಮೊಳಗಿಸಲಾಗುತ್ತದೆ.

ಹಣ್ಣುಗಳು
ತೆಂಗಿನಕಾಯಿ ಮತ್ತು ಬಾಳೆಹಣ್ಣು ಗಣಪತಿ ದೇವರಿಗೆ ತುಂಬಾ ಪ್ರಿಯವಾಗಿರುವ ಹಣ್ಣುಗಳು. ಗಣಪತಿ ದೇವರ ತಲೆಯು ಆನೆಯದ್ದಾಗಿರುವ ಕಾರಣದಿಂದ ಬಾಳೆಹಣ್ಣು ಗಣೇಶ ದೇವರಿಗೆ ತುಂಬಾ ಇಷ್ಟ. ಗಣೇಶನ ಮೂರ್ತಿಯ ಸುತ್ತ ಬಾಳೆಎಲೆಗಳು ಹಾಗೂ ಬಾಳೆಗಿಡಗಳಿಂದ ಶೃಂಗರಿಸಲಾಗುತ್ತದೆ. ಈ ಐದು ವಸ್ತುಗಳು ಗಣಪತಿ ದೇವರಿಗೆ ತುಂಬಾ ಇಷ್ಟ ಎಂದು ನಂಬಲಾಗಿದೆ.

-- (ಸಂ.) ಲಕ್ಷ್ಮೀ ಮಚ್ಚಿನ


Trending videos

Back to Top