CONNECT WITH US  

ಚಿಣ್ಣರ ಮನದೊಳಗೆ ಜಿನುಗಿದ ಸಮೃದ್ಧ ನೀರಿನ ಒರತೆ

ನವೆಂಬರ್‌ ತಿಂಗಳಲ್ಲಿ ಕನ್ನಡ ಸಂಭ್ರಮ. ಜತೆಗೆ ಬರುವ ಮಕ್ಕಳ ಮನಸ್ಸನ್ನು ಅರಳಿಸುವ ಮಕ್ಕಳ ದಿನಾಚರಣೆ. ಅಂದು ಹೂ ಮನಸ್ಸಿನ ಮಕ್ಕಳ ಮನಸ್ಸು ಅರಳಬೇಕು. ಆದರಂದು ರಜೆ. ನಾಡ ಹಬ್ಬ, ರಾಷ್ಟ್ರೀಯ ಹಬ್ಬಗಳನ್ನು ಹಗುರವಾಗಿ ಸ್ವೀಕರಿಸುತ್ತೇವೆ. ಮಕ್ಕಳ ಮನಕ್ಕೆ, ಮತಿಗೆ ಮೇವು ಒದಗಿಸುವ ಅವಕಾಶಗಳನ್ನು ಹೊತ್ತಿರುವ ಆಚರಣೆಗಳು ಕಾಯಕಲ್ಪಕ್ಕೆ ಕಾಯುತ್ತಿವೆ. ಮಾಡುವವರು ಯಾರು? ಹುನ್ನಾರಗಳನ್ನು ಹೆಣೆಯುವ ಜಾಲಗಳ ಮಧ್ಯೆ ವ್ಯವಸ್ಥೆಗಳಿಗೆ ಎಲ್ಲಿದೆ ಪುರುಸೊತ್ತು? 

ಸರಿ, ಕರಾವಳಿಯುದ್ದಕ್ಕೂ ಒಮ್ಮೆ ಇಣುಕೋಣ. ನವೆಂಬರ್‌ ತಿಂಗಳಲ್ಲಿ ಶಾಲಾ ವಿದ್ಯಾರ್ಥಿಗಳು, ಅಧ್ಯಾಪಕರು ಬ್ಯುಸಿ. ಪಠ್ಯ, ಪಾಠ, ಸಭೆ, ಕಚೇರಿ ಓಡಾಟ ಎನ್ನುತ್ತಾ ಬಿಡುವಿಲ್ಲದೆ ಓಡಾಡುವ ಅಧ್ಯಾಪಕರು ಮಕ್ಕಳೊಂದಿಗೆ ಮಕ್ಕಳಾಗಿದ್ದಾರೆ. ಅವರ ಮನಸ್ಸುಗಳನ್ನು ಓದಿದ್ದಾರೆ. ವರ್ತಮಾನದ ಜ್ವಲಂತ ಸಮಸ್ಯೆಗಳತ್ತ ಅವರನ್ನು ಸೆಳೆದಿದ್ದಾರೆ. ನೀರಿನ ಅರಿವನ್ನು ಮೂಡಿಸಲು ಯತ್ನಿಸಿದ್ದಾರೆ. ಅಂತರ್ಜಲವನ್ನು ವೃದ್ಧಿಸುವತ್ತ ಗಮನ ಸೆಳೆದಿದ್ದಾರೆ. ಪ್ರಾಕ್ಟಿಕಲ್‌ ವಿಚಾರಗಳಿಗೆ ಮಹತ್ತು ಕೊಟ್ಟಿದ್ದಾರೆ. 

ನವೆಂಬರ್‌ ತಿಂಗಳಿನ ಕೆಲವು ದಿನಗಳಂದು ಜಿಲ್ಲೆಯಲ್ಲಿ ಜಲಸಂರಕ್ಷಣೆಯ ಆಶಯದ ಭಿತ್ತಿಪತ್ರ ರಚನೆಯ ಸ್ಪರ್ಧೆಯೊಂದನ್ನು ಆಯೋಜಿಸಲಾಗಿತ್ತು. ಶಾಲಾ ಮಟ್ಟ, ಅನಂತರ ಸಮೂಹ, ಬಳಿಕ ತಾಲೂಕು ಮತ್ತು ಜಿಲ್ಲಾ ಮಟ್ಟ... ಹೀಗೆ ನಾಲ್ಕು ಹಂತಗಳಲ್ಲಿ ಸ್ಪರ್ಧೆಗಳು. ಕ್ರೀಡೆ, ಸ್ಪರ್ಧೆ, ಪ್ರಬಂಧ ಅಂದಾಗ ಶಾಲೆಗಳಲ್ಲಿರುವ ಕಲೆಯ ಟಚ್‌ ಇರುವ ಕೆಲವೇ ಕೆಲವು ವಿದ್ಯಾರ್ಥಿಗಳು ತೊಡಗಿಸಿಕೊಳ್ಳುತ್ತಾರೆ. ಅಂದವಾಗಿ ಹೇಗೆ ಚಿತ್ರ ಬಿಡಿಸಿದ್ದಾರೆ ಎನ್ನುವುದಕ್ಕಿಂತ, ತಲೆಯೊಳಗೆ ನೀರು ಹೇಗೆ ಅಂದವಾಗಿ ಚಿತ್ತಾರವಾಗಿದೆ ಎನ್ನುವುದು ಮುಖ್ಯ. ಸುಮಾರು ಹದಿಮೂರು ಸಾವಿರಕ್ಕೂ ಮಿಕ್ಕಿ ವಿದ್ಯಾರ್ಥಿಗಳು ಸ್ಪರ್ಧೆಯಲ್ಲಿ ಭಾಗವಹಿಸಿದ್ದಾರೆ!

ಮಗು ಸ್ಪರ್ಧೆಯಲ್ಲಿ ಭಾಗವಹಿಸುತ್ತದೆ ಎಂದಾದರೆ ಆ ಮಗುವಿನ ಹೆತ್ತವರು ಅಲರ್ಟ್‌ ಆಗುವುದು ಸಹಜ. ತನ್ನ ಮಗ ಪ್ರಥಮ ಸ್ಥಾನದಲ್ಲಿ ಬರಬೇಕು ಎನ್ನುವ ನಿರೀಕ್ಷೆ. ಜಲಸಂರಕ್ಷಣೆಯ ಸುತ್ತಮುತ್ತ ಸ್ಪರ್ಧೆ ಇರುವುದರಿಂದ ಮನೆಯಲ್ಲೂ ನೀರಿನ ಬಳಕೆ, ಉಳಿಕೆಗಳ ಮಾತುಕತೆ ಆಗಿಯೇ ಆಗುತ್ತದೆ. ಇದರಿಂದಾಗಿ ಮಗುವಿನ ಮೂಲಕ ಹೆತ್ತವರಿಗೂ ಜಲಸಂರಕ್ಷಣೆಯ ಪಾಠದ ಒಂದೆಳೆಯ ಸ್ಪರ್ಶವಾಗುತ್ತದೆ. ಮನೆಯಲ್ಲಿ ಸಣ್ಣಕೆ ಚಿಂತನೆಯ ಬೀಜ ಮೊಳಕೆಯೊಡೆಯುತ್ತದೆ. ಇದರಿಂದ ಎತ್ತಿ ಹೇಳುವಂತಹ ಬದಲಾವಣೆ ಕಾಣದಿದ್ದರೂ ಅರಿವಿನ ತಂಗಾಳಿ ಬೀಸಲಾರಂಬಿಸುವುದಂತೂ ಖಂಡಿತ. 

ಈ ಚಿಂತನೆ ಹುಟ್ಟಿದ್ದು ಹೇಗೆ?
ಸುಮಾರು ಹತ್ತನೇ ತರಗತಿಯ ತನಕ ವಿದ್ಯಾರ್ಥಿಗೆ ಅಧ್ಯಾಪಕರ ಮಾತೇ ಪ್ರಮಾಣ. ಅಧ್ಯಾಪಕ ಗೊತ್ತಿಲ್ಲದೆ ತಪ್ಪು ಶಬ್ದ ಉಚ್ಚರಿಸಿದರೂ ಅದನ್ನೇ ಸತ್ಯವೆಂದು ನಂಬುವ ವಯಸ್ಸು, ಭಕ್ತಿ, ನಂಬುಗೆ, ವಿಶ್ವಾಸ. ಅರಿವಿನ ವಿಚಾರಗಳನ್ನು ಹೆತ್ತವರು ಎಷ್ಟೇ ಗಾಢವಾಗಿ ಹೇಳಿದರೂ ಮಕ್ಕಳು ಬೇಗನೆ ಸ್ವೀಕರಿಸಲಾರರು. ಆದರೆ ಅಧ್ಯಾಪಕರು ತರಗತಿಯಲ್ಲಿ ಹೇಳುವಂತಹ ಒಂದೊಂದು ವಾಕ್ಯವನ್ನೂ ಅನುಸರಿಸುತ್ತಾರೆ, ಅನುಷ್ಠಾನಿಸುತ್ತಾರೆ. ಈ ಹಿನ್ನೆಲೆಯಲ್ಲಿ ನೆಲ-ಜಲದ ಪಾಠಕ್ಕೆ ಅಧ್ಯಾಪಕರೇ ಟೊಂಕ ಕಟ್ಟಿದ್ದು ಶ್ಲಾಘನೀಯ ವಿಚಾರ. ಜಲಸಂರಕ್ಷಣೆಯ ಮಹತ್ವವನ್ನು ಸಾರುವ, ಬಿತ್ತುವ, ತನ್ನೊಳಗೆ ಇಳಿಸಿಕೊಳ್ಳುವ ಚಿಕ್ಕ ಸ್ಪರ್ಧೆಯೊಂದಕ್ಕೆ ಇಷ್ಟೊಂದು ಪ್ರಮಾಣದಲ್ಲಿ ಮಕ್ಕಳು ಭಾಗವಹಿಸಿದ್ದಾರೆ ಎನ್ನುವುದು ಸಣ್ಣ ವಿಚಾರವಲ್ಲ. 

ಈಗ ಶಾಲೆಯ ವಾರ್ಷಿಕೋತ್ಸವಗಳ ಭರಾಟೆ. ನೆಲ-ಜಲ ಆಂದೋಲನದ ಕಾಳಜಿಯುಳ್ಳ ಅಧ್ಯಾಪಕರು ಇರುವ ಶಾಲೆಗಳಲ್ಲೆಲ್ಲಾ ಸಾಂಸ್ಕೃತಿಕ ಕಾರ್ಯಕ್ರಮದ ಅಜೆಂಡಾ ಬದಲಾಗುತ್ತಿದೆ. ಕಲಾಪಗಳ ಮಧ್ಯೆ ಜಲಸಾಕ್ಷರತೆಯ ಮಹತ್ವವನ್ನು ಸಾರುವ ತುಣುಕುಗಳ ಪ್ರಸ್ತುತಿ. ಸಮಾಜ ಮತ್ತು ಜಲಸಂರಕ್ಷಣೆಯ ಮಾತುಕತೆಗಳು. ಕಿರು ಪ್ರಹಸನ, ನೃತ್ಯ, ನಾಟಕ... ಎಲ್ಲವೂ ಜಲದ ಸುತ್ತಮುತ್ತ. ಯಾವುದೇ ಆಂದೋಲನಗಳು ಮೈಮೇಲೆ ಬಂದರೆ ಮಾತ್ರ ಅದರಿಂದ ಪರಿಣಾಮ. ಪರಿಸ್ನೇಹಿ ಅಧ್ಯಾಪಕರ ಸತತ ಯತ್ನ ಮತ್ತು ಆ ಕುರಿತು ಟ್ಯೂನ್‌ ಮಾಡಿಕೊಂಡ ಮನಃಸ್ಥಿತಿಗಳು ನಿಜಕ್ಕೂ ಅನುಕರಣೀಯ. 

ಇಷ್ಟೆಲ್ಲ ಹೇಗೆ ಸಾಧ್ಯವಾಯಿತು? ಕರ್ನಾಟಕ ಸರಕಾರದ ಲೋಕಶಿಕ್ಷಣ ಇಲಾಖೆಯಡಿ ಬರುವ ಜಿಲ್ಲಾ ವಯಸ್ಕರ ಶಿಕ್ಷಣಾಧಿಕಾರಿಗಳ ಮುಂದಾಳ್ತನದಲ್ಲಿ ಜಲ ಸಾಕ್ಷರತಾ ಆಂದೋಲನವು ಕರಾವಳಿಯ ಶಾಲೆಗಳಲ್ಲಿ ಸದ್ದಿಲ್ಲದೆ ನಡೆಯುತ್ತದೆ. ಜಿಲ್ಲಾ ಪಂಚಾಯತ್‌ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯವರು ಮುಖ್ಯಸ್ಥರಾಗಿರುವ ಸಮಿತಿಯೊಂದು ಹೆಗಲೆಣೆಯಾಗಿದೆ. ಜತೆಗೆ ಕಂಕನಾಡಿಯ ಜನಶಿಕ್ಷಣ ಟ್ರಸ್ಟಿನ ನಿರ್ದೇಶಕರಾದ ಶೀನ ಶೆಟ್ಟಿ, ಕೃಷ್ಣ ಮೂಲ್ಯರ ಯೋಜನೆ, ಯೋಚನೆ. ಒಂದು ಪಂಚಾಯತಿನಿಂದ ಜಲಮರುಪೂರಣ ಆಭಿಯಾನ ಆರಂಭಿಸಬೇಕೆನ್ನುವುದು ಯೋಜನೆಯಾಗಿತ್ತು. ಆಗಿನ ಜಿಲ್ಲಾ ಪಂಚಾಯತ್‌ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯಾಗಿದ್ದ ಕು| ಶ್ರೀವಿದ್ಯಾ ಅದನ್ನು ಜಿಲ್ಲೆಗೆ ವಿಸ್ತರಿಸಿದರು. 

ಇಲ್ಲಿ ಹುಟ್ಟಿದ್ದು ಎಲ್ಲೆಡೆ ವಿಸ್ತರಿಸಲಿ
ಕರಾವಳಿ ಯಾಕೆ, ಕನ್ನಾಡು ಹಲವು ಆಂದೋಲನಗಳಿಗೆ ಖ್ಯಾತಿ. ಯಶಸ್ಸಾದುದು ಸುದ್ದಿಯಾಗುತ್ತದೆ. ಕೆಲವು ಫೈಲ್‌ಗ‌ಳಲ್ಲೇ ಮಲಗಿರುತ್ತವೆ. ಇದರ ಅರಿವಿದ್ದ ಜಿಲ್ಲಾ ವಯಸ್ಕರ ಶಿಕ್ಷಣಾಧಿಕಾರಿ ಸುಧಾಕರ್‌ ವಿದ್ಯಾರ್ಥಿಗಳ ಮೂಲಕ ಯೋಜನೆಯನ್ನು ಅನುಷ್ಠಾನ ಮಾಡುವತ್ತ ಉತ್ಸಾಹ ತೋರಿದರು. ಅಧ್ಯಾಪಕರಿಂದ ವಿದ್ಯಾರ್ಥಿಗಳಿಗೆ ಜಲಸಾಕ್ಷರತೆಯ ಅರಿವು ಹರಿದು ಬರಬೇಕೆನ್ನುವ ದೂರದೃಷ್ಟಿ. ಆಯ್ದ ಶಾಲೆಗಳಲ್ಲಿ ಶುರುವಾದ ಪ್ರಕ್ರಿಯೆಗಳು ಜಿಲ್ಲೆಗೆ ವಿಸ್ತಾರಗೊಂಡವು. ಮಳೆನೀರನ್ನು ಇಂಗಿಸುವುದು ಆಂದೋಲನದ ಮೊದಲ ಪುಟ. ಜತೆಜತೆಗೆ ಅರಣ್ಯೀಕರಣದ ಪುಟ್ಟ ಯತ್ನ. 

ವರ್ತಮಾನ ಬೇಡುವ ಇಂತಹ ದೂರದೃಷ್ಟಿ ನಿಮ್ಮಲ್ಲಿ ಹೇಗೆ ಬೀಜಾಂಕುರವಾಯಿತು? ಸುಧಾಕರ್‌ ಹೇಳುತ್ತಾರೆ, "ಯಾವಾಗಲೂ ಕರಾವಳಿಯು ನೀರಿನ ಬರವನ್ನು ಕಂಡಿಲ್ಲ. ಕಳೆದ ವರುಷದ ಬೇಸಿಗೆಯು ನೀರಿನ ಬರದ ಅನುಭವ ಕೊಟ್ಟಿತು. ಮಂಗಳೂರಿನಂತಹ ಪಟ್ಟಣಕ್ಕೆ ಕಳೆದ ವರುಷ ಬರ ಬಿಸಿ ಮುಟ್ಟಿಸಿದೆ. ಜಲಮರುಪೂರಣದತ್ತ ದೊಡ್ಡ ಸ್ವರವನ್ನು ಎಬ್ಬಿಸುತ್ತಾ ಬಂದಿರುವ ಜಲಯೋಧರು ಹಬ್ಬಿಸಿದ ಮಾಹಿತಿಯ ಪುಟ ತೆರೆಯಲು ಶುರು ಮಾಡಿದ್ದಾರೆ! ನೀರಿನ ಬರಕ್ಕೆ ಏನಾದರೊಂದು ಪರಿಹಾರವನ್ನು ಸಣ್ಣ ಮಟ್ಟದಲ್ಲಿ ಕಂಡುಕೊಳ್ಳುವ ಚಿಕ್ಕ ಬಿಂದು ಇಂದು ಸಿಂಧುವಾಗುತ್ತಿದೆ.' 

ಸುಧಾಕರ್‌ ಆಂದೋಲನದ ಪರಿಣಾಮಗಳನ್ನು ಹೇಳುತ್ತಾರೆ, "ಬಾವಿ, ಕೊಳವೆಬಾವಿ ಮರುಪೂರಣ, ಜತೆಜತೆಗೆ ಇಂಗುಗುಂಡಿಗಳ ನಿರ್ಮಾಣ ಮಾಡಿದ ಶಾಲೆಗಳು ಆರುನೂರು ಮೀರಬಹುದು. ಈಗಾಗಲೇ ನೆಲ-ಜಲ ಸಂರಕ್ಷಣೆಯಲ್ಲಿ ತೊಡಗಿಸಿಕೊಂಡಿರುವ ಶಾಲೆಗಳ ಪರಸ್ಪರ ಅನುಭವ ಹಂಚಿಕೆಯ ಕೆಲಸಗಳು ವೇಗವನ್ನು ಹೆಚ್ಚಿಸಿತು. ಯಶಸ್ಸು ಸಾಧಿಸಿದ ರೀತಿಗಳನ್ನು ಉಳಿದ ಶಾಲೆಗಳಿಗೆ ತಿಳಿಸುವ ಯತ್ನವೂ ಜತೆಜತೆಗೆ ನಡೆದಿತ್ತು. ಪರಿಸರ ಕಾಳಜಿಯುಳ್ಳ ಅಧ್ಯಾಪಕರಿರುವಲ್ಲೆಲ್ಲಾ ನೀರೆಚ್ಚರದ ಕೆಲಸಗಳು ವೇಗ ಪಡೆದುವು. ವಿದ್ಯಾರ್ಥಿಗಳಿಗೆ ಜಲಸಂರಕ್ಷಣೆಯ ಪರಿಕಲ್ಪನೆ ಸ್ಪಷ್ಟವಾಗಿದೆ.' ಮಾಹಿತಿ ವಿನಿಮಯಕ್ಕೆ ಜಲ ಸಾಕ್ಷರತಾ ಆಂದೋಲನದ ವಾಟ್ಸಪ್‌ ಗ್ರೂಪಿದೆ. 

ಬಂಟ್ವಾಳ ತಾಲೂಕಿನ ಅಳಿಕೆ ಶ್ರೀ ಸತ್ಯಸಾಯಿ ಲೋಕಸೇವಾ ಪ್ರೌಢ ಶಾಲೆಯ ವಿದ್ಯಾರ್ಥಿಗಳು ರೂಪಿಸಿದ ತಡೆಗಟ್ಟ, ನೀರಿನ ಪೋಲಿನ ತಡೆ, ಕಾಡು ಕೃಷಿ; ಕೇಪು-ಕಲ್ಲಂಗಳ ಶಾಲೆಯ ನೀರೆಚ್ಚರದ ಮಾದರಿಗಳು, ಮನೆಗೊಂದು ಇಂಗುಗುಂಡಿ; ಮಾಣಿಲದ ಜಲಗಣತಿ, ಮಂಗಳೂರು ಉರ್ವದ ಪೊಂಪೈ ಶಾಲೆಯಲ್ಲಿ ಕವನಗಳ ಮೂಲಕ ಮಕ್ಕಳ ಮನಸ್ಸನ್ನು ಅರಳಿಸುವ ಯತ್ನ, ಪಾಣಾಜೆ ಶಾಲೆಯ ನೀರಿನ ಸೋಸು ವಿಧಾನ, ಸುರಿಬೈಲು ಶಾಲೆಯ ಅಂತರ್ಜಲ ಮರುಪೂರಣ, ಉಜಿರೆ-ಬೆಳಾರು ಶಾಲೆಯ ಮಳೆನೀರು ಇಂಗುವ ವ್ಯವಸ್ಥೆ.. ಹೀಗೆ ಒಂದೊಂದು ಶಾಲೆಯ ವಿಧಾನಗಳು ನೀರೆಚ್ಚರದತ್ತ ವಿದ್ಯಾರ್ಥಿಗಳನ್ನು ಸೆಳೆದಿವೆ. ಹೀಗೆ ಹುಟ್ಟಿದ ಆಂದೋಲ ಸಂಘ ಸಂಸ್ಥೆಗಳ ಮೂಲಕ ಸಮಾಜಕ್ಕೆ ಹಬ್ಬಿಸಬಹುದು. ಇದೊಂದು ಸಾರ್ವಜನಿಕ ಆಂದೋಲನವಾಗಿ ವಿಸ್ತರಿಸಬೇಕು.

ನೆಲ-ಜಲದ ಪಾಠಕ್ಕೆ ಅಧ್ಯಾಪಕರೇ ಟೊಂಕ ಕಟ್ಟಿದ್ದು ಶ್ಲಾಘನೀಯ ವಿಚಾರ. ಜಲಸಂರಕ್ಷಣೆಯ ಮಹತ್ವವನ್ನು ಸಾರುವ, ಬಿತ್ತುವ, ತನ್ನೊಳಗೆ ಇಳಿಸಿಕೊಳ್ಳುವ ಚಿಕ್ಕ ಸ್ಪರ್ಧೆಯೊಂದಕ್ಕೆ ಇಷ್ಟೊಂದು ಪ್ರಮಾಣದಲ್ಲಿ ಮಕ್ಕಳು ಭಾಗವಹಿಸಿದ್ದಾರೆ ಎನ್ನುವುದು ಸಣ್ಣ ವಿಚಾರವಲ್ಲ. 

*ನಾ ಕಾರಂತ ಪೆರಾಜೆ

Trending videos

Back to Top