CONNECT WITH US  

ವಾಟ್ಸ್‌ಆ್ಯಪ್‌ನಲ್ಲೇ ಕೃಷಿ ಪತ್ರಿಕೋದ್ಯಮದ ತರಬೇತಿ ಸಮಾವೇಶ!

ಡಿಸೆಂಬರ್‌ 12. ಕೃಷಿ ಮಾಧ್ಯಮ ಕೇಂದ್ರದ (Centre for Agricultural Media - CAM) ಕೃಷಿ- ಗ್ರಾಮೀಣ- ಅಭಿವೃದ್ಧಿ ಪತ್ರಿಕೋದ್ಯಮ ತರಬೇತಿಯ ಉದ್ಘಾಟನೆ. ವಾರ ಮುಂಚಿತವಾಗಿ ಕಾಮ್‌ ಕೋರ್ಸ್‌ ವಾಟ್ಸ್‌ಆ್ಯಪ್‌ ಗುಂಪಿನಲ್ಲಿ ಆಮಂತ್ರಣ. ಸಂಜೆ ಏಳು ಗಂಟೆಗೆ ಸರಿಯಾಗಿ ಶ್ರೀ ಪಡ್ರೆಯವರಿಂದ ಉದ್ಘಾಟನೆ. ಇಪ್ಪತ್ತೆಂಟು ಮಂದಿ ಶಿಬಿರಾರ್ಥಿಗಳು, ಐವತ್ತಕ್ಕೂ ಮಿಕ್ಕಿ ಸಂಪನ್ಮೂಲ ವ್ಯಕ್ತಿಗಳು, ವಿಶೇಷ ಆಹ್ವಾನಿತರು... ಹೀಗೆ ಸುಮಾರು ನೂರು ಮಂದಿ ಸಭಾಸದರು.  ರಾಜಧಾನಿಯಿಂದ ಕೃಷಿ ಮಾಧ್ಯಮ ಕೇಂದ್ರದ ಮುಖ್ಯಸ್ಥರು ಉದ್ಘಾಟನಾ ಸಮಾರಂಭಕ್ಕೆ ಅಣಿಯಾದರು. ಒಂದೈದು ನಿಮಿಷ ಮುಂಚಿತವಾಗಿ ಸೂಚನೆಗಳನ್ನು ಘೋಷಿಸಿದರು. ಏಳು ಗಂಟೆಗೆ ಸರಿಯಾಗಿ ಇತ್ತ ಕಾಸರಗೋಡು ಹತ್ತಿರದ ಪಡ್ರೆ ಹಳ್ಳಿಯಿಂದ ಕಂಪ್ಯೂಟರ್‌ ಮುಂದೆ ಉದ್ಘಾಟಕರು ಸಂದೇಶವನ್ನು ಟೈಪಿಸುವ ಚಿತ್ರ ಮೂಡಿತು. ಜತೆಗೆ ಉದ್ಘಾಟನಾ ಧ್ವನಿ ಸಂದೇಶದ ಫೈಲ್‌ ಎಲ್ಲರ ಸ್ಮಾರ್ಟ್‌ಪೋನಿನೊಳಗೆ ನುಸುಳಿತು. ಕ್ಷಣಕ್ಷಣದ ಕಲಾಪದ ಬದಲಾವಣೆಯನ್ನು ನಿರ್ವಾಹಕರು ತಿಳಿಸುತ್ತಾ ಹೋದರು. ವೀಕ್ಷಕರಾಗಿ ಹಿರಿಯರನ್ನು ಗುಂಪಿಗೆ ಆಹ್ವಾನಿಸಲಾಗಿತ್ತು. ಅವರೆಲ್ಲರ ಸಂದೇಶಗಳು ಅಪ್‌ಲೋಡ್‌ ಆದುವು. ಸಂಪನ್ಮೂಲ ವ್ಯಕ್ತಿಗಳ ಸಂದೇಶ. ಶಿಬಿರಾರ್ಥಿಗಳ ಶುಭಾಶಂಸನೆ ಮತ್ತು ರಸಪ್ರಶ್ನೆ. ಸುಮಾರು ಒಂದೂವರೆ ಗಂಟೆಗಳಷ್ಟು ಕಾಲ ಈ ಕಲಾಪ ನಡೆಯಿತು.   

ಕೃಷಿ ಮಾಧ್ಯಮ ಕೇಂದ್ರದ ಪತ್ರಿಕೋದ್ಯಮ ತರಬೇತಿಯ ಉದ್ಘಾಟನೆ ನಡೆದುದು ಯಾವುದೇ ಸಭಾಮಂದಿರದಲ್ಲಿ ಅಲ್ಲ. ಅಂಗೈಯಲ್ಲಿರುವ ಸ್ಮಾರ್ಟ್‌ಫೋನಿನಲ್ಲಿ! ವಾಟ್ಸ್‌ಆ್ಯಪ್‌ ಗುಂಪಿನಲ್ಲಿ! ಶಿಸ್ತುಬದ್ಧವಾಗಿ ಸಭಾಮಂದಿರದಲ್ಲಿ ಹೇಗೆ ನಡೆಯುತ್ತದೋ ಅಂತೆಯೇ ಇಲ್ಲೂ ನಡೆದಿದೆ. ಇದೊಂದು ನೂತನ ಪರಿಕಲ್ಪನೆ. ಕೃಷಿ ಮಾಧ್ಯಮ ಕೇಂದ್ರದ ಮಿದುಳ ಮರಿ. ಧಾರವಾಡವನ್ನು ಕೇಂದ್ರವಾಗಿಟ್ಟುಕೊಂಡು ಕೇಂದ್ರವು 2003ರಿಂದ 2012ರ ತನಕ ಕೃಷಿ-ಗ್ರಾಮೀಣ ಪತ್ರಿಕೋದ್ಯಮ ಶಿಬಿರಗಳನ್ನು ನಡೆಸಿತ್ತು. ನೂರಕ್ಕೂ ಮಿಕ್ಕಿ ಮಂದಿ ಯಶಸ್ವಿಯಾಗಿ ತರಬೇತಿಯನ್ನು ಪಡೆದು ಕಾಮ್‌ ಫೆಲೋ ಗೌರವ ಪಡೆದಿದ್ದಾರೆ. ಬದಲಾದ ಕಾಲಘಟ್ಟಕ್ಕೆ ಅನುಸಾರವಾಗಿ ಸಿಲೆಬಸನ್ನು ಟ್ಯೂನ್‌ ಮಾಡಿಕೊಂಡ ಕೇಂದ್ರವು ವಾಟ್ಸ್‌ಆ್ಯಪ್‌ ಕೃಷಿ ಪತ್ರಿಕೋದ್ಯಮ ತರಬೇತಿಯನ್ನಾಗಿ ಬದಲಿಸಿಕೊಂಡಿದೆ. 

ಈ ಮೊದಲು - ಶಿಬಿರದ ಆರಂಭಕ್ಕೆ ಎಲ್ಲ ಶಿಬಿರಾರ್ಥಿಗಳು ತಿಳಿದುಕೊಳ್ಳಬೇಕಾದ ಮೂಲ ಅಂಶಗಳ ಪುಸ್ತಿಕೆ ತಯಾರಿಸಿ ಅಂಚೆಯಲ್ಲಿ ಕಳುಹಿಸಲಾಗುತ್ತಿತ್ತು. ನಾಲ್ಕು ದಿವಸಗಳ ಶಿಬಿರವನ್ನೂ ಆಯೋಜಿಸಲಾಗುತ್ತಿತ್ತು. ಪ್ರತಿ ತಿಂಗಳು ಶಿಬಿರಾರ್ಥಿಗಳು ಅಸೈನ್‌ಮೆಂಟ್‌ ಬರೆಯಬೇಕಾಗಿತ್ತು. ಕೇಂದ್ರದ ಮುಖ್ಯಸ್ಥರು ತಿದ್ದಿ, ಪರಿಷ್ಕರಿಸಿ, ಸೇರಿಸಬೇಕಾದ ಅಂಶಗಳು, ಬಿಡಬೇಕಾದ ಮಾಹಿತಿಗಳನ್ನು ಸೂಚಿಸಿ ಕಳುಹಿಸುತ್ತಿದ್ದರು. ಸೂಚನೆಯಂತೆ ಲೇಖನವನ್ನು ಪರಿಷ್ಕರಿಸಿ ಕಳುಹಿಸಿಬೇಕು. ರಾಜ್ಯದ ನಾನಾ ಭಾಗಗಳ ಸಂಪನ್ಮೂಲ ವ್ಯಕ್ತಿಗಳು ತರಬೇತಿ ನೀಡುತ್ತಿದ್ದರು.

ಈಗ ತಂತ್ರಜ್ಞಾನ ಬಳಕೆಯ ಕಾಲ. ಕೈಯೊಳಗೆ ಬಗೆಬಗೆಯ ಮೊಬೈಲ್‌ಗ‌ಳು ಅಂಟಿಕೊಂಡಿವೆ. ಕ್ಷಣಮಾತ್ರದಲ್ಲಿ ಆಗುಹೋಗುಗಳ ಅಪ್‌ಡೇಟ್‌ ಮಾಡಿಕೊಳ್ಳುವಂತಹ ಅವಕಾಶ. ವಾಟ್ಸ್‌ಆ್ಯಪ್‌ ಬಳಕೆಯು ಗರಿಷ್ಠ ಪ್ರಮಾಣದಲ್ಲಿ ಆಗುತ್ತಿರುವುದರಿಂದ ಇದನ್ನೇ ಪತ್ರಿಕೋದ್ಯಮಕ್ಕೆ ಬಳಸಿಕೊಂಡರೆ ಹೇಗೆ? ಯೋಜನೆಯಾಗಿ ರೂಪುಗೊಂಡಿತು. ನವೆಂಬರ್‌ ತಿಂಗಳಲ್ಲಿ ಪುತ್ತೂರಿನ ಫಾರ್ಮರ್ಸ್‌ ಫ‌ಸ್ಟ್‌ ಟ್ರಸ್ಟ್‌ ಮತ್ತು ಕೃಷಿ ಮಾಧ್ಯಮ ಕೇಂದ್ರದ ಆಯೋಜನೆಯಲ್ಲಿ ವಾಟ್ಸ್‌ಆ್ಯಪ್‌ ಕೃಷಿ ಪತ್ರಿಕೋದ್ಯಮ ಶಿಬಿರವು ಪುತ್ತೂರಿನಲ್ಲಿ ಸಂಪನ್ನಗೊಂಡಿತ್ತು. ಕನ್ನಾಡಿನ ನಾನಾ ಭಾಗಗಳಿಂದ ಇಪ್ಪತ್ತಾರು ಮಂದಿ ಶಿಬಿರಾರ್ಥಿಗಳು ಭಾಗವಹಿಸಿದರು. 

ಮಲೆಯಾಳ ಕೃಷಿ ಜಾಲತಾಣ ಪತ್ರಿಕೆ ಕಾರ್ಷಿಕರಂಗಮ್‌ ಡಾಟ್‌ ಕಾಮ್‌ ಇದರ ಸಂಪಾದಕರಾದ ನೆಮೆ ಜಾರ್ಜ್‌ ಹೇಳುತ್ತಾರೆ, 'ವಾಟ್ಸ್‌ಆ್ಯಪ್‌ ಪತ್ರಿಕೋದ್ಯಮ ತುಂಬ ವಿನೂತನ. ಕೃಷಿಕರಿಗೆ ಇಂದು ಭಟ್ಟಿ ಇಳಿಸಿ ಕೊಡುವ ಮಾಹಿತಿ ಬೇಕು. ಈ ಅತ್ಯಂತ ನವೀನ ಪತ್ರಿಕೋದ್ಯಮ ವಿಧಾನವು ಕಾಲದ ಆವಶ್ಯಕತೆ.' ಅಡಿಕೆ ಪತ್ರಿಕೆಯು ಹಾಕಿಕೊಟ್ಟ ಕೃಷಿಕರ ಕೈಗೆ ಲೇಖನಿಯ ಆಶಯವನ್ನು ಯಶಸ್ವಿಯಾಗಿ ಕೃಷಿ ಮಾಧ್ಯಮ ಕೇಂದ್ರವು ತನ್ನ ಹೂರಣಗಳ ಮೂಲಕ ಅನುಷ್ಠಾನಗೊಳಿಸುತ್ತಾ ಬಂದಿದೆ. ಈ ಬಾರಿ ಹೊಸ ಕಲ್ಪನೆಯೊಂದಿಗೆ ಆನ್‌ಲೈನ್‌ ತರಬೇತಿಗೆ ಪದಾರ್ಪಣೆ ಮಾಡಿದೆ. ತರಬೇತಿಯ ಹೂರಣ, ಗುಣಮಟ್ಟ, ನೀತಿ ನಿರೂಪಗಳೆಲ್ಲವೂ ಮೊದಲಿನಂತಿದ್ದು ಇ-ತಂತ್ರಜ್ಞಾನಕ್ಕೆ ಅಳವಡಿಸಿಕೊಳ್ಳಲಾಗಿದೆ. ಇದಕ್ಕಾಗಿ ಕಾಮ್‌ ಕೋರ್ಸ್‌ ಎನ್ನುವ ವಾಟ್ಸ್‌ಆ್ಯಪ್‌ ಗುಂಪನ್ನು ತೆರೆಯಲಾಗಿದೆ. ಇದರಲ್ಲಿ ಇಪ್ಪತ್ತೆಂಟು ಮಂದಿ ಶಿಬಿರಾರ್ಥಿಗಳಿದ್ದಾರೆ. ಸಂಪನ್ಮೂಲ ವ್ಯಕ್ತಿಗಳಿದ್ದಾರೆ. ತಾವು ಬರೆದ ಲೇಖನವನ್ನು ಇ-ಮೈಲ್‌ ಮಾಡಿ, ಅದಕ್ಕೆ ಸಂಬಂಧ ಪಟ್ಟ ಸಂಶಯಗಳನ್ನು ವಾಟ್ಸ್‌ಆ್ಯಪ್‌ ಮೂಲಕ ಪರಿಹರಿಸಿಕೊಳ್ಳುವುದು ಒಂದು ವಿಧಾನ. ಪ್ರತಿದಿನ ಸಂಜೆ ಗಂಟೆ 7ರಿಂದ 9ರ ತನಕ ಗ್ರೂಪ್‌ ಸಕ್ರಿಯ. ಕೃಷಿ ಮಾಧ್ಯಮ ಕೇಂದ್ರದ ವರಿಷ್ಠರು, ಸಂಪನ್ಮೂಲ ವ್ಯಕ್ತಿಗಳು ಆ ಅವಧಿಯಲ್ಲಿ ತರಗತಿಗೆ ಬರುತ್ತಾರೆ. ಶಿಬಿರಾರ್ಥಿಗಳ ಸಂಶಯಗಳನ್ನು ಪರಿಹರಿಸುತ್ತಾರೆ. ಒಬ್ಬನ ಸಂಶಯ ಮತ್ತು ಅದಕ್ಕಿರುವ ಪರಿಹಾರ ಇವೆರಡೂ ಏಕ ಕಾಲದಲ್ಲಿ ಎಲ್ಲ ಶಿಬಿರಾರ್ಥಿಗಳಿಗೆ ರವಾನೆಯಾಗುತ್ತದೆ. ವೈಯಕ್ತಿಕವಾಗಿಯೂ ಸಂಪನ್ಮೂಲ ವ್ಯಕ್ರಿಗಳನ್ನು ಸಂಪರ್ಕಿಸುತ್ತಾರೆ.

ವಾಟ್ಸ್‌ಆ್ಯಪ್‌ ಗುಂಪಿನಲ್ಲಿ ತರಬೇತಿಯೇತರ ವಿಚಾರಗಳು ಬಂದಾಗ ಅಡ್ಮಿನ್‌ ಗರಂ ಆಗುತ್ತಾರೆ! ಸಂಬಂಧಪಟ್ಟವರಿಗೆ ಎಚ್ಚರಿಕೆ. 'ಈ ರೀತಿಯ ವ್ಯವಸ್ಥೆಗಳು ಶಿಸ್ತುಬದ್ಧಗೊಳಿಸಿರುವುದು ಅನಿವಾರ್ಯ. ಪತ್ರಿಕೋದ್ಯಮ ತರಬೇತಿಯು ಗ್ರೂಪಿನ ಉದ್ದೇಶವಾಗಿರುವುದರಿಂದ ಅನ್ಯ ವಿಚಾರಗಳು ಬೇಕಾಗಿಲ್ಲ' ಎನ್ನುತ್ತಾರೆ ಕೇಂದ್ರದ ಸಂಚಾಲಕಿ ರೇಖಾ ಸಂಪತ್‌. ನಾಗೇಶ ಹೆಗಡೆ, ಶ್ರೀ ಪಡ್ರೆ, ಮಲ್ಲಿಕಾರ್ಜುನ ಹೊಸಪಾಳ್ಯ, ಅಡ್ಡೂರು ಕೃಷ್ಣ ರಾವ್‌, ಡಾ| ಮೊಹನ್‌ ತಲಕಾಲುಕೊಪ್ಪ, ಆನಂದತೀರ್ಥ ಪ್ಯಾಟಿ, ಗಾಣದಾಳು ಶ್ರೀಕಂಠ... ಹೀಗೆ ಐವತ್ತಕ್ಕೂ ಮಿಕ್ಕಿ ಅನುಭವಿ ಸಂಪನ್ಮೂಲ ವ್ಯಕ್ತಿಗಳಿದ್ದಾರೆ. ಅವರೆಲ್ಲರ ಸಲಹೆ, ಸೂಚನೆಗಳು ಶಿಬಿರಾರ್ಥಿಗಳಿಗೆ ನಿರಂತರ. ಗುಂಪಿನಲ್ಲಿ ಅಂಕಣ ಬರೆಹಗಳು ಆರಂಭವಾಗಿವೆ. ಶ್ರೀ ಪಡ್ರೆಯವರ ಸುಳಿವೊಂದು ಮಿಂಚು, ಡಾ| ಮೋಹನ್‌ ತಲಕಾಲುಕೊಪ್ಪ ಅವರ ತಂತ್ರ-ತಾಣ ಮಲ್ಲಿಕಾರ್ಜುನ ಹೊಸಪಾಳ್ಯರ ಬಂಡಿ - ಜಾಡು, ಡಾ| ಮನೋಹರ ಉಪಾಧ್ಯರ ಸಹ-ಸಹ್ಯ ಮತ್ತು ಮೈಸೂರಿನ ಕೃಷ್ಣಪ್ರಸಾದ್‌ ಅವರ ಬೀಜ-ಮಾತು ಅಂಕಣಗಳು ಆರಂಭಗೊಂಡಿವೆ. 

'ದೂರ ಶಿಕ್ಷಣ ವ್ಯವಸ್ಥೆಯಲ್ಲಿ ಕಾಮ್‌ ತರಬೇತಿಯು ಒಂದು ಹೊಸ ಮೈಲಿಗಲ್ಲು. ಪತ್ರಿಕಾ ಮಾಧ್ಯಮದಲ್ಲಿ ಕೃಷಿ ಬಗ್ಗೆ ಹೆಚ್ಚಿನ ಗುಣಮಟ್ಟದ ಮಾಹಿತಿಯನ್ನು ಪಸರಿಸುವ ನಿಟ್ಟಿನಲ್ಲಿ ಆಸಕ್ತರನ್ನು ಗುರುತಿಸಿ, ಅವರಿಗೆ ವೃತ್ತಿಪರರಿಂದ ಮಾರ್ಗದರ್ಶನ ದೊರೆಯುವಂತಹ ಅವಕಾಶ,' ಶಿಬಿರಾರ್ಥಿ ಸುಜಯ್‌ ಆರ್‌.ಕೆ. ಅಭಿಪ್ರಾಯ. ಶ್ರೀ ಪಡ್ರೆಯವರು ಶಿಬಿರವನ್ನು ಉದ್ಘಾಟಿಸುತ್ತಾ ಹೇಳಿದ ಧ್ವನಿ ಸಂದೇಶದಲ್ಲಿ 'ದೇಶದಲ್ಲೇ ಈ ರೀತಿಯ ಪತ್ರಿಕೋದ್ಯಮ ಶಿಕ್ಷಣ ಇಷ್ಟು ಕಳಕಳಿಯುಳ್ಳದ್ದು, ಶಿಬಿರಾರ್ಥಿಗಳ ಚಿಕಿತ್ಸಕ ದೃಷ್ಟಿಯನ್ನು ಮತ್ತು ನಿಷ್ಪಕ್ಷಪಾತ ದೃಷ್ಟಿಕೋನವನ್ನು ಹರಿತಗೊಳಿಸುವಂಥದ್ದು - ಬೇರೆಲ್ಲೂ ಸಿಗಲು ಸಾಧ್ಯವಿಲ್ಲ. ಅಶರೀರ ಪತ್ರಿಕೋದ್ಯಮ ಶಿಕ್ಷಣದ ಹೊಸ ಅಧ್ಯಾಯ ಆರಂಭವಾಗಿದೆ. ಮುಂದಿನ ಒಂದು ವರುಷ ಅತ್ಯಪೂರ್ವವಾದ ಶಿಕ್ಷಣ ಸಿಗಲಿದೆ. ಅದನ್ನು ಪಡಕೊಳ್ಳಲು ಅಭ್ಯರ್ಥಿಗಳು ಜ್ಞಾನ ಸಂಪಾದನೆಯ ಹಸಿವು ಇಟ್ಟುಕೊಳ್ಳಬೇಕಾಗುತ್ತದೆ.' ಕೃಷಿ ಮಾಧ್ಯಮ ಕೇಂದ್ರದ ಈ ನೂತನ ಪರಿಕಲ್ಪನೆಯ ಇ-ಪತ್ರಿಕೋದ್ಯಮ ಶಿಬಿರ ಹೊಸ ಮೈಲಿಗಲ್ಲು. ಇದರ ವರಿಷ್ಠರಲ್ಲಿ ಇಷ್ಟು ಸಾಕು ಎನ್ನುವ ಮನಃಸ್ಥಿತಿ ಇಲ್ಲದ್ದರಿಂದ ಶಿಬಿರ ಯಶಸ್ವಿಯಾಗುವುದಂತೂ ಖಂಡಿತ. ವಿಚಾರಗಳಲ್ಲಿ ರಾಜಿಯಿಲ್ಲದೆ, ಹೇಳಬೇಕಾದುದನ್ನು ನೇರ ಹೇಳುವ ಜಾಯಮಾನವನ್ನಿಟ್ಟುಕೊಂಡ ಕೃಷಿ ಮಾಧ್ಯಮ ಕೇಂದ್ರವು ಕನ್ನಾಡಿನ ಹೆಮ್ಮೆಯ ಸಂಸ್ಥೆಯಾಗಿದೆ.

- ನಾ. ಕಾರಂತ ಪೆರಾಜೆ

Trending videos

Back to Top