CONNECT WITH US  

ಗೌರಿ ಹಬ್ಬದ ಒನಪು ; ಗಣೇಶ ಚತುರ್ಥಿಯ ನೆನಪು

ಗಣೇಶ ಚತುರ್ಥಿ ಸಮಸ್ತ ಭಾರತೀಯರ ಪಾಲಿಗೆ ಒಂದು ವಿಶೇಷವಾದ ಹಬ್ಬ. ಎಲ್ಲಕ್ಕಿಂತ ಹೆಚ್ಚಾಗಿ ಇದು ಭಾರತೀಯ ಮನಸುಗಳನ್ನು  ಜಾತಿ ಮತ ಧರ್ಮಗಳ ಭೇಧಬಾವವಿಲ್ಲದೆ ಬೆಸೆಯುವ ಸಂಭ್ರಮದ ಹಬ್ಬ ಎಂದೇ ಗುರುತಿಸಲ್ಪಡುತ್ತದೆ. ಆದಿ ಪೂಜಿತ ಗಣಪತಿಯನ್ನು ನೋಡುತ್ತಿದ್ದರೆ ಸಾಕು ಆಸ್ತಿಕ ಮನಸುಗಳಲ್ಲಿ ಭಕ್ತಿ ಮತ್ತಷ್ಟು ಹೆಚ್ಚುತ್ತದೆ ಸಾತ್ವಿಕ ಮನಸುಗಳಲ್ಲಿ ಉಲ್ಲಾಸದ ಮನೋಭಾವ ಸೃಷ್ಟಿಯಾಗುತ್ತದೆ.

ಪುಟ್ಟ ಮಕ್ಕಳಿಗಂತೂ ವೈವಿಧ್ಯಮಯ ರೂಪಗಳಲ್ಲಿ ಕಾಣಸಿಗುವ ಗಣಪನನ್ನು ನೋಡುವುದೇ ಹಬ್ಬ. ನಿಮಗೆ ಗೊತ್ತಿರಲಿ ಗಣಪತಿಯಷ್ಟು ವಿಭಿನ್ನ ರೂಪಗಳಲ್ಲಿ ನಾವು ಬೇರಾವ ದೇವರನ್ನು ಕೂಡ ನೋಡಲು ಸಾಧ್ಯವಿಲ್ಲ. 
ಗಣೇಶ ಚತುರ್ಥಿಯ ಮುನ್ನಾದಿನ ಅಂದರೆ  ಭಾದ್ರಪದ ಮಾಸದ ಮೊದಲ ಪಕ್ಷದ ಮೂರನೆಯ ದಿನ (ಶುದ್ಧ ತೃತೀಯ)ದಂದು  ಗೌರಿ ಹಬ್ಬವನ್ನು ಆಚರಿಸಲಾಗುತ್ತದೆ. ಹಾಗೆ ನೋಡಿದರೆ ದಕ್ಷಿಣ ಭಾರತದಲ್ಲಿ ಈ ಹಬ್ಬವನ್ನು ವಿಶೇಷವಾಗಿ ಆಚರಿಸಲಾಗುತ್ತದೆ. ಈ ದಿನ ವಿವಾಹಿತ ಮಹಿಳೆಯರು ವರ ಮಹಾಲಕ್ಷ್ಮೀ ಹಬ್ಬದ ಮಾದರಿಯಲ್ಲಿಯೇ ಆದಿಶಕ್ತಿ ರೂಪಿಣಿಯಾದ ಗೌರಿಯನ್ನು  ತಮ್ಮ ಕುಟುಂಬಗಳ ಸರ್ವತೋಮುಖ ಸಮೃದ್ಧಿಗಾಗಿ ಆರಾಧಿಸುತ್ತಾರೆ. ಅರಿಶಿನ ಗೌರಿಯನ್ನು ಆರಂಭದಲ್ಲಿ ಪೂಜಿಸಿ ಬಳಿಕ ಹರಿವಾಣದಲ್ಲಿ ಗೌರಿಯ ಪುಟ್ಟ ಮೂರ್ತಿಯನ್ನಿಟ್ಟು ಭಕ್ತಿ ಭಾವಗಳಿಂದ ಪೂಜಿಸಲಾಗುತ್ತದೆ. ಈ ಸಂದರ್ಭದಲ್ಲಿ ಗೌರಿದಾರ ಎಂದು ಕರೆಯಲ್ಪಡುವ ಹದಿನಾರು ಗಂಟುಗಳಿರುವ ದಾರವನ್ನು ತಮ್ಮ ಮಣಿಕಟ್ಟುಗಳಿಗೆ ವಿವಾಹಿತ ಸ್ತ್ರೀಯರು ಕಟ್ಟಿಕೊಳ್ಳುತ್ತಾರೆ. ಹಲವು ಕಡೆಗಳಲ್ಲಿ ಗೌರಿ ಬಳೆ ಎಂದು ಕರೆಯಲಾಗುವ ಕಪ್ಪು ಬಣ್ಣದ ಬಳೆಯನ್ನು ಧರಿಸಿ ಹೆಂಗಳೆಯರು ಗೌರಿ ಹಬ್ಬವನ್ನು ಸಂಭ್ರಮಿಸುತ್ತಾರೆ. ಅದರ ಮರುದಿನ ಬರುವುದೇ ಗಣೇಶನ ಹಬ್ಬ.

ಮೊದಮೊದಲು ಊರಿಗೊಂದು ಕೇರಿಗೊಂದು ಮಾತ್ರ ಅಂತಿದ್ದ ಗಣಪನ ಆರಾಧನೆ  ಈಗ ಒಂದೇ ಏರಿಯಾದಲ್ಲಿ ಐದಾರು ಗಣಪನ ಮೂರ್ತಿಗಳನ್ನಿಟ್ಟು ಪೂಜಿಸುವಷ್ಟರ ಮಟ್ಟಿಗೆ ಬೆಳೆದಿದೆ. ಊರಿನ ಸಮಸ್ತ ಜನರನ್ನು ಒಗ್ಗೂಡಿಸಬಲ್ಲ ತಾಕತ್ತಿರುವ ಈ ಹಬ್ಬವನ್ನು ಸಾರ್ವಜನಿಕವಾಗಿ ಒಂದು ಆಂದೋಲನದ ರೀತಿಯಲ್ಲಿ ಆಚರಿಸುವಂತೆ ಮಾಡಿದ ಶ್ರೇಯಸ್ಸು ಬಾಲಗಂಗಾಧರ ತಿಲಕರಿಗೆ ಸಲ್ಲುತ್ತದೆ. ಸ್ವಾತಂತ್ರ್ಯ ಚಳುವಳಿಯ ಸಮಯದಲ್ಲಿ ಹೋರಾಟಕ್ಕಾಗಿ ಜನರನ್ನು ಒಗ್ಗೂಡಿಸುವಲ್ಲಿ ಈ ಗಣೇಶನ ಹಬ್ಬ ಬಹಳಷ್ಟು ಕಾಣಿಕೆ ಸಲ್ಲಿಸಿದ್ದನ್ನು ಯಾವತ್ತೂ ಮರೆಯಲಾಗದು. ಹಿಂದಿನಿಂದಲೂ ಹಲವು ಪ್ರತಿಷ್ಠಿತ ಮನೆತನಗಳಲ್ಲಿ ಮನೆಯಲ್ಲೇ ಗಣೇಶನನ್ನು ಕೂರಿಸಿ ಪೂಜಿಸುವ ಪರಿಪಾಠವಿತ್ತು. ಮನೆ ಮನಸುಗಳ ಭಾಂಧವ್ಯವನ್ನು ಮತ್ತಷ್ಟು ಹೆಚ್ಚಿಸುವ ನಿಟ್ಟಿನಲ್ಲಿ ಇಂತಹ ಮನೆ ಗಣೇಶ ಹಬ್ಬಗಳು ಬಹಳ ಪ್ರಮುಖ ಪಾತ್ರವನ್ನು ವಹಿಸುತ್ತವೆ.

ನಿಜ ಗೌರಿ ಗಣೇಶನ ಹಬ್ಬ ಬಂತೆಂದರೆ ಸಾಕು ಪ್ರತಿಯೊಬ್ಬರಲ್ಲೂ ಒಂದರ ಹಿಂದೊಂದು ನೆನಪುಗಳು  ಗರಿಬಿಚ್ಚಿ ಹಾರಾಡಲಾರಂಭಿಸುತ್ತವೆ. ಪ್ರಸಾದಕ್ಕಾಗಿ ಸರತಿ ಸಾಲಿನಲ್ಲಿ ನಿಂತದ್ದು, ಗೆಳೆಯ ಗೆಳತಿಯರು ಸಂಬಂಧಿಕರ ಜೊತೆಗೂಡಿ ಊರಿನ ತುಂಬೆಲ್ಲಾ ಸುತ್ತುತ್ತಾ 21 ಗಣೇಶನ ಮೂರ್ತಿಗಳನ್ನು ನೋಡಿ ಧನ್ಯರಾದದ್ದು , ಜಾಗಟೆ ಸದ್ದು ಕೇಳಿದಾಗೆಲ್ಲಾ ಗಣೇಶನ ಮೆರವಣಿಗೆಯ ಮೂರ್ತಿ ದರುಶನಕ್ಕಾಗಿ ರಸ್ತೆಯ ಬದಿಯಲ್ಲಿ ನಿಂತುಕೊಂಡಿದ್ದು, ಊರಿನ ಬೇರೆ ಬೇರೆ ಮನೆಗಳಲ್ಲಿ ಗಣೇಶನ ರೂಪಗಳನ್ನು ನೋಡಿ ಅವುಗಳ ಚಂದದ ಬಗೆಗೆ ಚರ್ಚೆ ಮಾಡಿದ್ದು. ಗೌರಿ ಬಳೆ ಧರಿಸಿ ಕುಣಿದಾಡಿದ್ದು, ಮೆರವಣಿಗೆಯಲ್ಲಿ ಡ್ಯಾನ್ಸು ಮಾಡಿದ್ದು ಗಣೇಶನ ಮೂರ್ತಿ ನೀರಲ್ಲಿ ಮುಳುಗಿದಾಗ ಮುಖದಲ್ಲಿ ಬೇಸರ ತಂದುಕೊಂಡಿದ್ದು ಎಲ್ಲವೂ ಒಂದಕ್ಕಿಂತ ಒಂದು ಬೆಚ್ಚಗಿನ ನೆನಪುಗಳು.

ಹಿಂದೆ ಆಚರಿಸುತ್ತಿದ್ದ ಗಣೇಶನ ಹಬ್ಬಕ್ಕೂ ಈಗಿನ ಗಣೇಶನ ಹಬ್ಬಕ್ಕೂ ಬಹಳಷ್ಟು ವ್ಯತ್ಯಾಸಗಳಿದ್ದರೂ ನಮ್ಮ ಭಕ್ತಿ ಭಾವಗಳಲ್ಲಿ ವ್ಯತ್ಯಾಸಗಳಾಗಬಾರದು. ಈ ಹಬ್ಬದಲ್ಲಿ ಪಾಲುಗೊಳ್ಳುವುದೇ ಒಂದು ವಿಶಿಷ್ಠ ಧನ್ಯತೆ. ಅಂತಹ ಧನ್ಯತೆಯನ್ನು ಅನುಭವಿಸುವ. ಗಣೇಶನನ್ನು ಹೀಗಳೆಯುವ ಮನಸುಗಳನ್ನು ಧಿಕ್ಕರಿಸುವ. ಭವ್ಯ ಭಾರತದ ಅತ್ಯಪೂರ್ವ ಆಧ್ಯಾತ್ಮಿಕ ಸಂಸ್ಕೃತಿಯನ್ನು ಇಡೀ ಜಗತ್ತಿನೆದುರು ಮತ್ತೆ ಮತ್ತೆ ಎತ್ತಿ ಹಿಡಿಯುವ ಎನ್ನುವುದು ಆಶಯ.

-- ನರೇಂದ್ರ ಎಸ್‌ ಗಂಗೊಳ್ಳಿ, ವಾಣಿಜ್ಯಶಾಸ್ತ್ರ ಉಪನ್ಯಾಸಕರು

Trending videos

Back to Top