CONNECT WITH US  

ಬುದ್ಧಿವಂತ ಜನರು ರಾಜಕಾರಣಕ್ಕೆ ಬರಲಿ

ಪಾಂಡವಪುರ: ಶುಕ್ರವಾರ ನಡೆಯಲಿರುವ ನಗರಸಭೆ, ಪುರಸಭೆ ಹಾಗೂ ಪಟ್ಟಣ ಪಂಚಾಯಿತಿ ಚುನಾವಣೆಗೆ ರಾಜ್ಯಾದ್ಯಂತ ರೈತ ಸಂಘ ಮತ್ತು ಸ್ವರಾಜ್‌ ಇಂಡಿಯಾ ಪಕ್ಷದಿಂದ ಅಭ್ಯರ್ಥಿಗಳನ್ನು ಕಣಕ್ಕಿಳಿಸಲಾಗಿದೆ ಎಂದು ಸಾಹಿತಿ ದೇವನೂರು ಮಹದೇವ ತಿಳಿಸಿದರು.

ಪಟ್ಟಣದ 8ನೇ ವಾರ್ಡ್‌ನಿಂದ ಕಾಂಗ್ರೆಸ್‌-ರೈತಸಂಘ ಮೈತ್ರಿ ಅಭ್ಯರ್ಥಿಯಾಗಿ ಸ್ಪರ್ಧಿಸಿರುವ ಟಿ.ಎಸ್‌.ಹಾಳಯ್ಯ ಪರ ಬಿರುಸಿನ ಪ್ರಚಾರ ನಡೆಸಿ ಮಾತನಾಡಿದ ಅವರು, ಎಲ್ಲ ಸಮುದಾಯದ ಸಮಾನ ಮನಸ್ಕರರು ಹಾಗೂ ಇಂದಿನ ಯುವ ಜನತೆ ರಾಜಕಾರಣಕ್ಕೆ ಬರಬೇಕು. ಒಳ್ಳೆಯ ವಿಚಾರವುಳ್ಳ ಬುದ್ದಿವಂತ ಜನರು ರಾಜಕಾರಣಕ್ಕೆ ಬಂದರೆ ಸಮಾಜದ ಅಂಕು-ಡೊಂಕುಗಳನ್ನು ತಿದ್ದುವ ಮೂಲಕ ಒಳ್ಳೆಯ ಆಡಳಿತ ನೀಡಲು ಸಾಧ್ಯವಾಗುತ್ತದೆ ಅಭಿಪ್ರಾಯಪಟ್ಟರು.

ರಾಜ್ಯದ್ಯಾಂತ ಬಿತ್ತಲು ಪ್ರಯತ್ನ: ಒಕ್ಕಲಿಗ ಸಮುದಾಯದಲ್ಲಿರುವ ಜಾತ್ಯತೀತ ಮನೋಭಾವ ಹೊಂದಿರುವ ವ್ಯಕ್ತಿಗಳು, ಬ್ರಾಹ್ಮಣ ಸಮುದಾಯದಲ್ಲಿರುವ ಜಾತ್ಯತೀತ ಮನಸ್ಸುಳ್ಳ, ಲಿಂಗಾಯುತರಲ್ಲಿರುವ ಉತ್ತಮವಾದ ಜಾತ್ಯತೀತ ಮನಸ್ಸುಳ್ಳ, ದಲಿತರಲ್ಲಿರುವ ಜಾತ್ಯತೀತ ಮನಸ್ಸಿನ ಅಲ್ಪಸಂಖ್ಯಾರಲ್ಲಿರುವ ಸುಸ್ಥಿರ ಮನಸ್ಸುಳ್ಳ ಹಾಗೂ

ಇತರೆ ಎಲ್ಲ ಜಾತಿಯ ಜಾತ್ಯತೀತ ಮನಸ್ಸುಳ್ಳ ಸಹಬಾಳ್ವೆಯುಳ್ಳ ವ್ಯಕ್ತಿಗಳು ಚುನಾವಣೆಗಳಿಗೆ ಸ್ಪರ್ಧಿಸಬೇಕೆನ್ನುವುದು ಎಲ್ಲರ ಆಶಯವಾಗಿದೆ. ಇದಕ್ಕಾಗಿ ಒಂದೊಂದೆ ಹೆಜ್ಜೆ ಇಡುತ್ತಿದ್ದು, ಇದು ಇಲ್ಲಿ ಯಶಸ್ಸು ತಂದುಕೊಟ್ಟರೆ ಪಾಂಡವಪುರದ ಈ ಬಿತ್ತನೆಯನ್ನಿಟ್ಟುಕೊಂಡು ಇಡೀ ರಾಜ್ಯದ್ಯಾಂತ ಬಿತ್ತಲು ಪ್ರಯತ್ನ ಪಡುವುದಾಗಿ ತಿಳಿಸಿದರು.

ತಾಂತ್ರಿಕ ಇಕ್ಕಟ್ಟು: ಈ ಚುನಾವಣೆಯಲ್ಲಿ ಸ್ವರಾಜ್‌ ಇಂಡಿಯಾ ಪಕ್ಷದಿಂದ ಸ್ವತಂತ್ರವಾಗಿ ಅಭ್ಯರ್ಥಿಗಳು ಸ್ಪರ್ಧಿಸಿದ್ದು, ತಮ್ಮನ್ನು ಮಾರಿಕೊಳ್ಳುವ ಅಭ್ಯರ್ಥಿಗಳಿಗೆ ಪಕ್ಷದ ವತಿಯಿಂದ ಸ್ಥಾನ ನೀಡಿಲ್ಲ. ಯಾರಿಗೆ ಸೈದ್ಧಾಂತಿಕ ನಿಲುವಿದೆಯೋ, ಗಟ್ಟಿತನವಿದೆಯೋ ಅಂಥ ವ್ಯಕ್ತಿಗಳಿಗೆ ಪಕ್ಷದ ವತಿಯಿಂದ ಟಿಕೆಟ್‌ ನೀಡಲಾಗಿದೆ.

ಅವರು ಗೆದ್ದನಂತರ ಅಧಿಕೃತವಾಗಿ ಸ್ವರಾಜ್‌ ಇಂಡಿಯಾ ಪಕ್ಷದ ಅಭ್ಯರ್ಥಿಗಳಾಗಲಿದ್ದಾರೆ ಎಂದ ಅವರು, ತಮ್ಮ ಪಕ್ಷದಲ್ಲಿ ಸ್ವಲ್ಪ ತಾಂತ್ರಿಕ ಇಕ್ಕಟ್ಟಾಯಿತು. ಹೀಗಾಗಿ ಮುಂಬರುವ ಚುನಾವಣೆ ಹೊತ್ತಿಗೆ ಸರಿಪಡಿಸಿಕೊಂಡು ನೋಂದಣಿ ಮಾಡಿಸಲಾಗುವುದು ಎಂದು ತಿಳಿಸಿದರು.

ಜಾತಿ ಧೃವಿಕರಣ: ರಾಜ್ಯ ರೈತ ಸಂಘದ ಪ್ರಧಾನ ಕಾರ್ಯದರ್ಶಿ ಬಡಗಲಪುರ ನಾಗೇಂದ್ರ ಮಾತನಾಡಿ, ಕಳೆದ ವಿಧಾನಸಭಾ ಚುನಾವಣೆಯಲ್ಲಿ ಮೇಲುಕೋಟೆ ಕ್ಷೇತ್ರದಿಂದ ರಾಜಕಾರಣದ ಪರ್ವ ಶುರುವಾಗುತ್ತದೆ ಎಂಬ ನಿರೀಕ್ಷೆ ಇತ್ತು. ಆದರೆ, ಆ ಸಂದರ್ಭದಲ್ಲಾದ ಜಾತಿ ಧೃವಿಕರಣದ ಜತೆಗೆ ಹಣದ ಹೊಳೆಯೇ ಹರಿದಿತ್ತು. ಆ ಕಾರಣದಿಂದ ನಮ್ಮ ಅಭ್ಯರ್ಥಿ ಆಯ್ಕೆಯಾಗಲು ಸಾಧ್ಯವಾಗಲಿಲ್ಲ.

ಆದರೂ ನಮ್ಮ ಅಭ್ಯರ್ಥಿ ದರ್ಶನ್‌ ಪುಟ್ಟಣ್ಣಯ್ಯ ನಿರಾಸೆಯಾಗದೆ ರಾಜ್ಯದಲ್ಲಿ ಒಂದು ಹೊಸ ನಡೆಯನ್ನ ಸ್ವರಾಜ್‌ ಇಂಡಿಯಾ ಪಕ್ಷದ ಮೂಲಕ ಹುಟ್ಟಿಹಾಕಬೇಕೆಂಬ ಆಸೆಯಿಂದ ತಮ್ಮ ಸಾರ್ವಜನಿಕ ಜೀವನದಲ್ಲಿ ಸಕ್ರಿಯವಾಗಿ ತೊಡಗಿಸಿಕೊಳ್ಳಲು ಮುಂದಾಗಿದ್ದಾರೆ ಎಂದರು.

ಪಾಂಡವಪುರ ಪುರಸಭೆ ಚುನಾವಣೆಯಲ್ಲಿ ಮನೆ-ಮನೆಗೆ ತೆರಳಿ ತಮ್ಮ ಪಕ್ಷದ ಅಭ್ಯರ್ಥಿಗಳ ಪರವಾಗಿ ಮತ ಪ್ರಚಾರ ನಡೆಸುತ್ತಿದ್ದಾರೆ. ಹೀಗಾಗಿ ಪಟ್ಟಣದ ಜನತೆ ಒಂದು ಹೊಸ ರಾಜಕಾರಣಕ್ಕೆ ಹೆಜ್ಜೆ ಇಡಲು ಅವಕಾಶ ಮಾಡಿಕೊಡುವ ಮೂಲಕ ಕೈಜೋಡಿಸಬೇಕೆಂದು ಮನವಿ ಮಾಡಿದರು.

ಈ ಸಂದರ್ಭದಲ್ಲಿ ಅಭ್ಯರ್ಥಿ ಟಿ.ಎಸ್‌.ಹಾಳಯ್ಯ, ತಾಪಂ ಸದಸ್ಯ ಪುಟ್ಟರಾಮು (ಪದ್ದಣ್ಣ), ರೈತ ಸಂಘದ ಮುಖಂಡರಾದ ಎ.ಎಲ್‌.ಕೆಂಪೂಗೌಡ, ಕೆ.ಕೆ.ಗೌಡೇಗೌಡ, ಅಮೃತಿ ರಾಜಶೇಖರ್‌, ಕೆನ್ನಾಳು ನಾಗರಾಜು, ಚಂದ್ರೆ ಸೋಮು, ಕ್ಯಾತನಹಳ್ಳಿ ದಯಾನಂದ, ಶಿವಕುಮಾರ್‌ ಕೆನ್ನಾಳು ಸೇರಿದಂತೆ ಹಲವರು ಹಾಜರಿದ್ದರು.


Trending videos

Back to Top