CONNECT WITH US  

ಜೆಡಿಎಸ್‌ ಭದ್ರಕೋಟೆಯಲ್ಲಿ ಕಾಂಗ್ರೆಸ್‌ ಲೋಕಸಭಾ ಚುನಾವಣಾ ಸಿದ್ಧತೆ

ಮಂಡ್ಯ: ಜೆಡಿಎಸ್‌ ಭದ್ರಕೋಟೆ ಎಂದೇ ಬಿಂಬಿತವಾಗಿರುವ ಮಂಡ್ಯ ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್‌ ಚುನಾವಣಾ ಪೂರ್ವ ಸಿದ್ಧತೆ ಆರಂಭಿಸಿದೆ. ಕಾಂಗ್ರೆಸ್‌-ಜೆಡಿಎಸ್‌ ಸಮ್ಮಿಶ್ರ ಸರ್ಕಾರ ಅಸ್ತಿತ್ವಕ್ಕೆ ಬಂದ ಪ್ರಾಥಮಿಕ ಹಂತದಲ್ಲೇ ಲೋಕಸಭಾ ಚುನಾವಣೆಯನ್ನು ಮೈತ್ರಿ ಮೂಲಕವೇ ಎದುರಿಸುವ ಅಭಿಪ್ರಾಯಗಳು ವ್ಯಕ್ತವಾಗಿದ್ದು, ಅದರ ಪರ ಮತ್ತು ವಿರೋಧದ ದನಿಗಳೂ ಮಾರ್ದನಿಸುತ್ತಿರುವ ಸಂದರ್ಭದಲ್ಲೇ ಮಂಡ್ಯ ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್‌ನ ಚುನಾವಣಾ ಸಿದ್ಧತೆ ಹಲವು ಕುತೂಹಲಗಳಿಗೆ ಕಾರಣವಾಗಿದೆ.

ಮಾಜಿ ಸಿಎಂ ಸಲಹೆ: ಸಮನ್ವಯ ಸಮಿತಿ ಅಧ್ಯಕ್ಷರಾದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಇತ್ತೀಚೆಗೆ ಮಂಡ್ಯ ಲೋಕಸಭಾ ಕ್ಷೇತ್ರ ವ್ಯಾಪ್ತಿಯ ಕಾಂಗ್ರೆಸ್‌ ಪಕ್ಷದ ಮಾಜಿ ಶಾಸಕರು ಹಾಗೂ ಮುಖಂಡರ ಸಮಾಲೋಚನಾ ಸಭೆ ನಡೆಸಿ ಲೋಕಸಭಾ ಮಹಾ ಚುನಾವಣೆ ವೇಳೆಗೆ ಪಕ್ಷ ಬಲವರ್ಧನೆಗೊಳಿಸುವಂತೆ ಸಲಹೆ ನೀಡಿದ್ದಾರೆ ಎಂದು ತಿಳಿದುಬಂದಿದೆ.

ಮಂಡ್ಯ ಲೋಕಸಭಾ ಕ್ಷೇತ್ರದ ವ್ಯಾಪ್ತಿಗೆ ಬರುವ ಕೆ.ಆರ್‌.ನಗರವೂ ಸೇರಿದಂತೆ ಜಿಲ್ಲೆಯ ಏಳು ಕ್ಷೇತ್ರಗಳಲ್ಲಿ ಕಾಂಗ್ರೆಸ್‌ ಹೀನಾಯವಾಗಿ ಪರಾಭವಗೊಂಡಿರುವುದು ಪಕ್ಷದ ಪರಾಜಿತ ಅಭ್ಯರ್ಥಿಗಳು ಮತ್ತು ಕಾರ್ಯಕರ್ತರ ಆತ್ಮವಿಶ್ವಾಸ ಕುಗ್ಗಿಸಿದ್ದು, ಕಾಂಗ್ರೆಸ್ಸಿಗರಿಗೆ ಸ್ಥೈರ್ಯ ತುಂಬುವ ಉದ್ದೇಶದಿಂದ ಇಂತಹದೊಂದು ಸಭೆ ನಡೆದಿದೆ ಎಂದು ಹೇಳಲಾಗುತ್ತಿದೆ.

ಆಸಕ್ತಿ ಇಲ್ಲ: ಈಗಾಗಲೇ ಘೋಷಣೆಯಾಗಿರುವ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಕಾಂಗ್ರೆಸ್‌-ಜೆಡಿಎಸ್‌ನ ಚುನಾವಣಾ ಪೂರ್ವ ಹೊಂದಾಣಿಕೆ ಬಗ್ಗೆ ಎರಡೂ ಪಕ್ಷಗಳಲ್ಲಿ ಆಸಕ್ತಿ ಇಲ್ಲದ ಕಾರಣ ಸಹಜವಾಗಿಯೇ ಪರಸ್ಪರ ಎದುರಾಳಿಗಳಾಗಿ ಸ್ಪರ್ಧೆಗಿಳಿಯಲಿವೆ. ಈ ಬಗ್ಗೆ ಅಂತಿಮ ನಿರ್ಧಾರ ಕೈಗೊಳ್ಳುವ ಜವಾಬ್ದಾರಿಯನ್ನು ಆಯಾಯ ಜಿಲ್ಲಾ ಮಟ್ಟದ ನಾಯಕರಿಗೆ ನೀಡಲಾಗಿರುವ ವಿಚಾರ ಪ್ರಸ್ತಾಪಿಸಲಾಯಿತು.

ಕಳೆದ ಐದು ವರ್ಷಗಳಿಂದಲೂ ಜಿಲ್ಲೆಯಲ್ಲಿ ಆಡಳಿತಾರೂಢ ಕಾಂಗ್ರೆಸ್‌ ದುಸ್ಥಿತಿಯನ್ನೇ ಎದುರಿಸುತ್ತಾ ಬಂದಿದ್ದರೂ ಮಳವಳ್ಳಿ ಕ್ಷೇತ್ರದ ವ್ಯಾಪ್ತಿಯಲ್ಲಿ ಕಾಂಗ್ರೆಸ್‌ ಪಕ್ಷ ಬಲಯುತವಾಗಿ ಕಟ್ಟಿ ಬೆಳೆಸುವಲ್ಲಿ ಯಶಸ್ಸನ್ನು ಕಂಡಿದ್ದ ಮಾಜಿ ಶಾಸಕ ಪಿ.ಎಂ.ನರೇಂದ್ರಸ್ವಾಮಿ ಎಲ್ಲ ಚುನಾವಣೆಗಳಲ್ಲೂ ಕಾಂಗ್ರೆಸ್‌ ಅಧಿಪತ್ಯ ಮುಂದುವರಿಯುವಂತೆ ನೋಡಿಕೊಂಡಿದ್ದರು. ಪಕ್ಷನಿಷ್ಠೆ ಮತ್ತು ಸಂಘಟನೆಗೆ ಹೆಸರಾಗಿರುವ ಮಾಜಿ ಶಾಸಕ ನರೇಂದ್ರಸ್ವಾಮಿ ಅವರನ್ನು ಮಂಡ್ಯ ಲೋಕಸಭಾ ಕ್ಷೇತ್ರದ ಚುನಾವಣಾ ಸಮಿತಿ ಸಂಚಾಲಕರನ್ನಾಗಿ ನೇಮಿಸಲಾಗಿದೆ. 

ಅಧ್ಯಕ್ಷರಾಗಿ ಸಿಆರ್‌ಎಸ್‌ ನೇಮಕ: ಜೆಡಿಎಸ್‌ ವರಿಷ್ಠರ ಕೆಂಗಣ್ಣಿಗೆ ಗುರಿಯಾಗಿದ್ದರೂ ಜಿಲ್ಲೆಯಲ್ಲಿ ಕಾಂಗ್ರೆಸ್‌ ಬೇರುಗಳನ್ನು ಗಟ್ಟಿಗೊಳಿಸುವ ಮಹತ್ವಾಕಾಂಕ್ಷೆಯೊಂದಿಗೆ ಸಂಘಟನೆ ಆರಂಭಿಸಿರುವ ಮಾಜಿ ಸಚಿವ ಎನ್‌.ಚೆಲುವರಾಯಸ್ವಾಮಿ ಅವರನ್ನು ಚುನಾವಣಾ ಸಮಿತಿ ಅಧ್ಯಕ್ಷರನ್ನಾಗಿ ನೇಮಕ ಮಾಡಲಾಗಿದೆ.

ಲೋಕಸಭೆ ಚುನಾವಣೆಯವರೆಗೂ ಜಿಲ್ಲೆಯಲ್ಲಿ ಕಾಂಗ್ರೆಸ್‌ ಪಕ್ಷವನ್ನು ಬಲವರ್ಧನೆಗೊಳಿಸುವ ಪ್ರಮುಖ ಜವಾಬ್ದಾರಿಯನ್ನು ಈ ಇಬ್ಬರು ನಾಯಕರಿಗೆ ನೀಡಲಾಗಿದ್ದು, ಇನ್ನಿತರೆ ಪಕ್ಷದ ಪರಾಜಿತ ಅಭ್ಯರ್ಥಿಗಳು, ಮುಖಂಡರನ್ನು ಒಳಗೊಂಡು ಜಿಲ್ಲೆಯಲ್ಲಿ ಪಕ್ಷ ಬಲಯುತಗೊಳಿಸುವಂತೆ ಸೂಚಿಸಲಾಗಿದೆ.

ಒಂದೆಡೆ ಜಿಲ್ಲೆಯ ಏಳೂ ಕ್ಷೇತ್ರಗಳಲ್ಲಿ ಜಯಭೇರಿ ಬಾರಿಸಿರುವ ಜೆಡಿಎಸ್‌ನಲ್ಲಿ ಚುನಾವಣಾ ಟಿಕೆಟ್‌ಗಾಗಿ ತೀವ್ರ ಪೈಪೋಟಿ ನಡೆಯುತ್ತಿದ್ದರೆ, ಕಾಂಗ್ರೆಸ್‌ನಲ್ಲಿ ಅಭ್ಯರ್ಥಿಗಳ ಹುಡುಕಾಟ ಮುಂದುವರಿದಿದೆ. ಈಗಾಗಲೇ ಮಾಜಿ ಸಚಿವ ಎನ್‌.ಚೆಲುವರಾಯಸ್ವಾಮಿ ಬಹಿರಂಗವಾಗಿಯೇ ಚುನಾವಣಾ ನಿರಾಸಕ್ತಿ ವ್ಯಕ್ತಪಡಿಸಿದ್ದು, ಸ್ಪರ್ಧೆ ನಿರಾಕರಿಸಿದ್ದಾರೆ.

ಕುಗ್ಗಿದ ರಮ್ಯಾ ವರ್ಚಸ್ಸು: ಮಾಜಿ ಸಂಸದೆ, ಚಿತ್ರನಟಿ ರಮ್ಯಾ ಅವರ ಹೆಸರನ್ನು ಆಗಾಗ ತೇಲಿಬಿಡುವ ಪ್ರಕ್ರಿಯೆ ನಡೆಯುತ್ತಿದೆಯಾದರೂ ಕಳೆದ ಎರಡು ವರ್ಷಗಳಿಂದಲೂ ರಮ್ಯಾ ಕ್ಷೇತ್ರದ ಕಡೆ ಮುಖ ಮಾಡದಿರುವುದೂ ಅವರ ವರ್ಚಸ್ಸನ್ನು ಕುಗ್ಗಿಸುವಂತೆ ಮಾಡಿದೆ.

ಮಂಡ್ಯ ರಾಜಕಾರಣದಲ್ಲಿ ನೆಲೆನಿಲ್ಲುವ ಉದ್ದೇಶದಿಂದ ಬಾಡಿಗೆ ಮನೆ ಪಡೆದು ರಾಜಕೀಯ ಪ್ರಕ್ರಿಯೆ ಆರಂಭಿಸಿದ್ದ ಮಾಜಿ ಸಂಸದೆ ರಮ್ಯಾ 2014ರ ಲೋಕಸಭಾ ಮಹಾ ಚುನಾವಣೆಯಲ್ಲಿ ಪರಾಭವಗೊಂಡ ನಂತರ ಕ್ಷೇತ್ರಕ್ಕೆ ಬರುವುದನ್ನೇ ಕಡಿಮೆ ಮಾಡಿದರು. ಇತ್ತೀಚಿನ ವಿಧಾನಸಭಾ ಚುನಾವಣೆ ಪ್ರಚಾರದಲ್ಲೂ ರಮ್ಯಾ ಕಾಣಿಸಿಕೊಳ್ಳದಿರುವುದೂ ಜನರ ಅಸಮಾಧಾನಕ್ಕೆ ಕಾರಣವಾಗಿದೆ.

ಲಕ್ಷ್ಮೀ ಅಶ್ವಿ‌ನ್‌ಗೌಡ ಅಭ್ಯರ್ಥಿ ಸಂಭವ: ರಾಮನಗರ ಮತ್ತು ಹಾಸನ ಜಿಲ್ಲೆಗಳಿಗಿಂತಲೂ ಅತಿ ಸುರಕ್ಷಿತ ಮತ್ತು ಗೆಲುವಿನ ಕ್ಷೇತ್ರವೇ ಆಗಿರುವ ಮಂಡ್ಯ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸಲು ಜೆಡಿಎಸ್‌ನಲ್ಲಿ ಭಾರೀ ಪೈಪೋಟಿ ನಡೆದಿದೆ. ನಾಗಮಂಗಲ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧೆ ಬಯಸಿ ರೈಲ್ವೆ ಇಲಾಖೆಯಿಂದಲೇ ನಿವೃತ್ತಿ ಪಡೆದು ಜೆಡಿಎಸ್‌ ಮೂಲಕ ರಾಜಕೀಯ ರಂಗ ಪ್ರವೇಶಿಸಿರುವ ಲಕ್ಷ್ಮೀ ಅಶ್ವಿ‌ನ್‌ಗೌಡ ಟಿಕೆಟ್‌ ರೇಸ್‌ನಲ್ಲಿ ಮುಂಚೂಣಿಯಲ್ಲಿದ್ದಾರೆ.

ಈಗಾಗಲೇ ಜೆಡಿಎಸ್‌ನ ಪ್ರಮುಖ ಕಾರ್ಯಕ್ರಮಗಳಲ್ಲಿ ಕಾಣಿಸಿಕೊಳ್ಳುತ್ತಿರುವ ಅವರಿಗೆ ಟಿಕೆಟ್‌ ಅಂತಿಮವಾದಂತೆ ಮೇಲ್ನೋಟಕ್ಕೆ ಕಂಡುಬರುತ್ತಿದೆ. ಎನ್‌.ಚೆಲುವರಾಯಸ್ವಾಮಿ ಅವರ ವಿರೋಧಿ ರಾಜಕಾರಣದ ಕಾರಣದಿಂದಾಗಿಯೇ ಜೆಡಿಎಸ್‌ನಲ್ಲಿ ಪ್ರವರ್ಧಮಾನಕ್ಕೆ ಬಂದಿರುವ ಮಾಜಿ ಶಾಸಕ ಎಲ್‌.ಆರ್‌.ಶಿವರಾಮೇಗೌಡರೂ ಈ ಹಿಂದೆ ಸ್ವಕ್ಷೇತ್ರದ ಅಭ್ಯರ್ಥಿಯಾಗಲು ಬಯಸಿದ್ದರು.

ಅ ನಂತರ ದಕ್ಷಿಣ ಶಿಕ್ಷಕರ ಕ್ಷೇತ್ರದ ಚುನಾವಣೆಯಲ್ಲೂ ಟಿಕೆಟ್‌ ಕೈತಪ್ಪಿರುವ ಹಿನ್ನೆಲೆಯಲ್ಲಿ ಮಂಡ್ಯ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸುವ ಇರಾದೆ ವ್ಯಕ್ತಪಡಿಸಿದ್ದು ಈಗಾಗಲೇ ಟಿಕೆಟ್‌ ಲಾಬಿ ತೀವ್ರಗೊಳಿಸಿದ್ದಾರೆ. ನಾಗಮಂಗಲ ಕ್ಷೇತ್ರ ಮೂಲದ ಲಕ್ಷ್ಮೀ ಅಶ್ವಿ‌ನ್‌ಗೌಡ ಮತ್ತು ಶಿವರಾಮೇಗೌಡರ ನಡುವಿನ ಟಿಕೆಟ್‌ ಪೈಪೋಟಿ ನಡುವೆಯೂ ಚುನಾವಣೆಯ ಅಂತಿಮ ಘಟ್ಟದಲ್ಲಿ ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡರೇ ಅಥವಾ ಅವರ ಕುಟುಂಬದ ಸದಸ್ಯರೊಬ್ಬರು ಸ್ಪರ್ಧಿಸುವರೆಂಬ ವದಂತಿಗಳು ದಟ್ಟವಾಗಿ ಕೇಳಿಬರುತ್ತಿವೆ. 

Trending videos

Back to Top