CONNECT WITH US  

ದೇವರ ನಾಡಿನಲ್ಲಿ ಹಲಸಿಗೆ ರಾಜ ಕಿರೀಟ

ಕರಾವಳಿಯಲ್ಲಿ ಉಪ್ಪಿನಲ್ಲಿ ಹಾಕಿಟ್ಟ ಕಾಯಿ ಹಲಸಿನ ಸೊಳೆ "ಉಪ್ಪಾಡ್‌ ಪಚ್ಚಿಲ್‌' (ಉಪ್ಪು ಸೊಳೆ) ಖಾದ್ಯಗಳನ್ನು ಗ್ರಹಿಸಿ ಕೊಂಡರೆ ಬಾಯಲ್ಲಿ ನೀರೂರುತ್ತದೆ! ತುಳುನಾಡಿನ ಕೆಲವು ಮದ್ಯದ ಅಂಗಡಿಗಳಿಗೆ ಉಪ್ಪಾಡ್‌ ಪಚ್ಚಿಲ್‌ ನುಗ್ಗಿದೆ! ಶ್ರೀಲಂಕಾದಲ್ಲಿ ಹಲಸಿನ ಬೀಜದ ಮಸಾಲೆ ಮದ್ಯದಂಗಡಿಯಲ್ಲಿ ಜನಪ್ರಿಯ.

ಹವಾಯಿಯ ಫ‌ಲಪ್ರಿಯ ಕೆನ್‌ ಲವ್‌ ಹಲಸು ಮೇಳ ವೊಂದರಲ್ಲಿ, "ಮಾವು ಹಣ್ಣುಗಳ ರಾಜನಾದರೆ ಹಲಸು ಕಿಂಗ್‌ ಮೇಕರ್‌' ಎಂದಿದ್ದರು. ಕೆನ್‌ ಹೇಳಿದ ಕಣಿ ಸತ್ಯವಾಗಿದೆ. ಅದಕ್ಕೀಗ ರಾಜ ಮಾನ್ಯತೆ ಲಭಿಸಿದ್ದು, ಕೇರಳದ ರಾಜ್ಯಫ‌ಲವಾಗಿದೆ. ಅಧಿಕೃತ ಘೋಷಣೆಯಾಗಿದೆ. ಕೇರಳದ ಆಡಳಿತಕ್ಕೆ ಹಲಸು ಹೊಲಸಲ್ಲ. ಇದನ್ನು ಕೇರಳಿಗರು ಎಂದೂ ಹಗುರವಾಗಿ ಕಂಡಿಲ್ಲ. ಸರಕಾರವು ಹಿಂದಿನ ವರುಷದ ಮುಂಗಡಪತ್ರದಲ್ಲಿ ಹಲಸು ಅಭಿವೃದ್ಧಿಗಾಗಿ ಐದು ಕೋಟಿ ಮೀಸಲಿಟ್ಟಿತ್ತು! ವಿತ್ತ ಸಚಿವರಾದ ಥಾಮಸ್‌ ಐಸಾಕ್‌ ಸ್ವತಃ ಹಲಸು ಪ್ರಿಯರು. ತಮ್ಮ ಬ್ಲಾಗಿನಲ್ಲಿ ಹಲಸಿನ ವಿಚಾರಗಳನ್ನು ಹಂಚುತ್ತಿ ದ್ದರು. ಚುನಾವಣೆಗೆ ಸ್ಪರ್ಧಿಸಲು ನಾಮಿನೇಶನ್‌ ಕೊಡುವ ಪೂರ್ವದಲ್ಲಿ ಹಲಸಿನ ಗಿಡ ನೆಟ್ಟು ಬಂದ ವಿಚಾರಗಳು ಸುದ್ದಿಯಾಗಿದ್ದವು!

ಸುನಿಲ್‌ ಕುಮಾರ್‌ ಕೃಷಿ ಸಚಿವರು. ಕೃಷಿ ಹಿನ್ನೆಲೆಯವರು. ಹಲಸಿನ ಹಿಂದು-ಮುಂದು ಬಲ್ಲವರು. ವರುಷದ ಹಿಂದೆ ಹಲಸಿನ ಅರಿವು, ಉತ್ಪನ್ನಗಳ ಮಾರುಕಟ್ಟೆ ಉದ್ದೇಶದಿಂದ ಹೊರಟ "ಚಕ್ಕವಂಡಿ'ಗೆ (ಹಲಸಿನ ವ್ಯಾನ್‌) ಮುಖ್ಯಮಂತ್ರಿಗಳೂ ಸೇರಿದಂತೆ ಇವರಿಬ್ಬರು ಹಸಿರು ನಿಶಾನೆ ನೀಡಿದ್ದರು. ಕೇರಳಾದ್ಯಂತ ಚಕ್ಕವಂಡಿಗೆ ಅದ್ಭುತ ಸ್ವಾಗತ ಪ್ರಾಪ್ತವಾಗಿರುವುದು ಹಲಸಿನ ಆಂದೋಳನದಲ್ಲಿ ದೊಡ್ಡ ಮೈಲಿಗಲ್ಲು. 

ಹಲಸು ರಾಜ್ಯಫ‌ಲವಾಗುವುದರ ಹಿಂದೆ ಹಲವು ವ್ಯಕ್ತಿಗಳ, ಸಂಸ್ಥೆಗಳ ಆಗ್ರಹಗಳಿದ್ದುವು. ಅಧ್ಯಾಪಕ ಬಾಲಕೃಷ್ಣನ್‌ ಎನ್ನುವವರು ಸತತವಾಗಿ ಸರಕಾರವನ್ನು ಒತ್ತಾಯಿಸುತ್ತಿದ್ದರು. ತಿರುವನಂತ ಪುರದ ಜ್ಯಾಕ್‌ಫ್ರುಟ್‌ ಪ್ರೊಮೋಶನ್‌ ಕೌನ್ಸಿಲ್‌ ಸಂಸ್ಥೆಯು ಪ್ರೇಮಿಗಳ ದಿನ, ಪರಿಸರ ದಿನ ಇರುವಂತೆ "ಹಲಸು ದಿನ'ವನ್ನು ಘೋಷಿಸಬೇಕೆನ್ನುವ ಒತ್ತಾಯವನ್ನು ಮಾಡುತ್ತಾ ಬಂದಿತ್ತು. ಹಲಸು ಕೇರಳಿಗರ ಇಷ್ಟದ ಫ‌ಲ, ಮನಸ್ಸಿನ ಫ‌ಲ. ಬಹುಶಃ ಈ ಎಲ್ಲಾ ಒತ್ತಡಗಳು ಮನಸಾ ರೂಪುಗೊಂಡಿದ್ದರ ಫ‌ಲವಾಗಿ ಹಲಸು ರಾಜ್ಯಫ‌ಲವಾಗಿ ಮಾನ್ಯತೆ ಪಡೆದಿದೆ.

ಒಂದು ಕಾಲಘಟ್ಟದಲ್ಲಿ ಕೇರಳದಲ್ಲಿ ಹಲಸು ಯಾರಿಗೂ ಬೇಡ. ""ಈ ಮರದಿಂದ ಯಾರು ಬೇಕಾದರೂ ಹಣ್ಣು ಒಯ್ಯಬಹುದು'' ಎಂದು ಫ‌ಲಕ ಅಂಟಿಸುತ್ತಿದ್ದರಂತೆ! ಒಂದು ಹಲಸಿಗೆ ಐದೋ ಹತ್ತೋ ರೂಪಾಯಿ ಚಿಲ್ಲರೆ ಸಿಕ್ಕರೆ ಪುಣ್ಯ. ಈಗ ಚಿತ್ರ ಬದಲಾಗಿದೆ. ಹಣ್ಣು ಉಚಿತವಾಗಿ ಸಿಗುವುದಿಲ್ಲ! ಅಂಗಡಿಗಳಲ್ಲಿ ಉತ್ತಮ ದರವಿದೆ. ಹಲಸು ಒಂದು ಆಂದೋಲನವಾಗಿ ಹಬ್ಬುತ್ತಿದೆ. ಕೇರಳದ ಆಂದೋಳನಗಳ ವೈಶಿಷ್ಟ್ಯವೇ ಭಿನ್ನ. ಜಾತಿ-ಮತ-ವರ್ಗ- ಉದ್ಯೋ ಗಗಳ ಬೇಧವಿಲ್ಲದೆ ಜನರು ಭಾಗವಹಿಸುತ್ತಾರೆ. ಜನರಲ್ಲಿ ಸಾಮಾಜಿಕ ಪ್ರಜ್ಞೆ ಹಬ್ಬಲು ಮಾಧ್ಯಮಗಳೂ ಕೈಜೋಡಿಸುತ್ತಿವೆ. ಬಹುಶಃ ಇಂತಹ ಒಗ್ಗಟ್ಟು ಅನ್ಯ ರಾಜ್ಯಗಳಲ್ಲಿ ನೋಡ ಸಿಗುವುದು ವಿರಳ. ಸಾಮೂಹಿಕ ಜಾಗೃತಿ ಮೂಡಿದೆ. 

ವಿಶೇಷವೆಂದರೆ ಕಲ್ಲಿಕೋಟೆಯ ಉತ್ತರ ಭಾಗಕ್ಕೆ ಆಂದೋಲನದ ಕಾವು ಹೇಳುವಷ್ಟು ಹಬ್ಬಿಲ್ಲ! ನಿರುದ್ಯೋಗ ಸಮಸ್ಯೆಯ ಮಧ್ಯೆ ಹಲಸು ಕೂಡಾ ಉದ್ಯೋಗ ಸೃಷ್ಟಿಯ ಉಪಾಧಿಯಾಗಬಹುದೆನ್ನುವ ಭರವಸೆ ಹುಟ್ಟಿಸಬೇಕಾಗಿದೆ. ಇಲ್ಲಿ ತರಬೇತಿ, ಮಾರ್ಗ ದರ್ಶನದ ಕೊರತೆಯಿದೆ. ಪ್ರಾಯೋಗಿಕವಾಗಿ ಮೌಲ್ಯವರ್ಧನೆಯ ತರಬೇತಿ ನೀಡಿ, ತಮ್ಮ ಕಾಲಲ್ಲಿ ತಾವು ನಿಲ್ಲಬಹುದು ಎನ್ನುವ ಆತ್ಮವಿಶ್ವಾಸ ಬಂದುಬಿಟ್ಟರೆ ಜನರ ಒಲವು ಹಲಸಿನತ್ತ ವಾಲಬ ಹುದು. ರಾಜ್ಯಫ‌ಲ ಘೋಷಣೆಯ ಹಿನ್ನೆಲೆಯಲ್ಲಿ ಇಂತಹ ಸೂಕ್ಷ್ಮವಿಚಾರಗಳತ್ತ ಒತ್ತು ನೀಡಬೇಕಾದ ಅಗತ್ಯವಿದೆ. 

ಕೊಚ್ಚಿಯ ಜೇಮ್ಸ್‌ ಜೋಸೆಫ್ ಇವರು ಹಲಸಿನ ವಕ್ತಾರ. ಹಲಸನ್ನು ಪಂಚತಾರಾ ಸಂಸ್ಕೃತಿಗೆ ಮಿಳಿತಗೊಳಿಸಿದವರು. 
ಇದಕ್ಕೆ ಮಾನಕೊಡಲು ಅವಿರತ ದುಡಿದವರು. ಇವರ ಯತ್ನದಿಂದಾಗಿ ಸ್ಟಾರ್‌ ಹೋಟೆಲ್‌ ಪ್ರವೇಶಿಸಿದ್ದು ಮಾತ್ರವಲ್ಲ ಜನಮನವನ್ನು ಗೆದ್ದಿದೆ. ಬೆಂಗಳೂರು, ತಮಿಳುನಾಡು ಮೊದಲಾದೆಡೆ ಪಂಚತಾರಾ ಹೋಟೇಲುಗಳ ಊಟದ ಬಟ್ಟಲಿನಲ್ಲಿ ಹಲಸಿನ ಉತ್ಪನ್ನಗಳು ಐಟಂ ಆಗಿ ಮನ ಗೆದ್ದಿದೆ. ಒಂದು ಉದಾಹರಣೆ ಗಮನಿಸಿ. ಮಸಾಲೆ ದೋಸೆಯ ಮಸಾಲೆಗೆ ಬಳಸುವ ಆಲೂಗೆಡ್ಡೆ ಬದಲಿಗೆ ಕಾಯಿ ಹಲಸಿನ ಸೊಳೆಯನ್ನು ಬಳಸಿರುವುದು ಮೆಚ್ಚುಗೆ ಪಡೆದಿದೆ. 

ಕಾಯಿ ಸೊಳೆಯ ಗ್ಲೆ„ಸಿಮಿಕ್‌ ಇಂಡೆಕ್ಸ್‌ ಅಕ್ಕಿ ಅಥವಾ ಗೋಧಿ ಗಿಂತ ಕಡಿಮೆ ಎಂದು ಸಿಡ್ನಿಯ ಒಂದು ಪ್ರಯೋಗಶಾಲೆಯು ಪರೀಕ್ಷಿಸಿ ತಿಳಿಸಿರುವುದು ಉಲ್ಲೇಖನೀಯ. ಕೇರಳದಲ್ಲಿ ಹಲಸಿನ ಕಾಯಿಸೊಳೆಯ ನುಣ್ಣನೆಯ ಪುಡಿಯು ಮಾರುಕಟ್ಟೆಗೆ ಇಳಿದಿದೆ. ಇಡ್ಲಿ, ಚಪಾತಿ ತಯಾರಿಯಲ್ಲಿ ಮೂರರಲ್ಲೊಂದು ಭಾಗದಷ್ಟು ಈ ಪುಡಿಯನ್ನು ಬಳಸಿದರೆ "ಶುಗರ್‌ ಕಂಟ್ರೋಲ್‌' ಆಗುವುದೆಂದು ಕಂಡುಕೊಂಡಿದ್ದಾರೆ. ಕೇರಳಾದ್ಯಂತ ಐನೂರಕ್ಕೂ ಮಿಕ್ಕಿ ಅಂಗಡಿಗಳಲ್ಲಿ ಈ ಉತ್ಪನ್ನ ಜನಪ್ರಿಯ. ಆನ್‌ಲೈನ್‌ ಮೂಲಕವೂ ತರಿಸಿಕೊಳ್ಳಬಹುದು. 

ಕರಾವಳಿಯಲ್ಲಿ ಉಪ್ಪಿನಲ್ಲಿ ಹಾಕಿಟ್ಟ ಕಾಯಿ ಹಲಸಿನ ಸೊಳೆ "ಉಪ್ಪಾಡ್‌ ಪಚ್ಚಿಲ್‌' (ಉಪ್ಪು$ಸೊಳೆ) ಖಾದ್ಯಗಳನ್ನು ಗ್ರಹಿಸಿ ಕೊಂಡರೆ ಬಾಯಲ್ಲಿ ನೀರೂರುತ್ತದೆ! ತುಳುನಾಡಿನ ಕೆಲವು ಮದ್ಯದ ಅಂಗಡಿಗಳಿಗೆ ಉಪ್ಪಾಡ್‌ ಪಚ್ಚಿಲ್‌ ನುಗ್ಗಿದೆ! ಶ್ರೀಲಂಕಾದಲ್ಲಿ ಹಲಸಿನ ಬೀಜದ ಮಸಾಲೆ ಮದ್ಯದಂಗಡಿಯಲ್ಲಿ ಜನಪ್ರಿಯ. ಹದ ಬಲಿತ ಹಲಸಿನ ಬೀಜದಿಂದ ಉಪ್ಕರಿ, ಮಸಾಲೆ ತಿಂಡಿಗಳನ್ನು ಮಾಡಿದರೆ ಪ್ರವಾಸಿಗಳನ್ನು ಆಕರ್ಷಿಸಬಹುದು. 

ಕಳೆದ ಹತ್ತು ವರುಷಗಳಲ್ಲಿ ಏನಿಲ್ಲವೆಂದರೂ ನೂರೈವತ್ತಕ್ಕೂ ಮಿಕ್ಕಿ ಉತ್ಪನ್ನಗಳು ಸಿದ್ಧವಾಗಿ ಗ್ರಾಹಕರ ಉದರ ಸೇರುತ್ತಿವೆ, ದೊಡ್ಡ ಪ್ರಮಾಣದಲ್ಲಿ ಹೊರ ರಾಜ್ಯಗಳಿಗೂ ಸೇರುತ್ತಿವೆ. ಮೇಳಗಳು, ಕಾರ್ಯಾಗಾರಗಳು, ತರಬೇತಿ ಶಿಬಿರಗಳು ಖಾಸಗಿಯಾಗಿ ಸದ್ದಿಲ್ಲದೆ ನಡೆಯುತ್ತಿವೆ. ಮೂರು ಡಜನ್ನಿನಷ್ಟು ಮೌಲ್ಯವರ್ಧಿತ ಘಟಕಗಳು ಕಾರ್ಯಾಚರಿಸುತ್ತಿವೆ. ಚಿಪ್ಸ್‌, ಬೆರಟ್ಟಿಯಂತಹ ಸಾಂಪ್ರದಾಯಿಕ ಉತ್ಪನ್ನಗಳ ತಯಾರಿಯಲ್ಲದೆ ವಿವಿಧ ಉತ್ಪನ್ನಗಳನ್ನು ಸಿದ್ಧಪಡಿಸುವ ಪ್ರಯೋಗಶೀಲತೆ ಹಬ್ಬುತ್ತಿದೆ. 

ಪದ್ಮಿನಿ ಶಿವದಾಸನ್‌, ಲೈಲಾ ಮಣ್ಣಿಲ್‌, ಅಣ್ಣಮ್ಮ ಪೀಟರ್‌, ಸಿ.ಡಿ.ಸುನೀಶ್‌, ಆನ್ಸಿ ಮ್ಯಾಥ್ಯೂ.. ಮೊದಲಾದ ಆರೆಂಟು ವಿಶೇಷಜ್ಞರು ಸಾವಿರಾರು ಮಂದಿಗೆ ಹಲಸಿನ ಅಡುಗೆಯ ತರಬೇತಿ ನೀಡಿರುವುದು ಹಲಸು ಆಂದೋಳನದ ಅನುಷ್ಠಾನದ ಫ‌ಲ. ಆನ್ಸಿ ಅವರ ಅಡುಗೆ ಪುಸ್ತಕವೊಂದು ಮೂರು ಬಾರಿ ಮರು ಮುದ್ರಣಗೊಂಡಿರುವುದು ಹಲಸಿನ ಅಡುಗೆಯತ್ತ ಕೇರಳಿಗರ ಒಲವಿನ ಗಾಢತೆ ಸ್ಪಷ್ಟವಾಗುತ್ತದೆ. ಎರಡು ಮೂರು ವರುಷಗಳಿಂದ ಹಲಸು ರಂಗದಲ್ಲಿ ಅಧ್ಯ ಯನ ಮಾಡಿದವರಿಗೆ "ಕೇರಳದಲ್ಲಿ ಹಲಸು ಹನ್ನೆರಡೂ ತಿಂಗಳೂ ಲಭ್ಯ' ಎನ್ನುವುದು ಗೊತ್ತಾಗಿದೆ. ಸಿಗುವುದು ಹೌದಾದರೆ ತರಬೇತಿಗಳ ಮೂಲಕ ಮೌಲ್ಯವರ್ಧನೆಯತ್ತ ಜನರನ್ನು ಟ್ಯೂನ್‌ ಮಾಡಬೇಕು. ಉತ್ಪನ್ನ ಮಾತ್ರವಲ್ಲದೆ ಪ್ಯಾಕಿಂಗ್‌, ಗುಣಮಟ್ಟ, ಬ್ರಾಂಡಿಂಗ್‌ ಯೋಚನೆಗಳತ್ತಲೂ ಗಮನ ಹರಿಸಬೇಕು. ತರಬೇತಿಯ ಬಳಿಕ ಸ್ವತಂತ್ರವಾಗಿ ಕಾಲೂರುವ ತನಕ ಬೇಕಾದ ಅಡಿಗಟ್ಟು, ಪ್ರೋತ್ಸಾಹ ಅತ್ಯಗತ್ಯ. ತರಬೇತಿ ನೀಡಿದರಷ್ಟೇ ಕೆಲಸ ಮುಗಿಯದು. 
ಇಷ್ಟೆಲ್ಲಾ ಧನಾಂಶಗಳನ್ನು ಎತ್ತಿ ಹೇಳುವುದರ ಜತೆಗೆ ಹಲಸಿಗೆ ನ್ಯಾಯ ಸಲ್ಲಿಸುವ ಕೆಲಸಗಳು ಬಹಳಷ್ಟು ಆಗಬೇಕಾಗಿದೆ. ಬೆಳೆಯುವ ಕೃಷಿಕನಿಗೆ ಉತ್ತಮ ಧಾರಣೆಯೂ ಸಿಗುವಂತಾಗಬೇಕು. ಎಳೆಯ ಹಲಸು ಉತ್ತರ ಭಾರತಕ್ಕೆ ಸಾವಿರಗಟ್ಟಲೆ ಟನ್‌ ಸರಬರಾಜಾಗುತ್ತದೆ. ರೈತಪರ ಸರಬರಾಜು ಸರಪಳಿಯ ರಚನೆ ಇಂದಿನ ತುರ್ತು ಅಗತ್ಯ. ಈ ಮೂಲಕ ರೈತರಿಗೆ ನ್ಯಾಯಯುತ ಬೆಲೆ ದೊರೆಯುವ ಸಾಧ್ಯತೆಯಿದೆ. 

 ಹಲಸಿನ ಬೆಳವಣಿಗೆಗೆ ಮುಳ್ಳಾದ "ಕೀಳರಿಮೆ' ಈಗ ಪೂರ್ತಿ ಕರಗಿಹೋಗಿದೆ. ಹಣ ಚಲಾವಣೆ ಶುರುವಾಗಿದೆ. ಆದರೆ ಕೃಷಿ
ಕನಿಗೆ ಸರಿಯಾದ ಪಾಲು ಸಿಗಬೇಕಾದರೆ ಇನ್ನಷ್ಟು ಯೋಜನೆ ಮತ್ತು ಕ್ರಿಯೆ ಬೇಕು. ವಿತರಣಾ ಜಾಲ ಗಟ್ಟಿಗೊಳ್ಳಬೇಕು. 
ರೈತರೇ ಒಂದೆಡೆ ಸೇರಿ ಒಳ್ಳೆಯ ಗುಣಮಟ್ಟದ ಹಲಸನ್ನು ಒದಗಿಸುವಂತಾದರೆ ಮಾರುಕಟ್ಟೆ ವ್ಯವಸ್ಥೆಗಳು ತೆರೆದುಕೊಳ್ಳು
ತ್ತವೆ. ಆಸಕ್ತರು ಮೊದಲೇ ಕಾದಿರಿಸಿ ಒಯ್ಯುವ ಸ್ಥಿತಿ ಉಂಟಾಗುವು ದರಲ್ಲಿ ಸಂಶಯವಿಲ್ಲ. ಮನೆಗಳಲ್ಲಿ ಹಲಸನ್ನು ವಿಭಿನ್ನವಾಗಿ ಬಳಸಲು ಅನುಕೂಲವಾ ಗುವಂತೆ ಹೊಸ ಪಾಕೇತನಗಳನ್ನು ಪರಿಚಯಿಸಬೇಕಾಗಿದೆ. ಇದಕ್ಕೆ ಪ್ರತ್ಯೇಕವಾಗಿ ತರಬೇತಿಯ ಅವಶ್ಯವಿದೆ. ಹಲಸಿನ ಬಳಕೆಯ ಅನು ಕೂಲಗಳನ್ನು, ಆರೋಗ್ಯ ವಿಚಾರಗಳನ್ನು ಕೂಡಾ ಪ್ರತ್ಯೇಕವಾಗಿ ಪ್ರಸ್ತುತಪಡಿಸಬೇಕು. ಮಾರುಕಟ್ಟೆಯ ತರಕಾರಿಗಳಿಗಿಂತ ಹಲಸು ಹೇಗೆ ಭಿನ್ನ ಎನ್ನುವ ಅರಿವನ್ನೂ ಜತೆಜತೆಗೆ ಹಬ್ಬಿಸಬೇಕು. 

""ವಿಶೇಷವಾಗಿ ಹಲಸಿನಲ್ಲಿರುವ ನಾರಿನ ಅಂಶ, ವಿಷರಹಿತ ವಾಗಿರುವುದು ಮತ್ತು ಕೀಟನಾಶಕಗಳ ಸಿಂಪಡಣೆ ಇಲ್ಲದಿರುವ ಅಂಶಗಳನ್ನು ಎತ್ತಿ ಹೇಳುವಂತಹ ವ್ಯವಸ್ಥೆಗಳ ಜಾಲಗಳು ರೂಪುಗೊಳ್ಳಬೇಕಾಗಿದೆ. ಅಡುಗೆ ಮನೆಗಳಲ್ಲಿ ಹಲಸು ಒಂದಲ್ಲ ಒಂದು ರೂಪದಲ್ಲಿ ಬಳಕೆಗೆ ಬಂದಾಗ ಮಾತ್ರ ರಾಜ್ಯಫ‌ಲ ಎನ್ನುವ ಘೋಷಣೆಗೆ ಹೆಚ್ಚು ಪುಷ್ಟಿ ಬರುತ್ತದೆ'' ಎನ್ನುತ್ತಾರೆ ಶ್ರೀ ಪಡ್ರೆ. ಇವರು ಭಾರತದ ಹಲಸಿನ ರಾಯಭಾರಿ. 

ಇಷ್ಟೆಲ್ಲಾ ಹಲಸು ಸುದ್ದಿ ಮಾಡುತ್ತಿದ್ದಂತೆ ಇನ್ನೊಂದು ಸುದ್ದಿಗೆ ಕಿವಿಯರಳಲೇಬೇಕು! ಚಾಕೋಲೇಟ್‌ ಉದ್ಯಮಕ್ಕೆ ಕೊಕ್ಕೋ 
ಬೀಜ ಅಗತ್ಯ ಎನ್ನುವುದು ಎಲ್ಲರಿಗೂ ಗೊತ್ತು. ಭವಿಷ್ಯದಲ್ಲಿ ಕೊಕ್ಕೋ ಬೀಜ ಬೇಕಾದಷ್ಟು ಸಿಗದಿದ್ದಾಗ ಪರ್ಯಾಯಗಳ ಸಂಶೋಧನೆ ನಡೆದಿದೆ. ಇದರಿಂದ ಚಾಕೋಲೇಟ್‌ಗಳಲ್ಲಿ ಕೊಕ್ಕೋಗೆ ಬದಲು ಹಲಸಿನ ಬೀಜ ಬಳಸಬಹುದು ಎಂದು ಕಂಡುಕೊಂಡಿದ್ದಾರೆ. ಮುಂದಿನ ದಿನ‌ಗಳಲ್ಲಿ ಹಲಸಿನ ಬೀಜದ ಚಾಕೋಲೆಟ್‌ ವಿಶ್ವ ಮಾರುಕಟ್ಟೆಯಲ್ಲಿ ಕ್ಲಿಕ್‌ ಆದರೆ ಆಶ್ಚರ್ಯವಿಲ್ಲ.


Trending videos

Back to Top