CONNECT WITH US  

ಜೆಡಿಎಸ್‌ಗೆ ಸಿಎಂ ಪದವಿ ತ್ಯಾಗ

ಮಂಡ್ಯ: ಕೋಮುವಾದಿ ಬಿಜೆಪಿ ಪಕ್ಷವನ್ನು ಅಧಿಕಾರದಿಂದ ದೂರವಿಡಲು ಕಾಂಗ್ರೆಸ್‌ ಸಿಎಂ ಪದವಿಯನ್ನು ಜೆಡಿಎಸ್‌ಗೆ ತ್ಯಾಗ ಮಾಡಿತು ಎಂದು ಕೆಪಿಸಿಸಿ ಅಧ್ಯಕ್ಷ ದಿನೇಶ್‌ ಗುಂಡೂರಾವ್‌ ಹೇಳಿದರು.

ನಗರದ ಬಂದೀಗೌಡ ಬಡಾವಣೆಯಲ್ಲಿರುವ ಪಕ್ಷದ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಕಳೆದ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಪಕ್ಷ ಅತಿ ಹೆಚ್ಚು ಸ್ಥಾನ ಗಳಿಸಿದ್ದರೆ, ಜೆಡಿಎಸ್‌ ಕಡಿಮೆ ಸ್ಥಾನಗಳಲ್ಲಿ ಜಯ ಸಾಧಿಸಿತ್ತು. ಬಿಜೆಪಿ ಅಧಿಕಾರಕ್ಕೇರುವುದನ್ನು ತಪ್ಪಿಸಲು ನಾವು ಹೆಚ್ಚು ಸ್ಥಾನಗಳಲ್ಲಿ ಗೆಲುವು ಸಾಧಿಸಿದ್ದರೂ ಕಡಿಮೆ ಸ್ಥಾನಗಳನ್ನು ಗಳಿಸಿದ್ದ ಜೆಡಿಎಸ್‌ಗೆ ಮುಖ್ಯಮಂತ್ರಿ ಅಧಿಕಾರವನ್ನು ತ್ಯಾಗ ಮಾಡಿದೆವು ಎಂದು ನುಡಿದರು.

ಸೋಲಿಗೆ ಕಾರಣಗಳಿರಲಿಲ್ಲ: ಚುನಾವಣೆಯಲ್ಲಿ ಕಾಂಗ್ರೆಸ್‌ ಸೋಲುವುದಕ್ಕೆ ಕಾರಣಗಳೇ ಇರಲಿಲ್ಲ. ಮುಖ್ಯಮಂತ್ರಿಯಾಗಿದ್ದ ಸಿದ್ದರಾಮಯ್ಯ ಸರ್ಕಾರ ಹಲವಾರು ಜನಪರ ಯೋಜನೆ, ರೈತಪರ ಕಾರ್ಯಕ್ರಮಗಳನ್ನು ಜಾರಿಗೊಳಿಸಿತ್ತು. ಪಕ್ಷ ಅಥವಾ ಸರ್ಕಾರದ ಮೇಲೆ ಯಾವುದೇ ಗಂಭೀರ ಆರೋಪಗಳೂ ಇರಲಿಲ್ಲ. ನಾವು ಚುನಾವಣೆಯಲ್ಲಿ ಬೇರೆ ಬೇರೆ ಕಾರಣಗಳಿಂದ ಸೋಲನುಭವಿಸಬೇಕಾಯಿತು ಎಂದರು.

ಜನರನ್ನು ಸೆಳೆಯುವಂತಹ ಕೆಲವೊಂದು ಭರವಸೆಗಳು ಕಾಂಗ್ರೆಸ್‌ ಪಕ್ಷಕ್ಕೆ ಹಿನ್ನಡೆ ಉಂಟುಮಾಡಿತು. ಕೆಲವೊಂದು ಭಾವನಾತ್ಮಕ ವಿಚಾರಗಳು ಚುನಾವಣೆಯಲ್ಲಿ ಕೆಲಸ ಮಾಡಿದವು. ಕೋಮು ಭಾವನೆಗಳೂ ಪಕ್ಷದ ಮೇಲೆ ವ್ಯತಿರಿಕ್ತ ಪರಿಣಾಮ ಬೀರಿದವು. ಹೀಗೆ ವಿವಿಧ ಕಾರಣಗಳಿಂದ ಕಾಂಗ್ರೆಸ್‌ ಸೋಲನುಭವಿಸಬೇಕಾಯಿತು ಎಂದು ವಿಶ್ಲೇಷಿಸಿದರು.

ಚುನಾವಣೆಯಲ್ಲಿ ಸೋತರೂ ರಾಜ್ಯದಲ್ಲಿ ಕಾಂಗ್ರೆಸ್‌ ಬಲಹೀನವಾಗಿಲ್ಲ. ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ದೂರವಾಗಿರುವ ಜನರನ್ನು ಮತ್ತೆ ಕಾಂಗ್ರೆಸ್‌ನತ್ತ ಕರೆತರುವ ಪ್ರಯತ್ನ ಮಾಡುತ್ತಿದ್ದೇವೆ. ಪಕ್ಷದ ಸಾಧನೆಗಳು, ಕಾರ್ಯಕ್ರಮಗಳನ್ನು ಜನರಿಗೆ ಮನವರಿಕೆ ಮಾಡಿಕೊಡುತ್ತಿದ್ದೇವೆ ಎಂದು ನುಡಿದರು.

ಜೆಡಿಎಸ್‌-ಬಿಜೆಪಿ ವಿರೋಧಿಗಳು: ನಗರ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ನಮಗೆ ಜೆಡಿಎಸ್‌ ಹಾಗೂ ಬಿಜೆಪಿ ಪ್ರಬಲ ವಿರೋಧಿಗಳು. ಇಬ್ಬರನ್ನೂ ಸಮರ್ಥವಾಗಿ ಎದುರಿಸಲು ನಾವು ಸಜ್ಜಾಗಿದ್ದೇವೆ. ಮೈಸೂರು, ರಾಮನಗರ, ಮಂಡ್ಯ, ಹಾಸನ ಸೇರಿದಂತೆ ಇತರೆ ಕಡೆ ಜೆಡಿಎಸ್‌ ಪ್ರಬಲವಾಗಿದ್ದರೂ ಅಚ್ಚರಿಯ ಫ‌ಲಿತಾಂಶ ನೀಡುವ ವಿಶ್ವಾಸ ವ್ಯಕ್ತಪಡಿಸಿದರು.

ಮೊದಲಿನ ವಾತಾವರಣವಿಲ್ಲ: ಜಿಲ್ಲೆಯ ಏಳೂ ಕ್ಷೇತ್ರಗಳಲ್ಲಿ ಜೆಡಿಎಸ್‌ ಗೆದ್ದಿರಬಹುದು. ಮೊದಲಿನ ವಾತಾವರಣ ಈಗ ಇಲ್ಲ. ಜೆಡಿಎಸ್‌ನ್ನು ಎದುರಿಸುವ ಸಾಮರ್ಥ್ಯವೂ ಈಗ ನಮಗೆ ಬಂದಿದೆ. ಹೀಗಾಗಿ ಅಧಿಕಾರ ಹಿಡಿಯುವ ನಿಟ್ಟಿನಲ್ಲಿ ನಾವು ಪ್ರಯತ್ನ ಮುಂದುವರೆಸುತ್ತೇವೆ ಎಂದರು.

ಪ್ರತಿಷ್ಠೆಯ ಚುನಾವಣೆ: ನಗರ ಸ್ಥಳೀಯ ಸಂಸ್ಥೆ ಪ್ರತಿಷ್ಠಿತ ಚುನಾವಣೆಯಾಗಿದೆ. ಕಾಂಗ್ರೆಸ್‌ ಬಲವರ್ಧನೆಗೆ ಸಹಕಾರಿಯಾಗಿದೆ. ಈ ಚುನಾವಣೆಯನ್ನು ಗಂಭೀರವಾಗಿ ಪರಿಗಣಿಸಿದ್ದು, ಎಲ್ಲಾ ಜಿಲ್ಲೆಗಳಲ್ಲೂ ಪ್ರಬಲ ಅಭ್ಯರ್ಥಿಗಳನ್ನು ಕಣಕ್ಕಿಳಿಸಿ ಚುನಾವಣೆ ಎದುರಿಸುತ್ತಿದ್ದೇವೆ. ಪ್ರಥಮ ಸ್ಥಾನದಲ್ಲಿ ಪಕ್ಷವನ್ನು ಇರಿಸುತ್ತೇವೆ ಎಂದರು.

ಗೋಷ್ಠಿಯಲ್ಲಿ ಮಾಜಿ ಸಚಿವರಾದ ಪಿ.ಎಂ.ನರೇಂದ್ರಸ್ವಾಮಿ, ಎಂ.ಎಸ್‌.ಆತ್ಮಾನಂದ, ವಿಧಾನಪರಿಷತ್‌ ಮಾಜಿ ಸದಸ್ಯೆ ಮಲ್ಲಾಜಮ್ಮ, ಕೆಪಿಸಿಸಿ ವೀಕ್ಷಕ ಎನ್‌.ಸಂಪಂಗಿ, ಜಿಲ್ಲಾಧ್ಯಕ್ಷ ಸಿ.ಡಿ.ಗಂಗಾಧರ್‌, ಯುವ ಮುಖಂಡ ಗಣಿಗ ರವಿ, ಮಹಿಳಾಧ್ಯಕ್ಷೆ ಅಂಜನಾ ಶ್ರೀಕಾಂತ್‌, ಮುಖಂಡರಾದ ಹಾಲಹಳ್ಳಿ ರಾಮಲಿಂಗಯ್ಯ ಸೇರಿದಂತೆ ಇತರರಿದ್ದರು.

Trending videos

Back to Top