CONNECT WITH US  

ಓರ್ವ ಪಶುವೈದ್ಯ ಹೀಗೂ ಇರಲು ಸಾಧ್ಯ!

ಹೈನುಗಾರರು ನೆನಪಿಟ್ಟುಕೊಳ್ಳಬೇಕಾದ ನಲುವತ್ತೆರಡು ವರುಷಗಳ ಸೇವೆ ಎಂ. ಎಸ್‌. ಭಟ್ಟರದ್ದು. ಪಶು ಚಿಕಿತ್ಸೆಯ ಜತೆಗೆ ಹೈನುಗಾರರ ಅಪೇಕ್ಷೆ ಮತ್ತು ಅಗತ್ಯವನ್ನು ಅರಿತ ಡಾಕ್ಟರ್‌ ಹೈನು ಸಂಘದ ಸ್ಥಾಪನೆಗೆ ಕಾರಣರಾದುದು ಪುತ್ತೂರಿನ ಚರಿತ್ರೆಯು ಮರೆಯದ ಕಾಲಘಟ್ಟ.

ಪುತ್ತೂರಿನ ಜನವಸತಿ ರಸ್ತೆಗಳಲ್ಲಿ ಬೆಳಿಗ್ಗೆ ಹಾದುಹೋಗಿ. ಬಹುತೇಕ ಅಮ್ಮಂದಿರು ಹಾಲಿಗಾಗಿ ಕಾಯುತ್ತಿರುತ್ತಾರೆ. ಒಂದೊಂದು ನಿಮಿಷ ಕಳೆಯುವಾಗಲೂ ಒತ್ತಡ ಏರುತ್ತದೆ. ಮಗುವಿಗೆ ಶಾಲೆಗೆ ತಡವಾಗುತ್ತದೆ. ಯಜಮಾನರಿಗೆ ಕಚೇರಿಗೆ ಹೋಗಲು ವೇಳೆ ಮೀರುತ್ತಿದೆ. ಅಷ್ಟು ಹೊತ್ತಿಗೆ ಬೆಲ್‌ ರಿಂಗಣಿಸುತ್ತದೆ. ಕ್ಯಾರಿಯರ್‌ನಲ್ಲಿನ ಟ್ರೇಯಲ್ಲಿ ಹಾಲಿನ ಕ್ಯಾನ್‌ ತುಂಬಿದ ಬೈಸಿಕಲ್‌ ಅಂಗಳದಲ್ಲಿ ನಿಲ್ಲುತ್ತದೆ. ಅಮ್ಮಂದಿರ ಮುಖ ಅರಳುತ್ತದೆ. ಒತ್ತಡ ನಿರಾಳವಾಗುತ್ತದೆ. ಹಾಲು ನೀಡಿದ ಬಳಿಕ ಸೈಕಲ್‌ ಮತ್ತೂಂದು ಮನೆಗೆ ತೆರಳುತ್ತದೆ. ಸೈಕಲ್‌ ನಿರ್ವಾಹಕರಿಗೆ ಬೆವರೊರೆಸಿಕೊಳ್ಳಲೂ ಪುರುಸೊತ್ತಿರುವುದಿಲ್ಲ. ಇದು ಪುತ್ತೂರು ಹೈನು ವ್ಯವಸಾಯಗಾರರ ಸಂಘದ ಸೇವೆ. 

ಈ ವ್ಯವಸ್ಥೆಯ ಹಿಂದಿನ ಶಕ್ತಿ ಡಾ| ಮಜಿ ಸದಾಶಿವ ಭಟ್‌ (ಡಾ| ಎಂ.ಎಸ್‌. ಭಟ್‌). 1982-83ರ ಆಜೂಬಾಜು. ಆಗಲೇ ಭಟ್ಟರ ಪಶುವೈದ್ಯ ಸೇವೆಗೆ ದಶಕ ಮೀರಿತ್ತು. ಪುತ್ತೂರು ಕಸಬಾದಲ್ಲಿ ಹೈನುಗಾರಿಕೆಯು ಕೃಷಿಯೊಂದಿಗೆ ಮಿಳಿತವಾಗಿತ್ತು. ಹಸುಗಳೊಂದಿಗೆ ಎಮ್ಮೆ ಸಾಕಣೆಯೂ ನಡೆದಿತ್ತು. ಕೃಷಿಕರು ನಗರದ ಹೋಟೆಲುಗಳಿಗೆ, ಮನೆಗಳಿಗೆ ಸ್ವತಃ ಹಾಲು ವಿತರಿಸುತ್ತಿದ್ದರು. ಹೀಗೆ ಹಾಲು ತರುವವರನ್ನು ನಡೆಸಿಕೊಳ್ಳುತ್ತಿದ್ದ ರೀತಿ ಖುಷಿಯದ್ದಾಗಿರಲಿಲ್ಲ. ಒಂದು ರೀತಿಯ ಅನಾದರ ಭಾವ. ಗ್ರಾಹಕರ ವರ್ತನೆಗಳು ಡಾಕ್ಟರಿಗೆ ಹಿಡಿಸಲಿಲ್ಲ. ಹೈನುಗಾರರ ಸಂಘಟಿತ ವ್ಯವಸ್ಥೆಯಿದ್ದರೆ ಕೃಷಿಕರಿಗೂ ಗೌರವ, ಗ್ರಾಹಕರಿಗೂ ಅನುಕೂಲ ಎನ್ನುವ ನೆಲೆಯಲ್ಲಿ ಹೈನುಗಾರರ ಸಂಘವೊಂದರ ಸ್ಥಾಪನೆಗೆ ಶ್ರೀಕಾರ. ಆಗಲೇ ಹೈನುಗಾರಿಕೆಯಲ್ಲಿ ತೊಡಗಿ ಅನುಭವವಿದ್ದ ಹಿರಿಯರು (ಮರಿಕೆ, ಬಂಗಾರಡ್ಕ, ಪುಂಡಿತ್ತೂರು, ಮುದ್ಲಾಜೆ ಕುಟುಂಬದವರು) ಡಾಕ್ಟರರ ಯೋಚನೆಗೆ ಹೆಗಲೆಣೆಯಾದರು. ಸಂಘದ ಕಾರ್ಯಾರಂಭದ ಕುರಿತು ಮಾಧ್ಯಮಗಳಲ್ಲಿ ಪ್ರಚಾರ. ಹೈನುಗಾರರು ತಂದ ಹಾಲನ್ನು ತತ್‌ಕ್ಷಣವೇ ಗ್ರಾಹಕರಿಗೆ ವಿತರಣೆ. ಕೃಷಿಕರಿಗೂ ಸಂತೃಪ್ತಿ, ಗ್ರಾಹಕರಿಗೂ ಸ್ವೀಕೃತ. ಆರಂಭದ ದಿವಸಗಳಲ್ಲಿ ಇನ್ನೂರು ಲೀಟರ್‌ ಹಾಲು ಸಂಘಕ್ಕೆ ಬರುತ್ತಿತ್ತು. ಸಂಘದ ಕಾರ್ಯಸೂಚಿಯಿಂದ ಕೃಷಿಕರು ಉತ್ಸುಕರಾದರು. ಕ್ರಮೇಣ ಹೈನುಗಾರಿಕೆಯು ವಿಸ್ತರಣೆಯಾಯಿತು. ಸಂಘಕ್ಕೆ ಬರುವ ಹಾಲಿನ ಪ್ರಮಾಣ ಐದಾರು ಪಟ್ಟು ಏರಿತು. ಹಾಲನ್ನು ಉಳಿಸಿಕೊಳ್ಳುವ ಹಾಗಿಲ್ಲ. ಹತ್ತು ಗಂಟೆಯೊಳಗೆ ಮುಗಿಸಬೇಕಿತ್ತು, ಸಂಗ್ರಹಿಸಿಟ್ಟುಕೊಳ್ಳುವಂತಿಲ್ಲ. ಹಾಗಾಗಿ ಮನೆಮನೆಗಳಿಗೆ ಹಾಲನ್ನು ವಿತರಿಸುವ ಪ್ಯಾಕೇಜ್‌ ಯೋಜನೆಗೆ ಚಿಂತನೆ. "ಬೆಳಿಗ್ಗೆ ಸಂಘದ(ಡಿಪೋ)ವರೆಗೆ ಬಂದು ಹಾಲು ಒಯ್ಯಲು ಬಹುತೇಕರಿಗೆ ಸಮಯದ ತೊಂದರೆಯಾಗುತ್ತಿತ್ತು. ಇವರೆಲ್ಲಾ ನಮ್ಮ ಮಗುವಿಗೆ ತಾಜಾ ಹಾಲೇ ಆಗಬೇಕೆನ್ನುವ ಬೇಡಿಕೆ ಮುಂದಿಟ್ಟರು. ಈ ಹಿನ್ನೆಲೆಯಲ್ಲಿ ಮನೆಮನೆಗೆ ಹಾಲು ವಿತರಿಸುವ ವ್ಯವಸ್ಥೆ ರೂಪುಗೊಂಡಿತು'' ಎಂದು ಡಾ| ಎಂ.ಎಸ್‌. ಭಟ್‌ ನೆನಪಿಸಿಕೊಳ್ಳುತ್ತಾರೆ. ಪಟ್ಟಣಿಗರು ಸಂಘದ ಯೋಜನೆಯನ್ನು ಸ್ವೀಕರಿಸಿದರು. ತಪ್ಪು ಒಪ್ಪುಗಳ ಹಿಮ್ಮಾಹಿತಿ ನೀಡುತ್ತಿದ್ದರು. ಇಂತಹ ಹಿಮ್ಮಾಹಿತಿಗಳೇ ಹಾಲಿನ ಗುಣಮಟ್ಟವನ್ನು ಕಾಪಾಡಿಕೊಳ್ಳುವ ಟೂಲ್ಸ್‌ಗಳಾಗಿದ್ದುವು. 

ಎಂ. ಎಸ್‌. ಭಟ್ಟರು ಪಶು ವೈದ್ಯರು. 1970ರ ಸೆಪ್ಟೆಂಬರ್‌ 6 ರಂದು ಪುತ್ತೂರಿನಲ್ಲಿ ಪಶುವೈದ್ಯಕೀಯ ಕ್ಲಿನಿಕ್‌ ಆರಂಭ. 2012ರ ಅಕ್ಟೋಬರ್‌ 19ರಂದು ನಿವೃತ್ತ. ಹೈನುಗಾರರು ನೆನಪಿಟ್ಟುಕೊಳ್ಳಬೇಕಾದ ನಲವತ್ತೆರಡು ವರುಷಗಳ ಸೇವೆ ಅವರದು. ಪಶು ಚಿಕಿತ್ಸೆಯ ಜತೆಗೆ ಹೈನುಗಾರರ ಅಪೇಕ್ಷೆ ಮತ್ತು ಅಗತ್ಯವನ್ನು ಅರಿತ ಡಾಕ್ಟರ್‌ ಹೈನು ಸಂಘದ ಸ್ಥಾಪನೆಗೆ ಕಾರಣರಾದುದು ಪುತ್ತೂರಿನ ಚರಿತ್ರೆಯು ಮರೆಯದ ಕಾಲಘಟ್ಟ. ಸಂಘದ ಒಂದು ಅಂಗವಾಗಿ ಹೆಗಲು ಕೊಟ್ಟು ಕೃಷಿಕರೆಲ್ಲರ ಒಲವು ಪಡೆದಿದ್ದಾರೆ. ಡಾಕ್ಟರ್‌ ಮುದ್ಲಾಜೆಯ ಕೃಷಿ ಕುಟುಂಬದವರು. ಸಮಾಜಕ್ಕೆ ಋಣಿಯಾಗುವಂತಹ ಉದ್ಯೋಗ ಮಾಡಬೇಕೆಂಬುದು ತಂದೆಯ ಬಯಕೆ. ತಂದೆಯ ಆಸೆಯನ್ನು ಮೀರದ ಮಗ. ಮನೆಯಲ್ಲಿ ಪಶುಸಂಸಾರದೊಂದಿಗೆ ಬದುಕು ಅರಳಿದ್ದರಿಂದ ಸಹಜವಾಗಿಯೇ ಪಶುಪ್ರೀತಿ. ಮನೆಗೆ ಬರುತ್ತಿದ್ದ ಪಶುವೈದ್ಯ ಡಾ| ನಾಗಪ್ಪ ಪೈಯವರ ಪ್ರಚೋದನೆ. ಎಲ್ಲ ಬೆಂಬಲಗಳು ಒಟ್ಟುಸೇರಿದ ಫ‌ಲವಾಗಿ ಪಶುವೈದ್ಯಕೀಯ ಕಲಿತರು. ಪುತ್ತೂರಿನಲ್ಲಿ ಸ್ವಂತದ್ದಾದ ಕ್ಲಿನಿಕ್‌ ಆರಂಭಿಸಿದರು. 'ಖಂಡಿಗೆ ಶಿವಶಂಕರ ಭಟ್ಟರು ಕ್ಲಿನಿಕ್ಕಿಗೆ ಮೊದಲು ಬೋರ್ಡ್‌ ಹಾಕಿದವರು''ಎಂದು ಜ್ಞಾಪಿಸಿಕೊಳ್ಳುತ್ತಾರೆ. 

ಆಗ ಸರಕಾರಿ ಆಸ್ಪತ್ರೆಯ ಸೇವೆಯು ಹಳ್ಳಿಪ್ರದೇಶಕ್ಕೆ ತಲುಪುತ್ತಿದ್ದುದು ಕಡಿಮೆ. ಪ್ರತಿ ಕೃಷಿಕರಲ್ಲೂ ಜಾನುವಾರುಗಳಿದ್ದುವು. ಕ್ರಮೇಣ ಮಿಶ್ರತಳಿಯ ಪಶುಗಳು ಹಟ್ಟಿಗೆ ಪ್ರವೇಶಿಸಿದವು. ಸಹಜವಾಗಿ ಪಶುವೈದ್ಯರ ಅವಲಂಬನೆಯು ಹೆಚ್ಚಾಯಿತು. ಆಗಲೇ ಎಂ.ಎಸ್‌. ಭಟ್ಟರು ಹೈನುಗಾರರ ಸಂಪರ್ಕದಲ್ಲಿದ್ದರು. ಕರೆದಾಗ ಓಗೊಟ್ಟು ಧಾವಿಸುವ ಸೇವೆಯಿಂದ ವಿಶ್ವಾಸ ವೃದ್ಧಿಯಾಯಿತು. ದಿನದ ಯಾವ ಹೊತ್ತೇ ಇರಲಿ, ಇವರ ಮೋಟಾರ್‌ ಬೈಕ್‌ ಸ್ಟಾರ್ಟ್‌ ಆಯಿತು ಎಂದಾದರೆ ಎಲ್ಲಿಗೋ ಹಳ್ಳಿಗೆ ಹೊರಟಿದ್ದಾರೆ ಎಂದು ಊಹಿಸಬಹುದಾಗಿತ್ತು! ವೈಯಕ್ತಿಕ ಹಿತಾಸಕ್ತಿಯನ್ನು ಲಕ್ಷಿಸದೆ, ಗಡಿಯಾರ ನೋಡದೆ ಪಶುಗಳ ಕೂಗಿಗೆ ಧಾವಿಸುತ್ತಿದ್ದರು. "ಕಾಲೇಜಿನಲ್ಲಿ ಕಲಿತ ವಿದ್ಯೆಗಿಂತಲೂ ಹೈನುಗಾರರು ನನ್ನ ಅಕಾಡೆಮಿಕ್‌ ಜ್ಞಾನವನ್ನು ವಿಸ್ತರಿಸಿದರು'' ಎಂದು ವಿನೀತರಾಗುತ್ತಾರೆ. ಚಿಕಿತ್ಸೆಗಿಂತಲೂ ಮುಖ್ಯವಾಗಿ ಪಶುಗಳ ದೇಹ ಭಾಷೆಯನ್ನು ವೈದ್ಯನಾದವರು ಅರಿಯಬೇಕು. ಮನುಷ್ಯರನ್ನು ಫ‌ಕ್ಕನೆ ಪ್ರಾಣಿಗಳು ಸ್ವೀಕರಿಸುವುದಿಲ್ಲ. ಇವುಗಳನ್ನು ಮುಟ್ಟದೆ, ತಟ್ಟದೆ ಚಿಕಿತ್ಸೆ ಸಾಧ್ಯವಿಲ್ಲ. ಒಂದು ಕಾಲಘಟ್ಟದಲ್ಲಿ ಅಸೌಖ್ಯದ ಪಶುಗಳು ಡಾಕ್ಟರರ ಸ್ಪರ್ಶಮಾತ್ರದಿಂದ ಭಾಗಶಃ ಗುಣ ಹೊಂದುತ್ತಿದ್ದುವು! ಅಷ್ಟೊಂದು ಕೈಗುಣ. 

'ಡಾಕ್ಟರಿಗೆ ಮನೆಯ ಗೇಟಿನ ಪರಿಚಯವಿರುವುದಿಲ್ಲ, ಆದರೆ ಹಟ್ಟಿಯ ಗೇಟಿನ ಪರಿಚಯವಿದೆ'' ಎಂ.ಎಸ್‌. ಭಟ್ಟರ ಸೇವೆಗೆ ಈ ವಾಕ್ಯದ ಭಾವಾರ್ಥ ಸಾಕು. ಚಿಕಿತ್ಸೆಗಾಗಿ ಬಂದಾಗ ಆ ಮನೆಯ ಆಗುಹೋಗುಗಳು, ವರ್ತಮಾನದ ಸಂಗತಿಗಳು, ಕೃಷಿ ವಿಚಾರಗಳು, ಮಕ್ಕಳ ಓದು... ಹೀಗೆಲ್ಲ ಮಾತುಕತೆಗಳು ನಡೆಯುತ್ತಿದ್ದುದರಿಂದ ಎಲ್ಲ ಹೈನುಗಾರರಿಗೆ ಇವರು ಹಿರಿಯಣ್ಣನಾಗಿದ್ದರು. ಇಂತಹ ಪ್ರೀತಿ, ವಿಶ್ವಾಸ ಗಳಿಸುವುದು ಸುಲಭ ಸಾಧ್ಯವಲ್ಲ.  ಕ್ಲಿನಿಕ್‌ ಆರಂಭಿಸಿದ ಮೂರ್ನಾಲ್ಕು ತಿಂಗಳ ಅನುಭವವನ್ನು ಎಂ.ಎಸ್‌. ಭಟ್ಟರೇ ಹೇಳಬೇಕು. 'ಆಗ ಸರಕಾರಿ ಆಸ್ಪತ್ರೆಯಲ್ಲಿ ಉಚಿತವಾಗಿ ಔಷಧಿ ಲಭ್ಯವಿರುತ್ತಿತ್ತು. ನಾನು ಕ್ಲಿನಿಕ್‌ ತೆರೆದಾಗ ಉಚಿತ ಮದ್ದೆಂದು ಗ್ರಹಿಸಿ ಹಣ ನೀಡದೆ ಹೋದವರ ಸಂಖ್ಯೆ ಅಗಣಿತ! ಕ್ರಮೇಣ ಸರಿ ಹೋಯಿತು ಬಿಡಿ'' ಎನ್ನುತ್ತಾರೆ. ಇವರೊಂದಿಗೆ ಸಂಘದಲ್ಲಿ ಸೇವೆ ಮಾಡುತ್ತಿದ್ದ ಮೋಹನ ಕಲ್ಲೂರಾಯರು ಹೇಳುತ್ತಾರೆ, 'ಎಲ್ಲರಂತಲ್ಲ, ಕಡಿಮೆ ಚಿಕಿತ್ಸಾ ವೆಚ್ಚ ಪಡೆಯುತ್ತಿದ್ದರು. ಬಡವರು ಎಂದಾದರೆ ಅವರ ಪ್ರಯಾಣ ವೆಚ್ಚವನ್ನು ತಾನೇ ನೀಡಿದ ಉದಾಹರಣೆಯಿದೆ.''

1976ರಲ್ಲಿ ಎಂ.ಎಸ್‌. ಭಟ್ಟರು ಜಾನುವಾರು, ಶ್ವಾನ ಪ್ರದರ್ಶನಗಳ ಆಯೋಜನೆಯಲ್ಲಿ ಮುತುವರ್ಜಿ ವಹಿಸಿದ್ದರು. 'ಬೆಂಗಳೂರಿನಿಂದ ದುಬಾರಿ ಮೊತ್ತ ನೀಡಿ ಶ್ವಾನವನ್ನು ಖರೀದಿಸಿ, ತಂದು ಸಾಕಿದವರೂ ಇದ್ದಾರೆ'' ಇದು ಶ್ವಾನ ಪ್ರದರ್ಶನದ ಎಫೆಕ್ಟ್! ನಾಲ್ಕು ದಶಕದ ಹಿಂದೆಯೇ ಇಂತಹ ಸಾಹಸಕ್ಕೆ ಕೈ ಹಾಕಿದ್ದು ಸಣ್ಣ ಸಂಗತಿಯಲ್ಲ. ಇಲ್ಲೆಲ್ಲ ಸಮಾಜಮುಖೀಯಾದ ಯೋಚನೆ, ಯೋಜನೆಗಳು ಜೀವಂತವಾಗಿದ್ದುವು. ಸಮಾಜದ ಮಧ್ಯೆ ಬದುಕುವ ತಾನು ಸಮಾಜಕ್ಕಾಗಿ ಏನನ್ನಾದರೂ ಮಾಡಲೇಬೇಕೆನ್ನುವ ತುಡಿತ. ಹೈನು ವ್ಯವಸಾಯಗಾರರ ಸಂಘ ಮತ್ತು ಎಂ. ಎಸ್‌.ಭಟ್ಟರ ಕ್ಲಿನಿಕ್‌ ಇವೆರಡೂ ವ್ಯಾವಹಾರಿಕವಾಗಿ ಬೇರೆ ಬೇರೆ ಆದರೂ ಆಂತರಿಕವಾಗಿ ಮಿಳಿತಗೊಂಡಿದ್ದುವು. 'ಈಗಿನ ಕಾಲಮಾನದಲ್ಲಿ ಹಾಲಿನ ಉತ್ಪಾದನಾ ವೆಚ್ಚವೇ ನಲವತ್ತೇಳು ರೂಪಾಯಿಯಷ್ಟು ಆಗುತ್ತದೆ. ಇದಕ್ಕಿಂತ ಕಡಿಮೆ ಕ್ರಯಕ್ಕೆ ಹಾಲು ವಿತರಿಸುವುದು ಹೇಗೆ? ಉತ್ತೇಜಿತ ದರವು ಹೈನುಗಾರರಿಗೆ ಸಿಕ್ಕರೆ ಈಗಲೂ ಹೈನುಗಾರಿಕೆಗೆ ಒಲವು ತೋರಿಸುವವರು ಇದ್ದಾರೆ. ನಷ್ಟವೆಂದು ಹಟ್ಟಿಯಿಂದ ದೂರವಾದವರು ಪುನಃ ಬರುವ ಸಾಧ್ಯತೆಯಿದೆ'' ಎನ್ನುತ್ತಾರೆ. 

ಒಳ್ಳೆಯ ಮಾಲಿಗೆ ಒಳ್ಳೆಯ ದರ ಡಾಕ್ಟರರ ನಿಲುವು. ಹಾಲಿಗೆ ಉತ್ತಮ ದರವು ಹೈನುಗಾರರಿಗೆ ಸಿಗಬೇಕೆನ್ನುವ ಹಪಾಹಪಿ. ಭಟ್ಟರ‌ು ಹೊಗಳಿಕೆಗೆ ಉಬ್ಬುವವರಲ್ಲ. ಅದು ಅವರಿಗೆ ಮುಜುಗರ ತರುವ ವಿಚಾರ. ಹಾಲಿಗೆ ಬೇಡಿಕೆಯಿಲ್ಲದೆ, ಉತ್ತೇಜಿತ ದರವಿಲ್ಲದೆ ಹೈನುಗಾರರ ಬದುಕು ವಿಷಾದಕ್ಕೆ ಜಾರುತ್ತಿರುವ ಸಂದರ್ಭದಲ್ಲಿ ಸಾಂತ್ವನ ಹೇಳಿದವರು. ಸಂಘವನ್ನು ಸ್ಥಾಪಿಸಿ ಹೈನುಗಾರಿಕೆಗೆ ಮಾನವನ್ನು ತಂದವರು. ಅವರು ನಿವೃತ್ತರಾಗಿ ನಾಲ್ಕು ವರುಷ ಕಳೆದರೂ ಹೈನುಗಾರರು ಎಂ.ಎಸ್‌.ಭಟ್ಟರನ್ನು ಮರೆತಿಲ್ಲ, ಮರೆಯುವುದೂ ಇಲ್ಲ. ಓರ್ವ ವ್ಯಕ್ತಿ ಸಮಾಜದಲ್ಲಿ ತನ್ನ ವೃತ್ತಿಯ ಮೂಲಕ ಎಷ್ಟು ದೊಡ್ಡ ಹೆಜ್ಜೆಯನ್ನೂರಬಹುದು ಎನ್ನುವುದಕ್ಕೆ ಪ್ರತ್ಯಕ್ಷ ಸಾಕ್ಷಿಯಾಗಿ ಮುಂದೆ ನಿಲ್ಲುತ್ತಾರೆ. ಕಳೆದ ಕೆಲವು ವರುಷಗಳಲ್ಲಿ ಮರಿಕೆಯ ಎ.ಪಿ. ಸದಾಶಿವರು ಸಂಘವನ್ನು ಮುನ್ನಡೆಸಿದ್ದರೆ, ಪ್ರಕೃತ ಪಿ.ಎಸ್‌. ಕೃಷ್ಣಮೋಹನ್‌ ಅಧ್ಯಕ್ಷರಾಗಿ ಮುನ್ನಡೆಸುತ್ತಿದ್ದಾರೆ.

- ನಾ. ಕಾರಂತ ಪೆರಾಜೆ

Trending videos

Back to Top