CONNECT WITH US  

ಅನಿರ್ದಿಷ್ಟಾವಧಿ ಧರಣಿಗೆ ಸ್ಪಂದಿಸದ ಸಚಿವ, ಅಧಿಕಾರಿಗಳು

ಮದ್ದೂರು: ತಾಲೂಕಿನ ಕರಡಕೆರೆ ಗ್ರಾಮದ ನಿವಾಸಿಗಳು ಕಳೆದ 13 ದಿನಗಳಿಂದಲೂ ನಿವೇಶನ ನೀಡುವಂತೆ ಅನಿರ್ದಿಷ್ಟಾವಧಿ ಧರಣಿ ಕೈಗೊಂಡಿದ್ದರೂ ತಾಲೂಕು ಆಡಳಿತ ಯಾವುದೇ ಕ್ರಮಕ್ಕೆ ಮುಂದಾಗದ ಕ್ರಮಖಂಡಿಸಿ ಶುಕ್ರವಾರ ಸ್ಥಳೀಯ ನಿವಾಸಿಗಳು ಪ್ರತಿಭಟನೆ ನಡೆಸಿದರು.

ಪಟ್ಟಣದ ಡಾ.ಬಿ.ಆರ್‌.ಅಂಬೇಡ್ಕರ್‌ ಭವನದಲ್ಲಿ ಕಳೆದ 13 ದಿನಗಳಿಂದಲೂ ವಾಸವಿದ್ದು, ಜಿಲ್ಲಾ ಹಾಗೂ ತಾಲೂಕು ಆಡಳಿತ ಯಾವುದೇ ಕ್ರಮಕ್ಕೆ ಮುಂದಾಗದೆ ನಿರ್ಲಕ್ಷ್ಯ ವಹಿಸಿರುವ ವಿರುದ್ಧ ಘೋಷಣೆ ಕೂಗಿ ತಮ್ಮ ಆಕ್ರೋಶ ವ್ಯಕ್ತಪಡಿಸಿದರು.

ಪೊಲೀಸರ ಸಹಕಾರದೊಂದಿಗೆ ಮನೆ ತೆರವು: ಕಳೆದ 40 ವರ್ಷಗಳಿಂದಲೂ ಕರಡಕೆರೆ ಗ್ರಾಮದಲ್ಲಿ 10 ಕೂಲಿಕಾರರ ಕುಟುಂಬಗಳು ವಾಸವಿದ್ದು ಗ್ರಾಪಂ  ವತಿಯಿಂದ ಹಕ್ಕುಪತ್ರ, ಖಾತೆ ನೋಂದಣಿ ಮಾಡಿಸಿದ್ದರೂ ಖಾಸಗಿ ವ್ಯಕ್ತಿಯೋರ್ವ ಏಕಾಏಕಿ ಪೊಲೀಸರ ಸಹಕಾರದೊಂದಿಗೆ ಮನೆಗಳನ್ನು ತೆರವುಗೊಳಿಸಿದ್ದಾರೆ. ಇದರಿಂದಾಗಿ ಸ್ಥಳೀಯ ನಿವಾಸಿಗಳು ಬೀದಿ ಪಾಲಾಗಿದ್ದು, ಕೂಡಲೇ ಅಗತ್ಯ ಕ್ರಮವಹಿಸುವಂತೆ ಒತ್ತಾಯಿಸಿದರು.

ಧರಣಿ: ಕೋಳಿ, ಮೇಕೆ, ಕುರಿ ಸೇರಿದಂತೆ ಇನ್ನಿತರೆ ದಿನಸಿ ಪದಾರ್ಥಗಳೊಂದಿಗೆ ಆಗಮಿಸಿರುವ ನಿವಾಸಿಗಳು ಅಂಬೇಡ್ಕರ್‌ ಭವನದ ಎದುರೇ ಅಡುಗೆ ಮಾಡಿ ಉಣಬಡಿಸುವ ಜತೆಗೆ ರಾತ್ರಿ ಹಗಲು ಎನ್ನದೆ ಭವನದಲ್ಲೇ ಕಾಲ ಕಳೆಯುತ್ತಿದ್ದು ತಮಗೆ ನಿವೇಶನ ನೀಡುವವರೆವಿಗೆ ಸ್ಥಳದಿಂದ ಕದಲುವುದಿಲ್ಲವೆಂದು ಪಟ್ಟು ಹಿಡಿದು  ನಿರಂತರ ಧರಣಿ ಕೈಗೊಂಡಿದ್ದಾರೆ.

ಆಗ್ರಹ: ಜಾನುವಾರುಗಳು ಮತ್ತು ಮನೆಯ ಸಾಮಗ್ರಿಗಳನ್ನು ಬೇರೆಯವರ ನಿವಾಸದಲ್ಲಿ ಟೆಂಟ್‌ ನಿರ್ಮಾಣ ಮಾಡಿ ಕಾಲ ಕಳೆಯುತ್ತಿದ್ದು, ಮಕ್ಕಳನ್ನು ಶಾಲೆಗೆ ಕಳುಹಿಸಲು ಪ್ರತಿನಿತ್ಯ ಗ್ರಾಮಕ್ಕೆ ಕರೆದೋಯ್ಯುವ ಪರಿಸ್ಥಿತಿ ನಿರ್ಮಾಣಗೊಂಡಿದೆ. ಕೂಡಲೇ ತಾವು ವಾಸವಿದ್ದ ನಿವೇಶನವನ್ನು ತಮಗೆ ನೀಡುವಂತೆ ಆಗ್ರಹಿಸಿದರು.

ಸಚಿವರ ಮೌನ: ಸ್ಥಳೀಯ ಶಾಸಕ, ಸಚಿವ ಡಿ.ಸಿ.ತಮ್ಮಣ್ಣ ಅವರಿಗೆ ಮನವಿ ಮಾಡಿದ್ದರೂ ಯಾವುದೇ ಕ್ರಮಕ್ಕೆ ಮುಂದಾಗದೆ ನಿರ್ಲಕ್ಷ್ಯ ವಹಿಸುವ ಜತೆಗೆ ಕನಿಷ್ಠ ಸೌಜನ್ಯಕ್ಕೂ ಪ್ರತಿಭಟನಾಕಾರರೊಂದಿಗೆ ಮಾತುಕತೆ ನಡೆಸದೆ ಮೌನವಹಿಸಿರುವುದು ಹಲವಾರು ಅನುಮಾನಗಳಿಗೆ ಕಾರಣವಾಗಿದೆ. ಕೂಡಲೇ ಸಚಿವರು ಅಧಿಕಾರಿಗಳ ಸಭೆ ಕರೆದು ನಿವೇಶನ ನೀಡುವಂತೆ ಒತ್ತಾಯಿಸಿದರು.

ಆ.27ರ ಸೋಮವಾರದೊಳಗಾಗಿ ತಮ್ಮ ಬೇಡಿಕೆಗಳ ಈಡೇರಿಕೆಗೆ ಮುಂದಾಗದಿದ್ದಲ್ಲಿ ತಾಲೂಕು ಕಚೇರಿ ಬಳಿ ಜನ, ಜಾನುವಾರುಗಳ ಸಮೇತ ಟೆಂಟ್‌ ಹಾಕುವುದಾಗಿ ಎಚ್ಚರಿಕೆ ನೀಡಿ ಪ್ರತಿಭಟನೆ ಮುಂದುವರಿಸಿದ್ದಾರೆ. ಈ ವೇಳೆ ತಿಮ್ಮಯ್ಯ, ನಾಗರಾಜು, ತಿಮ್ಮಮ್ಮ, ಜಯರಾಂ, ಮಂಗಳಮ್ಮ, ಚನ್ನಾಚಾರಿ, ಸಿದ್ಧಚಾರಿ, ಗೌರಮ್ಮ, ಸಿದ್ದರಾಜು ಭಾಗವಹಿಸಿದ್ದರು.

Trending videos

Back to Top