CONNECT WITH US  

ಮಾದಕ ವ್ಯಸನಿಗಳಾಗಿ ಬದಲಾಗುತ್ತಿರುವ ಯುವಜನತೆ

ಮದ್ದೂರು: ಪ್ರಸ್ತುತ ದಿನಗಳಲ್ಲಿ ಯುವ ಸಮುದಾಯ ಮಾದಕ ವ್ಯಸನಿಗಳಾಗಿ ರೂಪಾಂತರಗೊಳ್ಳುತ್ತಿರುವುದು ಆತಂಕಕ್ಕಾರಿ ವಿಚಾರವೆಂದು ಪ್ರಧಾನ ಸಿವಿಲ್‌ ನ್ಯಾಯಾಧೀಶ ಪಿ.ಎಂ. ಬಾಲಸುಬ್ರಮಣಿ ವಿಷಾದಿಸಿದರು.

ಪಟ್ಟಣದ ಶಿವಪುರದ ಪೂರ್ಣಪ್ರಜ್ಞಾ ವಿದ್ಯಾಸಂಸ್ಥೆ ಆವರಣದಲ್ಲಿ ತಾಲೂಕು ಕಾನೂನು ಸೇವೆಗಳ ಸಮಿತಿ, ವಕೀಲರ ಸಂಘ ಹಾಗೂ ವಿದ್ಯಾಸಂಸ್ಥೆಯ ಸಹಯೋಗದೊಂದಿಗೆ ಆಯೋಜಿಸಿದ್ದ "ಮಾದಕ ವಸ್ತುಗಳ ನಿರ್ಮೂಲನೆ ಮತ್ತು ಮಕ್ಕಳ ಕಳ್ಳಸಾಗಣಿಕೆ ಜಾಗೃತಿ' ಬಗ್ಗೆ ಕಾನೂನು ಅರಿವು ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ಮದ್ಯಪಾನ, ಗುಟ್ಕಾ ಹಾಗೂ ಇನ್ನಿತರ ಸೇವನೆಯಿಂದಾಗಿ ಯುವ ಸಮುದಾಯ ಅನೇಕ ಕಾನೂನು ಬಾಹಿರ ಕೃತ್ಯಗಳಲ್ಲಿ ಭಾಗಿಯಾಗುತ್ತಿರುವುದು ಆತಂಕದ ವಿಚಾರವೆಂದು ಅಭಿಪ್ರಾಯಪಟ್ಟರು.

ಅಪರಾಧ: ಭಿಕ್ಷೆ ಬೇಡಿಸುವುದು, ಚಿಕ್ಕ ವಯಸ್ಸಿನ ಮಕ್ಕಳನ್ನು ಹೊರ ದೇಶಕ್ಕೆ ಸಾಗಣೆ ಮಾಡುವುದು ಮತ್ತು ಹಣ ಗಳಿಸಲು ಮಕ್ಕಳನ್ನು ಬಳಸಿಕೊಳ್ಳುವುದು ಕಾನೂನು ರೀತಿಯ ಅಪರಾಧವಾಗಿದ್ದು, ಇಂಥ ಕೃತ್ಯಗಳಲ್ಲಿ ಪಾಲ್ಗೊಳ್ಳುವ ವ್ಯಕ್ತಿಗಳಿಗೆ 10 ವರ್ಷ ಸಜೆ ಅಥವಾ ಜೀವಾವಧಿ ಶಿಕ್ಷೆ ವಿಧಿಸಬಹುದಾಗಿದೆ ಎಂದರು.

ಕಾನೂನು ಅತ್ಯವಶ್ಯ: ಒಂದನೇ ಅಪರ ಸಿವಿಲ್‌ ನ್ಯಾಯಾಧೀಶ ಕೆ.ಎನ್‌.ಶಿವಕುಮಾರ್‌ ಮಾತನಾಡಿ, ಎಲ್ಲಾ ವರ್ಗದ ಜನರಿಗೆ ಉಚಿತವಾಗಿ ನ್ಯಾಯ ದೊರಕಿಸಿಕೊಡುವುದು ಕಾನೂನು ಸೇವಾ ಸಮಿತಿಯ ಉದ್ದೇಶವಾಗಿದೆ. ಸಮಾನತೆ ಹಾಗೂ ಹಕ್ಕುಗಳನ್ನು ಪಡೆಯಲು ಪ್ರತಿಯೊಬ್ಬರಿಗೂ ಹಕ್ಕಿದ್ದು ಸಮಾಜದಲ್ಲಿ ಆರೋಗ್ಯಕರವಾದ ವಾತಾವರಣ ನಿರ್ಮಾಣ ಮಾಡಲು ಕಾನೂನು ಅತ್ಯವಶ್ಯಕವೆಂದರು.

ಉಪನ್ಯಾಸ: ಕಾನೂನು ಸಲಹೆಗಾರ ಎಂ.ಮಹೇಶ್‌ ಮಾದಕ ವಸ್ತುಗಳ ನಿರ್ಮೂಲನೆ ಮತ್ತು ಮಕ್ಕಳ ಕಳ್ಳ ಸಾಗಣಿಕೆ ಜಾಗೃತಿ ಬಗ್ಗೆ ವಿಶೇಷ ಉಪನ್ಯಾಸ ನೀಡಿದರು. ಕಾರ್ಯಕ್ರಮದ ವೇಳೆ ವಕೀಲರ ಸಂಘದ ಅಧ್ಯಕ್ಷ ಜಿ.ಎನ್‌.ಸತ್ಯ, ಕಾರ್ಯದರ್ಶಿ ಎ. ಶಿವಣ್ಣ, ವಿದ್ಯಾಸಂಸ್ಥೆ ಅಧ್ಯಕ್ಷೆ ಪಿ.ಕಸ್ತೂರಿ, ಮುಖ್ಯಶಿಕ್ಷಕ ಎಚ್‌.ಆರ್‌.ಅನಂತೇಗೌಡ ಸೇರಿದಂತೆ ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಹಾಜರಿದ್ದರು.

Trending videos

Back to Top