CONNECT WITH US  

ನಂಜುಂಡಪ್ಪ ವರದಿ ಜಾರಿಗೆ ಆಗ್ರಹಿಸಿ ಕರವೇ ಪ್ರತಿಭಟನೆ

ಮಂಡ್ಯ: ಸಮಗ್ರ ಕರ್ನಾಟಕದ ಅಭಿವೃದ್ಧಿಗೆ ಡಾ.ಡಿ.ಎಂ.ನಂಜುಂಡಪ್ಪ ವರದಿಯನ್ನು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಜಂಟಿಯಾಗಿ ಜಾರಿಗೊಳಿಸುವಂತೆ ಒತ್ತಾಯಿಸಿ ಹಾಗೂ ಅಖಂಡ ಕರ್ನಾಟಕದ ಉಳಿವಿಗೆ ಆಗ್ರಹಿಸಿ ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರು ಗುರುವಾರ ನಗರದಲ್ಲಿ ಪ್ರತಿಭಟನೆ ನಡೆಸಿದರು.

ನಗರದ ಸಿಲ್ವರ್‌ ಜ್ಯೂಬಿಲಿ ಪಾರ್ಕ್‌ನಿಂದ ಹೊರಟ ರಕ್ಷಣಾ ವೇದಿಕೆ ಕಾರ್ಯಕರ್ತರು ಅಖಂಡ ಕರ್ನಾಟಕದ ಉಳಿವಿನ ಬಗ್ಗೆ ಘೋಷಣೆ ಕೂಗಿದರಲ್ಲದೆ, ಪ್ರತ್ಯೇಕ ರಾಜ್ಯದ ಕೂಗೆತ್ತಿದವರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ವರದಿ ಸಮಗ್ರ ವರದಿ ಜಾರಿಗೊಳಿಸಿ: ಕರವೇ ಜಿಲ್ಲಾ ಅಧ್ಯಕ್ಷ  ಕೆ.ಟಿ.ಶಂಕರೇಗೌಡ ಮಾತನಾಡಿ, ಭಾಷಾವಾರು ಪ್ರಾಂತ್ಯಗಳ ಆಧಾರದ ಮೇಲೆ ರಚನೆಯಾಗಿರುವ ರಾಜ್ಯಗಳ ಒಕ್ಕೂಟ ದೇಶವಾಗಿರುವ ಭಾರತದಲ್ಲಿ ಕರ್ನಾಟಕ ಕೇಂದ್ರ ಸರ್ಕಾರಕ್ಕೆ ಹೆಚ್ಚಿನ ಆದಾಯ ತೆರಿಗೆ ಪಾವತಿಸುವ ಬಹುದೊಡ್ಡ ರಾಜ್ಯವಾಗಿದೆ.

ನಾಡಿನ ಎಲ್ಲಾ ಭಾಗದ ಜನರ ತ್ಯಾಗ, ಬಲಿದಾನಗಳಿಂದ ಅಖಂಡವಾಗಿರುವ ಕರ್ನಾಟಕದಲ್ಲಿರುವ ಪ್ರಾದೇಶಿಕ ಅಸಮತೋಲನವನ್ನು ನಿವಾರಣೆ ಮಾಡಲು ಮಾಜಿ ಮುಖ್ಯಮಂತ್ರಿ ಎಸ್‌.ಎಂ.ಕೃಷ್ಣ ಸರ್ಕಾರದ ಅವಧಿಯಲ್ಲಿ ನೀಡಲಾದ ನಾಡಿನ ಹಿರಿಯ ಆರ್ಥಿಕ ತಜ್ಞ ಡಾ.ಡಿ.ಎಂ.ನಂಜುಂಡಪ್ಪ ವರದಿಯನ್ನು ಸಮಗ್ರವಾಗಿ ಜಾರಿಗೊಳಿಸಬೇಕು ಎಂದು ಆಗ್ರಹಿಸಿದರು.

ಅಭಿವೃದ್ಧಿಗೆ ಒತ್ತು ನೀಡಿ: ನಂಜುಂಡಪ್ಪ ವರದಿಯಲ್ಲಿ ತಿಳಿಸಿರುವಂತೆ ರಾಜ್ಯದ ಎಲ್ಲಾ ಭಾಗಗಳ 119 ತಾಲೂಕುಗಳು ಹಿಂದುಳಿದಿದ್ದು, ಅದರಲ್ಲಿ ಕೆಲವು ತಾಲೂಕುಗಳಲ್ಲಿ ಶಿಕ್ಷಣ, ಉದ್ಯೋಗ, ಉದ್ಯಮ, ಆರೋಗ್ಯ ಸೇವೆ, ಮೂಲ ಸೌಕರ್ಯ, ಹಣಕಾಸು ಸಂಸ್ಥೆಗಳ ಸ್ಥಾಪನೆ, ಕೃಷಿ, ನೀರಾವರಿ ಸೌಲಭ್ಯಗಳ ಕುರಿತು ಸರಿಯಾದ ಅನುದಾನ ನೀಡುವುದು ಹಾಗೂ ಬಿಡುಗಡೆಯಾದ ಅನುದಾನ ಸರಿಯಾದ ರೀತಿಯಲ್ಲಿ ಬಳಕೆಯಾಗುವಂತೆ ನೋಡಿಕೊಳ್ಳಲು ಬೇಕಿರುವ ವ್ಯವಸ್ಥೆಗಳನ್ನು ಕೇಂದ್ರ ಮತ್ತು ರಾಜ್ಯಸರ್ಕಾರಗಳು ಜಂಟಿಯಾಗಿ ಮಾಡಬೇಕು. ಸಮಗ್ರ ಕರ್ನಾಟಕದ ಅಭಿವೃದ್ಧಿಗೆ ಒತ್ತು ನೀಡುವಂತೆ ಒತ್ತಾಯಿಸಿದರು.

ಕರ್ನಾಟಕದ ಅಖಂಡತೆ ಉಳಿಯುವಂತೆ ನೋಡಿಕೊಳ್ಳು ಜವಾಬ್ದಾರಿ ಎಲ್ಲಾ ಕನ್ನಡಿಗರದ್ದಾಗಿದೆ. ಇದಕ್ಕೆ ಪೂರಕವೆಂಬಂತೆ ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ನಾಡಿನಲ್ಲಿ ಪ್ರತ್ಯೇತಕೆಯ ಧ್ವನಿ ಮೊಳಗದಂತೆ ನೋಡಿಕೊಂಡು ಕನ್ನಡದ ಐಕ್ಯತೆಯನ್ನು ಕಾಪಾಡುವಂತೆ ಒತ್ತಾಯಿಸಿ ಕೇಂದ್ರ ಮತ್ತು ರಾಜ್ಯ ಸರ್ಕಾರಕ್ಕೆ ಜಿಲ್ಲಾಧಿಕಾರಿ ಮೂಲಕ ಮನವಿ ಸಲ್ಲಿಸಿದರು.

ಪ್ರತಿಭಟನೆಯಲ್ಲಿ ಕರವೇ ರಾಜ್ಯ ಉಪಾಧ್ಯಕ್ಷ ಎಂ.ಎಸ್‌.ಚಿದಂಬರ್‌, ಮಹಿಳಾ ಜಿಲ್ಲಾಧ್ಯಕ್ಷೆ ಭಾರತಿ ಕುಮಾರ್‌, ಬೀರಪ್ಪನಹಳ್ಳಿ ಭಾಸ್ಕರ್‌, ಬೋರೇಗೌಡ, ಎಂ.ಸುರೇಶ್‌, ಪುಟ್ಟಮಲ್ಲಯ್ಯ,  ತಾಲೂಕು ಮಹಿಳಾಧ್ಯಕ್ಷೆ ಸೌಭಾಗ್ಯ, ಮಳವಳ್ಳಿ ತಾಲೂಕು ಅಧ್ಯಕ್ಷೆ ಕೆ.ಎಂ.ಜಯಶೀಲ, ವನಜಾಕ್ಷಮ್ಮ ಇತರರು ಭಾಗವಹಿಸಿದ್ದರು.

Trending videos

Back to Top