CONNECT WITH US  

ಪುನರ್ಪುಳಿ: ಹುಳಿಯ ಕತೆಯಲ್ಲಿ ಸಿಹಿಯ ಲೇಪ

ಸುಡುಬಿಸಿಲು ತರುವ ಸಂಕಟಕ್ಕೆ ಪುನರ್ಪುಳಿ (ಕೋಕಂ, ಮುರುಗಲು, ಗಾಸೀìನಿಯಾ ಇಂಡಿಕಾ) ಹಣ್ಣಿನ ಜ್ಯೂಸ್‌ ಸೇವನೆ ಹಿತಕಾರಿ. ಉತ್ತರಕನ್ನಡ, ದಕ್ಷಿಣೋತ್ತರ ಜಿಲ್ಲೆಗಳಲ್ಲಿ ಈ ಹಣ್ಣಿಗೆ ವಿಶೇಷ ಸ್ಥಾನ. ಆಹಾರವಾಗಿ ಮತ್ತು ಔಷಧವಾಗಿ ಸೇವಿಸುವುದು ಪಾರಂಪರಿಕ. ಬಹುತೇಕ ಕಾಡಂಚಿನ ಮರಗಳಿಂದ ಹಣ್ಣುಗಳನ್ನು ಸಂಗ್ರಹಿಸಲಾಗುತ್ತದೆ. ಮನೆಮಟ್ಟದಲ್ಲಿ ಸಿರಪ್‌, ಸಿಪ್ಪೆಗಳಿಂದ- ಪಾನೀಯ, ಸಾರು, ತಂಬುಳಿಗಳ ರೂಪದಲ್ಲಿ ಬಳಕೆಯಲ್ಲಿದೆ. ಮಹಾರಾಷ್ಟ್ರದ ಕೊಂಕಣ್‌ ಪ್ರದೇಶ ಮತ್ತು ಗೋವಾಗಳಲ್ಲಿ ಹಣ್ಣಿನ ಸಿಪ್ಪೆ (ಅಮೊÕಲ್‌)ಯು ಅಡುಗೆಯಲ್ಲಿ ವ್ಯಾಪಕವಾಗಿ ಬಳಸಲಾಗುತ್ತಿದೆ. ಹಣ್ಣಿಗೆ ಬಾಯಾರಿಕೆ ನೀಗುವ ವಿಶೇಷ ಗುಣವಿದೆ. ಕೆಲವು ಹಣ್ಣುಗಳನ್ನು ಆಯಾ ಋತುವಿನಲ್ಲೇ ಸೇವಿಸಬೇಕು. ಪುನರ್ಪುಳಿಗೆ ಈ ಶಾಪವಿಲ್ಲ! ಎಲ್ಲ ಋತುವಿನಲ್ಲಿ ಸೇವಿಸಬಹುದು. ಪಿತ್ತಶಮನ ಮತ್ತು ರಕ್ತವರ್ಧಕ ಗುಣವಿದೆ. ಮಣ್ಣಿನ ಪಾತ್ರೆಯಲ್ಲಿ ಪುನರ್ಪುಳಿ ಹಣ್ಣಿನ ಒಣ ಸಿಪ್ಪೆಗಳನ್ನು ಹಾಕಿಟ್ಟು, ಹತ್ತಿಬಟ್ಟೆಯಿಂದ ಮಡಕೆಯ ಬಾಯನ್ನು ಬಿಗಿದಿಟ್ಟರೆ ಮೂರು ವರುಷವಾದರೂ ತಾಜಾ ಆಗಿಯೇ ಉಳಿಯುತ್ತದೆ ಎನ್ನುವ ಮಾಹಿತಿಯನ್ನು ಹಿರಿಯರು ನೀಡುತ್ತಾರೆ. 

""ಪುನರ್ಪುಳಿಯ ಹೊರ ಸಿಪ್ಪೆಯ ರಸವೇ ಉತ್ಕೃಷ್ಟ ಔಷಧ. ಹೃದಯೋತ್ತೇಜಕ ಮತ್ತು ಬಲದಾಯಕ, ರುಚಿಕಾರಿ, ಜೀರ್ಣಕಾರಿ, ಯಕೃತ್‌ ಪ್ಲೀಹ, ಮೂತ್ರರೋಗಗಳಿಗೆ ಔಷಧಿ. ರಕ್ತಶೋಧಕ, ವರ್ಧಕ- ಶರೀರದೊಳಗಿನ ಆಮವನ್ನು ಕರಗಿಸಿ ಚುರುಕಾಗಿಸುತ್ತದೆ. ಬೀಜಗಳನ್ನು ಅರೆದು ಕುದಿಸಿ ತೆಗೆದ ಕೊಬ್ಬು  ಮುರುಗಲು ತುಪ್ಪ ಅಡುಗೆಯಲ್ಲಿ ತುಪ್ಪದಂತೆ ಬಳಸಬಹುದಾಗಿದೆ. ಪಾಶ್ಚಿಮಾತ್ಯ ದೇಶಗಳಲ್ಲಿ ಕೊಬ್ಬು ತೊಲಗಿಸಿ, ಶರೀರ ತೆಳುವಾಗಿಸಲು ಬಳಸುವ ದುಬಾರಿ ಹೈಡಾಕ್ಸಿ ಸಿಟ್ರಿಕ್‌ ಆಮ್ಲದ ಮೂಲವಸ್ತು ಹಣ್ಣಿನ ಒಣಸಿಪ್ಪೆ'' ಎನ್ನುತ್ತಾರೆ ಮೂಲಿಕಾ ತಜ್ಞ ಪಾಣಾಜೆಯ ವೆಂಕಟರಾಮ ದೈತೋಟ. 

ಗೋವಾದ "ವೆಸ್ಟರ್ನ್ ಘಾಟ್ಸ್‌ ಕೋಕಮ್‌ ಫೌಂಡೇಶನ್‌' ಎನ್ನುವ ಸರಕಾರೇತರ ಸಂಸ್ಥೆಯು ಪುನರ್ಪುಳಿ ಹಣ್ಣಿನ ಅಭಿವೃದ್ಧಿಗಾಗಿ ಕೆಲಸ ಮಾಡುತ್ತಿದೆ. ಅಜಿತ್‌ ಶಿರೋಡ್ಕರ್‌ ಅವರ ನೇತೃತ್ವದಲ್ಲಿ ರಾಷ್ಟ್ರಮಟ್ಟದ ವಿಚಾರ ಸಂಕಿರಣಗಳು ನಡೆದಿವೆ. ಫ‌ಲವಾಗಿ ಹಣ್ಣಿನ ಸಿಪ್ಪೆಯಿಂದು ವಿದೇಶಕ್ಕೂ ಹಾರುತ್ತಿದೆ! ಮಹಾರಾಷ್ಟ್ರದ ಸಿಂಧುದುರ್ಗ ಮತ್ತು ರತ್ನಾಗಿರಿ ಜಿಲ್ಲೆಗಳಲ್ಲಿ ಪುನರ್ಪುಳಿಯ ಇಳುವರಿ ಅಧಿಕ. ಎರಡೂ ಜಿಲ್ಲೆಗಳಲ್ಲಿ ಮುನ್ನೂರಕ್ಕೂ ಹೆಚ್ಚು ಚಿಕ್ಕಪುಟ್ಟ ಮೌಲ್ಯವರ್ಧನಾ ಘಟಕಗಳಿವೆ. ಇತ್ತ ಕೇರಳದಲ್ಲಿ ಪುನರ್ಪುಳಿ ಪರಿಚಿತವಲ್ಲ. ಇದರ ಸೋದರ ಮಂತುಹುಳಿಯ ಮಂದಸಾರವು ಮಾಂಸದ ಅಡುಗೆಗಳಲ್ಲಿ ಬಳಕೆಯಾಗುತ್ತಿದೆ. ಮಾರುಕಟ್ಟೆಯಲ್ಲಿ ಫ‌ೂÅಟಿಯಂಥ‌ ಟೆಟ್ರಾಪ್ಯಾಕ್‌ಗಳು ವಿವಿಧ ಸ್ವಾದದಲ್ಲಿ ಸಿಗುತ್ತವೆ. ಆರೇಳು ವರುಷದ ಹಿಂದೆ ಪುಣೆಯ "ಅಪರಂತ್‌ ಆಗ್ರೋ ಫ‌ುಡ್ಸ್‌'ನ ಮುಕುಂದ ಭಾವೆ, ಪುನರ್ಪುಳಿಯ ಟೆಟ್ರಾಪ್ಯಾಕ್‌ ಮಾರುಕಟ್ಟೆಗೆ ಇಳಿಸಿದ್ದರು. ಹೆಚ್ಚು ವೆಚ್ಚದ  ಪ್ಯಾಕಿಂಗ್‌. ಮೇಲ್ನೋಟಕ್ಕೆ ಸ್ವಲ್ಪ ಅಧಿಕವೇ ಅನ್ನಿಸುವ ದರ. ತೋಟದ ತಾಜಾ ಉತ್ಪನ್ನವೊಂದು ಟೆಟ್ರಾಪ್ಯಾಕ್‌ ಆಗಿರುವುದು ಹೆಮ್ಮೆಯ ವಿಚಾರ. ಅನ್ಯಾನ್ಯ ಕಾರಣಗಳಿಂದ ಈಗ ಉದ್ದಿಮೆ ಶಟರ್‌ ಎಳೆದಿದೆ. ಶಿರಸಿಯಲ್ಲಿ ನವೀನ್‌ ಹೆಗಡೆಯವರು "ಹೂಗು' ಬ್ರಾಂಡಿನಲ್ಲಿ ಆಕರ್ಷಕ ಪ್ಯಾಕಿನಲ್ಲಿ ಕುಡಿಯಲು ಸಿದ್ಧ ಉತ್ಪನ್ನ ಮಾರು ಕಟ್ಟೆಗಿಳಿಸಿದ್ದಾರೆ. 

ಮಹಾರಾಷ್ಟ್ರದಲ್ಲಿ "ಆಮ್‌ಸೋಲ್‌' ಪುನರ್ಪುಳಿಯ ಜ್ಯೂಸ್‌ನಲ್ಲಿ ಮುಳುಗಿಸಿದ ಒಣಸಿಪ್ಪೆ. ಮಾಂಸಾಹಾರ ಪದಾರ್ಥಗಳಿಗೆ ಬಳಸುತ್ತಾರೆ. ಹಣ್ಣಿನ ಉಪ್ಪುಮಿಶ್ರಿತ ರಸ- "ಸೋಲ್ಕಡಿ'. ಊಟದ ಕೊನೆಗೆ ಮಜ್ಜಿಗೆಯ ಬದಲಿಗೆ ಹೆಚ್ಚು ಇಷ್ಟಪಡುತ್ತಾರೆ. ಪೇಯವಾಗಿಯೂ ಬಳಸುತ್ತಾರೆ. ಇದನ್ನು ಹೋಟೆಲ್‌ಗ‌ಳಿಗೆ ವಿತರಿಸುವ ಒಂದೆರಡು ಮನೆ ಉದ್ದಿಮೆಗಳೂ ತಲೆಯೆತ್ತಿವೆ. ಹಣ್ಣನ್ನು ಕತ್ತರಿಸುವ ಯಂತ್ರಗಳೂ ಬಂದಿವೆ.  ಗರ್ಡಾಡಿಯ ಕೃಷಿಕ ಅನಿಲ್‌ ಬಳೆಂಜರಲ್ಲಿ ಸಿಹಿ ಪುನರ್ಪುಳಿ ಈಚೆಗೆ ಗಮನ ಸೆಳೆಯುತ್ತಿದೆ. ಸಹಜವಾಗಿ ಬೆಳೆದ ಹದಿನೇಳು ವರುಷದ ಮರ. ಮೂವತ್ತಡಿಯಷ್ಟು ಎತ್ತರಕ್ಕೆ ಬೆಳೆದಿದೆ. ಎಂಟನೇ ವರುಷದಿಂದ ಫ‌ಸಲು ಕೊಡಲು ಶುರುವಾಗಿತ್ತು. ದೊಡ್ಡ ಗಾತ್ರದ ಹಣ್ಣು. ಕಪ್ಪುಗೆಂಪು ಬಣ್ಣ. ಸಿಪ್ಪೆಯಿಂದ ತೆಗೆದ ರಸವು ಗಾಢ ವರ್ಣದಿಂದ ಕೂಡಿದೆ. ರಸವು ಎರಡು ವರುಷ ಕಳೆದರೂ ಬಣ್ಣ ಮಾಸದು. ಉಳಿದ ಪುನರ್ಪುಳಿ ತಳಿಗಿಂತ ಇದರಲ್ಲಿ ರಸ ಅಧಿಕ. ಎಪ್ರಿಲ್‌-ಮೇ ಇಳುವರಿ ಸಮಯ. ಎಲ್ಲ  ಹಣ್ಣುಗಳು ಸಮಾನ ಗಾತ್ರದಲ್ಲಿರುವುದು ವಿಶೇಷ.  ಕೆಂಪು ಮುರುಗಲಿಗಿಂತ ಬಿಳಿ ಮುರುಗಲಿನಲ್ಲಿ ಹುಳಿಯ ಅಂಶ ಹೆಚ್ಚು. ಕೆಂಪಿನದರಂತೆ ಇದೂ ಅಡವಿಯಲ್ಲಿ ಸ್ವಾಭಾವಿಕವಾಗಿ ಬೆಳೆಯುವ ಅಪರೂಪದ ಗಿಡ. ""ನೂರು ಕೆಂಪು ಮುರುಗಲು ಗಿಡಗಳಿದ್ದೆಡೆ ನಾಲ್ಕೈದು ಬಿಳಿಯದು ಸಿಗಬಹುದು. ಎರಡೂ ನೋಡಲು ಒಂದೇ ಥರ. ಹೂವು, ಕಾಯಿಯ ಆಕಾರ-ಗಾತ್ರಗಳಲ್ಲಿ ವ್ಯತ್ಯಾಸವಿಲ್ಲ. ಬಿಳಿ ಮುರುಗಲು ನಿಜವಾಗಿ ಬಿಳಿಯಲ್ಲ. ಬದಲಿಗೆ ಹಳದಿ ಬಣ್ಣ ಹೊಂದಿರುತ್ತದೆ. ಬಿಳಿ ಮುರುಗಲಿನ ಯಾವ ಭಾಗವೂ ನಿರರ್ಥಕವಲ್ಲ. ಬೀಜದಿಂದ ತುಪ್ಪ, ರಸದಿಂದ ಜಾಮ್‌, ಸಿಪ್ಪೆಯಿಂದ ಉಪ್ಪಿನಕಾಯಿ...'' ಎನ್ನುತ್ತಾರೆ ಕೋಕಂನ ಬಗ್ಗೆ ಅಧ್ಯಯನ ಮಾಡಿದ ಡಾ| ಗಣೇಶ ಎಂ. ನೀಲೇಸರ. 

ಬಿಳಿ ಮುರುಗಲು ಗಿಡಗಳನ್ನು ದೊಡ್ಡ ಪ್ರಮಾಣದಲ್ಲಿ ನೆಟ್ಟು ಬೆಳೆಸಿದವರು ತೀರಾ ಕಡಿಮೆ. ಶಿರಸಿಯ ಬೆಂಗಳಿ ವೆಂಕಟೇಶ, ಗೋಕರ್ಣದ ವೇದಶ್ರವ ಶರ್ಮಾ ಬಿಳಿ ಮುರುಗಲನ್ನು ಬೆಳೆಸಿದ ಕೃಷಿಕರು. ವೆಂಕಟೇಶರು ಬೆಳೆಯುವುದಲ್ಲದೆ, ಮೌಲ್ಯ ವರ್ಧಿತ ಉತ್ಪನ್ನಗಳನ್ನು ತಯಾರಿಸಿ, ತಮ್ಮದೇ ಮಾರುಕಟ್ಟೆ ಜಾಲವನ್ನು ಹೊಂದಿದ್ದಾರೆ. ಕೆಂಪು ಮುರುಗಲಿನ ತೋಟವನ್ನು ಎಬ್ಬಿಸಿದವರಲ್ಲಿ ಇಬ್ಬರು ಮುಂಚೂಣಿಯಲ್ಲಿದ್ದಾರೆ. ಒಬ್ಬರು ಗೋವಾದ ಶ್ರೀಹರಿ ಕುರಾಡೆ. 25 ಎಕ್ರೆಯಲ್ಲಿ ಕೋಕಂ ಬೆಳೆದಿದ್ದಾರೆ. ಇನ್ನೊಬ್ಬರು ಪುಣೆ ಸನಿಹದ ವಿಕಾಸ್‌ ರಾಯ್‌ಕರ್‌. ತೆಂಗು, ನೆಲ್ಲಿಗಳ ಮಧ್ಯೆ ಮತ್ತು ಮಾರ್ಗದ ಇಕ್ಕೆಡೆಗಳಲ್ಲಿ ಬೆಳೆಸಿದ್ದಾರೆ. ಮಂಗಳೂರಿನಲ್ಲಿ ಪುನರ್ಪುಳಿಯ ತಾಜಾ ಹಣ್ಣಿಗೂ ಮಾರುಕಟ್ಟೆಯಿದೆ! ಮಂಗಳೂರಿನ ಸೆಂಟ್ರಲ್‌ ಮಾರುಕಟ್ಟೆ ಹಾಗೂ ಸುತ್ತಮುತ್ತಲಿನ ಹಣ್ಣಿನಂಗಡಿಯಲ್ಲಿ ತಾಜಾ ಹಣ್ಣು ಲಭ್ಯ. ಸೆಂಟ್ರಲ್‌ ಮಾರ್ಕೆಟ್‌ನ ತರಕಾರಿ ವ್ಯಾಪಾರಿ ಡೇವಿಡ್‌ ಕರಾವಳಿಯಲ್ಲಿ ತಾಜಾ ಹಣ್ಣಿನ ಮಾರಾಟಕ್ಕೆ ಸಾಥ್‌ ಕೊಟ್ಟವರು. ಅಲ್ಲದೆ ಗಿರಾಕಿಗಳಿಗೆ ಹಣ್ಣಿನ ಔಷಧೀಯ ಗುಣಗಳ ಅರಿವನ್ನು ಮೂಡಿಸಿದ ಹೆಗ್ಗಳಿಕೆ ಇವರಿಗಿದೆ.

ದಾಪೋಲಿಯ ಡಾ| ಬಾಳಾಸಾಹೇಬ್‌ ಸಾವಂತ್‌ ಕೊಂಕಣ್‌ ಕೃಷಿ ವಿದ್ಯಾಪೀಠವು "ಕೊಂಕಣ್‌ ಅಮೃತ' ಮತ್ತು "ಕೊಂಕಣ್‌ ಹಾತಿಸ್‌' ಎಂಬ ಎರಡು ಪುನರ್ಪುಳಿ ತಳಿಗಳನ್ನು ಅಭಿವೃದ್ಧಿಪಡಿಸಿದೆ. ಕೋಕಮ್‌ ಅಮೃತವು ಮಾರ್ಚ್‌-ಏಪ್ರಿಲ್‌ ಹಣ್ಣು ಕೊಟ್ಟರೆ, ಕೋಕಮ್‌ ಹಾತಿಸ್‌ ಏಪ್ರಿಲ್‌-ಮೇಯಲ್ಲಿ ಇಳುವರಿ ನೀಡುತ್ತದೆ. 7ನೇ ವರುಷದಲ್ಲಿ ಅಮೃತ ತಳಿಯ ಒಂದು ಮರದಲ್ಲಿ 138 ಕಿಲೋ ಹಣ್ಣು ನೀಡಿದೆ. ಕಿಲೋವೊಂದರಲ್ಲಿ ಇಪ್ಪತ್ತೂಂಬತ್ತು ಹಣ್ಣುಗಳು ತೂಗುತ್ತದೆ. ಹಾತಿಸ್‌ನಲ್ಲಿ ಇನ್ನೂರೈವತ್ತು ಕಿಲೋ ಹಣ್ಣುಗಳನ್ನು ಮರವೊಂದು ನೀಡಿದರೆ, ಒಂದು ಕಿಲೋದಲ್ಲಿ ತೂಗುವ ಹಣ್ಣುಗಳ ಸಂಖ್ಯೆ ಹನ್ನೊಂದು!

ಪುನರ್ಪುಳಿ ಹಣ್ಣಿನ ವಿವಿಧ ಬಳಕೆಯ ಕುರಿತು ಸಂಶೋಧನೆಗಳು ನಡೆದುದು ವಿರಳ. ದೊಡ್ಡ ನಗರಗಳಲ್ಲಿ ಬಹುಶಃ ಹಣ್ಣು ಅಪರಿಚಿತ. ಮಳೆ ಬಿದ್ದ ಬಳಿಕವೇ ಹಣ್ಣು ಸಿಗುವುದು ಶಾಪ! ಕುಂದಾಪುರ ಭಾಗದಲ್ಲಿ ಜನವರಿಗೆ ಇಳುವರಿ ಬಿಡುವ ತಳಿಗಳಿವೆಯಂತೆ. ಇಲಾಖಾ ಮಟ್ಟದಲ್ಲಿ ಹೇಳುವಂತಹ ಸಂಶೋಧನೆ ನಡೆದಿಲ್ಲ. ಇದಕ್ಕೆ ಮಾನ ಕೊಡುವ ಮತ್ತು ಅಭಿವೃದ್ಧಿ ಪಡಿಸುವ ನಿಟ್ಟಿನಲ್ಲಿ ಕೃಷಿಕ ಮಟ್ಟದಲ್ಲಿ ಸಂಘಟಿತ ಕಾರ್ಯಕ್ರಮವೊಂದು ಮೇ 1ರಂದು ಸಂಪನ್ನವಾಗಲಿದೆ. ದಕ್ಷಿಣ ಕನ್ನಡ ಜಿಲ್ಲೆಯ ಅಳಿಕೆ ಸನಿಹದ ಮುಳಿಯ ವೆಂಕಟಕೃಷ್ಣ ಶರ್ಮರಲ್ಲಿ "ಪುನರ್ಪುಳಿ ಪ್ರಪಂಚದೊಳಕ್ಕೆ' ಎನ್ನುವ ವಿಶಿಷ್ಟ ಕಾರ್ಯಕ್ರಮಕ್ಕೆ ಸಿದ್ಧತೆಗಳು ನಡೆಯುತ್ತಿವೆ. ಉಬರು ಹಲಸು ಸ್ನೇಹಿ ಕೂಟ, ಪಶ್ಚಿಮ ಘಟ್ಟ ಕೋಕಂ ಪ್ರತಿಷ್ಠಾನ ಮತ್ತು ಅಡಿಕೆ ಪತ್ರಿಕೆಯು ಜಂಟಿಯಾಗಿ ಕೋಕಂ ಡೇಯನ್ನು ಆಯೋಜಿಸುತ್ತಿದೆ.  ಹಲಸಿನಲ್ಲಿ "ರುಚಿ ನೋಡಿ-ತಳಿ ಆಯ್ಕೆ' ಎನ್ನುವ ತಳಿ ಆಯ್ಕೆಯ ಪರಿಕಲ್ಪನೆಯನ್ನು ಅನುಷ್ಠಾನಿಸಿದ ಹಲಸು ಸ್ನೇಹಿ ಕೂಟವು ಪುನರ್ಪುಳಿಯ ಅಭಿವೃದ್ಧಿಯತ್ತ ಹೆಜ್ಜೆಯೂರಿದೆ. ಕಿರಿದಾದ ಈ ಹೆಜ್ಜೆಯು ಹಿರಿದು ಹೆಜ್ಜೆಯ ಅಡಿಗಟ್ಟು ಎನ್ನುವುದನ್ನು ಮರೆಯುವಂತಿಲ್ಲ.

ನಾ. ಕಾರಂತ ಪೆರಾಜೆ

Trending videos

Back to Top