CONNECT WITH US  

ಕನ್ನಡ ಬೋಧಿಸದ ವಿದ್ಯಾಸಂಸ್ಥೆಗಳ ವಿರುದ್ಧ ಶಿಸ್ತುಕ್ರಮ

ಮಂಡ್ಯ: ರಾಜ್ಯದ ಎಲ್ಲಾ ಸ್ವಾಯತ್ತ, ಪದವಿ, ವಿಶ್ವವಿದ್ಯಾಲಯ ಹಾಗೂ ಖಾಸಗಿ ಕಾಲೇಜುಗಳಲ್ಲಿ ಕನ್ನಡವನ್ನು ನಾಲ್ಕು ಸೆಮಿಸ್ಟರ್‌ಗಳಲ್ಲಿ ಒಂದು ಭಾಷೆಯನ್ನಾಗಿ ಕಡ್ಡಾಯವಾಗಿ ಬೋಧನೆ ಮಾಡಬೇಕು. ಇಲ್ಲವಾದಲ್ಲಿ ಅಂಥ ವಿದ್ಯಾಸಂಸ್ಥೆಗಳ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳುವುದಾಗಿ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಪ್ರೋ. ಎಸ್‌.ಜಿ.ಸಿದ್ದರಾಮಯ್ಯ ಎಚ್ಚರಿಕೆ ನೀಡಿದರು.

ನಗರದ ಸರ್ಕಾರಿ ಮಹಾವಿದ್ಯಾಲಯದಲ್ಲಿ ಕನ್ನಡ ವಿಷಯ ಬೋಧನೆ ಮಾಡುತ್ತಿಲ್ಲ ಎಂಬ ದೂರುಗಳು ಬಂದ ಹಿನ್ನೆಲೆಯಲ್ಲಿ ಶುಕ್ರವಾರ ಕಾಲೇಜಿಗೆ ಭೇಟಿ ನೀಡಿ ಕನ್ನಡ ಅನುಷ್ಠಾನ ಪ್ರಗತಿ ಪರಿಶೀಲನೆ ಸಭೆ ನಡೆಸಿ ಮಾತನಾಡಿದ ಅವರು, ಯುಜಿಸಿ ನಿಯಮಾವಳಿಗಳು ಕೇವಲ ಗೈಡ್‌ಲೈನ್‌ ಆಗಿದೆಯೇ ಹೊರತು, ಅದೇ ಆದೇಶವಲ್ಲ. ಸ್ಥಳೀಯ ಭಾಷಾ ಉಳಿವಿಗೆ ಯುಜಿಸಿ ನಿಯಮಾವಳಿಗಳಲ್ಲಿ ಅವಕಾಶ ಕಲ್ಪಿಸಿಕೊಳ್ಳಲು ಸಾಧ್ಯವಾಗುತ್ತದೆ ಎಂದು ತಿಳಿಸಿದರು.

ಪ್ರಸಕ್ತ ಸಾಲಿನಲ್ಲಿ ಮಂಡ್ಯ ಮಹಾವಿದ್ಯಾಲಯ ಇದನ್ನೇ ಮುಂದುವರಿಸಿದರೆ ಶಿಸ್ತುಕ್ರಮಕ್ಕೆ ಪ್ರಾಧಿಕಾರ ಸರ್ಕಾರಕ್ಕೆ ಶಿಫಾರಸು ಮಾಡುತ್ತದೆ. ಕೂಡಲೇ ಪಠ್ಯಕ್ರಮ ಬದಲಾವಣೆ ಮಾಡಿ ಎಲ್ಲಾ ವಿಷಯಗಳಲ್ಲಿ ಕನ್ನಡವನ್ನು ಒಂದು ಭಾಷೆಯನ್ನಾಗಿ ನಾಲ್ಕು ಸೆಮಿಸ್ಟರ್‌ ಗಳಲ್ಲಿ ಕಡ್ಡಾಯವಾಗಿ ಬೋಧಿ ಸಲು ಕ್ರಮ ವಹಿಸುವಂತೆ ಪ್ರಾಂಶುಪಾಲರಿಗೆ ಸೂಚಿಸಿದರು.

ಕ್ರಮ ವಹಿಸಿ: ಮಂಡ್ಯ ಮಹಾವಿದ್ಯಾಲಯ ಮಾಡಿ ಕೊಂಡಿರುವ ಸಮಿತಿಯಲ್ಲಿ ಪರಸ್ಪರ ಹೊಂದಾಣಿಕೆಯಿಂದ ಮೈಸೂರು ವಿಶ್ವವಿದ್ಯಾಲಯದವರ ಸಲಹೆಗಳನ್ನು ತೆಗೆದುಕೊಂಡು ಕೂಡಲೇ ನಾಲ್ಕು ಸೆಮಿಸ್ಟರ್‌ಗಳಲ್ಲಿ ಕನ್ನಡ ಬೋಧಿಸಲು ಕ್ರಮ ವಹಿಸತಕ್ಕದೆಂದು ತಿಳಿಸಿದರು.

ಆಡಳಿತದಲ್ಲಿ ಕನ್ನಡ ಅನುಷ್ಠಾನಕ್ಕೆ ಸಂಬಂಧಿಸಿದಂತೆ ಮಂಡ್ಯ ಮಹಾವಿದ್ಯಾಲಯದಲ್ಲಿನ ನಾಮಫಲಕಗಳು, ಕಾರ್ಯಸೂಚಿಗಳು, ಜಾಹಿರಾತು ಫಲಕಗಳು ಆಂಗ್ಲ ಭಾಷೆ ಗಮನಿಸಲಾಗಿದ್ದು, ಅದಲ್ಲದೇ ಪ್ರವೇಶ ಪತ್ರಗಳು, ಪರೀಕ್ಷಾ ಪರಿವಿಡಿಯ ಮೇಲ್ವಿಚಾರಕರ ದಿನಚರಿಗಳು, ಅಂತಜಾìಲ ತಾಣ ಎಲ್ಲವೂ ಇಂಗ್ಲಿಷ್‌ ನಲ್ಲಿರುವುದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಅವರು, ಇದನ್ನು ಕೂಡಲೇ ಸರಿಪಡಿಸಿಕೊಳ್ಳಬೇಕು. ಅಂತೆಯೇ ಪರಿಶೀಲನೆ ವೇಳೆಯಲ್ಲಿ ಗಮನಿಸಲಾದ ಕನ್ನಡ ಅನುಷ್ಠಾನದ ಲೋಪದೋಷಗಳನ್ನು ಸರಿಪಡಿಸಿಕೊಂಡು ಅನುಪಾಲನಾ ವರದಿ ಸಲ್ಲಿಸುವಂತೆ ಪ್ರಾಂಶುಪಾಲರಿಗೆ ಸೂಚಿಸಿದರು. 

ಪ್ರಾಂಶುಪಾಲ ಪ್ರೊ.ಶಿವನಂಜೇಗೌಡ ಮಾತನಾಡಿ, ಈ ಹಿಂದೆ ಇದ್ದ ರೀತಿಯಲ್ಲಿಯೇ ಮುಂದುವರಿ ಸುವಂತೆ ತೀರ್ಮಾನಿಸಲಾಗಿದ್ದು, ಆಗಿರುವ ಲೋಪದ ಕುರಿತು ಸಮಿತಿ ರಚಿಸಲಾಗಿದೆ. ಸಮಿತಿ ವರದಿಯನ್ವಯ ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು.

ಡಾ.ಕೆ.ವೈ.ನಾರಾಯಣಸ್ವಾಮಿ ಮಾತನಾಡಿ, ಮೂಲಭೂತವಾಗಿ ಸಮಿತಿ ರಚನೆ ಮಾಡಿರುವುದು ಕಾಲೇಜು ಆಡಳಿತ ಮಂಡಳಿ ತಪ್ಪಾಗಿದ್ದು, ಸಮಿತಿಯಲ್ಲಿ ಭಾಷಾ ತಜ್ಞರನ್ನು ನೇಮಿಸಲಾಗಿಲ್ಲ. ಟೆಂಪ್ಲೇಟ್‌ ಅಂದರೆ ಆದೇಶವಲ್ಲ. ಅದು ಕೇವಲ ಮಾದರಿಯಾಗಿದ್ದು, ಸ್ವಾಯತ್ತ ಕಾಲೇಜುಗಳು ಭಾಷಾ ಬೋಧನೆಗೆ ಸಂಬಂಧಿ ಸಿದಂತೆ ರಾಜ್ಯ ಸರ್ಕಾರದ
ಆದೇಶಾನುಸಾರ ಕನ್ನಡವನ್ನು ಕಡ್ಡಾಯವಾಗಿ ಬೋಧಿಸಲು ತಮ್ಮದೇ ಕ್ರೆಡಿಟ್‌ ಬೇಸ್‌ ಸಿಸ್ಟಮ್‌ನಲ್ಲಿ ಅಳವಡಿಸಿಕೊಳ್ಳಲು ಸಂಪೂರ್ಣ ಅವಕಾಶವಿದೆ. ಸ್ವಾಯತ್ತ ಕಾಲೇಜಾಗಿದ್ದರೂ ಮಾತೃ ಸಂಸ್ಥೆಯಾದ ಮೈಸೂರು ವಿಶ್ವವಿದ್ಯಾಲಯದ ಮಾದರಿ ಅಳವಡಿಸಿಕೊಳ್ಳುವುದು ಸೂಕ್ತ ಎಂದರು. ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ ಡಾ.ಕೆ.ಮುರಳೀಧರ ಇದ್ದರು.

Trending videos

Back to Top