CONNECT WITH US  

ಹದಗೆಟ್ಟ ರಾಷ್ಟ್ರೀಯ ಹೆದ್ದಾರಿ: ಹೋರಾಟಕ್ಕೆ ಸಿದ್ಧತೆ

ಮಳೆಗಾಲದಲ್ಲಿ ಕೆಸರು, ಮಳೆ ಬರದಿದ್ದರೆ ಧೂಳು ; ರಾಷ್ಟ್ರೀಯ ಹೆದ್ದಾರಿ 66ರ ಗೋಳು

ಕುಂದಾಪುರ: ಚತುಷ್ಪಥ ರಸ್ತೆ ಕೆಲಸವೂ ನಡೆ ಯದೆ, ಇತ್ತ ಇದ್ದ ಹೆದ್ದಾರಿಯೂ ಹದಗೆಟ್ಟ ಕಾರಣ ರಾಷ್ಟ್ರೀಯ ಹೆದ್ದಾರಿ 66ರ ವ್ಯವಸ್ಥೆ ವಿರುದ್ಧ ಜನಾಕ್ರೋಶ ಇದೀಗ ತೀವ್ರಗೊಂಡಿದೆ. ಹಂಗಳೂರಿನ ಕೊನೆ ವಿನಾಯಕ ಥಿಯೇಟರ್‌ನಿಂದ ಸಂಗಮ್‌ನ ಕೊನೆ ಸೇತುವೆವರೆಗೆ ಪ್ರಯಾಣ ಅಸಾಧ್ಯವಾಗಿದ್ದು, ಜನ ಈ ಬಗ್ಗೆ ಎಷ್ಟೇ ಬೇಡಿಕೆ ಸಲ್ಲಿಸಿದರೂ ಫ‌ಲಕಾರಿಯಾಗಿಲ್ಲ.

ಪುರಸಭೆ ವ್ಯಾಪ್ತಿ ಆರಂಭವಾಗುವಲ್ಲಿಂದಲೇ ಹದಗೆಟ್ಟ ರಸ್ತೆ ಕುಂದಾಪುರ ನಗರಕ್ಕೆ ಬಿಳಿಧೂಳಿನ ಸ್ವಾಗತ ನೀಡುತ್ತದೆ. ಬಸ್ರೂರು ಮೂರುಕೈಯಲ್ಲಿ ಶಿವಮೊಗ್ಗಕ್ಕೆ ಹೋಗುವ ತಿರುವಿನಲ್ಲೂ ಹದಗೆಟ್ಟಿದೆ. ಸಂಗಮ್‌ವರೆಗೂ ರಾಷ್ಟ್ರೀಯ ಹೆದ್ದಾರಿ ಸಂಪೂರ್ಣ ಹದಗೆಟ್ಟಿದ್ದು, ಮಳೆ ಬಂದಾಗ ರಸ್ತೆಯ ಹೊಂಡಗಳಲ್ಲಿ ನೀರು ತುಂಬಿ ರಸ್ತೆ-ಹೊಂಡ, ರಸ್ತೆ ಅಂಚು ತಿಳಿಯದೆ ವಾಹನ ಸವಾರರು ತ್ರಾಸ ಪಡುತ್ತಾರೆ.

ಮಳೆ ಇಲ್ಲದಿದ್ದರೆ ಧೂಳು
ಮಳೆ ಬಂದಾಗ ಇಂತಹ ದುರವಸ್ಥೆಯಾದರೆ ಬಿಸಿಲಿದ್ದಾಗ ಈ ಪ್ರದೇಶವಿಡೀ ಧೂಳುಮಯ. ನಡೆದಾಡಲೂ ಅಸಾಧ್ಯ. ಜತೆಗೆ ಅಕ್ಕಪಕ್ಕದ ಅಂಗಡಿಯವರಿಗೂ ಧೂಳು ತಿನ್ನುವ ಸಂಕಷ್ಟ. ಇದರಿಂದ ಕಾಯಿಲೆ ಭೀತಿ ಬೇರೆ. ರಾಷ್ಟ್ರೀಯ ಹೆದ್ದಾರಿಯಾದ ಕಾರಣ ವಾಹನಗಳ ಓಡಾಟ ನಿಲ್ಲುವುದೇ ಇಲ್ಲ. ಹಾಗೆ ವಾಹನ ಹೋದಾಗಲೆಲ್ಲ ಧೂಳು ಹಾರಾಡುತ್ತಿರುತ್ತದೆ.

ಸರ್ವಿಸ್‌ ರಸ್ತೆಯೇ ಗತಿ
ಸರ್ವೀಸ್‌ ರಸ್ತೆಯ ಕಾಮಗಾರಿ ಪೂರ್ಣವಾಗಿದ್ದರೂ ಸಂಚಾರಕ್ಕೆ ಬಿಟ್ಟುಕೊಟ್ಟಿಲ್ಲ. ಸರ್ವೀಸ್‌ ರಸ್ತೆ ಸಂಚಾರಕ್ಕೆ ಲಭಿಸಿದರೆ ಮುಖ್ಯ ರಸ್ತೆಯ ವಾಹನಗಳ ದಟ್ಟಣೆ ಕಡಿಮೆಯಾಗಲಿದೆ. ಹೊಂಡಗಳ ಕಾರಣದಿಂದಾಗಿಯೇ ಟ್ರಾಫಿಕ್‌ ಮೇಲೂ ಒತ್ತಡ ಬೀಳುತ್ತದೆ. ಫ್ಲೈ ಓವರ್‌ ಸಮೀಪ ದ್ವಿಚಕ್ರ ವಾಹನ ಸವಾರರಿಗೆ ಘನ ವಾಹನಗಳ ಓಡಾಟ ಹೆದರಿಕೆ ಹುಟ್ಟಿಸುವಂತಿದೆ. ಅಧಿಕೃತವಾಗಿ ಸರ್ವಿಸ್‌ ರಸ್ತೆ ಬಿಟ್ಟುಕೊಟ್ಟಿಲ್ಲವಾದರೂ ಬಹುತೇಕ ವಾಹನಗಳು ಈಗ ಓಡಾಟಕ್ಕೆ ಹೆದ್ದಾರಿ ಬದಲಿಗೆ ಸರ್ವಿಸ್‌ ರಸ್ತೆಯನ್ನೇ ಅವಲಂಬಿಸಿವೆ.

ಆಗಾಗ ಪ್ಯಾಚ್‌
2017ರಲ್ಲಿ ರಾಷ್ಟ್ರಪತಿಗಳ ಕೊಲ್ಲೂರು ಭೇಟಿ ಸಂದರ್ಭ ಈ ರಸ್ತೆಗೆ ಪ್ಯಾಚ್‌ವರ್ಕ್‌ ಮಾಡಲಾಗಿದೆ. ಅದಾದ ಬಳಿಕ ಈ ರಸ್ತೆಯ ಕಡೆಗೆ ಯಾರೂ ಗಮನ ಹರಿಸಿಲ್ಲ. ಮಳೆಗಾಲದಲ್ಲಿ ಪ್ಯಾಚ್‌ ಹಾಕಿದಂತೆ ಮಾಡಿದರೂ ಅಂದು ಹಾಕಿದ ಪ್ಯಾಚ್‌ ಅಂದೇ ಎದ್ದು ಹೋಗಿದೆ. ಹೆದ್ದಾರಿ ಬದಿ ಚರಂಡಿ ನಿರ್ಮಾಣ ಕಾರ್ಯವೂ ನಡೆದಿಲ್ಲ. ಇರುವ ಸ್ವಲ್ಪ ಚರಂಡಿಯ ಹೂಳೆತ್ತುವ ಕಾರ್ಯವೂ ನಡೆದಿಲ್ಲ. ಆದ್ದರಿಂದ ಮಳೆ ಬಂದರೆ ನೀರೆಲ್ಲ ರಸ್ತೆಯಲ್ಲೇ ಇರುತ್ತದೆ. ಮಳೆ ಬರದಿದ್ದರೆ ಧೂಳೆಲ್ಲ ಎದ್ದು ಹಾರುತ್ತಿರುತ್ತದೆ. ಜನ ಈ ಅವಸ್ಥೆಯಿಂದ ರೋಸಿ ಹೋಗಿದ್ದು ಹೋರಾಟಕ್ಕೆ ಸಜ್ಜಾಗಿದ್ದಾರೆ. ಹೆದ್ದಾರಿ ತಡೆದು ಪ್ರತಿಭಟನೆ ನಡೆಸಲು ಮುಂದಾಗಿದ್ದಾರೆ. ಇದಕ್ಕಾಗಿ ಸಹಾಯಕ ಕಮಿಷನರ್‌ ಅವರಿಗೆ ಮನವಿ ನೀಡಲು ಸಿದ್ಧತೆ ನಡೆಸಿದ್ದಾರೆ. 

ವ್ಯವಸ್ಥೆಯ ಅಣಕ
ಶಾಸ್ತ್ರಿ ಸರ್ಕಲ್‌ ಪಕ್ಕದಲ್ಲೇ ನಿಂತ ಅರ್ಧವಾದ ಫ್ಲೈ ಓವರ್‌ ಕಾಮಗಾರಿ ಈ ಎಲ್ಲ ಅವ್ಯವಸ್ಥೆಗಳಿಗೆ ಅಣಕದಂತೆ ಇದೆ. ಮಳೆಗಾಲದಲ್ಲಿ ಹೊಂಡ ಮುಚ್ಚುವ ಕಾರ್ಯ ಎಂದು ಒಮ್ಮೆ ತೇಪೆ ಹಚ್ಚುವ ಕಾರ್ಯ ನಡೆಯಿತು. ಆದರೆ ಅದು ಕೇವಲ ಕಣ್ಣಿಗೆ ಮಣ್ಣೆರಚುವ ತಂತ್ರವಾಗಿದೆ. ಈಗ ಧೂಳಿನ ಸಮಸ್ಯೆ ವಿಪರೀತವಿದೆ. ಮಾರ್ಚ್‌ ಒಳಗೆ ಕಾಮಗಾರಿ ಮುಗಿಸಬೇಕೆಂದು ಸಹಾಯಕ ಕಮಿಷನರ್‌ ಅವರು ಆದೇಶ ಮಾಡಿದ್ದಾರೆ. ಆದರೆ ಏನೂ ಬೆಳವಣಿಗೆ ಆಗಿಲ್ಲ.  

ಪ್ರತಿಭಟನೆ ನಡೆಸಬೇಕೆಂದಿದ್ದೇವೆ
ರಸ್ತೆಯ ಅವ್ಯವಸ್ಥೆ ಕುರಿತು ಪ್ರತಿಭಟನೆ ನಡೆಸಬೇಕೆಂದಿದ್ದೇವೆ. ಇದರ ಹೊರತು ಬೇರೆ ಯಾವುದೇ ಪರಿಹಾರ ಮಾರ್ಗಗಳು ಯಾರಿಂದಲೂ ಲಭಿಸುತ್ತಿಲ್ಲ. 
- ಸಂತೋಷ್‌ ಸುವರ್ಣ, ಸ್ಥಳೀಯರು

-- ಲಕ್ಷ್ಮೀ ಮಚ್ಚಿನ

Trending videos

Back to Top