CONNECT WITH US  

ಆಸ್ತಿಕರನ್ನು ಸೆಳೆಯುತ್ತಿರುವ ಉದ್ಭವ ಗಣಪತಿ ಕ್ಷೇತ್ರಗಳು 

ಬಿದ್ಕಲ್‌ಕಟ್ಟೆಯಿಂದ ಸಾೖಬ್ರಕಟ್ಟೆ ನಡುವೆ 3 ಕ್ಷೇತ್ರ

ಕುಂದಾಪುರ: ನೂರಾರು ಆರಾಧನಾ ಕೇಂದ್ರಗಳಲ್ಲಿ ಗಣೇಶನನ್ನು ಆರಾಧಿಸುತ್ತಿದ್ದರೂ, ಕಲ್ಲು ಬಂಡೆಯೊಳಗೆ, ಗುಹೆಯೊಳಗೆ ಉದ್ಭವಿಸಿದ ಗಣೇಶನ್ನು ಆರಾಧಿಸುವ ಹಲವು ಸ್ಥಳಗಳು ನಮ್ಮ ಸುತ್ತಮುತ್ತಲಿವೆ. ಬಿದ್ಕಲ್‌ಕಟ್ಟೆಯಿಂದ ಸಾೖಬ್ರಕಟ್ಟೆಗೆ ಹೋಗುವ ರಸ್ತೆಯ 12 ಕಿ.ಮೀ. ವ್ಯಾಪ್ತಿಯಲ್ಲಿ 3 ಉದ್ಭವ ಗಣಪತಿ ಕ್ಷೇತ್ರವಿದ್ದು, ಒಂದು ಗುಹೆಯೊಳಗೆ ಪ್ರತಿಷ್ಠಾಪಿಸಲ್ಪಟ್ಟ ವಿನಾಯಕ ದೇಗುಲವಿದ್ದು ಆಸ್ತಿಕರನ್ನು ಸೆಳೆಯುತ್ತಿದೆ.

ಗುಡ್ಡಟ್ಟು : ಕಲ್ಲು ಬಂಡೆಯ ಮಧ್ಯೆ ಉದ್ಭವಿಸಿದ ವಿನಾಯಕ 
ಪ್ರಾಕೃತಿಕ ಸೌಂದರ್ಯದ ನಡುವೆ ಸಾವಿರಾರು ವರ್ಷಗಳ ಹಿಂದೆಯೇ ನೆಲೆ ನಿಂತ ಈ ವಿನಾಯಕ ದೇವಸ್ಥಾನವು ಉಡುಪಿ ಜಿಲ್ಲೆಯಲ್ಲಿಯೇ ಐತಿಹಾಸಿಕ ಹಿನ್ನೆಲೆಯನ್ನು ಹೊಂದಿದೆ. ಯಡಾಡಿ - ಮತ್ಯಾಡಿ ಗ್ರಾಮದ ಗುಡ್ಡಟ್ಟುವಿನಲ್ಲಿ ಒಂದು ಕಲ್ಲು ಬಂಡೆಯ ಚಿಕ್ಕ ಗುಹೆಯಲ್ಲಿ ಸ್ವಾಭಾವಿಕವಾಗಿ ಉದ್ಭವಿಸಿದ ಸುಮಾರು 4 ಅಡಿ ಎತ್ತರದ ಗಣಪತಿ ವಿಗ್ರಹವಿರುವುದು ಶ್ರೀ ವಿನಾಯಕ ದೇವಸ್ಥಾನದ ವೈಶಿಷ್ಟ್ಯ. 

ಉಡುಪಿಯಿಂದ ಬಾರ್ಕೂರು, ಸಾೖಬ್ರಕಟ್ಟೆ ಮಾರ್ಗವಾಗಿ ಗುಡ್ಡೆಟ್ಟು ದೇವಸ್ಥಾನ ಸುಮಾರು 26 ಕಿ.ಮೀ. ದೂರವಿದೆ. ಕುಂದಾಪುರದಿಂದ 19 ಕಿ.ಮೀ. ಅಂತರವಿದೆ. ಆಯಿರ ಕೊಡ (ಸಾವಿರ ಕೊಡ) ಎನ್ನುವುದು ಇಲ್ಲಿ ನಡೆಯುವ ಒಂದು ವಿಶೇಷ ಆಚರಣೆ. ಮೂಲ ಬಿಂಬದ ಕಂಠದವರೆಗೆ ಎಲ್ಲ ದಿನಗಳಲ್ಲೂ ಮುಳುಗಿರುವುದು ಇಲ್ಲಿನ ವಿಶೇಷತೆಯಾಗಿದೆ. ಗಣಪತಿಯ ಉರಿ ಶಮನಕ್ಕಾಗಿ ಶಿವನು ನರಸಿಂಹ ತೀರ್ಥದ ಪಕ್ಕದಲ್ಲೇ ಜಲಾಧಿವಾಸವಾಗಿರು ಎಂದು ಅನುಗ್ರಹಿಸುತ್ತಾನೆ. ಹಾಗಾಗಿ ಗುಡ್ಡೆಟ್ಟು ಪರಿಸರದಲ್ಲಿ ಹರಿಯುವ ನರಸಿಂಹ ತೀರ್ಥ ನದಿಯ ಪಕ್ಕದಲ್ಲೇ ಉದ್ಭವಿಸಿ, ಇಲ್ಲಿನ ಭಕ್ತರನ್ನು ಉದ್ಧರಿಸುತ್ತಾನೆ ಎನ್ನುವ ಪ್ರತೀತಿಯಿದೆ. 

ಕೊಳನಕಲ್ಲು : ಕಲ್ಲಿನ ಮೇಲೆ ಉದ್ಭವಿಸಿದ ಮಹಾಗಣಪತಿ
ಹಾರ್ದಳ್ಳಿ- ಮಂಡಳ್ಳಿ ಗ್ರಾಮದ ಶ್ರೀ ಮಹಾಗಣಪತಿ ದೇವಸ್ಥಾನ ಕೊಳನಕಲ್ಲು ದೇವಸ್ಥಾನದಲ್ಲಿ ಆರಾಧಿಸಲ್ಪಡುವ ವಿನಾಯಕನು ಬೃಹದಾಕಾರದ ಕಲ್ಲಿನ ಮೇಲೆ ಉದ್ಭವಿಸಿದ ಮೂರ್ತಿಯಾಗಿದೆ. ಅನಾದಿ ಕಾಲದಿಂದಲೂ ಇಲ್ಲಿ ಗಣಪತಿಯು ಪೂಜಿಸಲ್ಪಡುತ್ತಿದ್ದಾನೆ. ಬಾರ್ಕೂರಿನ ಭೈರವ ಗಣಪತಿ ದೇವಸ್ಥಾನವಿರುವ ಚೌಳಿ ಕೆರೆಯಿಂದ ಹಾರಿ ಬಂದ ವಿನಾಯಕನು ಇಲ್ಲಿ ನೆಲೆ ನಿಂತಿದ್ದಾನೆ. ಹಾಗಾಗಿ ಈ ಊರಿಗೆ ಹಾರ್ದಳ್ಳಿ - ಮಂಡಳ್ಳಿ ಎನ್ನುವ ಹೆಸರು ಬಂತು ಎನ್ನುವ ಪುರಾರ ಪ್ರತೀತಿಯಿದೆ. ದೇವರ ಪಾದದಡಿ, ಕಲ್ಲಿನ ಮೇಲಿರುವ ಕೊಳದಲ್ಲಿ ಬೇಸಿಗೆ ಸೇರಿದಂತೆ ವರ್ಷದ ಎಲ್ಲ ದಿನಗಳಲ್ಲೂ ನೀರು ಬತ್ತಿ ಹೋಗದೇ ಇರುವುದು ಇಲ್ಲಿನ ವೈಶಿಷ್ಟ್ಯ.


ಪಡುಮುಂಡು : ಪ್ರತಿಷ್ಠಾಪಿಸಲ್ಪಟ್ಟ ಕಲ್ಲುಗಣಪತಿ

ಸಾೖಬ್ರಕಟ್ಟೆಯಿಂದ ಉಡುಪಿಗೆ ಹೋಗುವ ರಸ್ತೆಯ ಪಡುಮುಂಡುವಿನಲ್ಲಿ ಕಲ್ಲು ಬಂಡೆಗಳ ಗುಹೆಯೊಳಗೆ ಈ ಶ್ರೀ ಉಮಾಮಹೇಶ್ವರೀ ಕಲ್ಲು ಗಣಪತಿ ದೇವಸ್ಥಾನವಿದೆ. ಇಲ್ಲಿ ಶಿವ ಹಾಗೂ ಪಾರ್ವತಿ ಉದ್ಭವ ಮೂರ್ತಿಗಳಾಗಿದ್ದರೆ, ಕಲ್ಲು ಗಣಪತಿಯು ಪ್ರತಿಷ್ಠಾಪಿಸಲ್ಪಟ್ಟಿದೆ. ಬಾರ್ಕೂರು ರಾಜಮನೆತನದವರು ಈ ದೇವಸ್ಥಾನವನ್ನು ಅಭಿವೃದ್ಧಿಪಡಿಸಿದ್ದು, ಅಲ್ಲಿಂದ ಇಲ್ಲಿಯವರೆಗೆ ನಿತ್ಯ ಪೂಜಿಸಲ್ಪಡುತ್ತಿದೆ. ಈಗ ಶಿವರಾಮ ಅಡಿಗರು ಅರ್ಚಕರಾಗಿದ್ದು, ಅವರ 4 ತಲೆಮಾರಿನವರು ಇಲ್ಲಿ ಪೂಜಾ ಕೈಂಕರ್ಯದಲ್ಲಿ ತೊಡಗಿಸಿಕೊಂಡಿದ್ದಾರೆ. ಇಲ್ಲಿನ ಪಡುಮುಂಡುವಿನ ಕಲ್ಲುಗಣಪತಿ ಹಾಗೂ ಗುಡ್ಡೆಟ್ಟು ದೇವಸ್ಥಾನಕ್ಕೆ ಮೆಕ್ಕೆ ಕಟ್ಟುವಿನಲ್ಲಿರುವ ಶ್ರೀ ನಂದಿಕೇಶ್ವರನು ಪ್ರತಿ ನಿತ್ಯ ಬಂದು ಹೋಗುತ್ತಾನೆ ಎನ್ನುವ ಪೌರಾಣಿಕವಾದ ಪ್ರತೀತಿಯಿದೆ.

ಕಂಬಿಕಲ್ಲು : ಸಾಮವೇದ ಋಷಿ ತಪಸ್ಸಿನಿಂದ ಉದ್ಭವಿಸಿದ ಮಹಾಗಣಪತಿ
ಕಕ್ಕುಂಜೆ ಗ್ರಾಮದ ಶ್ರೀ ಕ್ಷೇತ್ರ ಕಂಬಿಕಲ್ಲು ಮಹಾಗಣಪತಿ ದೇವಸ್ಥಾನದಲ್ಲಿ ಆರಾಧಿಸಲ್ಪಡುವ ವಿನಾಯಕನ ವಿಗ್ರಹವು ಆನೆಯ ಆಕಾರದ ರೀತಿಯ ಕಲ್ಲಿನ ಹೊಟ್ಟೆ ಭಾಗದ ಕಿಂಡಿಯಲ್ಲಿ ದಕ್ಷಿಣಾಭಿಮುಖವಾಗಿ ನೆಲೆ ನಿಂತಿದೆ. ಸಾಮವೇದ ಋಷಿ ಮುನಿಗಳ ತಪಸ್ಸಿನ ಫಲವಾಗಿ ಇಲ್ಲಿ ಗಣಪತಿ ಉದ್ಭವವಾಗಿದ್ದು, ಇದರ ಎದುರು ಸುಮಾರು 500 ಮೀಟರ್‌ ದೂರದಲ್ಲಿ ಎರಡು ನಿರಾಧಾರ (ಯಾವುದೇ ಆಧಾರವಿಲ್ಲದೆ ನಿಂತಿರುವ) ಬಂಡೆಗಳಿದ್ದು, ಅದು ಗಣಪತಿಯ ಎರಡು ಕಣ್ಣುಗಳೆಂದು ಪ್ರತೀತಿಯಿದೆ. ಅದರಲ್ಲಿ ಒಂದು ಕಣ್ಣಿಗೆ ಯಾರೋ ಘಾಸಿ ಮಾಡಿದ್ದು, ಆತ ಅಲ್ಲೇ ಸತ್ತು ಹೋಗಿರುವನೆಂದು ಹಿನ್ನೆಲೆಯಿದೆ.

Trending videos

Back to Top