CONNECT WITH US  

ಶಿಂಷಾ ಎಡದಂಡೆ, ಬಲದಂಡೆ ನಾಲೆಗೆ ನೀರು ಹರಿಸಿ

ಮದ್ದೂರು: ಶಿಂಷಾ ಎಡದಂಡೆ ಮತ್ತು ಬಲದಂಡೆ ನಾಲೆಗಳಿಗೆ ನೀರು ಹರಿಸುವಂತೆ ಒತ್ತಾಯಿಸಿ ರೈತ ಸಂಘದ ಕಾರ್ಯಕರ್ತರು ಗುರುವಾರ ಪ್ರತಿಭಟನೆ ನಡೆಸಿದರು. ಪಟ್ಟಣದ ಟಿಎಪಿಸಿಎಂಎಸ್‌ ಗೋದಾಮು ಬಳಿ ಇರುವ ಪ್ರೊ.ನಂಜುಂಡಸ್ವಾಮಿ ಅವರ ಚೈತನ್ಯ ಕೇಂದ್ರದ ಬಳಿ ಜಮಾವಣೆಗೊಂಡು ರಾಜ್ಯ ಹಾಗೂ ನೀರಾವರಿ ಇಲಾಖೆ ಅಧಿಕಾರಿಗಳ ವಿರುದ್ಧ ಘೋಷಣೆ ಕೂಗಿ ತಮ್ಮ ಆಕ್ರೋಶ ವ್ಯಕ್ತಪಡಿಸಿದರು.

ಕೊಪ್ಪ ಜಿಪಂ ವ್ಯಾಪ್ತಿಯ ನಿಲುವಾಗಿಲು, ಕೀಳಘಟ್ಟ, ಕುಂಟನಹಳ್ಳಿ, ಎನ್‌. ಕೋಡಿಹಳ್ಳಿ ಹಾಗೂ ಆತಗೂರು ಹೋಬಳಿ ವ್ಯಾಪ್ತಿಯ ಹೆಮ್ಮನಹಳಿ, ತೊರೆಶೆಟ್ಟಹಳ್ಳಿ, ಮಾರಸಿಂಗನಹಳ್ಳಿ ಸೇರಿದಂತೆ ಇನ್ನಿತರೆ ಗ್ರಾಮಗಳಲ್ಲಿ ನೀರು ಹರಿಯದ ಕಾರಣ ರೇಷ್ಮೆ, ಕಬ್ಬು, ತೆಂಗು ಮತ್ತು ಭತ್ತದ ನಾಟಿ ಮಾಡಲು ವಿಳಂಬವಾಗುತ್ತಿದೆ ಎಂದು ದೂರಿದರು.

ಕೃಷಿ ಹಾಗೂ ರೇಷ್ಮೆ ಅಧಿಕಾರಿಗಳು ಬಿತ್ತನೆ ಮಾಡುವುದರ ಬಗ್ಗೆ ರೈತರಿಗೆ ಸಲಹೆ ನೀಡುವ ಜತೆಗೆ ಜನ ಜಾನುವಾರುಗಳು ನೀರಿಗಾಗಿ ಹಾಹಾಕಾರ ಉಂಟಾಗಿದೆ. ಕೆರೆಕಟ್ಟೆಯಲ್ಲಿ ನೀರಿಲ್ಲದೆ ಅಂತರ್ಜಲ ಕುಸಿದಿದ್ದು, ಕೂಡಲೇ ಕೊನೆಯ ಭಾಗದ ಜಮೀನುಗಳಿಗೆ ನೀರು ಹರಿಸುವಂತೆ ಒತ್ತಾಯಿಸಿದರು.

ಕಚೇರಿಗೆ ಮುತ್ತಿಗೆ: ಆ.20ರ ಸೋಮವಾರದೊಳಗಾಗಿ ಶಿಂಷಾ ಎಡ ಮತ್ತು ಬಲದಂಡೆ ನಾಲೆಗಳಿಗೆ ನೀರು ಹರಿಸದಿದ್ದಲ್ಲಿ ಕಾವೇರಿ ನೀರಾವರಿ ನಿಗಮದ ಕಚೇರಿಗೆ ಬೀಗ ಹಾಕಿ ಧರಣಿ ನಡೆಸುವ ಎಚ್ಚರಿಕೆ ನೀಡಿ ಪ್ರತಿಭಟನೆ ಹಿಂಪಡೆದರು.

ಪ್ರತಿಭಟನೆ ವೇಳೆ ಸಂಘಟನೆ ತಾಲೂಕು ಅಧ್ಯಕ್ಷ ಜಿ.ಸಿ.ಶಂಕರ್‌, ಪದಾಧಿಕಾರಿಗಳಾದ ರಾಮಕೃಷ್ಣಯ್ಯ, ಎಂ.ಸಿ.ರಾಮಯ್ಯ, ಕೀಳಘಟ್ಟ ನಂಜುಂಡಯ್ಯ, ಮಂಚೇಗೌಡ, ಕೃಷ್ಣ, ನಾಡಪ್ರಭು ಕೆಂಪೇಗೌಡ ಸಂಘಟನೆಯ ಕಾರ್ಯದರ್ಶಿ ಸುರೇಶ್‌ ನೇತೃತ್ವ ವಹಿಸಿದ್ದರು.


Trending videos

Back to Top