CONNECT WITH US  

ಶ್ರಮದ ಬದುಕಿಗೆ ಕಾವುಕೊಟ್ಟ ತಳಿ ತಿಜೋರಿ

ಒಂದು ಕಾಲಘಟ್ಟದಲ್ಲಿ ಎಂಬತ್ತು ಭತ್ತದ ತಳಿಗಳಿದ್ದುವು. ಯಾಕೋ ನಮ್ಮಲ್ಲಿಗೆ ಹೊಂದಿಕೊಳ್ಳದೆ ಮತ್ತು ಹವಾಮಾನ ವೈಪರೀತ್ಯದಿಂದ ಇಪ್ಪತ್ತು ಕೈಕೊಟ್ಟವು. ಕುಮುದ, ಬಂಗಾರಕಡ್ಡಿ, ಜೀರಿಗೆ ಸಾಂಬ, ಬಂಗಾರಗುಂಡ, ಕಾಳಜೀರ... ತಳಿಗಳು ವಿಚ್ಛೇದನ ನೀಡಿ ಹೊರಟು ಹೋಗಿವೆ. ಇದರಲ್ಲಿ ಅಂಬೆಮೋರಿ ತಳಿಯು ಈಚೆಗೆ ಮಹಾರಾಷ್ಟ್ರದಲ್ಲಿ ಪತ್ತೆಯಾಯಿತು.

ಸ್ವಾತಂತ್ರ್ಯದ ಶುಭದಿನ. ದೇಶಕ್ಕೆ ಸಂಭ್ರಮ. ಎಲ್ಲೆಡೆ ಹಬ್ಬದ ವಾತಾವರಣ. ಶುಭಾಶಯಗಳ ವಿನಿಮಯ. ದೇಶ-ಭಾಷೆಗಳ ಪ್ರೇಮವು ನುಡಿಹಾರಗಳ ಮೂಲಕ ಅನಾವರಣ. ಸ್ವಾತಂತ್ರ್ಯದ ಇತಿಹಾಸದ ಕಾಲಾವಧಿ ನೆನಪು. 

ಬೆಳಗಾವಿ ಜಿಲ್ಲೆಯ ಗುಂಡೇನಟ್ಟಿ ಗ್ರಾಮದ ಕೃಷಿಕ ಶಂಕರ ಲಂಗಟಿಯವರು ಆಗಸ ನೋಡುತ್ತಲೇ ಶುಭಾಶಯ ವಿನಿಮಯ ಮಾಡಿಕೊಂಡರು. ಸಂಭ್ರಮದ ಮಧ್ಯೆ ಅರಳಿದ ಮುಖದಲ್ಲಿ ವಿಷಾದದ ಎಳೆಯೊಂದು ಮಿಂಚಿತು. ""ಇಲ್ಲಾರಿ.. ಸಕಾಲಕ್ಕೆ ಮಳೆ ಬಾರದೆ ಮೂರು ವರುಷ ಆಯಿತು. ಬಿತ್ತಿದ ಬೆಳೆಯನ್ನು ಹೇಗೆ ಉಳಿಸಿಕೊಳ್ಳೋದು ಎನ್ನೋದೇ ಚಿಂತೆ'' ಎಂದರು. 

""ಭತ್ತ ನಾಟಿ ಮಾಡಿದಾಗ ಮಳೆ ಕೈಕೊಟ್ಟಿತು. ಈ ವರುಷ ಮಳೆ ಬರುತ್ತೆ ಅಂತ ಹವಾಮಾನ ಇಲಾಖೆಯ ಘೋಷಣೆಯನ್ನು ಕೃಷಿಕರು ನಂಬಿ ಸೋತ್ರು. ನಂಬಿದ್ದು ನಮ್ಮದೆ ತಪ್ಪು ಎನ್ನಿ. ಹವಾಮಾನ ನಮ್ಮ ಕೈಲಿಲ್ಲ. ಇಂತಹ ಪರಿಸ್ಥಿತಿಯಲ್ಲಿ ಒಂದೇ ಬೆಳೆಯನ್ನು ನಂಬುವಂತಿಲ್ಲ'' ಎನ್ನುವ ಲಂಗಟಿಯವರಲ್ಲಿ ಕೃಷಿ, ಕೃಷಿರಂಗದ ಅಪ್‌ಡೇಟ್‌ ಸುದ್ದಿಗಳಿದ್ದುವು. 

ಲಂಗಟಿಯವರು ಎಂಬತ್ತು ವಿಧದ ಭತ್ತದ ತಳಿಗಳ ಸಂರಕ್ಷಕ. ನಲುವತ್ತು ವಿಧದ ತರಕಾರಿ. ಹದಿನೈದು ತರಹದ ದ್ವಿದಳ ಧಾನ್ಯ, ಎಣ್ಣೆಕಾಳು, ರಾಗಿ... ಹೀಗೆ ಕಳೆದುಹೋಗಿದ್ದ, ಹೋಗುತ್ತಿದ್ದ ತಳಿಗಳನ್ನು ಹುಡುಕಿ, ಬೆಳೆಸಿ, ಸಂರಕ್ಷಿಸಿದ ಸಾಹಸಿ. ಸದ್ದಿಲ್ಲದ ತಳಿ ಸಂರಕ್ಷಣೆಯ ಕಾಯಕಕ್ಕಾಗಿ ಕೇಂದ್ರ ಕೃಷಿ ಸಚಿವಾಲಯದ "ರೈತರ ಹಕ್ಕು ಮತ್ತು ತಳಿ ಸಂರಕ್ಷಣೆ ಪ್ರಾಧಿಕಾರ' ಆಯೋಜನೆಯ ಹತ್ತು ಲಕ್ಷ ರೂಪಾಯಿಯ ಪ್ರಶಸ್ತಿಯನ್ನು ಪಡೆದಿದ್ದಾರೆ. 

ಶಂಕರ ಲಂಗಟಿಯವರ ತಳಿಸಂರಕ್ಷಣೆಯ ಆಸಕ್ತಿಗೆ ದಶಕದ ಖುಷಿ. 2006ರಲ್ಲಿ ಧರ್ಮಸ್ಥಳದಲ್ಲಿ ಜರುಗಿದ ಬೀಜ ಜಾತ್ರೆಯಲ್ಲಿ ತಳಿ ಹುಡುಕಾಟಕ್ಕೆ ಶ್ರೀಕಾರ. ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಮತ್ತು "ಗ್ರೀನ್‌ ಫೌಂಡೇಶನ್‌' ಜಂಟಿಯಾಗಿ ಜಾತ್ರೆಯನ್ನು ಹಮ್ಮಿಕೊಂಡಿದ್ದುವು. ಬೀಜದ ಹಬ್ಬ ಮುಗಿದು ಊರಿನತ್ತ ಮುಖ ಮಾಡುವಾಗ ಕೈಯಲ್ಲಿ ಇಪ್ಪತ್ತನಾಲ್ಕು ವಿಧದ ಭತ್ತದ ಮಾದರಿಗಳ ಪ್ಯಾಕೆಟ್ಟುಗಳಿದ್ದುವು. ಜತನದಿಂದ ಪ್ರತ್ಯಪ್ರತ್ಯೇಕವಾಗಿ ಬಿತ್ತಿದರು. ಆ ವರುಷ ಚೆನ್ನಾಗಿ ಮಳೆಯೂ ಬಂದಿತ್ತು. ತೆನೆಗಳೆಲ್ಲ  ಸದೃಢವಾಗಿ ಬೆಳೆದಾಗ ಮಾಧ್ಯಮದ ಬೆಳಕು ಬಿತ್ತು. ನಾಲೆªಸೆ ಪ್ರಚಾರವಾಯಿತು. 

ಖುಷಿಯಿಂದ ಹಿರಿಯರಿಗೆ ತೋರಿಸಿದಾಗ, ""ಹೌದಲ್ಲ, ಇದೆಲ್ಲ ಮೊದಲು ನಮ್ಮೂರಲ್ಲಿ ಇತ್ತಲ್ಲ , ಎಲ್ಲಿಂದ ತಂದ್ರಿ'' ಎಂದು ಬೆರಗು ಕಣ್ಣಿನಿಂದ ನೋಡಿದರಂತೆ. ಪ್ರತಿಯೊಂದು ತಳಿಯಲ್ಲೂ ಐದಾರು ಕಿಲೋ ಭತ್ತದ ಕಾಳುಗಳು ಅಭಿವೃದ್ಧಿಯಾದುವು. ಈ ಸುದ್ದಿಯು ಧಾರವಾಡ ಕೃಷಿ ವಿಶ್ವವಿದ್ಯಾಲಯದ ಬಾಗಿಲು ಬಡಿಯಿತು. ವಿಜ್ಞಾನಿಗಳು ಬೆನ್ನು ತಟ್ಟಿದರು. ಹಳ್ಳಿಯಲ್ಲಿದ್ದ ಜಾಗೃತಿ ಸಂಸ್ಥೆಯ ಸಂಪರ್ಕ, ಅನಂತರ "ಗ್ರೀನ್‌ ಫೌಂಡೇಶನ್‌' ನಿಕಟ ಪರಿಚಯವು ಲಂಗಟಿಯವರ ಬೀಜ ಸಂರಕ್ಷಣೆಯ ಕಾಯಕಕ್ಕೆ ಇಂಬು ನೀಡಿತು. ಬದುಕಿಗೆ ಹೊಸ ತಿರುವು ನೀಡಿತು. 

ಅಲ್ಲಿಂದ ಹುಡುಕಾಟಕ್ಕೆ ಶುರು. ಖಾನಾಪುರ ಸುತ್ತ ಹದಿನೆಂಟು ಭತ್ತದ ತಳಿಗಳು, ಸ್ಥಳೀಯವಾಗಿ ಒಂಬತ್ತು, ಮುಗದ ಭತ್ತ ಸಂಶೋಧನಾ ಕೇಂದ್ರದಿಂದ ಇಪ್ಪತ್ತು... ಹೀಗೆ ತಳಿಗಳು ಎಪ್ಪತ್ತರ ಗಡಿ ದಾಟಿದುವು. ತಳಿ ಉಳಿಸುವ ದೃಷ್ಟಿಯಿಂದ ತಾನೊಬ್ಬನೇ ಬೆಳೆಯದೆ ಆಸಕ್ತ ಕೃಷಿಕರಿಗೂ ನೀಡಿ ಬೆಳೆಯುವಂತೆ ಪ್ರೇರೇಪಿಸಿದರು. ಇಪ್ಪತ್ತು ವಿಧದ ರಾಗಿ ತಳಿಗಳೂ ತಿಜೋರಿ ಸೇರಿವೆ. ಎರಡೆಕ್ರೆಯಲ್ಲಿ ಈ ಭಾಗಕ್ಕೆ ಅಷ್ಟೊಂದು ಪರಿಚಿತವಲ್ಲದ ಗುಳಿ ರಾಗಿ ಪದ್ಧತಿಯಲ್ಲಿ ರಾಗಿಯನ್ನು ಬೆಳೆಯುತ್ತಿದ್ದಾರೆ. ""ಮಳೆ ಬಂದರೆ ಓಕೆ. ಮೂವತ್ತು ಕ್ವಿಂಟಾಲ್‌ ರಾಗಿ ಗ್ಯಾರಂಟಿ. ಮಳೆಯ ಕೈಯಲ್ಲಿದೆ ಕೃಷಿ ಬದುಕು. ಭೂಮಿಯು ಕೃಷಿಕನ ಕೈಬಿಡದು'' ಎನ್ನುವ ವಿಶ್ವಾಸ. 

"ಗ್ರೀನ್‌ ಫೌಂಡೇಶನ್‌', "ಸಹಜ ಸಮೃದ್ಧ'ದಂತಹ ದೇಸಿ ತಳಿಗಳ ಅಭಿವೃದ್ಧಿ ಸಂಘಟನೆಯ ಚಟುವಟಿಕೆಗಳಲ್ಲಿ ಸಕ್ರಿಯರಾದರು. ಹೊಲದಲ್ಲಿ ಬೆಳೆಯುತ್ತಾ ಅದರ ಅನುಭವಗಳನ್ನು ಹೇಳವಷ್ಟು ಸಂಪನ್ಮೂಲ ವ್ಯಕ್ತಿ. ತಳಿಗಳ ವೈವಿಧ್ಯ ಹೇಳಿದರೆ ಸಾಲದು, ಅದರ ಗುಣಧರ್ಮಗಳನ್ನೂ ಕೃಷಿಕರಿಗೆ ಹೇಳಬೇಕು ಎನ್ನುವ ಇರಾದೆ. ನರ ದೌರ್ಬಲ್ಯ ಶಮನಕ್ಕೆ ನವರ ತಳಿ, ಆಯುಷ್ಯ ವೃದ್ಧಿಗೆ ದೇವಮಲ್ಲಿಗೆ, ಬಾಣಂತಿಯರಿಗೆ ನೀಡುವ ಕರಿಗಜಿವಿಲಿ, ರಕ್ತಹೀನತೆಯ ಪರಿಹಾರಕ್ಕೆ ರಕ್ತಸಾಲೆ... ಹೀಗೆ ಒಂದೊಂದು ತಳಿಗಳ ವಿವರ ನೀಡಲು ಲಂಗಟಿಯವರಿಗೆ ಖುಷಿ. 

""ಒಂದು ಕಾಲಘಟ್ಟದಲ್ಲಿ ಎಂಬತ್ತು ಭತ್ತದ ತಳಿಗಳಿದ್ದುವು. ಯಾಕೋ ನಮ್ಮಲ್ಲಿಗೆ ಹೊಂದಿಕೊಳ್ಳದೆ ಮತ್ತು ಹವಾಮಾನ ವೈಪರೀತ್ಯದಿಂದ ಇಪ್ಪತ್ತು ಕೈಕೊಟ್ಟವು. ಕುಮುದ, ಬಂಗಾರಕಡ್ಡಿ, ಜೀರಿಗೆ ಸಾಂಬ, ಬಂಗಾರಗುಂಡ, ಕಾಳಜೀರ... ತಳಿಗಳು ವಿಚ್ಛೇದನ ನೀಡಿ ಹೊರಟು ಹೋಗಿವೆ. ಇದರಲ್ಲಿ ಅಂಬೆಮೋರಿ ತಳಿಯು ಈಚೆಗೆ ಮಹಾರಾಷ್ಟ್ರದಲ್ಲಿ ಪತ್ತೆಯಾಯಿತು. ಪುನಃ ತಿಜೋರಿ ಸೇರಿತು'' ಲಂಗಟಿಯವರಲ್ಲಿ ಒಂದೊಂದರ ಡಾಟಾವು ಮಸ್ತಕ ಕಂಪ್ಯೂನಲ್ಲಿದೆ.

 ಇಷ್ಟೆಲ್ಲ ಖುಷಿಯಿದ್ದರೂ ಮನದೊಳಗೆ ದುಗುಡ! ಕಾರಣ ಇಲ್ಲದಿಲ್ಲ. ಮಳೆ ಬಾರದಿದ್ದರೆ ಇದ್ದ ತಳಿಗಳನ್ನು ಉಳಿಸಿಕೊಳ್ಳುವುದು ಹೇಗಪ್ಪಾ ಎಂಬ ಚಿಂತೆ. ಸಂರಕ್ಷಣೆಯ ದೃಷ್ಟಿಯಿಂದ ಒಂದು ತಾಕಿನಲ್ಲಿ ಎಲ್ಲವನ್ನೂ ನಾಟಿ ಮಾಡಿದ್ದಾರೆ. ಪಕ್ಕದ ಮನೆಯವರಲ್ಲಿ ವಿನಂತಿ ಮಾಡಿ ಅವರ ಕೊಳವೆಬಾವಿಯಿಂದ ಗುಟುಕು ನೀರು ಉಣಿಸುತ್ತಿದ್ದಾರೆ. ಆ ಮನೆಯವರಿಗೆ ಲಂಗಟಿಯವರ ನಿಜ ಕಾಳಜಿ ಅರ್ಥವಾಗಿದೆ. 

""ಹವಾಮಾನದ ಪಲ್ಲಟ ಹೊಸತಲ್ಲ. 1984-86, 1995-96, 2001-02ರಲ್ಲಾಗಿದೆ. ಈ ಹಿನ್ನೆಲೆಯಲ್ಲಿ ಮುಂದಿನ ವರುಷ ಮಳೆಯ ಸಂಪನ್ನತೆ ಹೆಚ್ಚಿರಬೇಕು'' ಎನ್ನುವ ಲಂಗಟಿಯವರು, ""ರೈತರಿಗೆ ಇಂತಹ ವಿಚಾರದಲ್ಲಿ ಮಾಹಿತಿಯ ಕೊರತೆಯಿದೆ. ಹೇಳುವವರಾರು? ಅಧಿಕೃತವಾಗಿ ಹೇಳಬಹುದಾದ ಸಂಶೋಧನಾಲಯಗಳು, ವಿಜ್ಞಾನಿಗಳು ಕಂಪೆನಿಗಳ ಮುಷ್ಠಿಯೊಳಗಿದ್ದಾರೆ. ರೈತರು ಪರಾವಲಂಬಿಯಾಗಿ ಒದ್ದಾಡ್ತಾ ಇದ್ದಾರೆ.'' ಎನ್ನುತ್ತಾರೆ. 

ಬೆಳೆಯುವುದು ಮಾತ್ರವಲ್ಲ, ಅದಕ್ಕೆ ಸೂಕ್ತವಾದ ಮಾರುಕಟ್ಟೆಯ ಜಾಣ್ಮೆ ಲಂಗಟಿಯವರ ವಿಶೇಷ. ""ಮಾರುಕಟ್ಟೆ ನಮ್ಮ ಕೈಯಲ್ಲಿದೆ. ಜನ ಒಯ್ತಾರೆ, ಹುಡುಕಿ ಬರ್ತಾರೆ. ಯಾವುದಕ್ಕೆ ಬೇಡಿಕೆಯಿದೆಯೋ ಅದನ್ನು ಹೆಚ್ಚು ಬೆಳೀತೀನಿ'' ಎನ್ನುತ್ತಾ ಹುರಿಕಡಲೆ ಕೈಗಿಟ್ಟರು. ""ನೋಡ್ರಿ, ಕಡಲೆ ಬೇಕಾ ಅಂದ್ರೆ ಮಾರುಕಟ್ಟೆಯಲ್ಲಿ ಬೇಡ ಅಂತಾರೆ. ಅದನ್ನು ಹುರಿದು ಹುರಿಗಡಲೆ ಮಾಡಿದ್ರೆ ಎಷ್ಟಿದ್ರೂ ಬೇಕು. ಭತ್ತ ಯಾರಿಗೂ ಬೇಡ. ಅದನ್ನು ಅಕ್ಕಿ, ಅವಲಕ್ಕಿ, ಅಕ್ಕಿಹುಡಿ ಮಾಡಿ ಕೊಟ್ರೆ ಒಯ್ತಾರೆ. ಹಾಗಾಗಿ ಕೃಷಿಕನಿಗಿರುವುದು ಒಂದೇ ದಾರಿ  -ಅದು ಮೌಲ್ಯವರ್ಧನೆಯ ಹಾದಿ'' ಇದು ಅವರ ವಿಚಾರ.

ಇವರು ಬೀಜಕ್ಕಾಗಿ ಭತ್ತ ಕೇಳಿದರೆ ಮಾತ್ರ ಮಿತವಾಗಿ ನೀಡುತ್ತಾರೆ. ಮತ್ತೆ ಏನಿದ್ದರೂ ಮೌಲ್ಯವರ್ಧಿತ ಉತ್ಪನ್ನಗಳು. ಧಾರವಾಡದ ಕೋರ್ಟು ವೃತ್ತ ಸನಿಹದ ಗಾಂಧೀ ಪ್ರತಿಷ್ಠಾನದ ಆವರಣದಲ್ಲಿ ತಮ್ಮ ಉತ್ಪನ್ನಗಳನ್ನು ಸ್ವತಃ ಮಾರುತ್ತಾರೆ. ಸಾವಯವ ಆದ್ದರಿಂದ ಹುಡುಕಿ ಬರುವ ಗ್ರಾಹಕರಿದ್ದಾರೆ. ತರಕಾರಿಯನ್ನು ಕೂಡ ಮಾರುವುದರಿಂದ ಗುರುವಾರದ ಸಂತೆಯಲ್ಲಿ ಇವರ ಮಳಿಗೆ ರಶ್‌. ತಾವು ಬೆಳೆಯದ ಉತ್ಪನ್ನಗಳನ್ನು ಬೇರೆಡೆಯಿಂದ ಖರೀದಿಸಿ ಗ್ರಾಹಕರಿಗೆ ಒದಗಿಸುತ್ತಾರೆ. 

ಗುಂಡೇನಟ್ಟಿಯಲ್ಲಿ ಸಿದ್ಧಾರೂಢ ಸಾವಯವ ಕೃಷಿಕರ ಬಳಗ ಮತ್ತು ದೇಸಿ ಬೀಜ ತಳಿಗಳ ಬ್ಯಾಂಕ್‌ ರೂಪಿಸಿದ್ದಾರೆ. ಕೃಷಿ ಮಾಧ್ಯಮ ಕೇಂದ್ರವು ಲಂಗಟಿಯವರ ಕೃಷಿ ಬದುಕನ್ನು ಪುಸ್ತಿಕೆಯಲ್ಲಿ ಹಿಡಿದಿಟ್ಟಿದೆ. ವಿವಿಧ ಸಭೆಗಳಲ್ಲಿ, ವಿಚಾರ ಸಂಕಿರಣಗಳಲ್ಲಿ ತಮ್ಮ ಅನುಭವವನ್ನು ಹಂಚಿಕೊಳ್ಳುವ ಲಂಗಟಿಯವರು ಉತ್ತರ ಕರ್ನಾಟಕದ ಕೃಷಿಕರ ದನಿ. ""ಒಂದು ಕಾಲಘಟ್ಟದಲ್ಲಿ ಎಮ್ಮೆಗಳನ್ನು ಕಾಯುವ ಕೆಲಸದಲ್ಲಿದ್ದೆ. ಒಂದು ಎಮ್ಮೆಗೆ ಮೂವತ್ತು ರೂಪಾಯಿಯಂತೆ ಹತ್ತು ಎಮ್ಮೆಗಳನ್ನು ಕಾದು ತಿಂಗಳಿಗೆ ಅಬ್ಬಬ್ಟಾ ಅಂದರೂ ಮುನ್ನೂರು ರೂಪಾಯಿ ಸಂಪಾದನೆಯಲ್ಲಿ ಜೀವನ ಸಾಗಿಸಬೇಕಾಗಿತ್ತು. ನೋಡ್ರೀ... ಈಗ ದೇವರು ಕಾಪಾಡಿದ'' ಎಂದು ಆಗಸ ನೋಡುತ್ತಾರೆ. 

"ಮನೆಯ ಮಕ್ಕಳಿಗೆ ಕೃಷಿ ಪಾಠ ಮಾಡಬೇಕು, ಅವರೆಲ್ಲ ನಗರ ಸೇರುತ್ತಿದ್ದಾರೆ' ಎನ್ನುವ ವೇದಿಕೆಯ ಕೂಗಿಗೆ ಲಂಗಟಿಯವರು ತಮ್ಮ ಬದುಕಿನಲ್ಲಿ ಉತ್ತರ ನೀಡಿದ್ದಾರೆ. ಅವರ ಇಬ್ಬರು ವಿದ್ಯಾವಂತ ಮಕ್ಕಳನ್ನು ಕೃಷಿಯಲ್ಲಿ ಉಳಿಸಿಕೊಂಡಿದ್ದಾರೆ. ಹನುಮಂತ, ಶಿವಾನಂದ ಅಪ್ಪನೊಂದಿಗೆ ಹೆಗಲೆಣೆಯಗಿ ನಿಂತಿದ್ದಾರೆ. ""ಸರ್‌, ನಾವು ನಮ್ಮ ಹೊಲದಲ್ಲೇ ಮನೆ ಮಾಡಿಕೊಂಡಿದ್ದೇವೆ. ಸ್ವತಃ ಬೆಳೆದು ತಿನ್ನುತ್ತೇವೆ. ನೋಡ್ರಿ... ಮೂರು ವರುಷದಿಂದ ದವಾಖಾನೆಯ ಮೆಟ್ಟಿಲು ಹತ್ತಿಲ್ಲ'' ಎಂದು ಬೆಲ್ಲವೂ ಸೇರಿದ ನೆಲಗಡಲೆಯ ಪ್ಲೇಟನ್ನು ಮುಂದಿಟ್ಟರು. ""ಅದರಲ್ಲಿದ್ದ ಒಂದೊಂದು ಕಾಳಿಯಲ್ಲಿ ಲಂಗಟಿ ಕುಟುಂಬದ ಬೆವರಿನ ಶ್ರಮದ ನೆರಳು ಕಂಡಿತು'' ಎಂದು ಜತೆಗಿದ್ದ ಜಯಶಂಕರ ಶರ್ಮ ಪಿಸುಗುಟ್ಟಿದರು.

ನಾ. ಕಾರಂತ ಪೆರಾಜೆ

Trending videos

Back to Top